ಮನೆಯಲ್ಲೇ ಓ ಆರ್ ಎಸ್ ತಯಾರಿಕೆ ಹೇಗೆ?
ಕಳೆದ ವಾರ ನೀವು ಓ ಆರ್ ಎಸ್ ಎಂಬ ಜೀವರಕ್ಷಕ ದ್ರಾವಣವನ್ನು ಕಂಡು ಹಿಡಿದವರ ಬಗ್ಗೆ ತಿಳಿದುಕೊಂಡಿರುವಿರಿ. ಈ ವಾರ ತುರ್ತು ಸಂದರ್ಭದಲ್ಲಿ ಮನೆಯಲ್ಲೇ ಓ ಆರ್ ಎಸ್ ದ್ರಾವಣವನ್ನು ತಯಾರಿಸುವ ವಿಧಾನದ ಬಗ್ಗೆ ತಿಳಿಸಿಕೊಡಲಿದ್ದೇವೆ. ಕೆಲವೊಮ್ಮೆ ಗ್ರಾಮಾಂತರ ಪ್ರದೇಶಗಳಲ್ಲಿರುವ ಮೆಡಿಕಲ್ ಅಂಗಡಿಗಳಲ್ಲಿ ಈ ಹುಡಿ ಲಭ್ಯವಿರುವುದಿಲ್ಲ ಅಥವಾ ತಡ ರಾತ್ರಿಗಳಲ್ಲಿ ಓ ಆರ್ ಎಸ್ ಅಗತ್ಯತೆ ಕಾಡಬಹುದು. ಆ ಸಮಯ ಬೆಳಗಾಗುವವವರೆಗೆ ಕಾಯುವುದು ಕಷ್ಟ ಸಾಧ್ಯ. ಮನೆಯಲ್ಲಿ ಲಭ್ಯವಿರುವ ಸಾಮಾಗ್ರಿಗಳನ್ನೇ ಬಳಸಿ ಓ ಆರ್ ಎಸ್ ತಯಾರಿಸುವ ವಿಧಾನ ಮತ್ತು ಅದಕ್ಕೆ ಬೇಕಾಗುವ ಪ್ರಮಾಣಗಳ ವಿವರ ಹೀಗಿದೆ.
೧. ಕುಡಿಯುವ ನೀರಿನ ದೊಡ್ಡ ಲೋಟವನ್ನು ತೆಗೆದುಕೊಳ್ಳಿರಿ. ಇದರಿಂದ ಐದು ಲೋಟ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ. (ಒಂದು ಲೋಟವು ಸುಮಾರು ೨೦೦ ಎಂ.ಎಲ್ ನಷ್ಟು ಇರುತ್ತದೆ. ಐದು ಲೋಟವೆಂದರೆ ಒಂದು ಲೀಟರ್ ನೀರಾಗುತ್ತದೆ) ಒಲೆಯ ಮೇಲಿಡಿ. ನೀರು ಕುದಿಯಲಿ.
೨. ನೀರು ಕುದಿದ ಮೇಲೆ ಅದನ್ನು ತಣಿಯಲು ಬಿಡಿ.
೩. ಒಂದು ಅಂಗೈಯ ಗುಣಿ ತುಂಬುವಷ್ಟು ಸಕ್ಕರೆಯನ್ನು ತೆಗೆದುಕೊಳ್ಳಿ. ಅದನ್ನು ಪಾತ್ರೆಯಲ್ಲಿರುವ ನೀರಿಗೆ ಹಾಕಿ.
೪. ನಿಮ್ಮ ಮೂರು ಬೆರಳುಗಳ ಸಹಾಯದಿಂದ ಒಂದು ಚಿಟಿಕೆ ಹುಡಿ ಉಪ್ಪನ್ನು ತೆಗೆದುಕೊಳ್ಳಿ. ಅದನ್ನು ಪಾತ್ರೆಯಲ್ಲಿರುವ ನೀರಿಗೆ ಹಾಕಿ.
೫. ನಿಮ್ಮ ಎರಡು ಬೆರಳುಗಳಿಂದ ಒಂದು ಚಿಟಿಕೆ ಅಡುಗೆ ಸೋಡಾವನ್ನು ತೆಗೆದುಕೊಳ್ಳಿ. ಅದನ್ನೂ ಪಾತ್ರೆಗೆ ಹಾಕಿ.
೬. ಅರ್ಧ ನಿಂಬೆ ಹಣ್ಣಿನ ರಸವನ್ನು ಆ ಪಾತ್ರೆಯಲ್ಲಿರುವ ನೀರಿಗೆ ಹಿಂಡಿ.
೭. ಚೆನ್ನಾಗಿ ಕಲಸಿ. ಸ್ವಲ್ಪ ಸ್ವಲ್ಪವೇ ಕುಡಿಸಿ.
ಸೂಚನೆ: ಸಕ್ಕರೆ ಸಿಗಲಿಲ್ಲವಾದರೆ ಬೆಲ್ಲದ ಹುಡಿಯನ್ನೂ ಬಳಸಬಹುದು. ನಿಂಬೆಹಣ್ಣು ದೊರೆಯದೇ ಹೋದರೆ ಯಾವುದೇ ಹುಳಿ ಹಣ್ಣು (ಮೂಸಂಬಿ, ಕಿತ್ತಳೆ) ಬಳಸಬಹುದು.
ಹೀಗೆ ತುರ್ತು ಸಂದರ್ಭದಲ್ಲಿ ಮನೆಯಲ್ಲೇ ಓ ಆರ್ ಎಸ್ ದ್ರಾವಣವನ್ನು ತಯಾರಿಸಿಕೊಳ್ಳಬಹುದಾಗಿದೆ.
(ಮಾಹಿತಿ: ‘ಸೂತ್ರ’ ಪತ್ರಿಕೆ)