ಮನೆಗೆ ನೆಂಟರು ಬಂದರೆ...

ಮನೆಗೆ ನೆಂಟರು ಬಂದರೆ...

ಕಾಲ ಬದಲಾಗಿದೆ ಎಂಬ ಮಾತು ಆಗಾಗ ಕಿವಿಗೆ ಬೀಳುತ್ತಿರುತ್ತದೆ. ಆಗ ನನಗೆ ಕಾಡುವ ಸಂದೇಹ, “ನಿಜವಾಗಿಯೂ ಕಾಲ ಬದಲಾಗುತ್ತದೆಯೇ...?, ಋತುಮಾನ ಆಧಾರಿತ ಕಾಲಗಳು ಪ್ರತೀ ವರ್ಷವೂ ಸಕಾಲದಲ್ಲೇ ಬರುತ್ತವೆಯಲ್ಲಾ...?”. ಈ ಸಂದೇಹಕ್ಕೆ ಹಿರಿಯರೊಬ್ಬರು ಪರಿಹಾರವನ್ನು ನೀಡಿದ ನಂತರ ನನಗರ್ಥವಾಯಿತು, ಕಾಲ ಬದಲಾಗಿಲ್ಲ, ಮನುಷ್ಯನು ಮಾತ್ರ ಕಾಲದಿಂದ ಕಾಲಕ್ಕೆ ಬದಲಾವಣೆಯಾಗುತ್ತಿದ್ದಾನೆ ಎಂದು. ನೀವು ಈ ಮಾತನ್ನು ಒಪ್ಪುವಿರಾ, ತಪ್ಪೆನ್ನುವಿರಾ? ಇದಕ್ಕೆ ಉತ್ತರಿಸುವ ಮೊದಲೊಮ್ಮೆ ಈ ಲೇಖನ ವನ್ನು ದಯವಿಟ್ಟು ಪೂರ್ತಿಯಾಗಿ ಓದಿ.

ನಾನು ಚಿಕ್ಕವನಿರುವಾಗ ಮನೆಗೆ ನೆಂಟರು ಬರುವರು ಎಂದು ಸುದ್ದಿ ಸಿಕ್ಕಿದೊಡನೆಯೇ ನಮಗೆ ಎಲ್ಲಿಲ್ಲದ ಸಡಗರ. ಆ ದಿನಗಳಲ್ಲಿ ಪ್ರತಿ ಮನೆಯಲ್ಲೂ ಗಾಡಿಗಳಿರಲಿಲ್ಲ. ಟಿ.ವಿ., ಫೋನ್ ಇಲ್ಲವೇ ಇಲ್ಲ. ವ್ಯವಹಾರಗಳು ಎಲ್ಲವೂ ಅಂಚೆ ಪತ್ರಗಳಲ್ಲಿಯೇ ನಡೆಯುತ್ತಿತ್ತು. ನಿರ್ದಿಷ್ಟ ಸಮಯದಲ್ಲಿ ಮಾತ್ರವೇ ಓಡುವ ಸೀಮಿತ ಸಂಖ್ಯೆಯ ಬಸ್ ಮೂಲಕವೇ ಬರಬೇಕು ಅಥವಾ ಹೋಗಬೇಕು. ಬಾಡಿಗೆಗೆ ವಾಹನ ಮಾಡಿ ಸಂಚರಿಸುವುದು ಅತೀ ಶ್ರೀಮಂತರಿಗೆ ಮಾತ್ರ ಸಾಧ್ಯವಿದ್ದ ಆ ದಿನಗಳು ಇಂದಿಗೂ ನೆನಪಿಗೆ ಬರುತ್ತದೆ. ನೆಂಟರು ಬರುವ ಬಸ್ಸಿಗಾಗಿ ಕಾಯುವುದು, ಬಸ್ ಬಂದೊಡನೆ ಓಡಿ ಹೋಗಿ ಬಸ್ಸಿನೊಳಗಡೆಗೆ ಇಣುಕುವುದು, ಬಂದಿರುವರೆಂದಾದರೆ ‘ಬಸ್’ನ ಬಾಗಿಲ ಹತ್ತಿರ ನಿಲ್ಲುವುದು, ಅವರು ಇಳಿಯುತ್ತಿದ್ದಂತೆಯೇ ಅವರ ಬಟ್ಟೆ ತುಂಬಿದ ಬ್ಯಾಗ್, ಇತರೆ ಚೀಲಗಳನ್ನು ಹೆಗಲಿಗೇರಿಸಿ ಮನೆಗೆ ಕರೆದೊಯ್ಯುವುದು... ಹೀಗೆ ಸಂಭ್ರಮವೋ ಸಂಭ್ರಮ. ಹಾಗೆ ಬಂದ ನೆಂಟರು ಒಂದೆರಡು ದಿನ ಮನೆಯಲ್ಲಿಯೇ ಇದ್ದು ಹೊರಡುವುದು, ಹೊಡುವಾಗ ಈ ದಿನ ಬೇಡ, ನಾಳೆ ಹೋಗಿ, ಈ ದಿನ ಊರಿನ ಜಾತ್ರೆಗೆ ಹೋಗುವ, ಮಕ್ಕಳಿಗೂ ಖುಷಿಯಾಗುತ್ತದೆ ಎಂದು ಹೊರಟ ನೆಂಟರನ್ನು ಮನೆಯಲ್ಲಿ ಮತ್ತೆರಡು ದಿನ ನಿಲ್ಲಿಸುವ ಪ್ರಯತ್ನಗಳು ಮನೆಯವರಿಂದ ನಡೆಯುತ್ತವೆ. ಮಕ್ಕಳು ಅಳುವುದೂ ಇದೆ. ಇವೆಲ್ಲವೂ ಅಂದು ನಾವು ಹೊಂದಿದ್ದ ಪರಸ್ಪರ ಪ್ರೀತಿಯ ದ್ಯೋತಕಗಳು.

ನೆಂಟರು ಮನೆಯಲ್ಲಿದ್ದಾಗ ಅವರಿಗೆ, ಮನೆಯ ಒಳಗಡೆ ಇರುವ; ಮನೆಯವರು ಹೊಸದಾಗಿ ತಂದ ಸಾಧನಗಳನ್ನು ಪರಿಚಯಿಸುವುದು, ಅದರ ಪ್ರಯೋಜನ ಮತ್ತು ಬಳಸುವ ವಿಧಾನ ತಿಳಿಸುವುದು, ತೋಟಕ್ಕೆ ಕರೆದುಕೊಂಡು ಹೋಗಿ ಕೃಷಿಯನ್ನು ತೋರಿಸುವುದು, ಸಂಜೆ ಎಲ್ಲರೂ ಜೊತೆಯಾಗಿ ರಸ್ತೆಯುದ್ದಕ್ಕೂ ನಡೆಯುವುದು, ದಾರಿಯಲ್ಲಿ ಸಿಗುವ ಬೇರೆ ಬೇರೆ ಮನೆಯವರಿಗೆ ಪರಿಚಯಿಸುವುದು, ನೆಂಟರ ಬಗ್ಗೆ ಅಭಿಮಾನದ ಮಾತುಗಳನ್ನು ಹೇಳುವುದು...... ಹೀಗೆ ನಾನಾ ಕಾರ್ಯಕ್ರಮಗಳ ಮೂಲಕ ನೆಂಟರಿಗೆ ಬೇಸರವಾಗದ ಹಾಗೆ ನೋಡಿಕೊಳ್ಳುವ ಕೆಲಸ ಮನೆಯವರಿಗೆ. ಮಕ್ಕಳೊಡನೆ ಆಡುವುದು, ಅವರಿಗೆ ರುಚಿ ರುಚಿಯಾದ ವಿಶೇಷ ತಿಂಡಿಗಳನ್ನು ಮಾಡಿ ವಿತರಿಸುವುದು, ತಿಂದ ಪಾತ್ರೆ ಪರಡಿಗಳನ್ನು ನೆಂಟರು ತೊಳೆಯದಂತೆ ಎಚ್ಚರಿಕೆಯಿಂದ ಇರುವುದು, ಕೈ ಬಾಯಿ ತೊಳೆಯಲು ನೀರು ಕೊಡುವುದು, ಒದ್ದೆಯಾದ ಕೈ ಮುಖ ಒರೆಸಲು ಸ್ವಚ್ಛವಾದ “ಟವೆಲ್” ಕೊಡುವುದು ಹೀಗೆ ಅತಿಥಿ ಸತ್ಕಾರ ಭರ್ಜರಿಯಾಗಿ ನಡೆಯುತ್ತಿತ್ತು.

ಮಕ್ಕಳಿಗೆ ಹೊಸ ಹೊಸ ತಿಂಡಿ ತಿನ್ನುವ ಮಜ, ಬೇರೆ ಬೇರೆ ಆಟ ಆಡುವ ಖುಷಿ ಒಂದೆಡೆಯಾದರೆ ಅವರ ಶಾಲೆಯ ಚೀಲ ತಂದು ತಮ್ಮ ಕಾಪಿ, ಗಣಿತ, ಟಿಪ್ಪಣಿ, ಚಿತ್ರ ಪುಸ್ತಕಗಳನ್ನು ತೋರಿಸುವುದು, ಚಿತ್ರ ಬಿಡಿಸಿ ತೋರಿಸುವುದು, ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ಪ್ರದರ್ಶಿಸುವುದು, ಆಟದ ಸಾಮಾನುಗಳನ್ನು ತೋರಿಸುವುದು, ಹೊಸದಾಗಿ ಹೊಲಿಸಿರುವ ಉಡುಪು, ಹೊಸದಾಗಿ ಖರೀದಿಸಿದ ಆಭರಣ, ಹೊಸದಾಗಿ ತೆಗೆಸಿದ ಭಾವ ಚಿತ್ರಗಳ ಆಲ್ಬಂ ಇತ್ಯಾದಿಗಳನ್ನು ಬಿಡಿಸಿ ಬಿಡಿಸಿ ತೋರಿಸಿ ವಿವರಿಸುವ ಆನಂದವೋ ಆನಂದ. 

ಕೆಲವೊಮ್ಮೆ ಸಂಬಂಧಿಕರ ಬಗ್ಗೆ ಮಾತನಾಡುವುದು, ಅವರ ಸ್ವಭಾವ ಗುಣಗಳನ್ನು ವಿಸ್ತರಿಸುವುದು ಹೀಗೆಯೂ ಮಾತುಕತೆಗಳು ಮನೆಯವರು ಮತ್ತು ನೆಂಟರೊಳಗೆ ನಡೆಯುತ್ತವೆ. ನೆಂಟರು ಮನೆಗೆ ತಂದ ಹೊಸ ವಸ್ತು, ಸಾಕು ಪ್ರಾಣಿಗಳು, ಖರೀದಿಸಿದ ಇಲೆಕ್ಟ್ರಾನಿಕ್ ವಸ್ತುಗಳ ಬಗ್ಗೆಯೂ ವಿಶೇಷ ವರದಿಗಳು ಹಂಚಿಕೆಯಾಗುತ್ತವೆ. ಮಾತಿಗೇನೂ ಅಂದು ಬರವಿರುತ್ತಿರಲಿಲ್ಲ. ಆಚೆಯ ಮನೆಗೆ ಒಂದು ನಾಯಿ ತಂದಿದ್ದಾರೆ, ಅದು ಬಹಳ ಚುರುಕು ಮತ್ತು ಬುದ್ಧಿಯದು, ಮನೆಗೆ ನೆಂಟರು ಬಂದರೆ ಅದಕ್ಕೆ ಗೊತ್ತಾಗುತ್ತದೆ, ಅಪರಿಚಿತರು ಬಂದರೆ ಬಹಳ ಜೋರಾಗಿ ಬೊಗಳುತ್ತದೆ, ಯಜಮಾನರಿಗೆ ಓದಲು ಪೇಪರ್, ಪೋಸ್ಟ್ ಮ್ಯಾನ್ ತಂದ ಪತ್ರಗಳು, ಹಾಲಿನ ಪ್ಯಾಕೆಟ್ ತಂದು ಕೊಡುತ್ತದೆ, ಅದು ಬಹಳ ಚಂದ ಉಂಟು, ನಮಗೂ ಅಂತಹದ್ದೊಂದು ನಾಯಿ ಬೇಕಿತ್ತು, ಬಹಳ ಹುಡುಕಿದೆವು, ಈ ತನಕ ಎಲ್ಲೂ ಸಿಗಲಿಲ್ಲ, ಅದಕ್ಕೆ ಭಾರೀ ಡಿಮ್ಯಾಂಡ್, ಅದರ ಬೆಲೆ ಕೇಳಿದರೆ ತಲೆ ತಿರುಗುತ್ತದೆ.... ಹೀಗೆ ಹಾಳು ಹರಟೆಗಳೂ ನಡೆಯುತ್ತಿದ್ದುವು.

ಬಂದ ಗಂಡಸರು ಮತ್ತು ಮನೆಯ ಗಂಡಸರು ಒಂದೆಡೆ ಹರಟೆ ಹೊಡೆಯುತ್ತಿದ್ದರೆ ಹೆಂಗಸರ ಪ್ರಪಂಚ ಬೇರೆಯೇ ಇರುತ್ತಿತ್ತು. ಮಕ್ಕಳು ಇನ್ನೊಂದು ಹರ್ಷಲೋಕದಲ್ಲಿ ಮುಳುಗೇಳುತ್ತಿದ್ದರು. ಕೆಲವೊಮ್ಮೆ ಎಲ್ಲರೂ ಒಟ್ಟಾಗಿ ಮಾತುಕತೆ ನಡೆಸುವುದೂ ಇರುತ್ತದೆ. ಅದರಲ್ಲಿ ಅಂದು ಮನೆಯವರು ತಯಾರಿಸಿದ ಭಕ್ಷ್ಯ ಭೋಜ್ಯಗಳ ಬಗ್ಗೆ, ಅದರ ರುಚಿ ಮತ್ತು ಸಮಪಾಕದ ಬಗ್ಗೆಯೂ ಚರ್ಚೆ ಜೋರಾಗಿಯೇ ನಡೆಯುತ್ತಿತ್ತು. ಮನೆಯವರಲ್ಲಿ ಅದನ್ನು ತಯಾರಿಸಿದವರು, “ನಾನೇನೂ ಪಾಕತಜ್ಞೆಯಲ್ಲ, ನಾನು ಸ್ವಲ್ಪ ಸ್ವಲ್ಪ ಕಲಿತು ಮಾಡುತ್ತಿದ್ದೇನೆ ಅಷ್ಟೇ. ನೀವು ಬಹಳ ಹೊಗಳಿದಿರಿ, ನನಗೆ ಮುಜುಗರವಾಗುತ್ತದೆ. ನೀವು ಒಳ್ಳೊಳ್ಳೆಯ ರುಚಿಯಾದ ಅಡುಗೆ ಮಾಡುತ್ತೀರಂತೆ,” ಎಂದು ಪ್ರತಿ ಮಾತು ಹೇಳುವುದೂ ಉಂಟು. ಕೆಲವರು ತಮ್ಮ ಪಾಕ ಪ್ರಾವಿಣ್ಯತೆಯನ್ನು ವೈಭವೀಕರಿಸಿ ಹೊಗಳುತ್ತಾ, ಎಲ್ಲರೂ ನನ್ನ ಅಡುಗೆಯನ್ನು ಹೊಗಳುತ್ತಾರೆ ಎಂದು ಬಿಂಕದ ವರಸೆ ಹೊಡೆಯುವುದೂ ಇದೆ.

ಇಂದು ನಿಮ್ಮ ಅನುಭವದಲ್ಲಿ ಹೀಗೆಲ್ಲಾ ಇದೆಯಾ ಮಕ್ಕಳೇ? ನೆಂಟರು ಬರುವುದೇ ಅಪರೂಪ, ಬಂದರೂ ಗಾಡಿಯಲ್ಲಿ ಡ್ರೂ......ಮ್, ಡ್ರೂ......ಮ್ ಬರುತ್ತಾರೆ, ಕೂಡಲೇ ಹೊರಡುತ್ತಾರೆ.. ಮನೆಯವರೂ ಅಷ್ಟೇ, ಬಹಳ ‘ಬಿಝಿ’ಯಾಗಿರುತ್ತಾರೆ, ಅವರ ಹೊರಡುವಿಕೆಗೆ ಹಪ ಹಪಿಸುತ್ತಿರುತ್ತಾರೆ. ಮನುಷ್ಯ ಎಷ್ಟೊಂದು ಬದಲಾಗಿದ್ದಾನೆ ಅಲ್ವೇ?

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ