ಮನುಕುಲದ ಉಳಿವಿಗಾಗಿ ಜೇನುನೊಣಗಳನ್ನು ರಕ್ಷಿಸಿ…
ಹೌದು, ಒಂದೊಮ್ಮೆ ಜೇನುನೊಣಗಳು ನಮ್ಮ ಪರಿಸರದಿಂದ ಕಣ್ಮರೆಯಾದರೆ ಈ ಭೂಲೋಕದ ಸಮಸ್ತ ಜೀವಿಗಳು ಕೆಲವೇ ವರ್ಷಗಳಲ್ಲಿ ನಿರ್ನಾಮವಾಗುತ್ತವೆ. ಇದು ಪರಿಸರವಾದಿಗಳ ಜೊತೆಗೆ ವಿಜ್ಞಾನಿಗಳು ಹೇಳುವ ಮಾತು. ಈ ಮಾತುಗಳು ನಿಜಕ್ಕೂ ಸತ್ಯ. ಏಕೆಂದರೆ ಯಾವುದೇ ಸಸ್ಯದಲ್ಲಿ ಹೂವು ಕಾಯಿಯಾಗಿ ಬೆಳೆಯ ಬೇಕಾದರೆ ಪರಾಗಸ್ಪರ್ಶ ಕ್ರಿಯೆ ನಡೆಯುವುದು ಅತ್ಯಗತ್ಯ. ಕೆಲವು ಹೂವುಗಳಲ್ಲಿ ಇವುಗಳು ತಂತಾನೇ ನಡೆದರೂ, ಬಹಳಷ್ಟು ಹೂವುಗಳಲ್ಲಿ ಪರಾಗಸ್ಪರ್ಶ ಮಾಡುವ ಕೆಲಸ ಹೊತ್ತುಕೊಂಡಿರುವುದು ಈ ಜೇನುನೊಣಗಳಂತಹ ಕೀಟಗಳು. ಇವುಗಳು ತಮಗೆ ಅಗತ್ಯವಿರುವ ಮಕರಂದವನ್ನು ಹೀರಲು ಹೂವಿನ ಮೇಲೆ ಕುಳಿತಾಗ ಹೂವಿನ ಪರಾಗಗಳು ಅವುಗಳ ಕಾಲಿಗೆ ಅಂಟಿಕೊಳ್ಳುತ್ತವೆ. ಈ ಪರಾಗಗಳು ಮತ್ತೊಂದು ಹೂವಿನ ಮೇಲೆ ಕುಳಿತಾಗ ಪರಾಗಸ್ಪರ್ಶವಾಗುತ್ತದೆ.
ಲಕ್ಷಾಂತರ ಸಂಖ್ಯೆಯಲ್ಲಿರುವ ಜೇನು ನೊಣಗಳು ಈ ಕ್ರಿಯೆಯನ್ನು ನಿರಂತರವಾಗಿ ಮಾಡುತ್ತಲೇ ಬಂದಿವೆ. ಒಂದು ವೇಳೆ ಈ ಜೇನುನೊಣಗಳು ನಾಶವಾಗಿ ಹೋದರೆ ಪರಾಗಸ್ಪರ್ಶ ಕ್ರಿಯೆ ನಡೆಯದೇ ಹೋದರೆ, ಕಾಲಕ್ರಮೇಣ ಹೂವುಗಳಲ್ಲಿ ಕಾಯಿಗಳಾಗುವುದು ಕಡಿಮೆಯಾಗುತ್ತವೆ. ಕ್ರಮೇಣವಾಗಿ ಸಸ್ಯ ಸಂತತಿ ನಾಶವಾಗಿ ಹೋಗುತ್ತದೆ. ಸಸ್ಯಗಳನ್ನು ನಂಬಿಕೊಂಡಿರುವ ಪ್ರಾಣಿಗಳು, ಉದಾಹರಣೆಗೆ ದನ, ಕುರಿ, ಕುದುರೆ ಮುಂತಾದುವುಗಳೂ ನಾಶವಾಗುತ್ತವೆ. ಇವುಗಳನ್ನು ನಂಬಿ ಬದುಕುತ್ತಿರುವ ಮಾಂಸಹಾರಿ ಪ್ರಾಣಿಗಳೂ ಆಹಾರ ಸಿಗದೇ ಸಾಯುತ್ತವೆ. ಹೀಗೆ ಜಗತ್ತೇ ನಾಶವಾಗಿ ಹೋಗುತ್ತದೆ. ಈ ಕಾರಣದಿಂದಲೇ ಜೇನುನೊಣಗಳನ್ನು ಉಳಿಸಿ ಎಂಬ ಕೂಗು ಈಗ ಜೋರಾಗಿದೆ.
‘ಸಂಪದ' ಜಾಲತಾಣದ ಹಿಂದಿನ ಸಂಚಿಕೆಗಳಲ್ಲಿ ಜೇನುನೊಣಗಳ ರಕ್ಷಣೆ ಅತ್ಯಗತ್ಯ ಎಂಬ ವಿವರಗಳುಳ್ಳ ಲೇಖನಗಳನ್ನು ಪ್ರಕಟಿಸಿದ್ದೇವೆ. ಜೇನುನೊಣಗಳು ಬಹಳ ಅದ್ಭುತ ಜೀವಿಗಳು. ಅವುಗಳು ಮಕರಂದವನ್ನು ಸಂಗ್ರಹಿಸಿ ಇಡಲು ಹಾಗೂ ತಮ್ಮ ಮೊಟ್ಟೆಗಳನ್ನು ಬೆಳೆಸಲು ಮೇಣದಂತಹ ವಸ್ತುವಿನಿಂದ ನಿರ್ಮಿಸುವ ಜೇನುಗೂಡು ಒಂದು ವಿಸ್ಮಯಗಳ ಆಗರ. ಮಾನವ ಏನೇ ಮಾಡಿದರೂ ಜೇನುಗೂಡಿನಂತಹ ಒಂದು ಆಕೃತಿಯನ್ನು ತಯಾರಿಸಲಾರ. ಜೇನು ಕುಟುಂಬದಲ್ಲಿ ರಾಣಿ ಜೇನು, ಗಂಡು ಜೇನು ಹಾಗೂ ಕೆಲಸಗಾರ ಜೇನು ಎಂಬ ಮೂರು ವಿಧವಾದ ನೊಣಗಳಿವೆ. ಇದರಲ್ಲಿ ರಾಣಿ ಜೇನು ಆಕಾರದಲ್ಲಿ ಸ್ವಲ್ಪ ದೊಡ್ಡದಾಗಿದ್ದು, ಇವುಗಳು ಮಾತ್ರ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಒಂದು ಗೂಡಿನಲ್ಲಿ ಒಂದು ರಾಣಿ ಜೇನುನೊಣ ಮಾತ್ರ ಇರುತ್ತದೆ. ಗಂಡು ಜೇನು ಹುಳಕ್ಕೆ ಸಂತಾನೋತ್ಪತ್ತಿಗೆ ಸಹಕಾರ ನೀಡುವುದಷ್ಟೇ ಕೆಲಸ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಜೇನು ತುಪ್ಪ ಅಥವಾ ಮಕರಂದವನ್ನು ಸಂಗ್ರಹಿಸುವ ಕೆಲಸ ಮಾಡುವುದು ಕೆಲಸಗಾರ ಜೇನುನೊಣಗಳು ಮಾತ್ರ. ಸಾವಿರಾರು ಸಂಖ್ಯೆಯಲ್ಲಿರುವ ಇವುಗಳು ಹಲವಾರು ಕಿಲೋಮೀಟರ್ ದೂರಕ್ಕೆ ಹಾರಿ ಹೋಗಿ ಅಲ್ಲಿರುವ ಹೂವುಗಳಿಂದ ಮಕರಂದವನ್ನು ಹೀರಿ ಮರಳಿ ಹಾರಿ ಬಂದು ತಮ್ಮ ಗೂಡುಗಳಿಗೆ ಹಿಂದಿರುಗಿ ಬರುವ ಕ್ರಿಯೆ ಒಂದು ವಿಸ್ಮಯವೇ ಸರಿ.
ಹೀಗೆ ಸಾವಿರಾರು ಹೂವುಗಳ ಮೇಲೆ ಕುಳಿತು ಮಕರಂದವನ್ನು ಹೀರಿ ತಮ್ಮ ಗೂಡುಗಳಲ್ಲಿ ಸಂಗ್ರಹಿಸಿಡುವ ಪರಿ ಅನನ್ಯವಾದದ್ದು. ಈ ಜೇನು ತುಪ್ಪದ ಸ್ವಾದವು ಪ್ರಪಂಚದ ಯಾವುದೇ ಆಹಾರ ವಸ್ತುವಿಗೆ ಇಲ್ಲ. ಈ ಮಕರಂದವು ತಿಂಗಳುಗಟ್ಟಲೇ ಹಾಳಾಗದೇ ಉಳಿಯುತ್ತದೆ. ಪುಟ್ಟ ಹೂವು, ಪುಟ್ಟ ಜೇನುನೊಣ, ಅಲ್ಪ ಪ್ರಮಾಣದ ಮಕರಂದ ಸಂಗ್ರಹಿಸಿ ಇವುಗಳಿಂದ ಕೆಜಿಗಳಷ್ಟು ಜೇನು ತುಪ್ಪ ಸಿಗುವುದು ಅಚ್ಚರಿಯ ಸಂಗತಿಯೇ ಸರಿ. ಅಷ್ಟೊಂದು ಜೇನು ತುಪ್ಪ ಸಿಗಲು ಆ ನೊಣಗಳು ಎಷ್ಟು ಬಾರಿ ಹೂವುಗಳತ್ತ ಹಾರಿರಬಹುದು? ನೂರಾರು ವರ್ಷಗಳಿಂದ ಜೇನುನೊಣಗಳ ಮೇಲೆ, ಅವುಗಳ ಜೀವನ ಚಕ್ರದ ಬಗ್ಗೆ, ಅವುಗಳು ನಿರ್ಮಿಸುವ ಗೂಡುಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ‘ಬುದ್ಧಿವಂತ' ಮಾನವನಿಗೆ ಒಂದು ಪುಟ್ಟ ಕೀಟವಾದ ಜೇನುನೊಣದ ರಹಸ್ಯಗಳನ್ನು ಸಂಪೂರ್ಣವಾಗಿ ಬಯಲು ಮಾಡಲು ಇನ್ನೂ ಆಗಿಲ್ಲ.
ಮಾನವನು ಪರಿಸರದ ಮೇಲೆ ಮಾಡುತ್ತಿರುವ ದೌರ್ಜನ್ಯದ ಪರಿಣಾಮವಾಗಿ ಕೀಟಗಳ ಸಂಖ್ಯೆ ಅದರಲ್ಲೂ ಜೇನುನೊಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ನಗರೀಕರಣದ ನೆಪದಲ್ಲಿ ನಾವು ಗಿಡ ಮರಗಳನ್ನು ಕಡಿದಿದ್ದೇವೆ. ಯಥೇಚ್ಛವಾಗಿ ಹೂವು ಬಿಡುವಂತಹ ಗಿಡಗಳು ಕಡಿಮೆಯಾಗಿವೆ. ಇದನ್ನೆಲ್ಲಾ ಗಮನಿಸಿದ ವಿಶ್ವ ಸಂಸ್ಥೆಯು ೨೦೧೮ರ ಜನವರಿ ೧೭ರಂದು ಮೇ ೨೦ನ್ನು ‘ವಿಶ್ವ ಜೇನುನೊಣ ದಿನ' ಎಂದು ಘೋಷಿಸಿತು. ಆ ಬಳಿಕ ಪ್ರತೀ ವರ್ಷ ಮೇ ೨೦ರಂದು ಜೇನುನೊಣಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜನರಲ್ಲಿ ತಮ್ಮ ತಮ್ಮ ಪರಿಸರವನ್ನು ಕಾಪಾಡಿಕೊಳ್ಳುವ ಮತ್ತು ಜೇನುನೊಣಗಳ ಬದುಕಿಗೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.
ಮೇ ೨೦ನ್ನು ಯಾಕಾಗಿ ಜೇನುನೊಣಗಳ ದಿನವನ್ನಾಗಿ ಆಯ್ದುಕೊಳ್ಳಲಾಯಿತು ಎಂಬ ಬಗ್ಗೆಯೂ ಒಂದು ಮಾಹಿತಿ ಇದೆ. ಮೇ ೨೦ ಆಂಟನ್ ಜಾನ್ಸಾ ಎಂಬ ವ್ಯಕ್ತಿಯ ಜನ್ಮ ದಿನ. ಈತ ಜೇನುಸಾಕಣೆಯ ಕುರಿತು ಅಧ್ಯಯನ ಮಾಡಿದ ಮೊದಲ ವ್ಯಕ್ತಿ. ಈತನನ್ನು ಜೇನುಸಾಕಣೆಯ ಪ್ರವರ್ತಕ ಎಂದೇ ಕರೆಯಲಾಗುತ್ತದೆ. ಈತ ೧೭೩೭-೧೭೭೩ ರ ಸಮಯದಲ್ಲಿ ಮಧ್ಯ ಯುರೋಪ್ ನ ಸ್ಲೋವೇನಿಯಾ ದೇಶದಲ್ಲಿ ವಾಸಿಸುತ್ತಿದ್ದ. ಮೂಲತಃ ಚಿತ್ರಕಲಾವಿದನಾದ ಈತ ತನ್ನ ತಂದೆಯು ಸಾಕುತ್ತಿದ್ದ ಜೇನುನೊಣಗಳ ಬಗ್ಗೆ ಅಧ್ಯಯನ ಮಾಡಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದ. ಈತ ಜೇನುನೊಣಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದ. ಈ ಪುಸ್ತಕಗಳನ್ನು ಉಪಯೋಗಿಸಿ ಜೇನು ಸಾಕಣೆಯನ್ನು ಜನಪ್ರಿಯಗೊಳಿಸಬೇಕೆಂದು ಅಲ್ಲಿಯ ರಾಣಿ ಆಜ್ಞೆಯನ್ನೂ ಮಾಡಿದ್ದಳಂತೆ. ಈ ಕಾರಣದಿಂದಲೇ ಆಂಟನ್ ಜಾನ್ಸಾ ಅವರ ಜನ್ಮ ದಿನವನ್ನು ‘ವಿಶ್ವ ಜೇನುನೊಣ ದಿನ' ಎಂದು ಆಚರಿಸಲಾಗುತ್ತಿದೆ.
ಕೀಟ ಜಗತ್ತಿನ ಅದ್ಭುತವಾದ ಜೇನುನೊಣಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಪ್ರಥಮ ಆದ್ಯತೆಯಾಗಿರಬೇಕು. ಏಕೆಂದರೆ ಜೇನುನೊಣ ನಮಗೆ ಅಮೃತ ಸಮಾನವಾದ ಜೇನು ತುಪ್ಪ, ಬಹು ಉಪಯೋಗಿ ಜೇನು ಮೇಣ ಎಲ್ಲವನ್ನೂ ನೀಡುವ ಜೇನುನೊಣವನ್ನು ಬದುಕಲು ಬಿಡಬೇಕು. ಇದರಿಂದ ನಮ್ಮ ಮುಂದಿನವರ ಜೀವನ ಹಸನಾಗುತ್ತದೆ. ಜೇನುನೊಣಗಳ ಬೆಳವಣಿಗೆಗೆ ಬೇಕಾಗುವ ಪೂರಕ ವಾತಾವರಣ ನಿರ್ಮಾಣ ಮಾಡೋಣ.
ಚಿತ್ರ ಕೃಪೆ: ಅಂತರ್ಜಾಲ ತಾಣ
ಚಿತ್ರದಲ್ಲಿ ಜೇನು ನೊಣಗಳು ಮತ್ತು ಜೇನು ಸಾಕಣೆಯ ಪ್ರವರ್ತಕ ಆಂಟನ್ ಜಾನ್ಸಾ