ಮನುಷ್ಯ ಮೃಗನಾದ..ಚಿರತೆ ಚಿರನಿದ್ರೆಗೆ ಜಾರಿತು..ಶೌರ್ಯ ಪ್ರಶಸ್ತಿ ಯಾರಿಗೆ?

ಮನುಷ್ಯ ಮೃಗನಾದ..ಚಿರತೆ ಚಿರನಿದ್ರೆಗೆ ಜಾರಿತು..ಶೌರ್ಯ ಪ್ರಶಸ್ತಿ ಯಾರಿಗೆ?

ಬರಹ

ಇವತ್ತು ಬೆಳಿಗ್ಗೆ ಎದ್ದ ತಕ್ಷಣ ಪತ್ರಿಕೆ ಬಿಚ್ಚಿದೆ. ಮುಖಪುಟದ ಲೇಖನ ಓದಿದೆ. ಮನಸ್ಸಿಗೆ ತುಂಬ ಖೇದವಾಯಿತು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಜಗತ್ತಿನ ಅತೀ ಬುದ್ಧಿವಂತ ಹಾಗು ಭೂಮಿಯ ಮೇಲಿನ ಏಕೈಕ ‘ವಿಚಾರವಂತ ಪ್ರಾಣಿ’ ಚಿರತೆಯನ್ನು ಜೀವಂತವಾಗಿ ಬಂಧಿಸುವ ಬದಲು, ಬಾಲಿಶವಾಗಿ ಅಟ್ಟಾಡಿಸಿ ಕೊಂದಿದ್ದು, ಆ ಮೂಕಪ್ರಾಣಿ ತನ್ನ ಆತ್ಮ ರಕ್ಷಣೆಗಾಗಿ..ರೊಚ್ಚಿಗೆದ್ದು ಕೊನೆಗೆ ಅನಿವಾರ್ಯವಾಗಿ ಹೋರಾಟಕ್ಕಿಳಿದು ವೀರಮರಣ ಅಪ್ಪಿದ್ದು..ಏಕೋ ಮಾನಸಿಕ ಕಿರಿಕಿರಿ ಉಂಟುಮಾಡಿತು.

‘ಚಿರ ನಿದ್ರೆಗೆ ಜಾರಿದ ಚಿರತೆ’, ‘ನಗರಕ್ಕೆ ಬಂದು ನರಕಯಾತನೆ ಕಂಡ ಚಿರತೆ’, ‘ಮನುಷ್ಯ ಮೃಗನಾದ..ಚಿರತೆ ಚಿರನಿದ್ರೆಗೆ ಜಾರಿತು’ ಹೀಗೆಯೇ ತರಹೇವಾರಿ ಶೀರ್ಷಿಕೆಗಳು ನನ್ನ ತಲೆ ತಿರುಗಿಸಿದವು.

ನೋಡಿ..ಜಗತ್ ಪ್ರಸಿದ್ಧ ಶ್ರೀ ಜಯಚಾಮರಾಜೇಂದ್ರ ಮೃಗಾಲಯ ಇರುವುದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ. ಅಲ್ಲಿ ನೂರಾರು ಪ್ರಭೇಧದ ಕಾಡು ಪ್ರಾಣಿಗಳನ್ನು ಪಂಜರದಲ್ಲಿ ಇಡಲಾಗಿದೆ. ಅವುಗಳ ದೇಖರೇಖಿಗೆ ವನ್ಯ ಜೀವಿ ತಜ್ನರು, ಪಶು ವೈದ್ಯರು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಪಡೆಯೇ ಇದೆ. ಅಕಸ್ಮಾತ್ ಈ ಭಯಂಕರ ಪ್ರಾಣಿಗಳು ಪಂಜರದಿಂದ ತಪ್ಪಿಸಿಕೊಂಡರೆ? ಅಥವಾ ನೀರು, ಆಹಾರ ಕೊಡಲು ತೆರಳಿದ ಮೃಗಾಲಯದ ಸಿಬ್ಬಂದಿಗಳ ಮೇಲೆ ಹಟಾತ್ ದಾಳಿ ನಡೆಸಿದರೆ ಅರವಳಿಕೆ ಮದ್ದು ನೀಡಿ, (ಕೊಲ್ಲದೇ) ಧರಾಶಾಯಿಗೊಳಿಸಿ ಸೆರೆ ಹಿಡಿದು ಬೋನಿಗೆ ತಳ್ಳುವ ವ್ಯವಸ್ಥೆ ಇಲ್ಲವೇ? ಬೋನಿಗೆ ತಳ್ಳಿದ ಮೇಲೆ ಅವುಗಳಿಗೆ ಸಕಾಲಿಕವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆ ಇಲ್ಲವೇ?

ಧಾರವಾಡದಂತಹ ಊರುಗಳಲ್ಲಿ ಈ ಪರಿಸ್ಥಿತಿ ಬಂದರೆ ವನ್ಯಜೀವಿ ತಜ್ನರು ಶಿವಮೊಗ್ಗೆಯಿಂದ ಅರವಳಿಕೆ ಮದ್ದು, ಬಂದೂಕು ಹಿಡಿದುಕೊಂಡು ಬರುವ ವರೆಗೆ ಸುಮಾರು ೮ ತಾಸು ಅವಧಿ ಗತಿಸಿರುತ್ತದೆ. ಆಯಕಟ್ಟಿನ ಪ್ರದೇಶದಲ್ಲಿ ಸಿಕ್ಕಿಕೊಂಡರೆ ಆ ಭಯಂಕರ ಮೂಕ ಪ್ರಾಣಿ ಬದುಕಬಹುದು. ಇಲ್ಲದೇ ಹೋದರೆ ಅದು ಜೀವಂತವಾಗಿ ಕಾಡು ಕಾಣುವುದು ಕನಸೇ! ಆದರೆ ಮೈಸೂರಿನಲ್ಲಿ ಚಿರತೆ ಅಕಾಲ ಮೃತ್ಯುವಿಗೆ ಈಡಾದದ್ದು ಅಕ್ಷಮ್ಯ.

ಹಾಗೆಯೇ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಕುಶಲರಿಗೆ ಸಾಮಾನ್ಯಜ್ನಾನವಿರುವುದು ಅಪೇಕ್ಷಣೀಯ. ಕೂಡಲೇ ಸಿದ್ಧತೆ, ತಜ್ನರೊಂದಿಗೆ ಸಮಾಲೋಚನೆ, ಬಂದೆರಗಬಹುದಾದ ಅನೀರೀಕ್ಷಿತ ಅಪಾಯಗಳು, ಸೂಕ್ತವಾದ, ಮೂರ್ಖತನಕ್ಕೆ ಜಾಗೆ ಇರದ ಮನಸ್ಥಿತಿ. ಹಾಗೆಯೇ ಹುಂಬಗುತ್ತಿಗೆ ನಡವಳಿಕೆ ಸಹ ಪ್ರಾಣಕ್ಕೆ ಎರವಾಗಬಹುದು. ಸಾವಿರಾರು ಜನ ಚಿರತೆಯ ಸುತ್ತ ನೆರೆದಿದ್ದು. ಭಯಭೀತ ವಾತಾವರಣ ಸೃಷ್ಠಿಸಿದ್ದು, ಅತ್ಯಂತ ಸಮೀಪದಿಂದ ಛಾಯಾಚಿತ್ರ ಕ್ಲಿಕ್ಕಿಸಲು, ವಿಡಿಯೋ ಚಿತ್ರೀಕರಣ ಮಾಡಲು ಹವಣಿಸುವ ಮಾಧ್ಯಮ ಪ್ರತಿನಿಧಿಗಳು, ಬರಿಗೈಯಲ್ಲಿ ಹಿಮ್ಮೆಟ್ಟಿಸಲು ಹುಂಬಸಾಹಸ ಹಾಗು ಪೌರುಷ ಪ್ರದರ್ಶಿಸಿದ ಪೊಲೀಸರು..ಇದೆಲ್ಲ ಮನುಷ್ಯರಿಗೆ ಚೆಲ್ಲಾಟ..ಚಿರತೆಗೆ ಪ್ರಾಣ ಸಂಕಟವಾಗಿ ಪರಿಣಮಿಸಿತು. ಚಿರತೆಯನ್ನು ಬದುಕಿಸುವ ಪ್ರಯತ್ನವಂತೂ ಇದಾಗಿರಲಿಲ್ಲ. ಹೀಗೆ ದುರಂತ ಸಾಹಸಕ್ಕೆ ಇಳಿದವರ ಉದ್ದೇಶ ಏನಾಗಿತ್ತು? ವರದಿಗಳಿಂದ ಸ್ಪಷ್ಠವಾಗಲಿಲ್ಲ.

ಸಾಕಿದ ನಾಯಿ ಮರಿ ನೋಡಲು, ಮುಟ್ಟಲು ಹಾಗು ಹಿಡಿಯಲು ಹೊರಟವರಂತೆ ಹುಚ್ಚಾಪಟ್ಟೆ ಆ ಕಾಡಿನ ಭಯಂಕರ ಪ್ರಾಣಿಯ ಮುಂದೆ ಕಟ್ಟಿಗೆ, ದೊಣ್ಣೆಗಳನ್ನು ಹಿಡಿದು ಹುಚ್ಚು ಸಾಹಸ ಮಾಡಿದವರಂತೆ ಪತ್ರಿಕೆಗಳಲ್ಲಿ ಪ್ರಕಟವಾದ ಚಿತ್ರಗಳಲ್ಲಿ ಭಾಸವಾಗುತ್ತಿದೆ. ಹಾಗೆ ನೋಡಿದರೆ ಇದೊಂದು ವ್ಯವಸ್ಥಿತ ಕೊಲೆ. ಅರಣ್ಯ ಇಲಾಖೆಯವರು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಚಿರತೆಯ ಸಾವಿಗೆ ಕಾರಣರಾದವರ ವಿರುದ್ಧ ಹಾಗು ಪೊಲೀಸ್ ಇಲಾಖೆಯವರು ಕಾರ್ಯಾಚರಣೆಗೆ ಅಡ್ಡಿ ಪಡಿಸಿದವರ ವಿರುದ್ಧ ಮೊಕದ್ದೆಮೆ ದಾಖಲಿಸಿ, ಶಿಕ್ಷೆಗೆ ಗುರಿ ಪಡಿಸಬೇಕು. ಮಾಧ್ಯಮ ವೀರರಿಗೂ ಅವರ ಹುಂಬ ಕಸರತ್ತಿಗೂ ಇಲ್ಲಿ ವಿನಾಯಿತಿ ಸಿಗಬಾರದು.

ನಾವೆಲ್ಲ ಈಗಾಗಲೇ ಕಾಡು ಕಡಿದು ನಾಡನ್ನು ನಿರ್ಮಿಸಿದ್ದರಿಂದ, ನಿರ್ಮಿಸುತ್ತಿರುವುದರಿಂದ ಈ ಘಟನೆಗಳು ಇನ್ನು ಮುಂದೆಯೂ ಪುನರಾವರ್ತನೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ನಮ್ಮ ತಯಾರಿ ಯಾವ ಮಟ್ಟದ್ದಾಗಿರಬೇಕು. ಸುರಕ್ಷತಾ ಕ್ರಮಗಳು ಹೇಗಿರಬೇಕು? ದಯವಿಟ್ಟು ಭಾದ್ಯಸ್ತರು ನೈತಿಕ ಜವಾಬ್ದಾರಿ ಹೊತ್ತು ವಿಚಾರ ಮಾಡುವರೇ? ಕಾದು ನೋಡೋಣ. ಅಥವಾ ಕನಿಷ್ಠ ಪಕ್ಷ ಇಂದಿನ ಹುಂಬ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಶೌರ್ಯ ಪ್ರಶಸ್ತಿಗಾದರೂ ನಾಮಕರಣ ಮಾಡುತ್ತಾರೆಯೇ? ನೋಡೋಣ!