ಮನಿ ಹಾವು

ಮನಿ ಹಾವು

 


 
ನಮ್ಮೂರಿನ ಕುಲಕರ್ಣಿಯರ ಮನ್ಯಾಗಿನ ರುಬ್ಗುಂಡು , ಚಟ್ನಿ ರುಬ್ಲಿಕ್ಕೆ ಹೇಳಿ ಮಾಡಿಸಿದಷ್ಟು ಭೆಶಿತ್ತು ,ಹಿಂಗಾಗಿ ಪದ್ದಕ್ಕವ್ವ ಕಡ್ಲಿ ಬ್ಯಾಳಿ ಚಟ್ನಿ ಮಾಡ್ಕೊಂಡು ಬರಲಿಕ್ಕೆ ಅಂತ ಇವರ ಮನಿಗೆ ಬಂದಿದ್ಲು.ಪದ್ದಕ್ಕವ್ವ ಯಾವದಾದ್ರು ಹಬ್ಬ ಹರಿದಿನಗಳಿಗೆ ಅಂತ ಚೀಕಲ್ಪರ್ವಿಗೆ ಬರ್ತಿದ್ಲಾದ್ರು ನಮ್ಮ ಊರಿನ ಕುಲಕರ್ಣಿಯವರ ಮನಿ 'ಪರಿಚಯ' ಅಷ್ಟೊಂದು ಏನು ಇರ್ಲಿಲ್ಲ .ಮಟ-ಮಟ ಮಧ್ಯಾಣ ಬ್ಯಾರೆ ಆಗಿತ್ತು , ನಮ್ಮ ಮನ್ಯಾಗ ಎಲ್ಲಾ ಅಡಿಗಿ ಆಗಿ ದೇವರ ಪೂಜಾನು ಆಗಿ ಇನ್ನೇನು ದೇವರ ನೈವೇದ್ಯ ಆಗೊದಷ್ಟ ಬಾಕಿ ಇತ್ತು , ಚಟ್ನಿ ಒಂದು ಇನ್ನು ರುಬ್ಬಿದಿಲ್ಲ ಹಿಂಗಾಗಿ  ಪದ್ದಕ್ಕವ್ವ  ನಮ್ಮನಿಂದ ಅವಸರ ಮಾಡಿಕ್ಹೋತ್ತನ ಇವರ ಮನಿಗೆ ಬಂದು ರುಬ್ಗುಂಡು ತೊಳ್ಕೊಂಡು ಕಡ್ಲಿ ಬ್ಯಾಳಿ ಚಟ್ನಿ ರುಬ್ಬ್ಲಿಕ್ಕೆ ಶುರು ಮಾಡಿದ್ಲು .ಇಂಗು ,ಹಸಿ ಮೆಣಸಿನ ಕಾಯಿ ವಾಸನಿ ಮನಿಯೊಳಗೆಲ್ಲಾ  ಘಮಾಡಸ್ತಿತ್ತು  .
 
ಕುಲಕರ್ಣಿಯವರದು  ತೊಲಿ ,ಜಂತಿಗಳಿಂದ ಕಟ್ಟಿದ ಘಟ್ಟಿ ಮನಿ.ಬ್ಯಾಸಿಗಿದಿಂದಾಗ ಥಣ್ಣಗಿರ್ತದ .ಹಿಂಗಾಗಿ ಮಧ್ಯಾನದ ಹೊತ್ತು ಅಡ್ಡ ಆಗಲಿಕ್ಕೆ ಪ್ರಶಸ್ತವಾದ ಜಗಾ.ಈ ಹಳೆ ಮನಿಗಳ ಒಂದು ವಿಶೇಷ ಅಂದ್ರೆ ಮನಿಯೊಳಗೆ ಅಷ್ಟೊಂದು ಬೆಳಕು ಬರಂಗಿಲ್ಲ.ಅಲ್ಲಲ್ಲೇ ಮಿಣುಕು-ಮಿಣುಕು ಬೆಳಕು ಬೆಳಖಿಂಡಿ ಒಳಗಿಂದ ಬರಲಿಕ್ಕೆ ಮಾಡಿರ್ತಾರಾದ್ರು ಮಳಿಗಾಲ ಬಂತಂದ್ರೆ  ಈ ಬೆಳಖಿಂಡಿಗಳನ್ನ ಡೊಣಿಗಳ ಸಹಾಯದಿಂದ ಮುಚ್ಚಿರ್ತಾರ ,ಬ್ಯಾಸಿಗಿ ಬಂದ್ರು ಕೆಲವೊಮ್ಮೆ ಅವನ್ನ ತಗದಿರೋದಿಲ್ಲ  , ಹಿಂಗಾಗಿ ಎಂಥ ಹಾಡು ಹಗಲಿನಾಗು ಕತ್ಲ  ಇರ್ತದ .ಇಂಥ ಕತ್ಲದಾಗ ನಮ್ಮ ಹಿರೆಯ್ರು ಅದ್ಹೆಂಗ ಬಾಳ್ವಿ ಮಾಡ್ತಿದ್ರೋ ಆ  ನಮ್ಮೂರ ದೇವ್ರು ಕಟ್ಟಿ ನರಸಪ್ಪಗ  ಗೊತ್ತು .
 
ಇಂಥದ್ದೇ ಒಂದು ಮನಿ ಅಂದ್ರೆ ಕಲ್ಲುರಿನಾಗಿರೋ ನಮ್ಮ ಅಮ್ಮನ ತವರು ಮನಿ ,ಒಂದೊಂದು 30X40 ಸೈಟ್ ಅಗೋಷ್ಟು ಜಾಗಾದೊಳಗ ಒಂದೊಂದು ಖೋಲಿ ಆಗ್ಯಾವ ಹಿಂಗಾಗಿ ಮನಿಯೊಳಗ ಕಸಾ ಬಳಿಲಿಕ್ಕೆನ   ಬೊರೊಬ್ಬರಿ ೨ ತಾಸು ಬೇಕಾಗ್ತಿತ್ತು. ಮನಿ ಪರಿಚಯ ನಿಮಗ ಇಲ್ಲಾಂದ್ರೆ  ನೀವು ಅ ಕತ್ಲಿನಾಗ ಹೊತ್ತುಗೊಂಡು  ಬೀಳೋದಂತು ಖಾತ್ರಿ  . ಇತ್ತೀಚಿಗೆ ಅಲ್ಲಿ ಅಷ್ಟು ಜನ ಇರಂಗಿಲ್ಲಂಥ ಕೆಲವೊಂದು ಕ್ಹೊಲಿಗಳನ್ನ ಈ ಅನಂತ ಪದ್ಮನಾಭ ಸ್ವಾಮೀ ಗುಡಿಯೋಳಗಿನ ಕ್ಹೊಲಿಗಳು ಮುಚಿಧಾಂಗ ಮುಚಿಬಿಟ್ಟಿರ್ತಾರ.ಬಾಗ್ಲ ತಗದ್ರ  ಮತ್ತ ಭಂಗಾರ ಏನು ಸಿಗಂಗಿಲ್ಲ ,ಆದ್ರೆ ಕತ್ಲಿಗೆ ನಿಮ್ಮ ತಲಿ ಗರ್ರ್ರ್ ಅಂತದ  ...
 
ಈ ಕತ್ಲಿನ ಮನಿಯೊಳಗ ಹುಳಾ-ಹುಪ್ಪಡಿನು ಮನಶ್ಯಾರ ಜೊತಿಗೆ ಸರಿ-ಸರಿ ಇರ್ತಾವ ,ಇವಗಳ ಜೊತಿಗೆ ಇಲ್ಲಿ ಇರೋ ಜನಗಳದ್ದು ಒಂದು ಅವಿನಾಭಾವ ಸಂಭಂದ.ಕೆಲವೊಮ್ಮೆ ಬಟ್ಟಿ ಒಗಿಯೋ  ಮುಂದ ಈ ಸಿಂಬಿ ಕಟ್ಟಿದ ಮಡಿ ಸೀರಿಹಾಂಗ ನಾಗರ ಹಾವು ಬಂದು ಬಚ್ಚಲದಾಗ ಥಣ್ಣಗ ಕುತಿರ್ತಾವ ,ಸೀರೀ ಒಕ್ಕೊತ-ಒಕ್ಕೊತ ಕೈಯಾಗ ಏನರ ಮ್ಯತ್ತ-ಮ್ಯತ್ತಗ ಹತ್ಲಿಕ್ಕೆ ಹತ್ತಿದರೆ ಅವಾಗ ಗೊತ್ತಾಗ್ತದ ಕೈಯಾಗ ಮಡಿ ಸೀರಿ ಬದಲಿ ಹಾವು ಹಿಡದಿವಿ ಅಂತ.
ಈ ಹಾವುಗಳ ಮತ್ತೊಂದು ಫೇವರಿಟ್ ಜಾಗಾ ಅಂದ್ರೆ ಸ್ನಾನಕ್ಕ ನೀರು ಕಾಸೋ ಒಲಿಗಳ ಹತ್ರ ,ಯಾವಾಗ್ಲೂ ಭೆಚ್ಚಗ ಒಣಗಿದ್ದ ಪ್ರದೇಶವಾಗಿದ್ದರಿಂದ ಇಲ್ಲಿ ಇವುಗಳು ಜಾಸ್ತಿ ಇರ್ತಾವ , ಒಮ್ಮೆ ನೀರು ಕಾಸ್ಲಿಕ್ಕೆ ಅಂತ ಹಂಡ್ಯದಾಗ ನೀರು ಹಾಕಿ ಒಲಿ ಹಚ್ಚಿದ  ಮ್ಯಾಲೆ ಧಗಿಗೆ ಇವು ಹೊರಗ ಬೀಳ್ತಾವ.
 
ಮತ್ತ ಮನಿ ಛತ್ತು ಅಂತು ಅವಕ್ಕ ಹೇಳಿ ಮಾಡಿಸಿದ್ದ ಜಾಗಾ , ಮಳಿಗಾಲ ಬಂತಂದ್ರೆ  ಮಾಳಿಗಿ ಸೋರ್ಲಿಕ್ಕೆ ಹತ್ತಿರ್ತದ ಹಿಂಗಾಗಿ ಸವಳು ಹಾಕಿ ನೀರು ಬರ್ಲಾರ್ಧಂಗ ಮಾಡಿರ್ತಾರ , ಈ ಸವಳು,ಹಳೆ ಜಂತಿ ಮತ್ತ ಹಳೆ ಬಿದಿರಿನ ತಟ್ಟಿ ಹಾವುಗಳು ಅರ್ರಾಮಾಗಿ ಹರದಾಡ್ಲಿಕ್ಕೆ ಅನುಕೂಲ ಮಾಡಿರ್ತಾವ.ದನಗಳು ಮೇವು ತಿನ್ನೋ ಗ್ವಾದ್ಲಿ , ಕಲಗಚ್ಚಲು ಕುಡಿಯೋ ಗಚ್ಚಿನ ಸಂಧಿ, ನಮ್ಮವ್ವನ ಧಾಬಳಿ ಮಡಚಿಡೊ ಮಾಡ  ಹೀಂಗ ಅವು ಇರಲಾರದ  ಜಾಗನ ಇಲ್ಲ ,ಕೊನಿಗೆ ಅವನ್ನ ನೋಡಿ ದನ ಬ್ಯದರಿದ ಮ್ಯಾಲೆ ನಮಗ ಅವು ಅಲ್ಲಿ ಅವ ಅಂತ ಗೊತ್ತಾಗ್ತದ.  
 
ಇನ್ನ  ಹೊಲ-ಮನ್ಯಾಗ ಕೆಲ್ಸಾ ಮಾಡೋ ಮನಸ್ಯಾರಿಗಂತು ಹಾವುಗಳ ಟೈಮ್ ಟೇಬಲ್ ಆಗಧಿ ಬರೋಬ್ಬರಿ ಗೊತ್ತಿರ್ತದ ,ಯಾ ಹಾವು ಎಷ್ಟು ಹೂತ್ತ್ನಾಗ ಯಾರನ್ನ ನೋಡ್ಲಿಕ್ಕೆ ಎಲ್ಲಿ ಹೋಗ್ತದ ? ಯಾಕ ಹೋಗ್ತದ ಅಂತ ಬರಿ ಜಂತಿ ಮ್ಯಾಲಿನ ಶಬ್ದ ಕೇಳೆ ಹೇಳಿ ಬಿಡ್ತಾರ....
 
ಪಡಸಾಲಿಯೋಳಗ ಮಲ್ಕೊಂಡಾಗ ಕೆಲವೊಮ್ಮೆ ಹಾವು ಧೋಪ್ಪಂತ ಛತ್ತು ಮ್ಯಾಲಿಂದ ಹೊತಗೊಂಡು ಬಿದ್ದು ನಮ್ಮ ಮೈ ಮ್ಯಾಲೆ ಹರದಾಡಿ ಕೊನಿಗೆ ಸುಸ್ತಾಗಿ ನಮ್ಮ ಹತ್ರನ ಮಲ್ಕೊಂಡಿರ್ತಾವ , ಮುಂಜಾನಿ ಹಾಸ್ಗಿ  ಮಡಚೋ ಮುಂದ ನಮಗ ಕಾಣಿಸ್ತಾವ.ಇಂಥ ಪ್ರಸಂಗಗಳು ಇನು ಅಪರುಪೆನಲ್ಲ.
 
ಈ ಹಾವುಗಳು ಏನಾದ್ರೂ ಮನ್ಯಾಗ ಕಂಡ್ರೆ ನಮ್ಮವ್ವಗ ನಮ್ಮ್ಯಾಲೆ ಭಯಂಕರ ಸಿಟ್ಟು , ಈ ಕ್ಹೊಡಿಗಳು ಏನಾರ  ಮಡಿ ಮೈಲಿಗಿ ಹೆಚ್ಚು ಕಡಿಮಿ ಮಾಡ್ಯಾವ  ಅಂತ ನಮ್ಮ್ಯಾಲೆ ಹರಿ ಹಯ್ತಾಳ.ಹರಿಕಥಾಮೃತಸಾರದ ಕೊನಿ ಸಂಧಿ, ಗರುಡ ದೇವರ  ಹಾಡ ಹಾಡಿ ಸ್ವಲ್ಪ ನಿರಂಬಳ ಆಗ್ತಾಳ .
 
ಈ ಸಿಟಿಕಡೆ ಮಂದಿಗೆ ಈ ಹುಳಾ-ಹುಪ್ಪಡಿ ಪರಿಚಯ ಒಂದು ಸ್ವಲ್ಪನು ಇರಂಗಿಲ್ಲ , ಎಲ್ಲೋ ಝೂ ದೊಳಗೋ ,ಟೀವ್ಯಾಗ ನೋಡಿನ ಹೌಹಾರಿರ್ತಾರ ಇನ್ನ ಹಳ್ಳಿಗೆ ಬಂದಾಗ ಹಾವು ಏನರ ಬಟ್ಟಿ ಒಗಿಯೋಮುಂದ ಕೈಯಾಗ ಸಿಕ್ಕರಂತು ಮುಗುದ ಹೋತು , ಚಿಟ್ಟ ಅಂತ ಚೀರಿ , ಥೈ-ಥೈ ಕುಣುದು ಏನೋ ನೋಡ್ಲಾರದ್ದು ನೋಡಿಧೋರಂಗ ಮಾಡ್ಲಿಕ್ಕೆ ಶುರು ಮಾಡಿ ಬಿಡ್ತಾರ .
 
ನಾನೇ ಖುದ್ದಾಗಿ ನೋಡಿದ ಒಂದು ಪ್ರಸಂಗ ಅಂದ್ರೆ ನಮ್ಮ ಉರಾಗಿನ ನರಸಪ್ಪನ ಗರ್ಭಗುಡಿಯೊಳಗ ರಾಮ ದೇವರ ಫೋಟೋಕ್ಕ ಒಂದು ಗೋಧಿ ನಾಗರ ಹಾವು ಬರೋಬ್ಬರಿ ೩ ದಿನ ಹಾರದಗತೆ ಸುತುಕೊಂಡಿತ್ತು. ನಮ್ಮು ಊರಿನ ಗುಡಿ ಪುಜಾರ್ರು ಸಲಿಸಾಗಿ ಗುಡಿ ಒಳಗ ಹೋಗಿ ಪೂಜಾ ಮಾಡಿ ಬರ್ತಿದ್ರು , ಹಾವಿನ ಬಗ್ಗೆ ತಲಿನ ಕೆಡಿಸಿಕೊಳ್ತಿದ್ದಿಲ್ಲ..
 
ಇರ್ಲಿ , ಇನ್ನ ನಮ್ಮ ಪದ್ದಕ್ಕವ್ವನ ಚಟ್ನಿ ರುಬ್ಬೋ ಪ್ರಸಂಗಕ್ಕ ಬರೋಣ , ಇಕೀನು ಮೊದ್ಲು ಹಳ್ಳಿ ಊರಾಗ ಇದ್ದಕಿನ ಆದ್ರೆ ಬಹಳ ದಿನಗಳ ತನಕ ರೈಚುರಿನಾಗ ಇರ್ಲಿಕ್ಕೆಹತ್ತಿದ ಮ್ಯಾಲೆ ಈ ಹಳ್ಳಿ ಊರಿನ ರೂಢ ಸ್ವಲ್ಪ ತಪ್ಪಿದರು  ತಪ್ಪಿದ್ದಿತು .
 
ಹೀಂಗ ಚಟ್ನಿ ರುಬ್ಲಿಕ್ಕೆ ಕೂತಾಗ ಒಂದು ದೆವ್ವ್ನಂಥಾ ಕರಿ ನಾಗರ ಹಾವು  ಇಕಿನ ಹತ್ರ  ಬಂತು ,ಆಕಿ ರುಬ್ಬಿದ ಚಟ್ನಿ ಘಮ ಘಮ ವಾಸನಿ ಅದರ ನಾಲ್ಗಿಗೆ ಬಡದಿರ್ಬೇಕು ಅಂತ ಕಾಣಸ್ತದ( ಇನ್ನು ದೇವರ ನೈವೆದ್ಯನ ಆಗಿಲ್ಲ ,ನೀ ಹೋಗಿ ಹೋಗಿ ಅದರ ನಾಲ್ಗಿಗೆ ಯಾಕ ಬಡಸಿದ್ದಿ ಅಂತ ನನ್ನ ಕೇಳಬ್ಯಾಡ್ರಿ , ಹಾವು ,ವಾಸನಿ ನಾಲ್ಗಿಕಡಿಂದ ತೊಗೊಂಡ್ರ ನಂದ್ ತಪ್ಪಲ್ಲ )    ಆಕಿ ಹಾವು ನೋಡಿದ್ದೇ ತಡಾ ಚಿಟ್ಟ ಅಂತ ಚೀರಿ ಚಟ್ನಿ ಬ್ಹೊಗೋಣಿ ಅಲ್ಲೇ ಬಿಟ್ಟು ಜೋರಾಗಿ ಕೂಗಲಿಕ್ಕೆ ಹತ್ತಿದ್ಲು ,ಘಾಬರೀಂದ ಅಕಿನ ಬಯೀಂದ ಮಾತೇ ಬರವಲ್ಲುವಾಗಿದ್ವು .ಆಕಿ ಕೂಗಿದ್ದ ಕೇಳಿ ಮನ್ಯಾಗಿದ್ದ  ಕುಲಕರ್ಣಿ ಸಾಹೇಬರು ಇಕಿನ ಹತ್ರ ಬಂದು ಎನಾಗ್ಯದ  ಪದ್ದಕ್ಕವ್ವ ಅಂತ ಕೇಳಿದ್ರು .
 
ಆಕಿ ಹಂಗು ಹಿಂಗು ಧೈರ್ಯ ಮಾಡಿ ಹಾವಿನ ಕಡೆ ಬಟ್ಟ್ಮಾಡಿ ತೋರ್ಸಿದ್ಲು , ಮಾತಂತೂ ಅವಾಗ್ಲೆ ನಿಂತು ಬಿಟ್ಟಿದ್ವು .
 
ಕುಲಕರ್ಣಿ ಸಾಹೇಬರು ಒಮ್ಮೆ ಹಾವು ನೋಡಿ ಒಂದು ಸಣ್ಣ ಪರಿಚಯದ ನಗಿ ಅದರ ಕಡೆ ಬೀರೀ , ಪದ್ದಕ್ಕವ್ವಗ "ಅಯ್ಯ ಅದೇನು ಮಾಡ್ತದ ಬಿಡವ್ವ , ಅದು ನಮ್ಮ ಮನಿ ಹಾವು , ನಮಗ ಏನು ಮಾಡಂಗಿಲ್ಲ, ಮನಿಗೆ ಯಾರೋ ಹೊಸಬರು ಬಂದಾರಂತ ಖುಷಿಲೆ ಭೆಟ್ಟಿ ಆಗಲಿಕ್ಕೆ ಬಂಧಂಗ ಕಾಣಸ್ತದ , ನೀನು ಸಾವಕಾಶವಾಗಿ ಚಟ್ನಿ ರುಬ್ಬಿಕೊಂಡು ಮನಿಗೆ ಹೋಗು ಅಂತ ಹೇಳಿದ್ರು  "
 
ಪದ್ದಕ್ಕವ್ವ ಅಷ್ಟರಲ್ಲೇ ಘಾಬರಿಂದ  ನಮ್ಮ ಮನಿ ಸೇರಿದ್ಳು , ಉಟಕ್ಕ ಕೂತ ಆಚರ್ರಿಗೆ ಕಡ್ಲಿ ಬ್ಯಾಳಿ ಚಟ್ನಿ ಒಂದು ಇದ್ದರ ಬಹಳ ಚೊಲೋ ಆಗ್ತಿತ್ತು ಅಂತ ಹಾಳಾಳಿ ಆಗಿತ್ತು .