ಮನೆ ಗೆದ್ದು ಮಾರು ಗೆಲ್ಲು ಅಥವಾ …
ಹೀಗೆ ಒಂದು ಜನಪದೀಯ - ಅನುಭಾವದ ಮಾತು ಚಾಲ್ತಿಯಲ್ಲಿದೆ. ಇದರ ವಾಸ್ತವತೆಯ ಬಗ್ಗೆ ಯೋಚಿಸತೊಡಗಿದಾಗ… ಮನೆ ಎಂದರೆ ಕುಟುಂಬ. ಕುಟುಂಬವನ್ನು ಸರಿಯಾಗಿ ಮತ್ತು ತೃಪ್ತಿಕರವಾಗಿ ನಿರ್ವಹಿಸಿದ ನಂತರ ಇತರ ಮುಖ್ಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ಮನೆಯಲ್ಲಿಯೇ ಅತೃಪ್ತಿ ಇದ್ದರೆ ಅಥವಾ ಅದನ್ನು ಉತ್ತಮವಾಗಿ ನಿರ್ವಹಿಸದೆ ಸಮಾಜವನ್ನು ತಿದ್ದುವುದು ಸಾಧ್ಯವಿಲ್ಲ ಅದು ಒಂದು ರೀತಿಯ ವ್ಯಂಗ್ಯ ಎಂದು ಹೇಳಲಾಗುತ್ತದೆ. ಇದು ಸರಿಯೇ - ವಾಸ್ತವವೇ?
ಆಧುನಿಕ ಸಂಕೀರ್ಣ ಬದುಕಿನ ಕುಟುಂಬಗಳನ್ನು ಗಮನಿಸಿದಾಗ ಮನೆ ಎಂಬ ಈ ಮಾತುಗಳು ತುಂಬಾ ಪರಿಣಾಮಕಾರಿ ಎಂದು ಅನಿಸುವುದಿಲ್ಲ. ಮನೆ ಗೆಲ್ಲುವುದು ಅದರಲ್ಲೂ ಕೌಟುಂಬಿಕ ವ್ಯವಸ್ಥೆಯನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಬಹುಶಃ ನಂಬುಗೆಯ ಏಳು ಜನ್ಮವಾದರೂ ಸಾಕಾಗುವುದಿಲ್ಲ. ಮಧ್ಯಮವರ್ಗದ ಬದುಕು ತುಂಬಾ ಕಷ್ಟಕರ. ಅಪ್ಪ ಅಮ್ಮ ಗಂಡ ಹೆಂಡತಿ ಮಕ್ಕಳು ಅತ್ತೆ ಮಾವ ಸೊಸೆ ಅಳಿಯ ಮೈದುನ ಅತ್ತಿಗೆ ಅಜ್ಜ ಅಜ್ಜಿ ಈ ರೀತಿಯ ಸಂಬಂಧಗಳನ್ನು ನಿಭಾಯಿಸುವುದು ತುಂಬಾ ಕಠಿಣ. ನಗರ ಜೀವನದಲ್ಲಿ ಮತ್ತಷ್ಟು ಕಷ್ಟ. ಒಬ್ಬೊಬ್ಬರ ಅಭಿರುಚಿ, ಮನೋಭಾವ, ಅವರ ಗೆಳೆಯರ ಮಾತುಗಳು ಹೀಗೆ ಸಾಮಾಜಿಕ ವ್ಯವಸ್ಥೆಯೇ ಸ್ವಲ್ಪ ಗೊಂದಲದ ಗೂಡಾಗಿದೆ. ದೂರದಿಂದ ಹೇಳುವುದು, ಹೊಂದಾಣಿಕೆ ಅವಶ್ಯಕತೆ ಇದೆ ಎಂಬುದೆಲ್ಲಾ ಸುಲಭ. ವಾಸ್ತವದಲ್ಲಿ ಇದು ಬಹುಕಷ್ಟ. ಇಡೀ ಬದುಕನ್ನೇ ಇದಕ್ಕಾಗಿ ಸವೆಸಬೇಕಾಗುತ್ತದೆ. ಆಗಲೂ ಸರಿಯಾಗುತ್ತದೆ ಎಂಬ ಖಚಿತತೆ ಇಲ್ಲ. ಕೆಲವು ಉದಾಹರಣೆಗಳನ್ನು ಹೊರತುಪಡಿಸಿ ಬಹುತೇಕ ಕುಟುಂಬಗಳಲ್ಲಿ ವಿವಿಧ ಬಗೆಯ ಅಸಮಾಧಾನಗಳು ಇದ್ದೇ ಇರುತ್ತದೆ. ಕೆಲವು ಬಹಿರಂಗವಾಗಿ ವಿಭಜನೆಯಾದರೆ ಮತ್ತೆ ಕೆಲವು ಆಂತರಿಕವಾಗಿ ಪ್ರತ್ಯೇಕಿಸಲ್ಪಟ್ಟಿರುತ್ತದೆ. ಹಾಗಾದರೆ ಈ ಪರಿಸ್ಥಿತಿಯಲ್ಲಿರುವ ಯಾವುದೇ ವ್ಯಕ್ತಿ ಸಾಮಾಜಿಕ ಸೇವೆಯಲ್ಲಿ ತೊಡಗಲು ಅನರ್ಹನೇ. ಮನೆಯೇ ಗೆಲ್ಲಲಾಗದ ವ್ಯಕ್ತಿ ಹೊರಗೆ ಇನ್ನೇನು ಮಾಡಲು ಸಾಧ್ಯ ಎಂದು ನಿರ್ಲಕ್ಷಿಸಬೇಕೆ?
ಸಮಾಜ ಸೇವೆಯಲ್ಲಿ ತೊಡಗಬೇಕೆಂಬ ತುಡಿತದ ವ್ಯಕ್ತಿ ಯಾವುದೇ ಸಾಂಸಾರಿಕ ಜವಾಬ್ದಾರಿ ಹೊಂದಿರಬಾರದೇ ಅಥವಾ ಸಾಂಸಾರಿಕ ಬಂಧನಕ್ಕೆ ಒಳಗಾದ ಕೆಲವು ವರ್ಷಗಳ ನಂತರ ಸೇವೆ ಮಾಡಬೇಕೆಂಬ ಅಭಿಲಾಷೆ ಉಂಟಾದಾಗ ಕೌಟುಂಬಿಕ ವ್ಯವಸ್ಥೆಯ ವಿಫಲತೆ ಅದಕ್ಕೆ ಅಡ್ಡಿಯಾಗಬಹುದೇ ಅಥವಾ ವೈಯಕ್ತಿಕ ಬದುಕು ಮತ್ತು ಸಾಮಾಜಿಕ ಸೇವೆ ಎರಡು ಬೇರೆ ಬೇರೆಯೇ ಅಥವಾ ಒಂದಕ್ಕೊಂದು ಪೂರಕವೇ ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲವೇ? ಉತ್ತರ ಅಷ್ಟು ಸುಲಭವಲ್ಲ. ಭಾರತದ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ ಇದು ಬಹು ಆಯಾಮ ಹೊಂದಿದೆ ಮತ್ತು ವೈಯಕ್ತಿಕವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.
ಆದರೆ ಮನ ಗೆದ್ದು ಮಾರು ಗೆಲ್ಲು ಎಂಬುದು ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿದೆ. ಮನೆ ಎಂಬ ವಿಷಯ ಬಂದಾಗ ಅಲ್ಲಿ ಇತರರು ಇರುತ್ತಾರೆ. ಆದರೆ ಮನ ಸಂಪೂರ್ಣ ವೈಯಕ್ತಿಕ ಮತ್ತು ನಾವು ಒಬ್ಬರೇ ಇರುತ್ತೇವೆ. ನಮ್ಮ ಎಲ್ಲಾ ಅರಿಷಡ್ವರ್ಗಗಳ ನಿಯಂತ್ರಣ ನಮಗೆ ಸೇರಿರುತ್ತದೆ. ಸಮಾಜ ಸೇವೆಗೆ ಬೇಕಾದ ಮತ್ತು ಬೇಡದ ಎಲ್ಲವನ್ನೂ ನಾವೇ ನಿರ್ಧರಿಸಬಹುದು.
ನಮ್ಮ ಒಳಗಿನ ಎಲ್ಲಾ ಸ್ವಾರ್ಥ ದುರಾಸೆ ಮುಖವಾಡಗಳನ್ನು ಆತ್ಮಾವಲೋಕನ ಮಾಡಿಕೊಂಡು ನಿಷ್ಕಲ್ಮಶ ಮನಸ್ಸಿನಿಂದ ಮನ ಗೆದ್ದು ಮಾರು ಗೆಲ್ಲಲು ಹೊರಡಬಹುದು. ಆದ್ದರಿಂದ ಮನೆ ಗೆದ್ದು ಮಾರು ಗೆಲ್ಲು ಎಂಬುದು ಕಷ್ಟ ಸಾಧ್ಯ. ಕೆಲವರಿಗೆ ಮಾತ್ರ ಸೀಮಿತ. ಆದರೆ ಮನ ಗೆದ್ದು ಮಾರು ಗೆಲ್ಲು ಎಂಬುದು ವಾಸ್ತವಕ್ಕೆ ಹತ್ತಿರ ಮತ್ತು ಪ್ರತಿಯೊಬ್ಬರು ಪ್ರಯತ್ನಿಸಬಹುದು. ಇದರ ಒಟ್ಟು ಸಾರಾಂಶ.
ಒಂದು ವೇಳೆ ಮನೆ ಗೆದ್ದು ಮಾರ ಗೆಲ್ಲಲು ಪ್ರಯತ್ನಿಸಿದರೆ ಉತ್ತಮ, ಹಾಗೆಯೇ ಮನೆ ಗೆಲ್ಲಲು ವಿಫಲರಾದರು ಅದರ ಅನುಭವದ ಆಧಾರದಲ್ಲಿ ಮಾರು ಗೆಲ್ಲಲು ಹೊರಡುವುದು ತಪ್ಪೇನಲ್ಲ. ಇನ್ನಷ್ಟು ಹೆಚ್ಚು ತೊಡಗಿಸಿಕೊಳ್ಳುವ ಮುಖಾಂತರ ಇಲ್ಲಿ ಯಶಸ್ವಿಯಾಗುವ ಸಾಧ್ಯತೆಯು ಇರುತ್ತದೆ. ಇದು ವ್ಯಕ್ತಿಗಳ ಮನಸ್ಥಿತಿಯನ್ನು - ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಜೊತೆಗೆ ಮನ ಗೆದ್ದು ಮಾರು ಗೆಲ್ಲುವುದು ಅತ್ಯಂತ ಅವಶ್ಯ. ಮನ ಗೆಲ್ಲದೇ ಮಾರು ಗೆಲ್ಲುವುದು ಆತ್ಮವಂಚನೆಯಾಗುತ್ತದೆ.
ಲೋಕ ರೂಢಿಯ ಗಾದೆ ಮಾತುಗಳ ಒಂದು ಸಣ್ಣ ಸರಳ ವಿಮರ್ಶೆ. ಇದನ್ನು ಮತ್ತಷ್ಟು ವಿಶಾಲವಾಗಿ - ಆಳವಾಗಿ ಇನ್ನೂ ವಿವಿಧ ಆಯಾಮಗಳಲ್ಲಿ ಚರ್ಚಿಸಬಹುದು. ಆ ನಿಟ್ಟಿನಲ್ಲಿ ಯೋಚಿಸಿ ಎಂಬ ಮನವಿಯೊಂದಿಗೆ...
-ವಿವೇಕಾನಂದ ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ