ಮನೆಯಂಗಳದಲ್ಲಿ ಕಂಡು ಬರುವ ಮಡಿವಾಳ ಹಕ್ಕಿ
ಸುಮಾರು ಹತ್ತು ವರ್ಷಗಳ ಹಿಂದೆ ಹೊಸದಾಗಿ ಮೇಷ್ಟ್ರ ಕೆಲಸ ಸಿಕ್ಕಿ ಕುದುರೆಮುಖದ ಹತ್ತಿರ ಸಂಸೆ ಅನ್ನುವ ಹಳ್ಳಿಗೆ ನೇಮಕವಾದ ದಿನಗಳವು. ಸಂಸೆಯ ಮಲೆನಾಡು ಪ್ರಕೃತಿ ಪ್ರೀತಿಯನ್ನು ತಾನಾಗಿಯೇ ಚಿಗುರಿಸಿತ್ತು. ನನ್ನ ಸುತ್ತಲಿನ ಪ್ರಪಂಚವನ್ನು ಕುತೂಹಲದಿಂದ ಗಮನಿಸುವ ಪ್ರವೃತ್ತಿಯನ್ನು ಬೆಳೆಸಿತ್ತು.
ಒಂದು ಸೋಮವಾರ ಬೆಳ್ಳಂಬೆಳಗ್ಗೆ ಎದ್ದು ಬಸ್ಸಿಗೆ ಹೊರಡಲು ತಯಾರಾಗ್ತಾ ಇದ್ದೆ. ಯಾರೋ ದಾರಿಕಡೆಯಿಂದ ಶಿಳ್ಳೆ ಹೊಡಿತಾ ಇರೋ ಹಾಗೆ ಕೇಳಿತು. ಇದ್ಯಾರಪ್ಪ ಇಷ್ಟು ಬೆಳಗ್ಗೆ ವಿಸಿಲ್ ಹೊಡೀತಾ ಇದ್ದಾರೆ ಅಂತ ಹೊರಗೆ ಇಣುಕಿ ನೋಡಿದೆ. ಅರೆ ರಸ್ತೆಯ ಯಾವ ಕಡೆಯಲ್ಲಿ ನೋಡಿದ್ರೂ ಯಾರೂ ಇಲ್ಲ. ಆದ್ರೆ ಶಿಳ್ಳೆಯ ಶಬ್ದ ಇನ್ನೂ ಹಾಗೇ ಕೇಳಿಸ್ತಾ ಇತ್ತು. ಅದೂ ತುಂಬ ಹತ್ತಿರದಲ್ಲೇ.. ಸ್ವಲ್ಪ ಹೊತ್ತು ಸೂಕ್ಷ್ಮವಾಗಿ ನೋಡಿದ್ರೆ ರಸ್ತೆ ಪಕ್ಕದ ಕರೆಂಟ್ ಲೈನ್ ಮೇಲೆ ಒಂದು ಕಪ್ಪು ಹಕ್ಕಿ ಕೂತು ತನ್ನ ಬೆಳಗ್ಗಿನ ಸಂಗೀತಾಭ್ಯಾಸ ನಡೆಸಿತ್ತು. ಅವತ್ತಿನಿಂದ ಈ ಸಂಗೀತಗಾರನ್ನ ದಿನಾ ಗಮನಿಸೋಕೆ ಶುರು ಮಾಡಿದೆ.
ಗಂಡು ಹೆಣ್ಣು ಎರಡೂ ಹಕ್ಕಿಗಳು ಗಾತ್ರ ಆಕಾರ ಬಣ್ಣ ಒಂದೇ ರೀತಿ, ಆದರೆ ಗಂಡಿನ ಬಣ್ಣ ಸ್ವಲ್ಪ ಕಡುಗಪ್ಪು, ಹಾಗಾಗಿ ಅದರ ರೆಕ್ಕೆಯ ಮೇಲಿನ ಬಿಳಿ ನಾಮ ಎದ್ದು ಕಾಣ್ತದೆ. ಸುಮಾರು ಜನವರಿಯಿಂದ ಎಪ್ರಿಲ್ ತಿಂಗಳಿನ ನಡುವೆ ಸಂತಾನಾಭಿವೃದ್ಧಿ ಮಾಡುವ ಈ ಹಕ್ಕಿ ಹಂಚಿನ ಮನೆ, ಶಾಲೆಯ ಹಂಚಿನ ಮಾಡಿನ ಸಂದಿಯಲ್ಲೆಲ್ಲಾ ಗೂಡು ಕಟ್ಟಿದ್ದನ್ನು ನಾನೇ ನೋಡಿದ್ದೇನೆ. ಆದರೆ ಗೂಡಿನ ಫೋಟೋ ತೆಗೆಯುವ ದುಸ್ಸಾಹಸ ಮಾತ್ರ ಮಾಡಿಲ್ಲ. ಯಾಕೆಂದರೆ ಫೋಟೋ ತೆಗೆಯಲು ಹೋಗಿ ಪರದಾಡುವ ನಾನು ಅದರಿಂದ ಬೆದರಿ ಕೂಗಿಕೊಳ್ಳುವ ಹಕ್ಕಿ ಇದೆಲ್ಲಾ ಬೇರೊಂದು ಬೇಟೆಗಾರ ಪಕ್ಷಿ ಅಥವಾ ಪ್ರಾಣಿಗೋ ಆ ಗೂಡಿನ ಸುಳಿವನ್ನು ನೀಡಿ ಅದರ ಕುಟುಂಬ ನಾಶವಾಗಬಾರದಲ್ಲ. ಮನೆಯ ತಾಯಂದಿರಿಗೆ ಈ ಹಕ್ಕಿ ಹೆಚ್ಚು ಪರಿಚಿತ. ಅವರು ಮನೆಕೆಲಸ ಮಾಡುತ್ತಾ ಓಡಾಡುವಾಗ ಹೆದರದೇ ಆರಾಮವಾಗಿರುತ್ತವೆ, ಬಾಲವನ್ನು ಒಮ್ಮೆಗೇ ಮೇಲಕ್ಕೆತ್ತಿ ನಿಧಾನವಾಗಿ ಕೆಳಗಿಳಿಸಿ ಹಾರುತ್ತಾ ಕುಪ್ಪಳಿಸುತ್ತಾ ಓಡಾಡುವ ಮಡಿವಾಳ ಹಕ್ಕಿ ನಿಮ್ಮ ಮನೆ ಹಿತ್ತಲಲ್ಲೂ ಇರಬಹುದು.
ಕನ್ನಡ ಹೆಸರು: ಮಡಿವಾಳ ಹಕ್ಕಿ
English Name: Oriental Magpie Robin
Scientific name: Copsychus saularis
ಚಿತ್ರ-ಬರಹ: ಅರವಿಂದ ಕುಡ್ಲ, ಬಂಟ್ವಾಳ