ಮನೆ ಮನಗಳಲ್ಲಿ ತ್ರಿವರ್ಣ...

ಮನೆ ಮನೆ ಬಾವುಟ,
ಘರ್ ಘರ್ ತಿರಂಗಾ,
ಪ್ರತಿ ಮನೆ ಬಾವುಟ,
ಹರ್ ಘರ್ ತಿರಂಗಾ,
ಭಾರತ ಬಾವುಟ,
ಭಾರತ್ ತಿರಂಗಾ,
ತ್ರಿವರ್ಣ ಬಾವುಟ,
ತ್ರಿವರ್ಣ ತಿರಂಗಾ,...
ಮನೆಯ ಮೇಲೆ ತ್ರಿವರ್ಣ ಬಾವುಟ,
ಮನೆಯ ಒಳಗೆ ಪ್ರೀತಿಯ ಬಾವುಟ,
ಮನದ ಒಳಗೆ ಪ್ರಾಮಾಣಿಕತೆಯ ಬಾವುಟ,
ಬಾವುಟ ಬಾವುಟ ಬಾವುಟ....
ಇನ್ನು ಮೂರು ದಿನ ಎಲ್ಲೆಲ್ಲೂ ಬಾವುಟಗಳದ್ದೇ ಸದ್ದು.
ಆ ಬಾವುಟಗಳು ಕೂಡ ತಮ್ಮ ಬಣ್ಣದ ಮೂಲಕ ಜಾತಿ ಧರ್ಮ ಪ್ರದೇಶ ಭಾಷೆ ಮತ್ತು ಸೈದ್ಧಾಂತಿಕ ಅಸ್ಮಿತೆಯನ್ನು ಹೊರಹೊಮ್ಮಿಸುತ್ತವೆ..
ಬಣ್ಣಗಳು ಯಾರ ಸ್ವತ್ತೂ ಅಲ್ಲ. ಅವು ಪ್ರಾಕೃತಿಕ ಸೃಷ್ಟಿ. ಆದರೂ ಮನುಷ್ಯ ಪ್ರಾಣಿ ಅದರಲ್ಲೂ ವಿಭಜನಾತ್ಮಕ ಭಾವ ಸೃಷ್ಟಿಸಿಯಾಗಿದೆ. ಈ ಸಂದರ್ಭದಲ್ಲಿ......
ಬಡವರ ಒಡಲಾಳದಿಂದ ಹೊರಟ ಕೆಂಬಾವುಟ,
ಬ್ರಾಹ್ಮಣ ಅಗ್ರಹಾರಗಳಿಂದ ಹೊರಟ ಕೇಸರಿ ಬಾವುಟ,
ದಲಿತ ಕೇರಿಗಳಿಂದ ಹೊರಟ ನೀಲಿ ಬಾವುಟ,
ರೈತರ ಹೊಲಗದ್ದೆಗಳಿಂದ ಹೊರಟ ಹಸಿರು ಬಾವುಟ,
ಮುಸ್ಲಿಮರ ಮನೆಗಳಿಂದ ಹೊರಟ ಹಸಿರಿನದೇ ಬಾವುಟ,
ಎಲ್ಲಾ ಶೋಷಿತರ ಕನಸಿನಾಳದಿಂದ ಹೊರಟ ಕಪ್ಪು ಬಾವುಟ,
ಶಾಂತಿಪ್ರಿಯರ ಮನಸ್ಸಿನಾಳದಿಂದ ಹೊರಟ ಹಾಲು ಬಿಳುಪಿನ ಬಾವುಟ,
ಕ್ರಿಶ್ಚಿಯನ್ನರ ಹೃದಯದಾಳದಿಂದ ಹೊರಟ ಬಿಳಿಯದೇ ಬಾವುಟ,
ಪ್ರಕೃತಿಯ ಮಡಿಲಿನಿಂದ ಹೊರಟ ಭೂ ಬಣ್ಣದ ಬಾವುಟ,
ಎಲ್ಲವೂ ಆಕಾಶದಲ್ಲಿ ಕಾಮನಬಿಲ್ಲಿನಂತೆ ಮೂಡಿ,
ಅಲೆ ಅಲೆಯಾಗಿ ತೇಲುತ್ತಾ ತೇಲುತ್ತಾ ತೇಲುತ್ತಾ,
ಭಾರತ ಮಾತೆಯ ಮೈ ಹೊದಿಕೆಯಂತೆ ಅವರಿಸಿಕೊಂಡಾಗ,
ಏನೆಂದು ವರ್ಣಿಸಲಿ ಆ ಸೌಂದರ್ಯವನ್ನು,
ವಿಶ್ವ ಸುಂದರಿಯರ ಸುಂದರಿಯಂತೆ,
ಮೊನಲಿಸಾಳ ನಗುವೂ ಮಾಸುವಂತೆ,
ಸೃಷ್ಟಿಯನ್ನೇ ಮೆಟ್ಟಿನಿಂತ ದೈತ್ಯಳಂತೆ,
ಸ್ವಾತಂತ್ರ್ಯ ದೇವರುಗಳ ದೇವತೆಯಂತೆ,
ಸಮಾನತೆಯ ಸಾರುವ ಬೆಳಕಿನಂತೆ,
ಮಾನವೀಯತೆಯೇ ಪ್ರತ್ಯಕ್ಷಳಾದಂತೆ,
ಕಂಗೊಳಿಸುತ್ತದೆ.
ಇದು ಕಲ್ಪನೆಯೂ ಅಲ್ಲ,
ಅಸಾಧ್ಯವೂ ಅಲ್ಲ.
ನಮ್ಮ ನಿಮ್ಮ ಮನಗಳಲ್ಲಿ, ಪ್ರಬುದ್ಧತೆಯ ಬೀಜಾಂಕುರವಾದಾಗ,
ಯೋಚನಾಶಕ್ತಿ ವಿಶಾಲವಾದಾಗ
ಇದು ಸಾಧ್ಯವಾಗುತ್ತದೆ.
ನಾವು ಉಸಿರಾಡುತ್ತಿರುವಾಗಲೇ ಇದನ್ನು ನಿರೀಕ್ಷಿಸೋಣ,
ಇಲ್ಲದಿದ್ದರೆ ನಾವು ಪ್ರತಿನಿತ್ಯ ಹೆಣ ಉರುಳುವ,
ಆ ಹೆಣದ ರಕ್ತ ಮಾಂಸಗಳಿಗೆ ಹಾತೊರೆಯುವ ರಕ್ಕಸ ಸಂತತಿಯ ಹದ್ದುಗಳ ನಡುವೆ ಬದುಕುತ್ತಾ,
ನಾವೇ ಸರಿ ನಾವೇ ಶ್ರೇಷ್ಠ ನಮ್ಮ ಚಿಂತನೆಯೇ ಅತ್ಯುತ್ತಮ ಎಂಬ ಹುಚ್ಚಿಗೆ ಬಲಿಯಾಗಿ,
ಇಡೀ ಸಮಾಜ ಹುಚ್ಚರ ಸಂತೆಯಾಗುವುದರಲ್ಲಿ ಸಂದೇಹವಿಲ್ಲ.
ಈಗಲಾದರೂ ಎಚ್ಚೆತ್ತುಕೊಳ್ಳೋಣ.
ಇಡೀ ಭಾರತೀಯ ಸಮೂಹಕ್ಕೆ,
ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು....
ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ