ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಬಿ. ಜನಾರ್ದನ್ ಭಟ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೭೫.೦೦, ಮುದ್ರಣ: ೨೦೨೫

“ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ. ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ ಜತೆ ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾಗಿ ಮೂಡಿಬಂದಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ. 

ಖ್ಯಾತ ಲೇಖಕರು, ವಿಮರ್ಶಕರಾದ ಟಿ. ಎ. ಎನ್. ಖಂಡಿಗೆ ಪ್ರಕಾರ “ ಈ ನವೀನ ತಂತ್ರದ ಕಾದಂಬರಿ ಮನೆಯೊಡೆಯ ಮತ್ತು ದೇಹ ಆತ್ಮಗಳ ರೂಪಕಗಳ ಮೂಲಕ ಅನಾವರಣಗೊಳ್ಳುತ್ತದೆ. ಬಸವಣ್ಣನವರು ಅಂತರಂಗದ ಭಕ್ತಿಯನ್ನು ನಿಕಷಕ್ಕೆ ಒಡ್ಡುವಾಗ ಹೇಳಿದ ವಚನವೊಂದರ ಸಾಲು ಈ ಕಾದಂಬರಿಯ ಶೀರ್ಷಿಕೆ. ದೇಹಾತೀತವಾಗಿ ಆತ್ಮದ ಸ್ವರೂಪದಲ್ಲಿರುವ ಉಡುಪರ ದೇಹ ಎಂಬ ಮನೆಯ ಮತ್ತು ಅವರ ಭೌತಿಕ ಸ್ವರೂಪದ ಮನೆಯ ಶೋಧನೆಯ ಸುತ್ತ ನಡೆಯುವ ಕಥಾಹಂದರದ ಈ ಕಾದಂಬರಿ ಜನಾರ್ದನ ಭಟ್ಟರ ಕಾದಂಬರಿ ಜೀವನಕ್ಕೆ ಹೊಸ ತಿರುವು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.”

ಲೇಖಕರಾದ ಬಿ ಜನಾರ್ದನ್ ಭಟ್ ಇವರು ತಮ್ಮ ಲೇಖಕರ ಮಾತಿನಲ್ಲಿ ಹೇಳುವುದಾದರೆ “`ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?' ಎನ್ನುವುದು ನನ್ನ ಎಂಟನೆಯ ಕಾದಂಬರಿ. ನನ್ನ ಕಾದಂಬರಿಗಳ ಒಂದು ಪ್ರಧಾನ ಧಾರೆಯಾದ ಸಾಂಸ್ಕೃತಿಕ- ಐತಿಹಾಸಿಕ ಕಥನದ ಮಾದರಿಗೆ ಈ ಮೂಲಕ ಮರಳಿರುವೆ. ನಾನು ಹೇಳಬೇಕಾದುದನ್ನೆಲ್ಲ ಕಾದಂಬರಿಯಲ್ಲಿಯೇ ಹೇಳಿರುವುದರಿಂದ ಇಲ್ಲಿ ಆ ಬಗ್ಗೆ ಹೇಳಬೇಕಾಗಿಲ್ಲ ಅನಿಸುತ್ತದೆ. ನನಗೆ ವ್ಯಕ್ತಿಗಳಿಗಿಂತ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಐತಿಹಾಸಿಕ ಘಟನೆಗಳಿಗಿಂತ ಅವುಗಳನ್ನು ಹುಟ್ಟುಹಾಕುವ ಚಾರಿತ್ರಿಕ ಸನ್ನಿವೇಶಗಳ ಬಗ್ಗೆ ಹೆಚ್ಚಿನ ಆಸಕ್ತಿ ಇರುವುದರಿಂದ ನಾನು ಕಾದಂಬರಿಗಳ ಕೊನೆಯಲ್ಲಿ ಅಧ್ಯಯನ ಮಾಡಿದ ಗ್ರಂಥಗಳ ಉಲ್ಲೇಖವನ್ನು ಕೊಡುವುದಿಲ್ಲ.

ಈ ಕಾದಂಬರಿಯಲ್ಲಿ ಒಬ್ಬರು ಮಹಾಸಾಧಕರ ಬದುಕಿನ ನಡೆಯನ್ನು ಮತ್ತು ಸಾಧನೆಯನ್ನು, ವಿಧಿ ಅವರನ್ನು ಅಲೆಸಿದ ಬಗೆಯನ್ನು ಮತ್ತು ನಮ್ಮ ಸ್ವಾತಂತ್ಯ್ರೋತ್ತರ ಸಮಾಜಕ್ಕೆ ಅವರ ಯೋಗ್ಯತೆಯ ಅರಿವೇ ಇಲ್ಲದಿದ್ದುದನ್ನು ಕೇಂದ್ರವಾಗಿ ಇರಿಸಿಕೊಂಡಿರುವೆ. ಕೆಲವು ಪಾರಂಪರಿಕ ನಂಬಿಕೆಗಳು ಮತ್ತು ಆಧ್ಯಾತ್ಮಿಕ ಸಾಧನೆಗಳ ಉಲ್ಲೇಖವಿದೆ. ಅದನ್ನು ಒಂದು ತಂತ್ರವಾಗಿ ಬಳಸಿಕೊಂಡಿದ್ದೇನೆ. ಒಟ್ಟು ಕಾದಂಬರಿಯ ಸಮಸ್ಯೆ ವ್ಯಕ್ತಿ ಚೈತನ್ಯ ಮತ್ತು ಸಮಾಜದ ಕೌಟುಂಬಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಪೇಕ್ಷೆಗಳ ನಡುವಿನ ತಾಕಲಾಟದಲ್ಲಿದೆ. ಹಾಗಾಗಿ ಈ ಆಧ್ಯಾತ್ಮಿಕತೆ ಮತ್ತು ನಂಬಿಕೆಗಳನ್ನು ಉದ್ದಕ್ಕೂ ಬಳಸಿಕೊಂಡಿದ್ದೇನೆ. ಇದರ ಬಗ್ಗೆ ಡಾ. ಜಿ. ಎನ್. ಉಪಾಧ್ಯ ಅವರು ತಮ್ಮ ಮುನ್ನುಡಿಯಲ್ಲಿ ಒಳನೋಟಗಳಿರುವ ಮಾತುಗಳನ್ನು ಹೇಳಿದ್ದಾರೆ.” ಸುಮಾರು ೧೪೦ ಪುಟಗಳ ಈ ಕಾದಂಬರಿ ಸೊಗಸಾದ ಓದಿಗಾಗಿ ಬಳಸಿಕೊಳ್ಳಬಹುದು.