ಮನುಷ್ಯನ ಕ್ರೌರ್ಯವನ್ನು ತೆರೆದಿಡುವ ಕಾಂಬೋಡಿಯದ ‘ಜಿನೊಸೈಡ್’ ಮ್ಯೂಸಿಯಂ

ಮನುಷ್ಯನ ಕ್ರೌರ್ಯವನ್ನು ತೆರೆದಿಡುವ ಕಾಂಬೋಡಿಯದ ‘ಜಿನೊಸೈಡ್’ ಮ್ಯೂಸಿಯಂ

ಮಾನವ ನಿರ್ಮಿತ ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದು ಖ್ಯಾತಿ ಪಡೆದ ಅಂಗ್ಕೊರ್ (Angkor) ದೇವಾಲಯಗಳಿರುವುದು  ಕ್ಯಾಂಬೋಡಿಯದ ಹಿಂದಿನ ರಾಜಧಾನಿ ಅಂಗ್ಕೊರ್ ನಗರದಲ್ಲಿ. ಇವುಗಳು ಮಾನವನ  ಪರಿಕಲ್ಪನೆ, ಸೃಜನಶೀಲತೆ (ಕ್ರಿಯೇಟಿವಿಟಿ) ಮತ್ತು   ಅಸಾಮಾನ್ಯ ಸಾಧನೆಯ ಒಂದು ಬೃಹತ್ ಪ್ರತೀಕ. ಜೊತೆಗೆ ಅದೇ ಮಾನವ ಅತ್ಯಂತ ಕ್ರೂರಿಯೂ ಆಗಬಲ್ಲ ಎಂಬ ಮಾತಿಗೆ ನಿದರ್ಶನ ಆ ದೇಶದ ಈಗಿನ ರಾಜಧಾನಿ ಪ್ನಾಮ್ ಪೆನ್ಹ್ (Phnom Penh) ನಲ್ಲಿರುವ ತುವೋಲ್ ಸ್ಲೆಂಗ್ ಹತ್ಯಾಕಾಂಡದ ವಸ್ತುಸಂಗ್ರಹಾಲಯ (Tuol Sleng Genocide Museum). 2019ರ ನವಂಬರದಲ್ಲಿ ನಾನು ಮತ್ತು ಐದು ಮಂದಿ ಬಂಧುಗಳು  ಕ್ಯಾಂಬೋಡಿಯಕ್ಕೆ ಭೇಟಿ ಕೊಟ್ಟಾಗ ಅವೆರಡನ್ನು ನೋಡುವ  ಅವಕಾಶ ಲಭಿಸಿತು. ಚರಿತ್ರೆಯ ಪಾಠಗಳನ್ನು ನಾವು ಕಲಿಯದಿದ್ದರೆ ಅದು ಮತ್ತೆ ಮರುಕಳಿಸುತ್ತದೆ ಎಂಬ ತಿಳಿದವರ ಮಾತಿನ ಚಿರಸತ್ಯವನ್ನು ಗಮನದಲ್ಲಿಟ್ಟು ಈ ಲೇಖನದಲ್ಲಿ ಹತ್ಯಾಕಾಂಡದ ಮ್ಯೂಸಿಯಂ ಬಗೆಗೆ ಬರೆಯುತ್ತಿದ್ದೇನೆ.
ವಿಷಯಕ್ಕೆ ಬರುವ ಮೊದಲು ಕ್ಯಾಂಬೋಡಿಯದ ಬಗ್ಗೆ ಸೂಕ್ಷ್ಮವಾದ ಮಾಹಿತಿ ಅಗತ್ಯ. ಆಗ್ನೇಯ ಏಶ್ಯದ ಸಣ್ಣ ದೇಶ ಅದು, ಕೇವಲ 1,81,00 ಚದರ ಕಿಲೋಮೀಟರ್  ವಿಸ್ತೀರ್ಣ (ಕರ್ನಾಟಕದ ವಿಸ್ತೀರ್ಣ 1,91,800 ಚ.ಕಿ.ಮೀ.) ಮತ್ತು 1.6 ಕೋಟಿ ಜನಸಂಖ್ಯೆ ಉಳ್ಳ (ಭಾರತದ ಹರ್ಯಾಣದ ಜನಸಂಖ್ಯೆ 2.5 ಕೋಟಿ),  ಈ ದೇಶ  ಥಾಯ್ಲಂಡ್, ಲಾವೋಸ್, ವಿಯೆಟ್ನಾಮ್ ಮತ್ತು ಥಾಯ್ಲಂಡ್ ಕೊಲ್ಲಿಯಿಂದ ಆವರಿಸಲ್ಪಟ್ಟಿದೆ. ಬೌದ್ಧರೇ ಹೆಚ್ಚಿರುವ ಅಲ್ಲಿನ ಮುಖ್ಯ ಭಾಷೆ ಖಮೇರ್ (Khmer). ಅನೇಕ ವರ್ಷ ಖಮೇರ್ ರಾಜರ  ಆಳ್ವಿಕೆಯಲ್ಲಿದ್ದ ಕ್ಯಾಂಬೋಡಿಯ 19-20ನೇ ಶತಮಾನಗಳಲ್ಲಿ ಫ್ರಾನ್ಸಿನ ವಸಾಹತು ಆಗಿತ್ತು.
2ನೇ ಮಹಾಯುದ್ಧದ ಸಂದರ್ಭದಲ್ಲಿ ಕಾಂಬೋಡಿಯವನ್ನು ಆಕ್ರಮಿಸಿದ ಜಪಾನಿನ ಸೇನೆ ಯುದ್ಧದಲ್ಲಿ ಸೋತು ಹಿಮ್ಮೆಟ್ಟುವಾಗ ದೇಶ ಮತ್ತೆ ಫ್ರಾನ್ಸಿನ ಆಡಳಿತಕ್ಕೆ ಸೇರಲಿತ್ತು. ಆದರೆ ಬದಲಾದ ವಿಶ್ವದಲ್ಲಿ ಪಶ್ಚಿಮ ಯೂರೋಪಿನ ಒಂದು ದೇಶಕ್ಕೆ ದೂರದ ಆಗ್ನೇಯ ಏಶ್ಯದ ವಸಾಹತುವನ್ನು ತನ್ನ ಸುಪರ್ದಿಯಲ್ಲಿ ಮುಂದುವರಿಸುವುದು ಕಷ್ಟಸಾಧ್ಯವಾಗಿ ಆ ದೇಶಕ್ಕೆ ಸ್ವಾತಂತ್ರ್ಯವನ್ನು ನೀಡಲು ಫ್ರೆಂಚ್ ಸರಕಾರ ಮುಂದೆ ಬಂತು. ಭಾರತದಲ್ಲಿ ಸಂಭವಿಸಿದಂತೆ ವಸಾಹತುಶಾಹಿಯ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಚಳವಳಿಯಾಗಲೀ, ಸ್ವತಂತ್ರರಾಷ್ಟ್ರದ ಕಲ್ಪನೆಯುಳ್ಳ ನಾಯಕರಾಗಲೀ ಇಲ್ಲದೆ ಕೇವಲ ರಾಜಕೀಯ ಸ್ಥಿತ್ಯಂತರದಿಂದಾಗಿ 1953ರಲ್ಲಿ ಸ್ವತಂತ್ರವೇನೋ ಆಯಿತು. ಹೆಸರಿಗೊಬ್ಬ ದೊರೆ ಇರುವ ಒಂದು ರೀತಿಯ ಪ್ರಜಾಪ್ರಭುತ್ವ ಪದ್ಧತಿಯೂ ಜಾರಿಗೆ ಬಂತು.
ಸ್ವತಂತ್ರವಾದ ಬಳಿಕ ಜನಪ್ರಿಯ, ದೂರದರ್ಶಿ ನಾಯಕತ್ವದ ಕೊರತೆಯಿಂದಾಗಿ ದೇಶದ  ಆಡಳಿತೆಯ ಚುಕ್ಕಾಣಿ ಹಿಡಿಯಲೋಸ್ಕರ  ಆಂತರಿಕ ಕಲಹ ತಲೆದೋರಿತು. ರಾಜವಂಶದ ಪರ ಹಾಗೂ ಗಣತಂತ್ರದ ಪರವಾಗಿರುವ ಗುಂಪುಗಳ ತಿಕ್ಕಾಟದಲ್ಲಿ ಕಮ್ಯುನಿಸ್ಟರ ಪ್ರಭಾವ ಬೆಳೆಯಲು ಆರಂಭವಾಯಿತು. ಅಮೆರಿಕವು ವಿಯೆಟ್ನಾಮಿನ ಮೇಲೆ ಯುದ್ಧಹೂಡಿದಾಗ ಅಲ್ಲಿನ ವಿಯೆತ್ ಕಾಂಗ್ ಗೆರಿಲ್ಲಾಗಳು ಕ್ಯಾಂಬೋಡಿಯದಲ್ಲಿ ಬೀಡುಬಿಟ್ಟಿದ್ದಾರೆಂಬ ಸಂಶಯದಿಂದ ದೇಶದ ಅನೇಕ ಕಡೆ ಅಮೆರಿಕದ ‘ಬೆಂಕಿಯ ಮಳೆ’ ಸುರಿಯಿತು (ಆ ಮಳೆ ಲಾವೋಸ್ ನಲ್ಲಿ ಆದಷ್ಟು ಪ್ರಖರವಾಗಿರಲಿಲ್ಲ!-ನೋಡಿ: ‘ಅಮೆರಿಕದ ‘ಬೆಂಕಿಯ ಮಳೆಗೆ’ ಭಗ್ನವಾದ ಲಾವೋಸ್’, ಸಂಪದ ಎಪ್ರಿಲ್ 1). 1970ರಲ್ಲಿ ದೊರೆ ನೊರೋದಮ್ ಸಿಹನೌಕರನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದ ಪ್ರಧಾನಿ ಲಾನ್ ನಾಲ್, (Lon Nol) ದೇಶವನ್ನು ಖಮೇರ್ ಪ್ರಜಾತಂತ್ರ ರಾಷ್ಟ್ರವೆಂದು ಘೋಷಿಸಿದರು. ಆದರೆ ಖಮೇರ್ ರೂಜ್ (Khmer Rouge) ಎಂದು ಕರೆಯಲ್ಪಟ್ಟ ಕಮ್ಯುನಿಸ್ಟ್ ಗೆರಿಲ್ಲಾಗಳು ಪ್ರಾಬಲ್ಯ ಪಡೆದು 1975ರಲ್ಲಿ ರಾಜಧಾನಿಗೆ ದಾಳಿ ನಡೆಸಿ ಅಧಿಕಾರವನ್ನು ಕಸಿದುಕೊಂಡರು.  ಅವರ ನಾಯಕನೇ ಪಾಲ್ ಪಾಟ್ (Pol Pot). ಅದರೊಂದಿಗೆ ವಿಶ್ವದ ಅತ್ಯಂತ ದಾರುಣ ದುರಂತಗಳಲ್ಲಿ ಒಂದು ಕ್ಯಾಂಬೋಡಿಯದಲ್ಲಿ ಆರಂಭವಾಯಿತು.
ಆಗಲೇ ನೆರೆಯ ಚೀನ ದೇಶವು ಕಮ್ಯುನಿಸ್ಟರ ತೆಕ್ಕೆಗೆ ಸೇರಿತ್ತು. ಹೆಸರಾಂತ ನಾಯಕ ಮಾವೋ ಡ್ಸೆಡಾಂಗ್ (Mao Dzedong) ಆ ದೇಶದಲ್ಲಿ ಆಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದ್ದರು. ಸಾಂಸ್ಕೃತಿಕ ಕ್ರಾಂತಿ (Cultural Revolution) ಎಂಬ ಹೆಸರಿನಲ್ಲಿ ಹಳೆಯ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು  ಬೇರುಸಹಿತ ಕಿತ್ತು ಹೊಸ ವ್ಯವಸ್ಥೆಯನ್ನು ತರುವ ಎಗ್ಗಿಲ್ಲದ ಪ್ರಯತ್ನ ಸಾಗಿತ್ತು.
ಖಮೇರ್ ರೂಜ್ ಅಧಿಕಾರಗ್ರಹಣ ಮಾಡುವ ಪೂರ್ವದಲ್ಲಿ ಪಾಲ್ ಪಾಟ್, ಚೀನಾದ ಮಹಾನಾಯಕ ಮಾವೋನ ನೀತಿ ಮತ್ತು ತಂತ್ರಗಾರಿಕೆಯಿಂದ ಪ್ರಭಾವಿತನಾಗಿದ್ದ. 1975ರಲ್ಲಿ ಅಧಿಕಾರ ಸಿಕ್ಕಿದ ಮೇಲೆ ಕ್ಯಾಂಬೋಡಿಯವನ್ನು ತನ್ನ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವ ಪ್ರಯೋಗಶಾಲೆಯನ್ನಾಗಿ ಪರಿವರ್ತಿಸಲು ಹೊರಟನು.   
ಬದಲಾವಣೆಯ ಮುಖಗಳು:
ತಮ್ಮ ತಂಡದ ಹೆಸರನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಕಾಂಪೂಚಿಯ (ಸಿಪಿಕೆ) ಎಂದು ಘೋಷಿಸಿಕೊಂಡ ಹೊಸ ಸತ್ತಾರೂಢ ಪಕ್ಷವು, ಕ್ಯಾಂಬೋಡಿಯದ ಹೆಸರನ್ನು ‘ಕಾಂಪೂಚಿಯ’ವೆಂದು ಬದಲಾಯಿಸಿತು.  ಹೆಸರಿನ ಜೊತೆಗೆ 19-20ನೇ ಶತಮಾನಗಳಲ್ಲಿ ಫ್ರೆಂಚರು ಮಾಡಿದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳನ್ನು ಅಳಿಸಿ ಹಾಕಿ ತಮ್ಮದೇ ದೇಶದ ‘ಖಮೇರ್’ ಸಂಸ್ಕೃತಿಯನ್ನು ಪುನರ್ಸ್ಥಾಪಿಸುವ ಗುರಿ ಹೊಸ ಸರಕಾರಕ್ಕಿತ್ತು. ಈ ದಿಶೆಯಲ್ಲಿ ಜನರ ಜೀವನ ಕ್ರಮ, ವಿದ್ಯಾಭ್ಯಾಸದ ಪದ್ಧತಿ, ವೃತ್ತಿ ಮತ್ತು ಉದ್ಯೋಗಪದ್ಧತಿಗಳನ್ನು ಅಡಿಮೇಲು ಮಾಡುವ ಹಾಗೂ ನಗರಗಳಿಂದ ಹಳ್ಳಿಗಳಿಗೆ ಹೋಗಬೇಕೆಂಬ ಕಟ್ಟುನಿಟ್ಟಿನ ನೀತಿಗಳನ್ನು ಜಾರಿಗೆ ತರಲಾಯಿತು. ಈ ಬದಲಾವಣೆಗಳ   ಉದ್ದೇಶ ವರ್ಗಭೇದ ಮತ್ತು ಸಮಾಜದಲ್ಲಿನ ಮೇಲು-ಕೀಳು ಎಂಬ ಮಾನವ ನಿರ್ಮಿತ ಗೋಡೆಗಳನ್ನು ನಾಶಮಾಡುವುದಾಗಿತ್ತು. ಇಡೀ ದೇಶದಲ್ಲಿ ಒಂದೇ ತರದ ಬಟ್ಟೆ ತೊಡಬೇಕು, ಎಲ್ಲೆಡೆಯೂ ಖಮೇರ್ ಭಾಷೆಯನ್ನು ಬಳಸಬೇಕು, ಕೌಟುಂಬಿಕ ಬಾಂಧವ್ಯಕ್ಕಿಂತ ಸಮೂಹ ಭ್ರಾತೃತ್ವಕ್ಕೆ ಪ್ರಾಶಸ್ತ್ಯ ನೀಡಬೇಕು, ನಗರಗಳಲ್ಲಿರುವ ಮಂದಿ ಹಳ್ಳಿಗಳಿಗೆ ತೆರಳಿ ಕೃಷಿಯಲ್ಲಿ ತೊಡಗಬೇಕು ಮುಂತಾದ ನೀತಿಗಳನ್ನು ಬಲಾತ್ಕಾರವಾಗಿ ಹೇರಲಾಯಿತು.
ಈ ನೀತಿಯನ್ನು ವಿರೋಧಿಸಿದವರನ್ನು ಅಥವಾ ಟೀಕಿಸಿದವರನ್ನು ಶಿಕ್ಷೆಗೆ ಗುರಿಪಡಿಸಲಾಯಿತು. ಸ್ವಲ್ಪವಿದ್ಯಾರ್ಜನೆ ಮಾಡಿ ಕೆಲಸಕ್ಕೆ ಸೇರಿ ಅಥವಾ ಸ್ವಂತ ಉದ್ದಿಮೆಯಲ್ಲಿ ತೊಡಗಿಸಿಕೊಂಡು ನಗರದಲ್ಲಿ ಜೀವಿಸುವವರ (‘ನಗರ ಪ್ರತಿಗಾಮಿ’ ಗಳ) ಮೇಲೆ ಅಧಿಕಾರಿಗಳ ಕೆಂಗಣ್ಣು ತೀವ್ರವಾಗಿತ್ತು. ಕನ್ನಡಕ ಹಾಕುವವರು, ಪುಸ್ತಕ   ಓದುವವರು, ಅನೇಕ ಭಾಷೆಗಳನ್ನು ತಿಳಿದವರು,  ಆಧುನಿಕ ವೇಷಭೂಷಣಗಳನ್ನು ಧರಿಸುವವರು, ಶಾಲಾ ಮಾಸ್ತರುಗಳು, ಡಾಕ್ಟರಿಕೆ ಮಾಡುವವರು-ಮುಂತಾದವರೆಲ್ಲ ದೇಶದ್ರೋಹಿಗಳ ಪಟ್ಟಿಗೆ ಸೇರಿಸಲ್ಪಟ್ಟರು. ಸಂಶಯ ಬಂದ ನಾಗರಿಕರನ್ನು ನಿರ್ದಾಕ್ಷಿಣ್ಯವಾಗಿ ಸೆರೆಮನೆಗಳಿಗೆ ತಳ್ಳಲಾಯಿತು, ಹೆಂಗಸರು, ವಯೋವೃದ್ಧರು, ಮಕ್ಕಳು ಎಂಬ ಭೇದಭಾವ ವಿಲ್ಲದೆ ಜೈಲುಗಳಿಗೆ ಸಾಗಿಸಲಾಯಿತು. ಕಂದಮ್ಮಗಳನ್ನು ಅವುಗಳ ಅಮ್ಮಂದಿರಿಂದ ಬೇರ್ಪಡಿಸಲಾಯಿತು.
ಶಾಲೆಗಳು ಜೈಲುಗಳಾದಾಗ:
ಇರುವ ಜೈಲುಗಳು ತುಂಬಿದಾಗ ಶಾಲೆಗಳು, ಸಾರ್ವಜನಿಕ ಕಟ್ಟಡಗಳು ತಾತ್ಕಾಲಿಕವಾದ ಜೈಲುಗಳಾದವು. ನಾವು ನೋಡಿದ ಕಟ್ಟಡದಲ್ಲಿ ತುವೋಲ್ ಸ್ಲೆಂಗ್ ಸಾರ್ವಜನಿಕ ಶಾಲೆ ಇತ್ತು. ಎರಡು ಮಹಡಿಯ  ಆ ವಿದ್ಯಾ ದೇಗುಲವನ್ನು  ತೀವ್ರ ಭದ್ರತೆಯ ಜೈಲಾಗಿ (ಎಸ್ 21 ಅರ್ಥಾತ್ ಸೆಕ್ಯೂರಿಟಿ ಆಫಿಸ್-21)  ಪರಿವರ್ತಿಸಿ ಸಾವಿರಾರು ಕೈದಿಗಳ ಬಂದೀಖಾನೆಯಾಯಿತು. ಶಾಲೆಗೆ ಎಸ್-21 ಎಂಬ ಕುಖ್ಯಾತಿಯೂ ಬಂತು.
ತರಗತಿಯ ಕೊಠಡಿಗಳು ಹಿಂಸೆಯ ಕೇಂದ್ರಗಳಾದವು. ಅಪಾರ ಹಿಂಸೆಯ ಬಳಿಕವೂ ತಾವು ತಪ್ಪು ಮಾಡಿದ್ದೇವೆಂದು ಹೇಳಿಕೆ ಕೊಡಲು ಒಪ್ಪದ ನಾಗರಿಕರನ್ನು ನಗರದ ಹೊರವಲಯದ ‘ಕಿಲ್ಲಿಂಗ್ ಫೀಲ್ಡ್ಸ್’ (ವಧಿಸುವ ಗದ್ದೆಗಳು-Killing fields) ಗಳಿಗೆ ಒಯ್ದು ಗುಂಡಿಟ್ಟು ಕೊಲ್ಲಲಾಗುತ್ತಿತ್ತು. (ಹಾಲಿವುಡ್ ನ   ಇದೇ ಹೆಸರಿನ ಚಲನಚಿತ್ರವೂ ಹೊರಬಂದಿದೆ.)
ಶಾಲೆಯ ಪ್ರತಿಯೊಂದು ಕೋಣೆಯೂ ತನ್ನದೇ ಆದ ಕ್ರೌರ್ಯದ ಕಥೆಯನ್ನು ಮೌನವಾಗಿ ಹೇಳುತ್ತದೆ. ಮುರಿದ ಕಬ್ಬಿಣದ ಮಂಚಗಳು, ಕಾಲಿಗೆ ಕಟ್ಟುತ್ತಿದ್ದ ಸಂಕೋಲೆಗಳು, ಕೈಕೋಳಗಳು, ನೆಲದಲ್ಲಿ ಉಳಿದಿರುವ ರಕ್ತದ ಕಲೆಗಳು,  ಇನ್ನೂ ಮೀಸೆ ಮೂಡಿರದ  ಮತ್ತು ವೃದ್ಧ ಕೈದಿಗಳ ಮಾಸಿದ ಭಾವಚಿತ್ರಗಳು, ಹಿಂಸೆ ತಡೆಯಲಾಗದೆ ಕೊಟ್ಟ ತಪ್ಪೊಪ್ಪಿಗೆಯ ಲಿಖಿತಹೇಳಿಕೆಗಳ ಮಾದರಿಗಳು, ಕೈದಿಗಳ ವರ್ತನೆಯ ಬಗ್ಗೆ ಜೈಲರುಗಳು ಮೊಳೆಗೆ ನೇತಾಡಿಸಿದ ನಿಯಮಗಳು (Dos and Don’ts) - ಕೋಣೆಯಿಂದ ಕೋಣೆಗೆ ಹೋಗುತ್ತಿದ್ದಂತೆ ಕ್ರೌರ್ಯದ ವಿಭಿನ್ನ ಮಜಲುಗಳು ತೆರೆದುಕೊಳ್ಳುತ್ತಿದ್ದವು. ಶಾಲೆಯಲ್ಲಿ ಹಿಂಸೆಗೆ ಒಳಗಾದ ಸುಮಾರು 20,000 ಜನರಲ್ಲಿ ಕೇವಲ 7 ಜನರು ಮಾತ್ರ ಬದುಕಿಕೊಂಡರು ಎಂದಾಗ ನಮ್ಮ ಸ್ಥಳೀಯ ಮಾರ್ಗದರ್ಶಿ ವಿಚೇತಳ ಕಣ್ಣಾಲಿಗಳು ತೇವಗೊಂಡಿದ್ದವು.
ನಾವು ಶಾಲೆಯಿಂದ ಹೊರಬಂದಾಗ ಪಕ್ಕದಲ್ಲಿದ್ದ ಮರದ ಬುಡದಲ್ಲಿ ಸ್ಥಳೀಯ ಒಂದಿಬ್ಬರು ನಾಗರಿಕರು ಬಂದ ಪ್ರವಾಸಿಗರಿಗೆ ತಮ್ಮ ದುರಂತದ    ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು.  ಅವರ ಕತೆ ಕೇಳಿದಾಗ ತಿಳಿದು ಬಂತು, ಅವರು ಎಸ್ 21ರಲ್ಲಿ ಸಿಕ್ಕಿ ಬದುಕಿ ಉಳಿದವರು ಎಂದು.
ಮರೆಯಲಾಗದ ಮಾರಣಹೋಮ:
 ವಿಚೇತಳು ನೀಡಿದ ಮಾಹಿತಿಯಂತೆ 1975-79 ರ  ಅವಧಿಯಲ್ಲಿ ಪಾಲ್ ಪಾಟ್ ಮತ್ತವನ ಬಳಗದವರ  ರಾಕ್ಷಸೀ ಮನೋವೃತ್ತಿಗೆ ಗದ್ದೆಗಳಲ್ಲಿ ಗುಂಡೇಟಿಗೆ, ನಗರಗಳಿಂದ ಹಳ್ಳಿಗಳಿಗೆ ನಡೆಯಲು ಸಾಧ್ಯವಿಲ್ಲದೆ, ಹಿಂಸೆಗೆ ತುತ್ತಾಗಿ, ಹಸಿವಿನಿಂದಾಗಿ, ರೋಗಗಳಿಗೆ ಬಲಿಯಾದವರು  ಸುಮಾರು 15 ರಿಂದ 20 ಲಕ್ಷ ಕಾಂಪೂಚಿಯನರು.  ಈ ಮಾಹಿತಿಗಳನ್ನು ಸರಕಾರವೇ ದಾಖಲಿಸಿದೆ. ಮ್ಯೂಸಿಯಂನ ಹೊರಾಂಗಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿಗಳನ್ನು ನೀಡುವ ಫಲಕಗಳು ಇವೆ. ಶಾಲೆಯ ಎದುರಿನ ಅಂಗಳದ ಕಪ್ಪುಕಲ್ಲಿನ ಹಾಸುಗಳಲ್ಲಿ ಬಲಿಯಾದವರ ಹೆಸರುಗಳನ್ನು ಕೆತ್ತಲಾಗಿದೆ. ಒಂದು ಅಮೃತ ಶಿಲೆಯ ಮೇಲಿನ  ಒಕ್ಕಣೆ ಹೀಗಿದೆ:
ಕಾಂಪೂಚಿಯದ ಪ್ರಜಾತಾಂತ್ರಿಕ ಸರಕಾರದ  ಅವಧಿಯಲ್ಲಿ ನಡೆದ ದುಷ್ಕೃತ್ಯಗಳನ್ನು ಎಂದೆಂದೂ ಮರೆಯೆವು’
ವಸ್ತುಸಂಗ್ರಹಾಲಯದಿಂದ ಹೊರಡುವ ಮೊದಲು ಈ ದುರಂತದ ಕೊನೆ ಹೇಗಾಯಿತು ಎಂಬ ಪ್ರಶ್ನೆಗೆ ವಿಚೇತಳು ಉತ್ತರಿಸಿದಳು: 1979ರ   ಎಪ್ರಿಲ್ ತಿಂಗಳಿನಲ್ಲಿ ವಿಯೆಟ್ನಾಮಿನ ಸೇನೆ ಕಾಂಬೋಡಿಯದ ಮೇಲೆ ದಾಳಿ ನಡೆಸಿದಾಗ ಸಿಪಿಕೆ   ಆಡಳಿತ ಶರಣಾಯಿತು, ಪಾಲ್ ಪಾಟ್ ಮತ್ತು ಅವನ ಬಳಗದವರು ದೂರದ ಕಾಡಿಗೆ ಓಡಿ ಹೋದರು,  ಅವರ ಬಗ್ಗೆ ಸಾರ್ವಜನಿಕ ವಿಚಾರಣೆ ನಡೆಯಿತು. ಕೆಲವರಿಗೆ ಮಾತ್ರ ಜನಾಂಗಹತ್ಯೆಯ ಆರೋಪದಲ್ಲಿ ಶಿಕ್ಷೆಯಾಯಿತು. ಆದರೆ ಪಾಲ್ ಪಾಟ್ ಸೆರೆಸಿಕ್ಕಲಿಲ್ಲ, ಅವನು ಕಾಡಿನಲ್ಲಿಯೇ ಅಸು ನೀಗಿದ. ಕಾಲಾನಂತರದಲ್ಲಿ ವಿಯೆಟ್ನಾಮ್ ಸೈನ್ಯದ ಉಸ್ತುವಾರಿಯಲ್ಲಿ ಚುನಾವಣೆ ನಡೆದು ಹೊಸ ಸರಕಾರ ಅಧಿಕಾರಕ್ಕೆ ಬಂತು; ನೊರೋದಮ್ ಸಿಹನೌಕ್ ಮತ್ತೆ ರಾಜರಾದರು. ಸುಮಾರಾಗಿ 1989ರಲ್ಲಿ ವಿಯೆಟ್ನಾಮ್ ಸೇನೆ ಕಾಂಬೋಡಿಯದಿಂದ ವಾಪಸಾಯಿತು. ಸಿಹನೌಕ್ ಪದತ್ಯಾಗ ಮಾಡಿ ಅವರ ಮಗ ನೊರೋದೊಮ್ ಶಿವಮಣಿ ರಾಜರಾದರು.  
ಜರ್ಮನಿಯಲ್ಲಿ ಹಿಟ್ಲರನು 20ನೇ ಶತಮಾನದ ಪೂರ್ವಾರ್ಧದಲ್ಲಿ ಆರ್ಯ ಪಂಗಡದ ಶ್ರೇಷ್ಠತೆಯನ್ನು ಕಾಪಾಡಲೆಂದು ಯಹೂದ್ಯರ ಮಾರಣಹೋಮ ಮಾಡಿದ ಪಾಶವೀ ಕೃತ್ಯದ ಬಗ್ಗೆ ಚರಿತ್ರೆಯ ದಾಖಲೆಗಳಲ್ಲಿ ಓದಿದ್ದೆ. ಆದರೆ ನಮ್ಮ ಕಾಲದಲ್ಲೇ ಅಂದರೆ 1970ರ ದಶಕದಲ್ಲಿ, ಕಾಂಬೋಡಿಯದಲ್ಲಿ ಸಂಭವಿಸಿದ ದುರಂತ, ಮಾನವನ ರಾಕ್ಷಸೀ ಪ್ರವೃತ್ತಿ ಆಗೊಮ್ಮೆ ಈಗೊಮ್ಮೆ ತಲೆ ಎತ್ತುತ್ತದೆ ಎಂಬುದಕ್ಕೆ ಉದಾಹರಣೆ;  ಅಭಿವೃದ್ಧಿಶೀಲ ನಾಗರಿಕತೆಗೆ ಆಗಾಗ ಬರುವ ಶಾಪ ಎಂದರೂ ತಪ್ಪಲ್ಲ. ಆ ದೇಶದ ವಿಪರ್ಯಾಸವೆಂದರೆ ಶತಮಾನಗಳ ಹಿಂದೆ ಅಂಗ್ಕೊರಿನ ದೇವಾಲಯಗಳು ಬಿಂಬಿಸುವಂತೆ ಅದು ಹಿಂದೂ ಸಂಸ್ಕೃತಿ ಮತ್ತು ಬೌದ್ಧಮತದ ಪ್ರಭಾವಕ್ಕೆ ಒಳಗಾಗಿ ಒಂದು ಪ್ರಬುದ್ಧ ನಾಗರಿಕತೆಯಾಗಿ ಬೆಳೆದಿತ್ತು. ಪಾಲ್ ಪಾಟ್ ನ ಅಧಿಕಾರಾವಧಿಯಲ್ಲಿನ ದುಷ್ಕೃತ್ಯಗಳಿಂದ ಆಧುನಿಕ ಕಾಂಬೋಡಿಯ ಅತ್ಯಂತ ಹಿಂದುಳಿದ ರಾಷ್ಟ್ರವಾಗಿಯೇ ಉಳಿದಿದೆ.

 (ಮ್ಯೂಸಿಯಂ ಒಳಗೆ ಫೊಟೊ ತೆಗೆಯುವಂತಿಲ್ಲ; ಆದರೆ ಅದರ ಹೊರಗಿನ ಚಿತ್ರಗಳು ಸಾಕಷ್ಟು ಮಾಹಿತಿ ನೀಡುತ್ತವೆ. ಮೂರು ಫೋಟೋಗಳನ್ನು ಕೊಟ್ಟಿದ್ದೇನೆ - ಮೊದಲ ಫೋಟೋದಲ್ಲಿ ಜೈಲಿನ ವಿವರಣೆಯನ್ನು ಇಂಗ್ಲಿಷ್, ಫ್ರೆಂಚ್ ಮತ್ತು ಖಮೆರ್ ಭಾಷೆಗಳಲ್ಲಿ ನೀಡಲಾಗಿದೆ. ರಾಕ್ಷಸೀ ಚಿತ್ರಹಿಂಸೆಯ ತುಸುಮಾಹಿತಿ ಅದರಲ್ಲಿದೆ. ಎರಡನೇ ಚಿತ್ರದ ಎದುರು ಭಾಗದಲ್ಲಿ ಶಿಲಾಫಲಕಗಳಲ್ಲಿ ಹಿಂಸೆಗೆ ಬಲಿಯಾದವರ ಹೆಸರುಗಳನ್ನು ಕೆತ್ತಲಾಗಿದೆ; ಹಿಂದಿನ ಭಾಗದಲ್ಲಿ ಮೊದಲು ಶಾಲೆಯಾಗಿ ಬಳಿಕ ಜೈಲಾಗಿ ಉಪಯೋಗಿಸಲ್ಪಟ್ಟ ಕಟ್ಟಡವನ್ನು ಕಾಣಬಹುದು. ಮೂರನೇ ಚಿತ್ರದಲ್ಲಿ ಶಾಲೆಯ ಉದ್ದದ ಜಗಲಿಯಲ್ಲಿ  ನಮ್ಮ ತಂಡ ಹಾಗೂ ನಡುವಿನಲ್ಲಿ ಮಾರ್ಗದರ್ಶಿ ವಿಚೇತಳನ್ನು ಕಾಣಬಹುದು.)

 

Comments

Submitted by kuslekar Mon, 06/15/2020 - 20:05

ಬಹಳ ಮಾಹಿತಿಯನ್ನು ಹೊಂದಿರುವ, ಈ ಲೇಖನವು  ತುಂಬಾ ಚೆನ್ನಾಗಿದೆ।