ಮನುಷ್ಯನ ಮೆದುಳು ತಿನ್ನುವ ಅಪಾಯಕಾರಿ ಅಮೀಬಾ

ಮನುಷ್ಯನ ಮೆದುಳು ತಿನ್ನುವ ಅಪಾಯಕಾರಿ ಅಮೀಬಾ

ಅಮೀಬಿಕ್ ಮೆನಿಂಗೋ ಎನ್ಸೆಫಲಿಟಿಸ್ ಹೆಸರಿನ ಅಪರೂಪದ, ಆದರೆ ಅಷ್ಟೇ ಅಪಾಯಕಾರಿಯಾದ ಮಾರಣಾಂತಿಕ ಕಾಯಿಲೆ ಕೇರಳ ರಾಜ್ಯವನ್ನು ಬಾಧಿಸತೊಡಗಿದೆ. ನೆಗ್ಲೇರಿಯಾ ಫೌಲೇರಿ ಎಂಬ ಅಮೀಬಾ, ಮನುಷ್ಯನ ಮೂಗಿನ ಮೂಲಕ ಒಳಹೋಗಿ, ಮೆದುಳಿಗೆ ತಲುಪಿ ಕೊನೆಗೆ ಜೀವವನ್ನೇ ಕಸಿದುಕೊಳ್ಳುವಂತಹ ಕಾಯಿಲೆ ಇದು. ಕೇರಳದ ಉತ್ತರ ಭಾಗದಲ್ಲಿರುವ ಪಯ್ಯೋಳಿ ಎಂಬಲ್ಲಿ ೧೪ ವರ್ಷದ ಹುಡುಗ ಈಗ ಎರಡು ದಿನಗಳ ಹಿಂದಷ್ಟೇ ಇದಕ್ಕೆ ಬಲಿಯಾಗಿದ್ದಾನೆ. ಮೇ ತಿಂಗಳಿಂದೀಚೆಗೆ ಕೇರಳದಲ್ಲಿ ಇಂತಹ ನಾಲ್ಕನೇ ಸಾವು ಇದು. ಸತ್ತವರೆಲ್ಲರೂ ಸಣ್ಣ ವಯಸ್ಸಿನವರೇ ಎಂಬುದು ಗಮನಾರ್ಹ. ಮೇ ೨೧ರಂದು ಮಲಪ್ಪುರಂನಲ್ಲಿ ಐದು ವರ್ಷದ ಬಾಲಕಿ, ಜೂನ್ ೨೫ರಂದು ಕಣ್ಣೂರಿನಲ್ಲಿ ೧೩ ವರ್ಷದ ಹುಡುಗಿ, ಈಗ ಒಂದು ವಾರಕ್ಕೆ ಮೊದಲು ೧೪ ವರ್ಷದ ಮತ್ತೊಬ್ಬ ಬಾಲಕ ಅಮೀಬಿಕ್ ಮೆನಿಂಗೋ ಎನ್ಸೆಫಲಿಟಿಸ್ ನಿಂದಾಗಿಯೇ ಮೃತಪಟ್ಟಿದ್ದರು. ವೈದ್ಯಕೀಯ ಪರಿಣಿತರು ಹೇಳುವ ಪ್ರಕಾರ ಕಲುಷಿತ ನೀರಿನಲ್ಲಿ ಈಜಿದರೆ, ಆ ನೀರಿನಿಂದ ಮುಖ ತೊಳೆದರೆ, ಈ ನೆಗ್ಲೇರಿಯಾ ಫೌಲೇರಿ ಅಮೀಬಾ, ಮೂಗಿನ ಮೂಲಕ ಮನುಷ್ಯನ ದೇಹವನ್ನು ಪ್ರವೇಶಿಸುತ್ತದೆ. ಅದು ಮೆದುಳನ್ನು ತಲುಪಿದ ಬಳಿಕ ಸೋಂಕಿತ ಮನುಷ್ಯನಿಗೆ ತೀವ್ರ ತಲೆನೋವು, ಜ್ವರ, ವಾಂತಿ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಅಮೀಬಾವನ್ನು ಕೊಲ್ಲುವ ಚಿಕಿತ್ಸೆ ಈವರೆಗೆ ಲಭ್ಯವಿಲ್ಲ. ಆಂಟಿಫಂಗಲ್, ಆಂಟಿ ಮೈಕ್ರೋಬಿಯಲ್ ಔಷಧಿಗಳನ್ನು ನೀಡಿದರೂ ಅದನ್ನು ಮಟ್ಟ ಹಾಕುವುದು ಕಷ್ಟ. ಅಂತಿಮವಾಗಿ ಸಾವು ಖಚಿತ ಎನ್ನುತ್ತಾರೆ ವೈದ್ಯರು.

ಕೇರಳದಲ್ಲಿರುವ ಪ್ರಕೃತಿ - ಪರಿಸರ - ವಾತಾವರಣ ಈ ನೆಗ್ಲೇರಿಯಾ ಫೌಲೇರಿ ಅಮೀಬಾಗೆ ಹೇಳಿ ಮಾಡಿಸಿದಂತಿದೆ. ಕೆಲವೊಮ್ಮೆ ಅತಿಯಾದ ಉಷ್ಣತಾಮಾನ, ಮತ್ತೆ ಕೆಲವೊಮ್ಮೆ ತೀವ್ರ ಆರ್ದ್ರತೆ ಇರುವಂತಹ ಪ್ರದೇಶಗಳಲ್ಲಿ ಈ ಅಮೀಬಾ ಬೆಳೆಯುತ್ತದೆಯಂತೆ. ಅದರಲ್ಲೂ ವಿಶೇಷವಾಗಿ ಮಳೆಗಾಲದಲ್ಲಿ ಇದರ ಹಾವಳಿ ಹೆಚ್ಚು. ಕೆರೆಕಟ್ಟೆ, ಸರೋವರ, ನದಿ ಪಾತ್ರಗಳಲ್ಲಿ ಮಳೆಗಾಲದಲ್ಲಿ ನೀರು ಹೆಚ್ಚಾಗುತ್ತದೆ. ಕೆಲವೆಡೆ ನಿಂತ ನೀರು ಹಲವಾರು ದಿನಗಳ ಕಾಲ ಅಲ್ಲೇ ನಿಂತಿರುತ್ತದೆ. ಹರಿದರೂ ನಿಧಾನವಾಗಿ ಹರಿಯುತ್ತಿರುತ್ತದೆ. ಇದೆಲ್ಲದರ ಪರಿಣಾಮವಾಗಿ ಈ ಅಪಾಯಕಾರಿ ಅಮೀಬಾ ಅಲ್ಲಿ ತನ್ನ ಸಂತಾನವನ್ನು ವೃದ್ಧಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿನ ಜನರು ಇಂತಹ ನೀರಿನಲ್ಲಿ ಸ್ನಾನ ಮಾಡುವುದು, ಈಜಾಡುವುದು, ಮುಖ ತೊಳೆಯುವುದು, ಬಟ್ಟೆ ಒಗೆಯುವುದು ಹೆಚ್ಚು. ಅವರೇ ಈ ಅಮೀಬಾದ ಸಂಪರ್ಕಕ್ಕೆ ಬರುವ ಸಾಧ್ಯತೆ ಇರುತ್ತದೆ. ಈ ಅಪಾಯಕಾರಿ ಅಮೀಬಾ ಹರಡುವುದನ್ನು ತಡೆಯಬೇಕಾದರೆ ನೀರು ಬಹುಕಾಲ ಒಂದೇ ಕಡೆ ನಿಲ್ಲುವುದನ್ನು ತಪ್ಪಿಸಬೇಕು. ಜಲಮೂಲಗಳಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಆಗಾಗ ಕ್ಲೋರಿನ್ ಹಾಕಬೇಕು. ಕಲುಷಿತ ನೀರಿನಲ್ಲಿ ಮುಖ ತೊಳೆಯುವುದು, ಬಟ್ಟೆ ಒಗೆಯುವುದು, ಈಜಾಡುವುದನ್ನು ತಪ್ಪಿಸಬೇಕು. ಆಗ ಮಾತ್ರ ಈ ಅಮೀಬಾದ ಸೋಂಕಿಗೆ ಒಳಗಾಗುವುದರಿಂದ ಬಚಾವಾಗಲು ಸಾಧ್ಯ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ವಿಷಯದಲ್ಲಿ ರಾಜ್ಯ ಸರ್ಕಾರಗಳು, ಜನ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರೆಲ್ಲರ ಹೊಣೆಗಾರಿಕೆಯೂ ಮಹತ್ವದ್ದಾಗಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೯-೦೭-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ