ಮನುಷ್ಯರಾಗಿ ಬದುಕುವುದು ಕಷ್ಟ…!

ಒಂದು ಮಾತಿದೆ 'ಮನುಷ್ಯರಾಗಿ ಹುಟ್ಟುವುದಕ್ಕಿಂತಲೂ ಮನುಷ್ಯರಾಗಿ ಬದುಕುವುದು ತುಂಬಾ ಪ್ರಯಾಸದ ಕೆಲಸ'ವೆಂದು. ಯೋಚಿಸಿದಾಗ ಇದು ಸತ್ಯವಿರಬಹುದೆಂದು ಅನ್ನಿಸ್ತದೆ. ಶ್ರಮ, ಸಾಧನೆ, ವಿಶ್ವಾಸ, ನಂಬಿಕೆ, ಅಚಲ ನಿರ್ಧಾರ, ಯೋಚನಾ ಶಕ್ತಿ, ಆತ್ಮಾಭಿಮಾನ, ಗೌರವಿಸುವ ಗುಣ, ತಾಳ್ಮೆ ಇವೆಲ್ಲವನ್ನೂ ಮೈಗೂಡಿಸಿಕೊಂಡರೆ ೭೫% ವಾದರೂ ಮನುಷ್ಯರಾಗಿ ಬಾಳಬಹುದೇನೋ. ಮನುಷ್ಯತ್ವದಲ್ಲಿ ಮುಖ್ಯ' ತಮ್ಮತನ' ಇರಲೇಬೇಕು. ಹಿತ್ತಾಳೆ ಕಿವಿಯಾದರೆ 'ಕೋಲೆ ಬಸವ'ನಂತೆ ತಲೆ ಅಲ್ಲಾಡಿಸಬೇಕಷ್ಟೆ. ಜೀವನವೆಂದರೆ ದೊಡ್ಡ ದೊಡ್ಡ ಸಂಗತಿಗಳೆಂಬುದನ್ನು ಮರೆತು, ಚಿಕ್ಕ ಚಿಕ್ಕ ವಿಷಯಗಳಿಂದಲೇ ಆಸಕ್ತಿ ಬೆಳೆಸಿಕೊಳ್ಳುತ್ತಾ, ಅನಂತರ ದೊಡ್ಡ ವಿಷಯಕ್ಕೆ ಹಂತ ಹಂತವಾಗಿ ಮೇಲೇರಿದರೆ ಬದುಕು ಸಾರ್ಥಕ. 'ಗುಂಪಿನಲ್ಲಿ ಗೋವಿಂದ, ಹತ್ತರೊಟ್ಟಿಗೆ ಹನ್ನೊಂದು'ಆಗದವರು ಬದುಕಿನ ನೆಲೆ-ಬೆಲೆ ಕಂಡುಕೊಂಡಾರು. ಎಲ್ಲವನ್ನೂ ನೋಡಿ, ಕೇಳಿಸಿಕೊಂಡು, ನಮಗೆ ಬೇಕಾದ್ದನ್ನು ಮಾತ್ರ ಸ್ವೀಕರಿಸಿ ಬದುಕಿನ ಸುಂದರ ಕ್ಷಣಗಳನ್ನು ಆಸ್ವಾದಿಸೋಣ. ಆಗದೇ? ತಲೆಮೇಲೆ ಬಂಡೆಕಲ್ಲು ಬಿದ್ದ ಹಾಗೆ ಚಿಂತಿಸುವುದನ್ನು ಬಿಡೋಣ. 'ಹುಟ್ಟಿಗೆ ಕಾರಣನಾದ ಆ ಭಗವಂತ ಹೊಟ್ಟೆಗೆ ಅನ್ನ ನೀಡದಿರುವನೇ? ಅವನಿಗೆ ಗೊತ್ತಿದೆ, ಯಾರು ಯಾರಿಗೆ ಯಾವಾಗ ಎಷ್ಟು ಕೊಡಬೇಕೆಂದು.ಕಳೆದದ್ದು ಹೋಗಲಿ, ಆ ಬಗ್ಗೆ ಚಿಂತೆ ಬೇಡ. 'ಈ ಕ್ಷಣ ನಮ್ಮದು' ಅಲ್ಲವೇ? ಈ ಅರಿವನ್ನು ಬೆಳೆಸಿಕೊಳ್ಳೋಣ. ಯಾರಾದರೂ ನಾಲ್ಕು ಜನ ಅಭಿಮಾನಿಗಳನ್ನೋ, ದಾನಿಗಳನ್ನೋ ಒಟ್ಟಾಗಿಸಿ ಒಂದು ಉತ್ತಮ ಜನಸ್ನೇಹಿ ಕಾರ್ಯಕ್ರಮ ಹಮ್ಮಿಕೊಂಡಾಗ ಕಿಂಚಿತ್ ಮನಸಾರೆ ಸಹಕರಿಸೋಣ. ಅವರು ಕೇಳಿದರೆ ಮಾತ್ರ ಕೊಡೋಣ ಎನುವುದು ಬೇಡ. 'ಅಳಿಲ ಸೇವೆ'',ಹನಿಹನಿ ಗೂಡಿ ಹಳ್ಳ' ನಮಗೆ ತಿಳಿದೇ ಇದೆ. ಬಂಧುಗಳೇ, ಯಾರು ಏನು ಹೇಳಿದರೂ ಎಲ್ಲವನ್ನೂ ಕೇಳಿಸಿಕೊಂಡು, ನಮ್ಮ ಮನಸಿನ ಮಾತಿಗೆ ಕಿವಿಯಾನಿಸಿ, ಮನುಷ್ಯರಾಗಿ ಬದುಕಲು ಪ್ರಯತ್ನಿಸೋಣ, ಸಹಕಾರ ಮನೋಭಾವ ಬೆಳೆಸಿಕೊಳ್ಳೋಣ.
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ