ಮನ ತಿದ್ದಿದ ದೇವರ ನುಡಿ...

ಮನ ತಿದ್ದಿದ ದೇವರ ನುಡಿ...

ಮಾಸ್ತಿ ಅವರಿಗೆ ಆರು ಜನ ಹೆಣ್ಣು ಮಕ್ಕಳು. ಅಧಿಕಾರದಲ್ಲಿದ್ದಾಗಲೇ ಎಲ್ಲ ಮಕ್ಕಳ ಮದುವೆ ಮಾಡಿ ಮುಗಿಸಿದ್ದರು. ಈ ಘಟನೆ ನಡೆದದ್ದು ಆರನೇ ಮಗಳ ಮದುವೆಯ ಸಂದರ್ಭದಲ್ಲಿ. ಮದುವೆಯೇನೋ ಚೆನ್ನಾಗಿಯೇ ಆಯಿತು. ಇನ್ನು ಮಗಳನ್ನು ಗಂಡನ ಮನೆಗೆ ಕಳುಹಿಸುವ ಸಂದರ್ಭ. ಆ ಹೊತ್ತಿಗೆ ತುಂಬ ಖರ್ಚಾಗಿ ಮಾಸ್ತಿಯವರ ಆರ್ಥಿಕ ಸ್ಥಿತಿ ಸ್ವಲ್ಪ ನಾಜೂಕಾಗಿತ್ತು.

ಅದಕ್ಕೆ ತಮ್ಮ ಹೆಂಡತಿ ಮತ್ತು ತಾಯಿಯನ್ನು ಕರೆದು ಹೇಳಿದರು, `ಮದುವೆಯ ಸಂಭ್ರಮಕ್ಕೇನೂ ಕಡಿಮೆಯಾಗಲಿಲ್ಲ. ಆದರೆ, ಈ ಕಾರ್ಯಕ್ರಮಕ್ಕೆ ಯಾವುದು ಅವಶ್ಯವೋ ಅದನ್ನು ಮಾತ್ರ ಮಾಡಿ, ದುಂದು ಮಾಡುವುದು ಬೇಡ' ಇಷ್ಟು ಎಚ್ಚರಿಕೆ ನೀಡಿ ತಮ್ಮ ಪ್ರವಾಸಕ್ಕೆ ಹೋದರು. ಅವರು ಮರಳಿ ಬರುವುದರಲ್ಲಿ ತಯಾರಿಯೆಲ್ಲ ತುಂಬ ಅದ್ಧೂರಿಯಾಗಿಯೆ ಆಗಿದೆ. ಸಾಲ ಮಾಡುವಷ್ಟರ ಮಟ್ಟಿಗೆ ಖರ್ಚು ಹೆಚ್ಚಾಗಿದೆ. ಮಾಸ್ತಿಯವರಿಗೆ ರೇಗಿಹೋಯಿತು.

ಹೆಂಡತಿ ಕರೆದು,  'ನಾನು ನಿನಗೆ ಏನು ಹೇಳಿದ್ದೆ, ನೀನು ಏನು ಮಾಡಿದೆ? ನೀನು ಮನುಷ್ಯಳೇ? ಮೃಗಕ್ಕೂ, ನಿನಗೂ ಏನು ವ್ಯತ್ಯಾಸ' ಎಂದು ಅಬ್ಬರಿಸಿದರು. ಗಂಡನ ಈ ಅಪರೂಪದ ಕೋಪ ನೋಡಿ ಆಕೆ ಗಾಬರಿಯಾಗಿ ಮಾತನಾಡದೆ ನಿಂತುಬಿಟ್ಟರು. ಈ ಸಿಡಿಲಿನಂತಹ ಮಾತಿನ ಮಳೆ  ಕೇಳಿ ತಾಯಿ ಹೊರಬಂದರು,  'ಯಾಕೋ, ಸೀನೂ ಆಕೆಯನ್ನು ಬೈಯ್ಯುತ್ತಿದ್ದೀ? ಆಕೆಯದೇನೂ ತಪ್ಪಿಲ್ಲ. ತೀರ್ಮಾನ ನಾನೇ ತೆಗೆದುಕೊಂಡದ್ದು.

ಮಗುವನ್ನು ಹಾಗೆಯೇ ಗಂಡನ ಮನೆಗೆ ಕಳುಹಿಸುವುದಾಗುತ್ತೇನೋ? ನಿನ್ನ ಹೆಂಡತಿ ಬೇಡವೆಂದರೂ, ನಾನೇ ಹತ್ತು ಜನ ಸಂತೋಷಪಡುವಂತೆ ಆಗಲಿ ಎಂದು ತೀರ್ಮಾನಮಾಡಿ ಎಲ್ಲವನ್ನೂ ಸಂಪ್ರದಾಯದಂತೆಯೇ ಯೋಜಿಸಿದ್ದೇನೆ. ಸರಿ ತಾನೇ'  ಎಂದರು. ಎರಡನೇ ಬಾರಿಗೆ ಸಿಟ್ಟು ಉಕ್ಕಿ ಬಂತು ಮಾಸ್ತಿಯವರಿಗೆ.

ಆ ಕೋಪದಲ್ಲಿ ತಾವು ನಿಂದಿಸುತ್ತಿದ್ದುದು ಯಾರೆಂಬುದೂ ಮರೆತುಹೋಯಿತು, 'ಗೊಡ್ಡು ಸಂಪ್ರದಾಯಕ್ಕೆ ಕಟ್ಟುಬಿದ್ದ ಒಡ್ಡ ಹೆಂಗಸು ನೀನು. ನನ್ನ ಕಷ್ಟದ ಬಗ್ಗೆ ಸ್ವಲ್ಪವಾದರೂ ಕರುಣೆ ಇದೆಯೇ, ಕಾಳಜಿ ಇದೆಯೇ? ನೀನೂ ಒಬ್ಬ ತಾಯಿಯೇ' ಎಂದೆಲ್ಲಾ ಕೂಗಾಡಿ ತಮ್ಮ ಕೊಠಡಿಗೆ ಹೋಗಿ ಬಾಗಿಲು ಮುರಿದುಹೋಗುವಂತೆ ರಪ್ಪೆಂದು ಬಡಿದು ಮುಚ್ಚಿಕೊಂಡರು.

ಮರುದಿನ ಎಂದಿನಂತೆ ಸ್ನಾನಮಾಡಿ, ಮಡಿಯುಟ್ಟು ದೇವರ ಮನೆಗೆ ಹೋದರು. ಮನೆದೇವರನ್ನು ಸ್ಮರಿಸುತ್ತ ಆ ಶ್ರಿನಿವಾಸನನ್ನು ಸ್ತುತಿಸುವ ಶ್ಲೋಕಗಳನ್ನು ಹೇಳತೊಡಗಿದರು. ನಂತರ ನಿತ್ಯದಂತೆ ರಾಮಾಯಣದ ಪಾರಾಯಣ ಪ್ರಾರಂಭಿಸಿದರು. ಆಶ್ಚರ್ಯ! ದಿನವೂ ನಿರಾಯಾಸವಾಗಿ ಹೇಳುತ್ತಿದ್ದ ಶ್ಲೋಕಗಳು ಬಾಯಿಗೇ ಬರುತ್ತಿಲ್ಲ. ಪೀಠಿಕಾ ಶ್ಲೋಕಗಳೂ ನೆನಪಿಗೆ ಬರುತ್ತಿಲ್ಲ. ಸಾಲುಗಳೆಲ್ಲ ಮರೆತುಹೋಗಿವೆ! ದಿಟ್ಟಿಸಿ ತಮ್ಮ ಆರಾಧ್ಯ ದೈವವಾದ ಶ್ರಿನಿವಾಸನ ಚಿತ್ರ  ನೋಡಿದರು. ಅದು ಮಾತನಾಡಿದಂತೆ ತೋರಿತು, 'ನಿನ್ನನ್ನು ಹೊತ್ತು, ಸಾಕಿ, ಸಲಹಿ, ದೊಡ್ಡವನನ್ನಾಗಿ ಮಾಡಿ, ನಿನ್ನನ್ನೂ ಒಬ್ಬ ಮನುಷ್ಯನನ್ನಾಗಿ ಮಾಡಿ, ಸಂತೋಷ ಪಟ್ಟು, ನಿನಗಾಗಿಯೇ ಬದುಕಿರುವ ನಿನ್ನ ಅಮ್ಮನ ವಿಷಯದಲ್ಲಿ ಎಂಥದೋ ಒಂದು ಸಣ್ಣ ವಿಷಯಕ್ಕೆ, ಆ ಸೌಜನ್ಯವನ್ನೂ ಮರೆತು ಹಾಗೆ ಒರಟು ಮಾತನಾಡಿ ಸಣ್ಣವನಾದೆಯಲ್ಲ' ಎಂದಂತೆ ಭಾಸವಾಯಿತು. ತಕ್ಷಣ ಪುಸ್ತಕವನ್ನು ಕೆಳಗಿಟ್ಟು ಅಡುಗೆ ಮನೆಗೆ ಹೋದರು.

ಅಮ್ಮ ಒಲೆಯ ಮುಂದೆ ಕುಳಿತಿದ್ದರು. ಇವರೂ ಪಕ್ಕದಲ್ಲಿ ಕುಳಿತು 'ಅಮ್ಮೋ' ಎಂದರು. ಅಮ್ಮ ತಿರುಗಿ ನೋಡಿದರು. ಬಹುಶಃ ಅತ್ತು, ಅತ್ತು ಅವರ ಕಣ್ಣು ಊದಿಕೊಂಡಿದ್ದವು. ಆಕೆಯನ್ನು ನೋಡಿ ಕರುಳು ಕಿವುಚಿದಂತಾಯಿತು. 'ಅಮ್ಮೋ, ನಿನ್ನ ಮೇಲೆ ಅತ್ಯಂತ ಸಣ್ಣ ಕಾರಣಕ್ಕೆ ರೇಗಾಡಿದೆ. ಹಣ ಸಾಲದಲ್ಲಾ ಎಂಬ ಸಂಕಟದಿಂದ ಹಾಗೆಲ್ಲ ಮಾತನಾಡಿದೆ. ಕೋಪದಲ್ಲಿ ಏನೇನೋ ಎಂದುಬಿಟ್ಟೆ.

ಈಗ ಪಾರಾಯಣಕ್ಕೆ ಕುಳಿತರೆ  ಕ್ಷುಲ್ಲಕ ಕಾರಣಕ್ಕೆ ಹೆತ್ತ ಅಮ್ಮನನ್ನೇ ಬೈದು ಕಣ್ಣೀರು ತರಿಸಿದ ನೀನು ಈಗ ನಸುಗುನ್ನಿಯಂತೆ ನನ್ನೆದರು ಕುಳಿತು ಪಾರಾಯಣ ಮಾಡುತ್ತಿಯೇನೋ ಪಾಪಿ, ಎದ್ದು ತೊಲಗು ಎಂದು ದೇವರು ಹೇಳಿದಂತಾಯಿತು. ನಾನು ಮಾಡಿದ್ದು ಅಪರಾಧ, ಕ್ಷಮಿಸು'  ಎಂದು ಕಾಲು ಹಿಡಿದುಕೊಂಡು ಅತ್ತರು.

ಆಗ ಅವರ ಅಮ್ಮ,  'ಛೇ, ನನ್ನಪ್ಪ, ನೀನೇಕೆ ಸಂಕಟಪಡುತ್ತೀಯೋ, ನೀನು ನನಗೆ ಬೈಯ್ಯಲಾರದೆ ಇನ್ನಾರು ಮಾತನಾಡಬೇಕೋ? ನಿನ್ನೆ ಏನೆಂದಿಯೋ ಯಾವುದೂ ನೆನಪಿಲ್ಲ. ಎಲ್ಲ ಆಗಲೇ ಮರೆತುಬಿಟ್ಟೆ. ಹೋಗು ಶುದ್ಧ ಮನಸ್ಸಿನಿಂದ ಪಾರಾಯಣ ಮಾಡು'  ಎಂದು ತಲೆ ನೇವರಿಸಿದರು.

ಮರಳಿ ಬಂದು ದೇವರ ಮುಂದೆ ಕುಳಿತಾಗ ಯಾವ ಶ್ಲೋಕಗಳೂ ಮರೆಯಲಿಲ್ಲ. ಹೃದಯ ಹಗುರಾಯಿತು.ಇಂಥ ಘಟನೆಗಳು ನಮ್ಮ ಮನಸ್ಸುಗಳನ್ನು ಹದಗೊಳಿಸುತ್ತವೆ, ನಮ್ಮಲ್ಲಿ ಆಗಾಗ ಉಕ್ಕಿ ಬರುವ ಅಹಂಕಾರದ, ಕ್ರೌರ್ಯದ ಮಾತುಗಳಿಗೆ, ಕೃತಿಗಳಿಗೆ ತಡೆಯೊಡ್ಡುತ್ತವೆ.

ನಿರೂಪಣೆ: ಡಾ. ಗುರುರಾಜ ಕರ್ಜಗಿ, ‘ಕರುಣಾಳು ಬಾ ಬೆಳಕೆ’