ಮನುಷ್ಯತ್ವ
ಮನುಷ್ಯತ್ವ
ಸಂಜೆ ಮನೆಗೆ ಹೊರಟಂತೆ ಎಂದು ಇಲ್ಲದ ಅಬ್ಬರದ ಮಳೆ ಪ್ರಾರಂಭವಾಯಿತು. ಕಾಮಾಕ್ಯ ದಾಟಿದ ನಂತರ ಸ್ಕೂಟರ ಓಡಿಸಲೇ ಆಗಲಿಲ್ಲ. ಸಿಗ್ನಲ್ ನಲ್ಲಿ ಮೈಲುದ್ದದ ವಾಹನಗಳ ಸಾಲು.ಪಕ್ಕದ ಕ್ರಾಸಿನೊಳಗೆ ನುಗ್ಗಿದೆ, ರಸ್ತೆ ಪಕ್ಕದಲ್ಲಿ ಗಾಡಿ ನಿಲ್ಲಿಸಿ ಎದುರಿಗಿದ್ದ ಮನೆಯ ಗೇಟ್ ತೆಗೆದು ಸ್ವಲ್ಪ ಕಾಲ ನಿಂತೆ.
ಮನೆಯ ಬಾಗಿಲು ತೆರೆಯಿತು, ಆ ಮನೆಯ ಒಡತಿ ಹೊರಬಂದರು,ಹೆಲ್ಮೆಟ ಹಾಕಿ ನಿಂತಿದ್ದ. ನನ್ನನ್ನು ಕಂಡು ಬೆಚ್ಚಿದರು
ನಾನು ಹೆಲ್ಮೆಟ ತೆಗೆದು
'ಜೋರು ಮಳೆಯಿದೆ ಹೊಗಲಾಗುತ್ತಿಲ್ಲ ಇಲ್ಲಿ ನಿಂತಿರುವೆ ' ಎಂದೆ
ಸ್ವಲ್ಪ ತಡೆದು ಆಕೆ
'ಪರವಾಗಿಲ್ಲ ಮಳೆ ತುಂಬಾ ಜೋರಿದೆ ನಿಂತಿರಿ ' ಎಂದವರು ಪುನಃ
'ಒಳಗೆ ಬಂದು ಕುಳಿತು ಕೊಳ್ಳಿರಿ ' ಎಂದರು
ನಾನು ನಿರಾಕರಿಸಿದೆ. ಕಾರಣ ಇತ್ತು.ನಾನು ಪೂರ್ಣವಾಗಿ ತೋಯ್ದು ಹೋಗಿದ್ದೆ ಒಳಗೆ ಹೋದರು ಅವರ ಮನೆಯ ಸೋಪದಲ್ಲಿ ಕುಳಿತು ಕೊಳ್ಳುವ ಹಾಗಿರಲಿಲ್ಲ
ಅವರ ಪತಿರಾಯರೇನೊ ಹೊರಗೆ ಬಂದು ನೋಡಿಹೋದರು. ಅವರ ಮಗ ಇರಬಹುದು ನೋಡಿ ಹೋದ.
ಕಾಲುಗಂಟೆ ಕಳೆದಿತ್ತು
ಅವರೆಲ್ಲರೂ ಕಾರಿನಲ್ಲಿ ಎಲ್ಲಿಗೋ ಹೊರಟರು. ಗೇಟಿಗೆ ಬೀಗ ಹಾಕುತ್ತಾರೆ ಅಂದುಕೊಂಡೆ ಆದರೆ ಹಾಗೆ ಮಾಡದೆ
'ಮಳೆ ನಿಂತ ಮೇಲೆ ಹೊರಡಿ '
ಎನ್ನುತ್ತಾ ಹೊರಟು ಹೋದರು.
ಮಳೆ ಕಡಿಮೆ ಆದ ನಂತರ, ಗೇಟನ್ನು ಮುಚ್ಚಿ ಗಾಡಿ ಹತ್ತಿ ಹೊರಟೆ
ಅವರಿಗೊಮ್ಮೆ ಥ್ಯಾಂಕ್ಸ ಹೇಳುವ ಅವಕಾಶ ಸಹ ಆಗಲಿಲ್ಲ.
ನನಗೆ ತುಂಬಾ ಖುಷಿ ಅನ್ನಿಸಿದ್ದು ಅಪರಿಚಿತನಾದ ನನ್ನನ್ನು ಅನುಮಾನಿಸದೇ ಆಕೆ ಒಳಗೆ ಬನ್ನಿ ಎಂದು ಕರೆದಿದ್ದು.
ನಮ್ಮ ಜನರಲ್ಲಿ ಇಂತಹ ಕೆಟ್ಟ ದಿನಗಳಲ್ಲಿ ಸಹ ಇನ್ನು ಮನುಷ್ಯರ ಬಗ್ಗೆ ನಂಬಿಕೆ ಇದೆ ಅನ್ನುವುದು ಸಂತಸ.
'ಒಳಗೆ ಬನ್ನಿ ' ಎಂದ ಆಕೆಗೆ ನನ್ನ ಅನಂತ ನಮನಗಳು
ಆಕೆ ಇದನ್ನು ಓದುವರೋ ಇಲ್ಲವೋ ತಿಳಿದಿಲ್ಲ
Comments
ಉ: ಮನುಷ್ಯತ್ವ
ಮನುಷ್ಯತ್ವ ಸಹಜ ಪ್ರಕ್ರಿಯೆಯಾದರು ಸುತ್ತಮುತ್ತಲ ಆಗುಹೋಗುಗಳ ದೆಸೆಯಿಂದಾಗಿ ಎಲ್ಲರನ್ನು ಅನುಮಾನಿಸುವ ಕಾಲವಿದು. ಆ ಹಿನ್ನಲೆಯಲ್ಲು ಮನದಲ್ಲಿ ಅನುಮಾನಕ್ಕು ಮೊದಲು ಕಾಣಿಸಿಕೊಳ್ಳುವ ಮಾನವತೆ ಸ್ಮರಣೀಯ ಮತ್ತು ಶ್ಲಾಘನೀಯ. ಈ ಬಗೆಯ ಎಷ್ಟೊ ಪ್ರತಿಕ್ರಿಯೆಗಳು ತಮ್ಮ ಸಹಜತೆಯಿಂದಾಗಿಯೆ ಹೆಚ್ಚು ಪ್ರಚಾರಗೊಳ್ಳುವುದಿಲ್ಲ (ಏನಾದರು ಕೆಡುಕಿನದಾದರೆ ಹೆಡ್ ಲೈನ್ಸ್ ನಲ್ಲಿ ಬರುತ್ತದೆ!). ಒಳಿತಿನ ಉದಾಹರಣೆಗಳನ್ನು ಹೀಗೆ ಎತ್ತಿ ತೋರಿಸಿದರೆ ಹೆಚ್ಚೆಚ್ಚು ಜನ ಕನಿಷ್ಠ ವಿವೇಚನಾಯುಕ್ತ ಮಾನವತೆಯನ್ನಾದರು ತೋರಲು ಪ್ರಚೋದಿಸಿದಂತಾಗುತ್ತದೆ.
ಉ: ಮನುಷ್ಯತ್ವ
ಪಾರ್ಥಸಾರಥಿಯವರಿಗೆ ವಂದನೆಗಳು
ಮನುಷ್ಯತ್ವದ ಕುರಿತು ತಾವು ದಾಖಲಿಸಿದ ಪ್ರಸಂಗ ಮನ ತಟ್ಟುವಂತಹ ಲೇಖನ, ಹೆಲ್ಮೆಟ್ ಹಾಕಿದ ವ್ಯಕ್ತಿಯನ್ನು ಕಂಡ ಮನಯೊಡತಿಯ ಒಂದು ರೀತಿಯ ಹೆದರಿಕೆ ಇಂದಿನ ದಿನಮಾನಗಳ ನೆನದರೆ ಒಂದು ರೀತಿಯಲ್ಲಿ ಸರಿಯೆ, ತಾವು ಹೆಲ್ಮೆಟ್ ತೆಗೆದ ನಂತರ ತಮ್ಮ ಮುಖಭಾವ ಗಮನಿಸಿದಾಗ ತಾವು ಸಭ್ಯ ವ್ಯಕ್ತಿಯೆಂಬುದನ್ನು ಗಮನಿಸಿ ಒಳ ಬಂದು ಕುಳಿತು ಕೊಳ್ಳಲು ಹೇಳಿದ್ದು ನಂತರದಲ್ಲಿ ಅ ಕುಟುಂಬದ ಸದಸ್ಯರ ಗಮನಿಸುವಿಕೆ ಮನೆಯಿಂದ ಅವರು ಹೊರ ಹೋಗುವಾಗ ಗೇಟ್ ಹಾಕದೆ ಹಾಗೆಯೆ ಹೋಗಿದ್ದು ಒಳ್ಳೆಯ ಮನಸುಗಳ ತಾಕಲಾಟದ ಸರಳ ನಿರೂಪಣೆ ಹಿಡಿಸಿತು, ಧನ್ಯವಾದಗಳು.
ಉ: ಮನುಷ್ಯತ್ವ
ಹಿತಕರ ಅನುಭವ ಹಂಚಿಕೊಂಡಿರುವಿರಿ. ಮುದ ನೀಡಿತು. ಧನ್ಯವಾದ, ಪಾರ್ಥರೇ. ಇನ್ನೊಮ್ಮೆ ಆ ಬೀದಿಯಲ್ಲಿ ಹೋದಾಗ ಅವಕಾಶವಾದರೆ ಮಾತನಾಡಿಸಿ ಧನ್ಯವಾದ ಹೇಳಿ.