ಮನೆಗೊಂದು ಸೂಪರ್ ಕಂಪ್ಯೂಟರ್!

ಮನೆಗೊಂದು ಸೂಪರ್ ಕಂಪ್ಯೂಟರ್!

ಬರಹ


    ಸಾಮಾನ್ಯ ಕಂಪ್ಯೂಟರುಗಳ ಇನ್ನೂರೈವತ್ತು ಪಟ್ಟು ಹೆಚ್ಚು ವೇಗದಲ್ಲಿ ಕೆಲಸ ಮಾಡುವ ಪಿಸಿಗಳೀಗ ಲಭ್ಯ. ಟೆಸ್ಲಾ ಕಂಪ್ಯೂಟರ್ ಎಂಬ ಹೆಸರಿನೊಂದಿಗೆ ಈ ಕಂಪ್ಯೂಟರುಗಳು ಮಾರುಕಟ್ಟೆ ಪ್ರವೇಶಿಸಲಿವೆ.ಇವುಗಳ ಬೆಲೆ ಮಾತ್ರಾ ಸಾಮಾನ್ಯರ ಕೈಗೆಟುದಷ್ಟು ಹೆಚ್ಚು-ಎರಡು ಲಕ್ಷ ರುಪಾಯಿಗಳು.ಇವುಗಳನ್ನು ಬಳಸಿದರೆ,ವೈದ್ಯರುಗಳಿಗೆ ಸ್ಕ್ಯಾನ್ ಫಲಿತಾಂಶಗಳನ್ನು ಕೆಲವೇ ತಾಸುಗಳು ಸಾಕು. ಸಾಮಾನ್ಯ ಕಂಪ್ಯೂಟರುಗಳಾದರೆ, ಈ ಫಲಿತಾಂಶಕ್ಕೆ ದಿನವಿಡೀ ಕಾಯಬೇಕಾದೀತು.tesla
    ಟೆಸ್ಲಾ ಕಂಪ್ಯೂಟರ್ ಏಕಕಾಲದಲ್ಲಿ ಕಾರ್ಯಾಚರಿಸಬಲ್ಲ ಒಂಭೈನೂರ ಅರುವತ್ತು ಕೋರ್(ಗಣಕ ಕೇಂದ್ರ)ಗಳನ್ನು ಹೊಂದಿದೆ. ಹೀಗಾಗಿ ಗಣಕಕಾರ್ಯ ಅತಿ ವೇಗದಲ್ಲಿ ನಡೆಯುತ್ತದೆ.ಇತ್ತೀಚೆಗೆ ಇಂಟೆಲ್-ಇಂಡಿಯಾದಲ್ಲಿ ವಿನ್ಯಾಸಗೊಂಡ ಹೊಸ ಸಂಸ್ಕಾರಕವು ಆರು ಕೋರ್‌ಗಳನ್ನು ಹೊಂದಿದೆ.ಪ್ರತಿ ಸೆಕೆಂಡಿಗೆ ನಾಲ್ಕು ಟೆರಾ ಫ್ಲಾಪ್ ಗಣನೆಗಳನ್ನು ಮಾಡಬಲ್ಲುದು!
----------------------------------------------
ಬೀಟಾ ಹಣೆಪಟ್ಟಿ ಕಳಚಿಕೊಂಡ ಗೂಗಲ್ ಕ್ರೋಮ್
    ತಂತ್ರಾಂಶಗಳ ಪರೀಕ್ಷಾ ಆವೃತ್ತಿಯನ್ನು ಬಿಡುಗಡೆ ಮಾಡಿ, ಬಳಕೆದಾರರ ಪ್ರತಿಕ್ರಿಯೆಯ ಅನುಸಾರ,ಅದರ ಸುಧಾರಣೆ ಮಾಡುವುದು ಕಂಪೆನಿಗಳು ಅನುಸರಿಸುವ ಮಾರ್ಗ. ತಂತ್ರಾಂಶವು ಸಾಕಷ್ಟು ಸುಧಾರಣೆಯಾದ ಬಳಿಕವಷ್ಟೇ ಅದರ ಬೀಟಾ ಹಣೆಪಟ್ಟಿಯನ್ನು ತೆಗೆಯುವುದು ಕ್ರಮ್. ಗೂಗಲ್ ತನ್ನ ಬ್ರೌಸರ್ ತಂತ್ರಾಂಶವನ್ನು ಬಿಡುಗಡೆ ಮಾಡಿ, ಈಗಿನ್ನೂ ನೂರು ದಿನಗಳು ಕಳೆದಿವೆಯಷ್ಟೆ.ಅಷ್ಟರಲ್ಲೇ ಕ್ರೋಮಿನ ಸಿದ್ಧಗೊಳಿಸಿದ ಆವೃತ್ತಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಈ ನಡುವೆ ಸುಮಾರು ಹದಿನೈದು ಸುಧಾರಿತ ಆವೃತ್ತಿಗಳನ್ನು ಗೂಗಲ್ ತಂದಿತ್ತು. ಗೂಗಲ್ ಮಟ್ಟಿಗೆ ಇದು ಒಂದು ಹೊಸ ವಿಕ್ರಮ-ಏಕೆಂದರೆ ಜಿಮೇಲ್ ಮಿಂಚಂಚೆ ಸೇವೆಯು ಐದು ವರ್ಷಗಳ ನಂತರವೂ,ಇನ್ನೂ ಬೀಟಾ ಆವೃತ್ತಿಯಾಗಿ ಮುಂದುವರಿದಿದೆ.
    ಕ್ರೋಮ್ ಅತ್ಯಂತ ಸರಳವಾದ ವಿನ್ಯಾಸ ಹೊಂದಿ,ಇತರೆಲ್ಲಾ ಬ್ರೌಸರ್ ತಂತ್ರಾಂಶಗಳಿಗೆ ಹೋಲಿಸಿದರೆ, ಪ್ರತ್ಯೇಕವಾಗಿ ನಿಲುತ್ತದೆ.ಈಗ ಜನಪ್ರಿಯವಾಗಿರುವ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಮಾರುಕಟ್ಟೆಯ ಶೇಕಡ ಎಪ್ಪತ್ತು ಮಾರುಕಟ್ಟೆ ಹಿಡಿದಿದೆಯಾದರೆ, ಕ್ರೋಮ್ ಶೇಕಡಾ ಒಂದು ಭಾಗ ಮಾರುಕಟ್ಟೆ ಹಿಡಿತವನ್ನೀಗ ಸ್ಥಾಪಿಸಲು ಸಾಧ್ಯವಾಗಿದೆ. ತಪ್ಪುಗಳನ್ನು ಸರಿ ಪಡಿಸಿರುವ ಕ್ರೋಮಿನಲ್ಲೂ ಕನ್ನಡ ಟೈಪಿಂಗ್ ಮಾಡುವಾಗ ಅಕ್ಷರಗಳು ಸರಿಯಾಗಿ ಮೂಡದಿರುವ ಸಮಸ್ಯೆ ಮುಂದುವರಿದಿರುವುದು ನಿರಾಶಾದಾಯಕ ಅಂಶ.
-------------------------------------
2008ರಲ್ಲಿ ಭಾರತೀಯರ ಹುಡುಕುವ ಪ್ರವೃತ್ತಿgoogle
    ಭಾರತೀಯರು ಅಂತರ್ಜಾಲದಲ್ಲಿ ಏನನ್ನು ಹುಡುಕುತ್ತಿದ್ದಾರೆನ್ನುವ ಮಾಹಿತಿ ಲಭ್ಯವಿದೆ. ಜನಪ್ರಿಯ ಜಾಲತಾಣ ಅರ್ಕುಟ್ ಬಗ್ಗೆ ಹುಡುಕಿದವರ ಸಂಖ್ಯೆ ಅತ್ಯಧಿಕ. ನಂತರದ ಸ್ಥಾನಗಳನ್ನು ಜಿಮೇಲ್, ಯಾಹೂ,ಗೂಗಲ್ ಮತ್ತು ಯುಟ್ಯೂಬ್ ತಾಣಗಳಿವೆ.ಯಾಹೂ ಮೈಲ್,ಭಾರತೀಯ ರೈಲ್ವೇ ತಾಣಗಳಿಗಾಗಿ ಹುಡುಕಿದವರ ಸಂಖ್ಯೆಯೂ ಹೆಚ್ಚಿದೆ.ಹಾಲಿವುಡ್ ನಕ್ಷತ್ರಗಳ ಪೈಕಿ ಕತ್ರಿನಾ ಕೈಫ್ ಬಗ್ಗೆ ಶೋಧಿಸಿದವರೇ ಜಾಸ್ತಿ. ಐಶ್ವರ್ಯ ರೈ,ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಶನ್ ಬಗ್ಗೆಯೂ ಹುಡುಕುವವರ ಸಂಖ್ಯೆ ನಂತರದ ಸ್ಥಾನಗಳಲ್ಲಿವೆ.ತೂಕ ಇಳಿಸಿಕೊಳ್ಳುವ ಬಗೆ,ಚುಂಬನದ ರಹಸ್ಯಗಳ ಬಗ್ಗೆಯೂ ಹುಡುಕಿದವರ ಸಂಖ್ಯೆ ಧಾರಾಳವಾಗಿದೆ.ಕ್ರೀಡಾಳುಗಳ ಪೈಕಿ ಸಾನಿಯಾ ಮಿರ್ಜಾ,ಸಚಿನ್ ತೆಂಡೂಲ್ಕರ್ ಮತ್ತು ರೊನಾಲ್ಡೋ ಅವರು ಪಟ್ಟಿಯ ಮೇಲಿನ ಸ್ಥಾನಗಳಿದ್ದಾರೆ.ಮಹಾತ್ಮಾ ಗಾಂಧಿಯವರ ಬಗ್ಗೆ ಅತ್ಯಂತ ಹೆಚ್ಚು ಶೋಧಕಾರ್ಯ ನಡೆದಿದೆ.ವರ್ಷದುದ್ದಕ್ಕೂ ಸುದ್ದಿ ಮಾಡಿದ ರಾಜ್ ಥ್ಯಾಕರೆ ಬಗ್ಗೆ ಭಾರತೀಯರು ಕುತೂಹಲ ತೋರಿಸಿದ್ದು ಸಹಜ.ಪ್ರವಾಸಿ ಸ್ಥಳಗಳ ಪೈಕಿ ಗೋವಾ, ಕೇರಳ,ಕಾಶ್ಮೀರ ಮತ್ತು ದುಬಾಯಿ ಮತ್ತು ಸಿಂಗಾಪುರ ಬಗ್ಗೆ ಜನರು ಹುಡುಕುತ್ತಿದ್ದಾರೆ.ಸ್ವಾತಂತ್ರ್ಯ ದಿನದ ನಂತರ ಪ್ರೇಮಿಗಳ ದಿನದ ಬಗ್ಗೆ ಜನರು ಆಸಕ್ತಿ ತೋರಿಸಿದ್ದಾರೆ.ಗೆಳೆತನದ ದಿನ ಮತ್ತು ಶಿಕ್ಷಕರ ದಿನದ ಬಗ್ಗೆಯೂ ಹುಡುಕಾಟ ನಡೆದಿದೆ.ಸರಕಾರದ ತಾಣಗಳ ಪೈಕಿ ರೈಲ್ವೇ, ಸಿಬಿಎಸ್‌ಇ ಫಲಿತಾಂಶಗಳು ಮತ್ತು ಆದಾಯಕರ ಇಲಾಖೆಯ ತಾಣಗಳ ಬಗ್ಗೆ ಭಾರತೀಯರು ಹೆಚ್ಚು ತಿಳಿಯಲು ಬಯಸಿದ್ದಾರೆ.
-----------------------------------------
3G ಮೊಬೈಲ್ ಸೇವೆ ಆರಂಭ3G
ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್ ಕಂಪೆನಿಯು ಭಾರತದಲ್ಲಿ ಮೂರನೇ ತಲೆಮಾರಿನ ಸೆಲ್ ಫೋನ್ ಸೇವೆಯನ್ನು ಆರಂಭಿಸಿದ್ದು ವರ್ಷಾಂತ್ಯದ ಶುಭ ಸುದ್ದಿ. ಧ್ವನಿ ಆಧಾರಿತ ಸೇವೆಯ ಬದಲು ದತ್ತಾಂಶ ಸೇವೆಯ ಬಗ್ಗೆ ಒತ್ತು ಕೊಡುವ ಈ ಸೇವೆಯು ನೂರನಲುವತ್ತು ಕಿಲೋಬಿಟ್ ಬಿಟ್ ದರದಲ್ಲಿ ದತ್ತಾಂಶ ಇಳಿಸಿಕೊಳ್ಳಲು ಅನುಕೂಲ ಕಲ್ಪಿಸಿದೆ.ಈ ಸೇವೆಯನ್ನು ಪಡೆಯಲು ದುಬಾರಿ ಬೆಲೆ ತೆರಬೇಕಾದೀತು ಎನ್ನುವುದು ಸದ್ಯದ ಸಮಸ್ಯೆಯಾದೀತು.ಅಲ್ಲದೆ ಇದಕ್ಕಾಗಿ ಹೊಸ ಹ್ಯಾಂಡ್ ಸೆಟ್ ಬೇಕು. ಇದಕ್ಕೆ ಕಡಿಮೆಯೆಂದರೂ ಐದಾರು ಸಾವಿರದಷ್ಟು ದುಬಾರಿ ಬೆಲೆಯಿದೆ.ಚಲನಚಿತ್ರಗಳನ್ನು ಮೊಬೈಲಿಗೆ ಇಳಿಸಿಕೊಳ್ಳಲು,ಮೂಬೈಲಿನಲ್ಲಿ ಟಿವಿ ಕಾರ್ಯಕ್ರಮ ನೋಡಲು ಮೂರು ಜಿ ಸೇವೆ ಅವಕಾಶ ನೀಡಲಿದೆ.ಮೊಬೈಲ್ ಕಂಪೆನಿಗಳ ಹೆಚ್ಚಿನ ಆದಾಯವೂ ದೂರವಾಣಿ ಕರೆಗಳನ್ನೇ ಅವಲಂಬಿಸಿದೆ.ಈಗ ದತ್ತಾಂಶ ಸೇವೆಗೆ ಸಿಗಲಿರುವ ಅವಕಾಶದಿಂದ ಕಂಪೆನಿಗಳ ಆದಾಯ ಧ್ವನಿಯೇತರ ಸೇವೆಯಿಂದಲೂ ಹೆಚ್ಚುವ ಅವಕಾಶ ಇದೆ.ಇನ್ನಾರು ತಿಂಗಳುಗಳಲ್ಲಿ ಖಾಸಗಿ ಕಂಪೆನಿಗಳ ಮೂರು ಜಿ ಸೇವೆ ಲಭ್ಯವಾಗುವ ಸಾಧ್ಯತೆ ನಿಚ್ಚಳವಾಗಿದ್ದು, ಆಗ ಮೂರೂವರೆ ಸಾವಿರ ರುಪಾಯಿಗಳಷ್ಟು ಅಗ್ಗದ ದರಕ್ಕೆ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.ಇದೇ ವೇಳೆ ವೈಮ್ಯಾಕ್ಸ್ ಎನ್ನುವ ನಿಸ್ತಂತು ಸೇವೆಯೂ ಲಭ್ಯವಾಗುವ ಸಾಧ್ಯತೆ ನಿಚ್ಚಳವಾಗಿದೆ. ಇದು ಮೂರು ಜಿ ಸೇವೆಯ ಹತ್ತರಿಂದ ಮೂವತ್ತರಷ್ಟು ಅಧಿಕ ವೇಗದ ದತ್ತಾಂಶ ಸೇವೆಯನ್ನು ಲಭ್ಯವಾಗಿಸಲಿದ್ದು,ಮೂರು ಜಿ ಸೇವೆಗೆ ಭಾರೀ ಸ್ಪರ್ಧೆ ನೀಡುವ ನಿರೀಕ್ಷೆ ಇದೆ.ಇಂಟೆಲ್, ನೋರ್ಟೇಲ್ ಮತ್ತು ಮೊಟೊರೊಲಾ ಕಂಪೆನಿಗಳು ವೈಮ್ಯಾಕ್ಸ್ ಸೇವೆಯ ಬಗ್ಗೆ ಹೆಚ್ಚಿನ ಒಲವು ಹೊಂದಿವೆ.
------------------------------------------------
ಯಶಸ್ವಿಯಾದ ಚಂದ್ರಯಾನ
    ದೇಶದ ಮಹತ್ತ್ವಾಕಾಂಕ್ಷೆಯ ಚಂದ್ರಯಾನವು ಯಶಸ್ವಿಯಾಗಿ ನಡೆಯಿತು. ನಿರೀಕ್ಷೆಯಂತೆ ಚಂದ್ರನ ಮೇಲ್ಮೈಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು "ನೆಟ್ಟು", ಚಂದ್ರನ ಮೇಲೆ ಭಾರತದ ಹಕ್ಕನ್ನು ಸ್ಥಾಪಿಸಲು ಇಸ್ರೋ ಸಮರ್ಥವಾಯಿತು. ನಂತರ ಚಂದ್ರನಿಂದ ಸತತವಾಗಿ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಪಡೆಯುತ್ತಿರುವ ಇಸ್ರೋ,ಎಪ್ರಿಲ್‌ನಲ್ಲಿಪಿಎಸೆಲ್ವಿ10 ರಾಕೆಟ್ ಮೂಲಕ ಹತ್ತು ಉಪಗ್ರಹಗಳನ್ನು ಬಾಹ್ಯಾಕಾಶದ ನಿಗದಿತ ಕಕ್ಷೆಗೆ ಸೇರಿಸಿ ವಿಕ್ರಮ ಸ್ಥಾಪಿಸಿತು. ಇವುಗಳಲ್ಲಿ ಕಾರ್ಟೋಸ್ಯಾಟ್ ಮತ್ತುಐಎಂಎಸ್ ಉಪಗ್ರಹಗಳಲ್ಲದೆ ಎಂಟು ನ್ಯಾನೋ ಉಪಗ್ರಹಗಳಿದ್ದುವು.


udayavani

 

ashokworld

*ಅಶೋಕ್‌ಕುಮಾರ್ ಎ