ಮನಸ್ಸೆಂಬುದು ಅಕ್ಷಯ ಪಾತ್ರೆ...

ಮನಸ್ಸೆಂಬುದು ಅಕ್ಷಯ ಪಾತ್ರೆ...

ನನ್ನೊಳಗು ನಿನ್ನೊಳಗು ಎಲ್ಲರೊಳಗೂ,

ಏನಿದೆಯೆಂದು ಕೇಳದಿರು, 

ಏನಿಲ್ಲ,

 

ಅದರ ಆಳ ಅಗಲ ಎತ್ತರಗಳನ್ನು ಬಲ್ಲವರಿಲ್ಲ,

ನಮ್ಮೊಳಗಿನ ಆಗಾಧ ಸಾಮರ್ಥ್ಯವೇ ಮನಸ್ಸು,

 

ಪ್ರೀತಿ ಪ್ರೇಮ ವಾತ್ಸಲ್ಯಗಳು ತುಂಬಿರುವಂತೆ,

ಕೋಪ ದ್ವೇಷ ಅಸೂಯೆಗಳು ತುಂಬಿವೆ,

 

ಅದ್ಭುತ ಆಶ್ಚರ್ಯವೆಂದರೆ,

ಅದರ ಆಯ್ಕೆಗಳೂ ನಿನ್ನವೇ,

ಯಾರಿಗುಂಟು ಯಾರಿಗಿಲ್ಲ,

 

ಸಾವನ್ನು ಸಂಭ್ರಮಿಸುವ ಸ್ವಾತಂತ್ರ್ಯವೂ ನಿನ್ನದೇ,

ಬದುಕನ್ನು ದ್ವೇಷಿಸುವ ಸ್ವಾತಂತ್ರ್ಯವೂ ನಿನ್ನದೇ,

 

ಕೊರಗೇಕೆ ಓ ಮನುಜ ನೀ ಅಲ್ಪನಲ್ಲ,

ಈ ಸೃಷ್ಟಿಯೂ ನಿನ್ನ ಮನಸ್ಸಿಗಿಂತ ದೊಡ್ಡದಲ್ಲ,

ಸೃಷ್ಟಿಯಾಚೆಗೂ ವಿಸ್ತರಿಸಬಲ್ಲದು ನಿನ್ನೀ ಮನಸು,

 

ನೀನೇನು ಸಾಮಾನ್ಯನಲ್ಲ, ಅಸಾಮಾನ್ಯ,

ಹೃದಯ ಚಿಕ್ಕದೇ ಇರಬಹುದು,

ಮನಸ್ಸಿನ ಅಗಾಧತೆ ನಿನಗೇ ಅರಿವಿಲ್ಲ,

 

ಹಾಡಬಲ್ಲೆ, ಬರೆಯಬಲ್ಲೆ, ಓದಬಲ್ಲೆ, ಚಿತ್ರಿಸಬಲ್ಲೆ,

ನೆಗೆಯಬಲ್ಲೆ, ಈಜಬಲ್ಲೆ ,ಹಾರಾಡಬಲ್ಲೆ,

 

ಇನ್ನೇಕೆ ತಡ, ಕಿತ್ತೊಗೆ ನಿನ್ನ ನಿರಾಸೆ,

ಈ ಕ್ಷಣದಿಂದ ಈ ಮನಸ್ಸು ನಿನ್ನದೇ,

ಅದಕ್ಕೆ ನೀನೇ ಅಧಿಪತಿ,

 

ಎದ್ದು ಕುಳಿತುಕೋ ನಿನ್ನ ಮನದ ಸಿಂಹಾಸನದ ಮೇಲೆ,

ಆಳು ನಿನ್ನ ಮನಸ್ಸಿನ ಸಾಮ್ರಾಜ್ಯವನ್ನು,

ನಿನಗಿಷ್ಟಬಂದಂತೆ,

 

ಈಗ ನೀನು ರಕ್ತ ಮೂಳೆ ಮಾಂಸಗಳ ಮುದ್ದೆಯಲ್ಲ,

ನೀನು ನಿನ್ನ ವಿಶಾಲ ಮನಸ್ಸಿನ ಚಕ್ರವರ್ತಿ,

ಎಲ್ಲವೂ ಶರಣಾಗಿದೆ ನಿನ್ನ ಕಾಲ ಬಳಿ,

 

ಆತ್ಮವಿಶ್ವಾಸದ ಮುಂದೆ ಸೃಷ್ಟಿಯೂ ನಿನ್ನ ಮುಷ್ಟಿಯಲ್ಲಿ.

  • ಜ್ಞಾನ ಭಿಕ್ಷಾ ಪಾದಯಾತ್ರೆಯ 140 ನೆಯ ದಿನ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನಲ್ಲಿ ವಾಸ್ತವ್ಯ ಸಮಯದ ಬರೆದ ಬರಹ. 

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ