ಮನೆಯಂಗಳದ ಮಿತ್ರರು

ಮನೆಯಂಗಳದ ಮಿತ್ರರು

ಪುಸ್ತಕದ ಲೇಖಕ/ಕವಿಯ ಹೆಸರು
ಪರಂಜ್ಯೋತಿ
ಪ್ರಕಾಶಕರು
ಇಂಚರ ಪ್ರಕಾಶನ, ವಿವೇಕ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. 130/-

ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪರಂಜ್ಯೋತಿ ಅವರ ಸಚಿತ್ರ ಲೇಖನಗಳ ಸಂಕಲನ “ಮನೆಯಂಗಳದ ಮಿತ್ರರು”.  ಪರಂಜ್ಯೋತಿ ಎಂಬುದು ಕೆ.ಪಿ. ಸ್ವಾಮಿ ಅವರ ಕಾವ್ಯನಾಮ. ಇವರು ಕನ್ನಡದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ: ಕತೆಗಳು, ನೀಳ್ಗತೆಗಳು, ಮಕ್ಕಳ ಕತೆಗಳು, ಹಾಗೂ ಲೇಖನ ಸಂಕಲನಗಳು. “ಬೆಟ್ಟದ ಗಾಲಿ” ಇವರು ಬರೆದ ಕಾದಂಬರಿ ಮತ್ತು “ನೀಲಗಿರಿ: ಸಾಮಾಜಿಕ - ಸಾಂಸ್ಕೃತಿಕ ಕಣ್ಣೋಟ” ಕ್ಷೇತ್ರ ಅಧ್ಯಯನ ಆಧಾರಿತ ಬೃಹತ್ ಕೃತಿ.

ಲೇಖಕಿ ಶ್ರೀಮತಿ ಪದ್ಮಾ ಶ್ರೀರಾಮ್ ಅವರು ಮುನ್ನುಡಿಯಲ್ಲಿ ಬರೆದ ಕೆಲವು ಮಾತುಗಳು: “… ಕೆ. ಪಿ. ಸ್ವಾಮಿಯವರು ತಮಿಳುನಾಡಿನ ನೀಲಗಿರಿಯಲ್ಲಿ ಹುಟ್ಟಿ ಬೆಳೆದು ಅಲ್ಲಿನ ಪರಿಸರದೊಂದಿಗೆ ತಾದಾತ್ಮ್ಯ ಹೊಂದಿರುವವರಾದರೂ ಅವರ ಮೂಲ ಮಾತೃಭಾಷೆ (ಕನ್ನಡ), ನೆಲಗಳ ಬಗ್ಗೆ ಆದಮ್ಯ ಪ್ರೀತಿ ಇಟ್ಟುಕೊಂಡು ಅನೇಕ ದಶಕಗಳಿಂದ ತಮ್ಮ ಹುಟ್ಟು ಪರಿಸರವಾದ ನೀಲಗಿರಿ, ಅಲ್ಲಿನ ಜನರ ಸುಖದುಃಖ, ಚಳಿಮಳೆ ಎಲ್ಲದರ ಬಗ್ಗೆ ಕನ್ನಡ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವುದು ಒಂದು ಅಚ್ಚರಿಯ ಸಂಗತಿ. …. ಲೇಖಕರು ತಮ್ಮ ಬಾಲ್ಯದಿಂದ ಇಂದಿನ ಮಾಗಿದ ವಯಸ್ಸಿನ ವರೆಗೆ ಕುತೂಹಲ, ಪ್ರಕೃತಿಯ ವಿವಿಧ ಆಯಾಮಗಳನ್ನು ಗಮನಿಸಿ ಅಚ್ಚರಿಪಡುವ ಮನಸ್ಸಿನ ಎಳೆತನವನ್ನು ಕಾಪಿಟ್ಟು ಕೊಂಡಿರುವುದು ಅಭಿನಂದನಾರ್ಹವಾದ ವಿಷಯ ಹಾಗೂ ಇಂದಿನ ಎಳೆಯರಿಗೆ ಮಾದರಿಯಾಗುವಂತಹದ್ದು. ….. ತನ್ನ ಪರಿಸರದ ಸಾಮಾನ್ಯ ಜೀವಿಗಳಾದ ಕೀಟಗಳು, ಪ್ರಾಣಿ, ಸಸ್ಯ, ಮನುಷ್ಯರು ಎಲ್ಲವೂ ಲೇಖಕರ ಬರವಣಿಗೆ ಹಾಗೂ ಕ್ಯಾಮರಾಗಳಿಗೆ ವಸ್ತುಗಳಾಗುತ್ತವೆ. ತಮ್ಮೊಳಗಿನ ಆಸಕ್ತಿ, ಕುತೂಹಲಗಳಿಗೆ ಕಾರಣವಾದ ವಿಷಯಗಳನ್ನು ದಾಖಲಿಸುವ ಪ್ರವೃತ್ತಿ, ಜೊತೆಗೆ ತಿಳಿಹಾಸ್ಯದ ಲೇಪನ ಇವರ ಬರವಣಿಗೆಗೆ ಜೀವಂತಿಕೆಯನ್ನು ಕೊಟ್ಟಿದೆ.”

ಮೊದಲನೆಯ ಲೇಖನ: ಮನೆಯಂಗಳದ ಮಿತ್ರರು. ತನ್ನ ಮನೆಯ ಸುತ್ತಮುತ್ತ ಹಾರಾಡುತ್ತಿದ್ದ ಗುಬ್ಬಚ್ಚಿಗಳು ಕಾಣೆಯಾದಾಗ ಲೇಖಕರು ಬೇಸರಿಸುತ್ತಾರೆ. ಕ್ರಮೇಣ ಪಾರಿವಾಳಗಳು ಮತ್ತು ಅಳಿಲು ಇವರ ಅಂಗಳಕ್ಕೆ ಭೇಟಿ ನೀಡುತ್ತವೆ. ಮನೆಯವರು ಹಾಕಿದ ಅಕ್ಕಿ ಕಾಳುಗಳನ್ನು ಧೈರ್ಯದಿಂದ ತಿನ್ನತೊಡಗುತ್ತವೆ. ಈ ಬೆಳವಣಿಗೆಗಳ ಆಪ್ತ ಚಿತ್ರಣ ಈ ಲೇಖನ.

ಎರಡನೆಯ ಲೇಖನ “ಕೀಟ ಜಗತ್ತಿಗೆ ಸಣ್ಣ ಕಿಂಡಿ”. ತಮ್ಮ ಮನೆಯೊಳಗೆ ನುಸುಳಿ ಬಂದ ಕೈಮುಗಿವ ಮಿಡತೆ (ಪ್ರೇಯಿಂಗ್ ಮ್ಯಾಂಟಿಸ್) ಮತ್ತು ಮಿಡತೆಯಿಂದ ಶುರು ಮಾಡಿ, ಮನೆಯ ಸುತ್ತಮುತ್ತ ಕಂಡು ಬಂದ ಹುಳಹುಪ್ಪಟೆಗಳು, ಜೇಡಗಳು, ಚಿಟ್ಟೆಗಳು ಹಾಗೂ ಹುಳಗಳ ಬಗ್ಗೆ ಲೇಖನ ಹೊಸೆದಿದ್ದಾರೆ. “ನಾನು ಕೀಟ ತಜ್ಞನಲ್ಲ. ಕೀಟ ಜಗತ್ತಿನ ವಿಸ್ಮಯಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಿದವನಲ್ಲ. ಚಿತ್ರಿಸಿರುವ ಕೀಟಗಳ ಪ್ರಭೇದಗಳು, ಸ್ವಭಾವಗಳು ಗುಣಲಕ್ಷಣಗಳು, ಕೀಟಗಳಿಂದಾಗುವ ಹಾನಿ, ಪ್ರಯೋಜನ ಇತ್ಯಾದಿ ಕುರಿತು ಹೆಚ್ಚು ಹೇಳಲಾರೆ. ಕೀಟಗಳ ಅಧ್ಯಯನ ಇತರ ವಿಷಯಗಳಂತೆಯೇ ಆಸಕ್ತಿದಾಯಕ ಎಂಬುದನ್ನು ಮಾತ್ರ ಹೇಳಬಲ್ಲೆ” ಎಂದು ಬರೆಯುವ ವಿನಯ ಅವರಲ್ಲಿದೆ.

“ನೆಗೆಟಿವ್ ನೆನಪುಗಳು” ಲೇಖನದ ಶೀರ್ಷಿಕೆ ನಮ್ಮಲ್ಲಿ ಗೊಂದಲ ಮೂಡಿಸಬಹುದು: “ಇದು ನಕಾರಾತ್ಮಕ ನೆನಪುಗಳ ಬಗ್ಗೆ” ಎಂದು. ಆದರೆ ಅದು ಫೋಟೋಗಳ ನೆಗೆಟಿವ್-ಗಳಿಗೆ ಸಂಬಂಧಿಸಿದ ಬರಹ. ತಾನು ದಶಕಗಳ ಮುಂಚೆ ತೆಗೆದ ಫೋಟೋಗಳ ನೆಗೆಟಿವ್-ಗಳನ್ನು ಪರಿಶೀಲಿಸುತ್ತಿದ್ದಾಗ ನುಗ್ಗಿ ಬಂದ ನೆನಪುಗಳನ್ನು ಇದರಲ್ಲಿ ದಾಖಲಿಸಿದ್ದಾರೆ.

“ಗ್ರಾಮದರ್ಶನ” ಲೇಖನ ಗ್ರಾಮೀಣ ಬದುಕಿನ ಚಿತ್ರಣ. ಗ್ರಾಮಗಳಲ್ಲಿ ಕೃಷಿ ಹಾಗೂ ಸಾಮಾಜಿಕ ಬದುಕಿನಲ್ಲಿ ಆಗಿರುವ ಕೆಲವು ಬದಲಾವಣೆಗಳನ್ನು ತಮ್ಮ ಫೋಟೋ ಮತ್ತು ವಿವರಣೆಗಳ ಮೂಲಕ ಸಶಕ್ತವಾಗಿ ತಿಳಿಸಿದ್ದಾರೆ. ಉದಾಹರಣೆಗೆ ಅಕ್ಕಪಕ್ಕದ ಎರಡು ಫೋಟೋಗಳು: ಎತ್ತುಗಳೊಂದಿಗೆ ಗದ್ದೆ ಉಳುವ ರೈತ ಮತ್ತು ಟ್ರ್ಯಾಕ್ಟರಿನಲ್ಲಿ ಗದ್ದೆ ಉಳುವ ರೈತ.

“ರಾಷ್ಟ್ರೀಯ ಹೆದ್ದಾರಿಯಲ್ಲಿ ಸಫಾರಿ” ಲೇಖಕರ ಪ್ರವಾಸದ ಕುರಿತಾದ ಬರಹ. ರಾಷ್ಟ್ರೀಯ ಉದ್ಯಾನಗಳಲ್ಲಿ ವಾಹನಗಳಲ್ಲಿ ಸಫಾರಿ ಮಾಡುವುದು ತಿಳಿದಿರುವ ನಮಗೆ ಇದೇನೆಂಬ ಕುತೂಹಲ ಮೂಡುತ್ತದೆ. ಲೇಖಕರು ಟ್ಯಾಕ್ಸಿಯಲ್ಲಿ ಹೋಗುವಾಗ ಹೆದ್ದಾರಿಯ ಅಕ್ಕಪಕ್ಕದಲ್ಲಿ ಕಾಡು ಹಂದಿ, ಕಾಡೆಮ್ಮೆ, ಜಿಂಕೆಗಳು, ಆನೆಗಳು, ಕಪಿಗಳು ಹಾಗೂ ನವಿಲು ಕಾಣ ಸಿಗುತ್ತವೆ. ಲೇಖಕರು ಅದೃಷ್ಟವಂತರು; ಯಾಕೆಂದರೆ ಎಷ್ಟೋ ಬಾರಿ ದುಬಾರಿ ಹಣ ತೆತ್ತು ಸಫಾರಿಗೆ ಹೋದವರಿಗೆ ಒಂದು ಪ್ರಾಣಿಯೂ ಕಾಣಸಿಗೋದಿಲ್ಲ.

“ಅಪರೂಪದ ಹೂವು ನೀಲಕುರಿಂಜಿ” ಲೇಖನದಲ್ಲಿ ಹನ್ನೆರಡು ವರುಷಕ್ಕೊಮ್ಮೆ ಕರ್ನಾಟಕದ ಬಾಬಾಬುಡನ್-ಗಿರಿ, ತಮಿಳುನಾಡಿನ ಏರ್ಕಾಡ್, ಊಟಿ ಮತ್ತು ಕೊಡೈಕನಾಲ್ ಬೆಟ್ಟಗಳಲ್ಲಿ ಅರಳುವ ನೀಲಕುರಿಂಜಿ ಬಗ್ಗೆ ಅಧ್ಯಯನ ಮಾಡಿ ಬಹಳಷ್ಟು ಮಾಹಿತಿ ಓದುಗರಿಗೆ ಉಣಬಡಿಸಿದ್ದಾರೆ.

ಪಾಂಡವರ ಗುಡಿಗಳು ಮತ್ತು ಕೋತರ ಹುಡುಗಿ, ಹುಲಿಕಲ್ ಕಾಡಿನಲ್ಲಿ, ಜಾನ್ ಸಲ್ಲಿವನ್ ಮತ್ತು ಏರಿಕಾಯಿ ಉಪ್ಪಿನಕಾಯಿ - ಈ ಲೇಖನಗಳು ಪರಂಜ್ಯೋತಿಯವರು ತಮಗೆ ಚಿರಪರಿಚಿತವಾದ ನೀಲಗಿರಿಯ ಜನರು, ಸ್ಥಳಗಳು ಮತ್ತು ಅಲ್ಲಿನ ಮೂಲನಿವಾಸಿಗಳಾದ ತೊದವರ ಬದುಕಿನ ಬಗ್ಗೆ ಹೆಣೆದಿರುವ ಮನಮುಟ್ಟುವ ನುಡಿಚಿತ್ರಗಳು.

ಬೆಂಗಳೂರಿನ ಚಿತ್ರ ಕಲಾ ಪರಿಷತ್ತಿನ ವಾರ್ಷಿಕ ಚಿತ್ರ ಸಂತೆ ಬಗ್ಗೆ “ಎಲ್ಲ ಸಂತೆಗಳಂತಲ್ಲ ಈ ಸಂತೆ” ಎಂಬ ಮಾಹಿತಿಪೂರ್ಣ ಲೇಖನ ಬರೆಯುವ ಪರಂಜ್ಯೋತಿಯವರು “ಹುಡುಕಿ ಹೊರಟದ್ದೊಂದು” ಲೇಖನದಲ್ಲಿ ಗಂಡ ತೊರೆದು ಹೋದ 20 ವರುಷ ವಯಸ್ಸಿನ ಹೆಣ್ಣುಮಗಳೊಬ್ಬಳು ತನ್ನ ಮೂರು ಮಕ್ಕಳಿಗೆ ಮೂರು ಹೊತ್ತಿನ ತುತ್ತು ನೀಡಲು ಹೆಣಗಾಡುವ ದಾರುಣ ಬಡತನದ ಬದುಕಿನ ಚಿತ್ರಣ ನೀಡುತ್ತಾರೆ. ಬರೆಯುವ ಆಸಕ್ತಿ ಇರುವವರಿಗೆ ವಿಷಯಗಳ ಕೊರತೆ ಇಲ್ಲ ಎಂಬುದಕ್ಕೆ ಪುರಾವೆಯಾಗಿವೆ ಈ ಸಂಕಲನದ ಬರಹಗಳು.