ಮನೆಯಂಗಳದಲ್ಲಿ ಔಷಧಿವನ
ಔಷಧೀಯ ಸಸ್ಯಗಳ ಬಗ್ಗೆ ಬಹಳ ಉಪಯುಕ್ತ ಮಾಹಿತಿ ತುಂಬಿದ ಈ ಪುಸ್ತಕ, ಪ್ರಕಟವಾದ ಹತ್ತು ವರುಷಗಳಲ್ಲಿ ಒಂಭತ್ತು ಸಲ ಮುದ್ರಣ ಆಗಿರುವುದೇ ಇದರ ಜನಪ್ರಿಯತೆಗೆ ಪುರಾವೆ. ಮನೆಯ ಮುಂಬದಿ ಅಥವಾ ಹಿಂಬದಿಯಲ್ಲಿ ಅಥವಾ ಟೆರೇಸಿನಲ್ಲಿ ಕೆಲವು ಔಷಧೀಯ ಸಸ್ಯಗಳನ್ನೂ ಸೊಪ್ಪಿನ ಗಿಡಗಳನ್ನೂ ಬೆಳೆಸಿ, ಅವುಗಳ ಪ್ರಯೋಜನ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿ ಕೊಡುವ ಪುಸ್ತಕ ಇದು.
ಹಲವು ಅನಾರೋಗ್ಯ/ ಜಾಡ್ಯಗಳಿಗೆ ಚಿಕಿತ್ಸೆ ನೀಡಲು ನಮ್ಮ ದೇಶದ ಪಾರಂಪರಿಕ ಚಿಕಿತ್ಸಕರು ಬಳಸುತ್ತಿದ್ದ ಈ ಕೆಳಗಿನ ೩೬ ಔಷಧೀಯ ಸಸ್ಯಗಳನ್ನು ಇದರಲ್ಲಿ ಪರಿಚಯಿಸಲಾಗಿದೆ: ಅಮೃತಬಳ್ಳಿ, ಅಶ್ವಗಂಧ (ಹಿರೇಮದ್ದಿನ ಗಿಡ), ಆಡುಸೋಗೆ, ಒಂದೆಲಗ, ಕರಿಬೇವು, ಕೊತ್ತಂಬರಿ, ಗುಲಾಬಿ, ಚಕ್ರಮುನಿ, ಜೀವಂತಿ, ಜೇಷ್ಠಮಧು (ಅತಿಮಧುರ), ತುಂಬೆ, ತುಳಸಿ, ದಾಸವಾಳ, ದೊಡ್ಡಪತ್ರೆ, ನಂದಿಬಟ್ಟಲು, ನಿಂಬೆಹುಲ್ಲು (ಮಜ್ಜಿಗೆ ಹುಲ್ಲು), ನುಗ್ಗೆ, ನೆಲನೆಲ್ಲಿ, ನೆಲಬೇವು, ಪಪ್ಪಾಯ, ಪಾರಿಜಾತ, ಪುಂಡಿಸೊಪ್ಪು, ಪುದೀನ, ಬಜೆ, ಬಸಳೆ ಸೊಪ್ಪು, ಬ್ರಾಹ್ಮಿ, ಬೇವು, ಭೃಂಗರಾಜ, ಮಧುನಾಶಿನಿ, ಮಲ್ಲಿಗೆ, ಮಂಗರವಳ್ಳಿ, ಮೆಂತ್ಯಸೊಪ್ಪು, ಲೋಳೆಸರ (ಕುಮಾರಿ), ಸದಾಪುಷ್ಪಿ (ಕಾಶಿ ಕಣಗಿಲೆ), ಸ್ಟೀವಿಯ (ಮಧುವಂತ), ಹಿಪ್ಪಲಿ.
ಪ್ರತಿಯೊಂದು ಔಷಧೀಯ ಸಸ್ಯದ ಬಗ್ಗೆ ಈ ಮಾಹಿತಿ ದಾಖಲಿಸಲಾಗಿದೆ:
ಸಸ್ಯವರ್ಣನೆ, ಉಪಯುಕ್ತ ಭಾಗಗಳು, ಸಸ್ಯ ಹಂಚಿಕೆ, (ಬೆಳವಣಿಗೆಗೆ ಸೂಕ್ತ) ಮಣ್ಣು ಮತ್ತು ಹವಾಗುಣ, ಸಸ್ಯಾಭಿವೃದ್ಧಿ, ಬಿತ್ತನೆ, ನಾಟಿ, ಗೊಬ್ಬರ, ಅಂತರ ಬೇಸಾಯ, ಕೀಟ ಮತ್ತು ರೋಗಗಳು, ಸಸ್ಯ ಸಂರಕ್ಷಣೆ, ಕೊಯ್ಲು, ರಾಸಾಯನಿಕ ಘಟಕಗಳು, ಔಷಧೀಯ ಗುಣಗಳು, ಇತರ ಭಾಷೆಗಳಲ್ಲಿ ಸಸ್ಯದ ಹೆಸರುಗಳು.
ನಮ್ಮಲ್ಲಿ ಕೆಲವರಿಗೆ ಕೆಲವು ಸಸ್ಯಗಳ ಔಷಧೀಯ ಗುಣಗಳ ಬಗ್ಗೆ ಸ್ಥೂಲವಾದ ಮಾಹಿತಿ ಇರಬಹುದು. ಆದರೆ ಸಮಗ್ರವಾದ ಮಾಹಿತಿ ಇರುವುದಿಲ್ಲ. ಆದ್ದರಿಂದ, ಇಂತಹ ಪುಸ್ತಕಗಳು ನಮಗೆ ಹೆಚ್ಚಿನ ಮಾಹಿತಿ ಒದಗಿಸಿ, ಬಹುಕಾಲದಿಂದ ಬಾಧಿಸುತ್ತಿದ್ದ ಅನಾರೋಗ್ಯ ಗುಣಪಡಿಸಲು ಸಹಕರಿಸುತ್ತವೆ. ಉದಾಹರಣೆಗೆ, ಇದರಲ್ಲಿ ೨೦ ಜಾಡ್ಯಗಳ ಚಿಕಿತ್ಸೆಗೆ ಅಮೃತಬಳ್ಳಿಯನ್ನು ಹೇಗೆ ಬಳಸಬಹುದು ಎಂದು ವಿವರಿಸಲಾಗಿದೆ.
ಕೆಲವು ಯಶಸ್ವಿ ಚಿಕಿತ್ಸಾ ನಿದರ್ಶನಗಳನ್ನು ನೀಡಲಾಗಿದೆ. ಅಮೃತಬಳ್ಳಿಯ ಬಗ್ಗೆ: “ಸುರೇಶ ೧೬ ವರ್ಷದ ಹುಡುಗ. ಅವನಿಗೆ ೨೦-೨೫ ದಿನಗಳಿಂದ ಬಿಡದೇ ಜ್ವರ ಬರುತ್ತಿತ್ತು. ಮೊದಲು ೬ ಗಂಟೆಗಳಿಗೊಮ್ಮೆ ಬರುತ್ತಿದ್ದುದು ವಾರದ ನಂತರ ೧೨ ಗಂಟೆಗಳಿಗೊಮ್ಮೆ, ಅನಂತರ ದಿನಕ್ಕೊಮ್ಮೆ ಬರುತ್ತಿತ್ತು. ವೈದ್ಯರು ಎಲ್ಲ ಬಗೆಯ ರಕ್ತಪರೀಕ್ಷೆಗಳನ್ನು ಮಾಡಿಸಿದ್ದರಲ್ಲದೇ ಸಾಕಷ್ಟು ಆಂಟಿಬಯೋಟಿಕ್ಸ್ ಔಷಧಿಗಳನ್ನೂ ನೀಡಿದ್ದರು. ಇಷ್ಟಾಗಿಯೂ ಜ್ವರ ನಿಯಂತ್ರಣಕ್ಕೆ ಬಾರದಿದ್ದುದರಿಂದ ನಂತರ ಆಯುರ್ವೇದ ಚಿಕಿತ್ಸೆಗೆ ಕರೆತಂದಿದ್ದರು. ಸುರೇಶನನ್ನು ಮತ್ತು ಅವನ ರಕ್ತಪರೀಕ್ಷೆಯ ವರದಿಗಳನ್ನು ಪರಿಶೀಲಿಸಿದ ನಂತರ ನನಗೆ ತಟ್ಟನೆ ನೆನಪಾದದ್ದು ಜ್ವರಕ್ಕೆ ರಾಮಬಾಣದಂತಹ ಅಮೃತಬಳ್ಳಿ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಅಮೃತಬಳ್ಳಿಯ ಕಾಂಡವನ್ನು ಜಜ್ಜಿ, ರಸ ತೆಗೆದು, ಎರಡು ಚಮಚೆ ರಸವನ್ನು ಜೇನುತುಪ್ಪ ಬೆರಸಿ ಕುಡಿಯಲು ಹೇಳಿದೆ. ಒಂದು ವಾರದಲ್ಲಿಯೇ ಸುರೇಶ ಗುಣಮುಖನಾಗಿ ಶಾಲೆಗೆ ಹೋಗಲಾರಂಭಿಸಿದ.“ (ಪುಟ ೭)
ನಾವು “ಸ್ವಚಿಕಿತ್ಸೆ" ಮಾಡಿಕೊಳ್ಳಬಾರದು ಎಂಬುದು ನಿಯಮ. ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆಯಂತೆ ಯಾವುದೇ ಚಿಕಿತ್ಸೆ ಶುರು ಮಾಡಬೇಕು. ಅದೇನಿದ್ದರೂ, ಇಂತಹ ಉದಾಹರಣೆಗಳು "ಅನಾರೋಗ್ಯ/ ರೋಗ ನಿವಾರಣೆಗೆ ಔಷಧೀಯ ಸಸ್ಯಾಧಾರಿತ ಪದ್ಧತಿಗಳೂ ಪರಿಣಾಮಕಾರಿ” ಎಂಬ ಸತ್ಯಸಂಗತಿ ಓದುಗರಿಗೆ ತಿಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಇಂತಹ ಜನೋಪಯೋಗಿ ಪುಸ್ತಕ ರಚಿಸಿರುವ ಗಾಂಧಿ ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕಾ ವಿಭಾಗದ ಪ್ರಾಧ್ಯಾಪಕಿ ಡಾ. ಎಂ. ವಸುಧರ ಮತ್ತು ವೈದ್ಯರಾಗಿರುವ ಡಾ. ವಸುಂಧರಾ ಭೂಪತಿ ಇವರಿಬ್ಬರೂ ಅಭಿನಂದನಾರ್ಹರು.