ಮನ ಮೆಚ್ಚಿದ ಹುಡುಗಿ

ಮನ ಮೆಚ್ಚಿದ ಹುಡುಗಿ

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.150.00 ಮುದ್ರಣ: ಸೆಪ್ಟೆಂಬರ್ 2020

ಅಯೋಧ್ಯಾ ಪ್ರಕಾಶನದವರು ತಮ್ಮ ೧೧ನೆಯ ಪುಸ್ತಕವಾಗಿ ರೋಹಿತ್ ಚಕ್ರತೀರ್ಥ ಇವರು ಪರದೇಶದಿಂದ ಹೆಕ್ಕಿ ಕನ್ನಡಕ್ಕೆ ತಂದ ಕಥಾ ಸಂಕಲನ ‘ಮನ ಮೆಚ್ಚಿದ ಹುಡುಗಿ’ ಹೊರ ತಂದಿದ್ದಾರೆ. ರೋಹಿತ್ ಚಕ್ರತೀರ್ಥ ಇವರ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಸುಮಾರು ೨೨ ಪುಸ್ತಕಗಳನ್ನು ಬರೆದು ಪ್ರಕಟಿಸಿರುವ ಇವರು ಗಣಿತ ಹಾಗೂ ವಿಜ್ಞಾನದ ಬಗ್ಗೆ ಸೊಗಸಾಗಿ, ಸರಳ ಪದಗಳಲ್ಲಿ ಬರೆಯುತ್ತಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಇವರು ಅಂಕಣಗಳನ್ನು ಬರೆಯುತ್ತಾರೆ. ಪ್ರಸ್ತುತ ಟೆಸ್ಲಾ ಎಜುಕೇಷನ್ ಎಂಬ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಶಿಕ್ಷಣದ ಕೆಲವು ಮಹತ್ತರವಾದ ಅಂಶಗಳನ್ನು ಸರಳವಾದ ವಿಡಿಯೋ ಮೂಲಕವೂ ಅವರು ತಿಳಿಸಿಕೊಡುತ್ತಾರೆ. 

ಮನ ಮೆಚ್ಚಿದ ಹುಡುಗಿ ಈ ಪುಸ್ತಕ ಬಹಳ ಹಿಂದೆಯೇ ಪ್ರಕಟವಾಗಿದ್ದು, ಈಗ ಹೊರ ಬಂದಿರುವುದು ಅದರ ಪರಿಷ್ಕೃತ ಆವೃತ್ತಿ. ಮೊದಲ ಆವೃತ್ತಿಯಲ್ಲಿದ್ದ ಒಂದು ಕಥೆಯನ್ನು ಹೊರತು ಪಡಿಸಿ ಎಲ್ಲಾ ಕಥೆಗಳು ಹೊಸ ಆವೃತ್ತಿಯಲ್ಲೂ ಇವೆ. ಓದುಗರಿಗೆ ಬೋನಸ್ ಎಂಬಂತೆ ಜ್ಯಾಕ್ ಲಂಡನ್ ನ ಎರಡು ಕಥೆಗಳು, ಟಾಮ್ ಬೈಕಿನ್ ಓ ಹಾಯೋನ್ ಅವರ ಹೀಬ್ರೂ ಭಾಷೆಯ ಒಂದು ಕಥೆ ಹಾಗೂ ಎನ್ರಿಕೋ ಕ್ಯಾಸ್ತೆಲ್ನೋವೋ ಬರೆದ ಒಂದು ವಿಚಿತ್ರ ಗಣಿತದ ಕಥೆಯನ್ನು ಸೇರಿಸಿದ್ದಾರೆ. ಮೊದಲ ಮುದ್ರಣಕ್ಕೆ ಕಥೆಗಾರ ಬೋಳುವಾರು ಮಹಮ್ಮದ್ ಕುಂಜ್ಞಿ ಯವರು ಮುನ್ನುಡಿ ಬರೆದಿದ್ದರು. ಅದೇ ಮುನ್ನುಡಿಯನ್ನು ಹೊಸ ಆವೃತ್ತಿಯಲ್ಲೂ ಬಳಸಲಾಗಿದೆ. 

ಹೊಸ ಆವೃತ್ತಿಯ ವಿಶೇಷವೆಂದರೆ ಇರದ ಒಂದು ಕಥೆಯಲ್ಲಿ ಅದರ ಇ- ಆವೃತ್ತಿಯೂ ಇದೆ! ಅದೇನೆಂದರೆ, ಕೃತಿಯೊಳಗೆ ಇರುವ ಒಂದು ಸಂಗೀತ ಪ್ರಧಾನ ಕಥೆ : ಅಬ್ದುಲ್ ಕಲಾಮರೊಂದಿಗೆ ಒಂದು ಸಂಜೆ - ಇದರಲ್ಲಿ ಬರುವ ಕೆಲವು ಸಂಗೀತ ಕೃತಿಗಳ ಉಲ್ಲೇಖದ ಪಕ್ಕದಲ್ಲೇ ಕ್ವಿಕ್ ರೆಸ್ಪಾನ್ಸ್ ಕೋಡ್ ಗಳೂ ಇವೆ. ಸ್ಮಾರ್ಟ್ ಫೋನ್ ನಲ್ಲಿರುವ ಕ್ಯೂ ಆರ್ ಕೋಡ್ ರೀಡರ್ ಆಪ್ ಬಳಸಿ ಇವುಗಳನ್ನು ಸ್ಕ್ಯಾನ್ ಮಾಡಿ ಯೂಟ್ಯೂಬ್ ಮೂಲಕ ಸಂಗೀತವನ್ನು ಆಲಿಸಲೂ ಬಹುದು! ಇದೊಂದು ಹೊಸ ಪ್ರಯತ್ನ. ಇದು ಹೊಸ ತಲೆಮಾರಿನ ಓದುಗರಿಗೆ ಹಿಡಿಸಬಹುದೆಂದು ಲೇಖಕರ ಅಭಿಮತ.

ಬೋಳುವಾರ್ ಇವರು ತಮ್ಮ ಮುನ್ನುಡಿ ‘ಕುಕೀಸ್ ನಿಂದ ಬಿಸ್ಕುಟ್ ಗೆ' ಇದರಲ್ಲಿ ಬರೆದಂತೆ ‘ ರೋಹಿತ್ ಚಕ್ರತೀರ್ಥರ ‘ಮನ ಮೆಚ್ಚಿದ ಹುಡುಗಿ’ ಬಗ್ಗೆ ಬರೆಯಲು ಚಾರಿತ್ರಿಕ ಕಾರಣವಿದೆ. ಸಾಮಾಜಿಕ ಜಾಲತಾಣದ ಗೆಳೆಯ ಈ ರೋಹಿತ್ ಚಕ್ರತೀರ್ಥರನ್ನು ಯಾವುದೋ ಕಾರ್ಯಕ್ರಮದಲ್ಲಿ ಅರೆಕ್ಷಣ ಕಂಡದನ್ನು ಮರೆತರೆ ಅವರನ್ನು ಭೇಟಿಯಾದದ್ದಿಲ್ಲ. ತಮ್ಮ ಅನುವಾದಿತ ಕಥಾಸಂಕಲನಕ್ಕೆ ಮುನ್ನುಡಿ ಬರೆದುಕೊಡಬಲ್ಲಿರಾ ಎಂದು ಇವರು ಕನಿಷ್ಟ ದೂರವಾಣಿಯಲ್ಲಿ ವಿನಂತಿಸಿದವರೂ ಅಲ್ಲ. ನೇರಾನೇರ ನನ್ನ ‘ಮೇಲ್' ಗೆ ಕತೆಗಳನ್ನು ಕಳಿಸಿ ಮುನ್ನುಡಿ ಬರೆದುಕೊಡಿ ಎಂದು ಬಿಟ್ಟಿದ್ದರು. ನಾನು ಬರೆಯಲು ಮನಸ್ಸು ಮಾಡಿದ್ದೂ ಇವರ ಇದೇ ಧಾರ್ಷ್ಟ್ಯಕ್ಕೆ.' ಎಂದು ಬರೆದಿದ್ದಾರೆ.

ವಿದೇಶೀ ಕಥೆ ಎಂದು ಅಲ್ಲಿಯ ಊರಿನ ಹೆಸರುಗಳು ಎಲ್ಲಾ ಓದಲು ಕಷ್ಟ ಎಂದೆಲ್ಲಾ ಮೂಗು ಮುರಿಯಬೇಡಿ. ಇಲ್ಲಿ ‘ಲಂಡನ್’ ಬೆಂಗಳೂರು ಆಗುತ್ತೆ. ಇಂಗ್ಲೆಂಡಿನ ಯಾವುದೋ ಒಂದು ರಸ್ತೆ ಎಂ. ಜಿ.ರಸ್ತೆಯಾಗಿ ಕಥೆಯಲ್ಲಿ ಬದಲಾವಣೆ ಆಗುತ್ತೆ. ರೋಹಿತ್ ಅವರ ಅನುವಾದ ಭಾವಾನುವಾದದೊಂದಿಗೆ ನಮಗೆಲ್ಲಾ ಆಪ್ತ ಅನುವಾದವೂ ಆಗಿದೆ ಎಂದರೆ ತಪ್ಪಿಲ್ಲ ಎಂಬ ಭಾವನೆ ವ್ಯಕ್ತ ಪಡಿಸುತ್ತಾರೆ ಬೆನ್ನುಡಿ ಬರೆದ ಹಿರಿಯ ವಿಮರ್ಶಕರಾದ ಅರವಿಂದ ಚೊಕ್ಕಾಡಿವರು. ಕಥೆಯ ಮೂಲ ವಸ್ತುವಿಗೆ ಇವರ ಭಾವಾನುವಾದವು ಯಾವುದೇ ಚ್ಯುತಿ ಕಂಡುಬರುವುದಿಲ್ಲ. ಪರಿಷ್ಕೃತ ಮುದ್ರಣದಲ್ಲಿ ೧೭ ಕಥೆಗಳಿವೆ. ಓ ಹೆನ್ರಿ, ಲಿಯೋ ಟಾಲ್ ಸ್ಟಾಯ್, ಹರುಕಿ ಮುರಕಮಿ, ಆಂಡಿ ವೀಯರ್, ಪೀಟರ್ ಬಿಷೆಲ್, ಹರ್ನಾಂಡೋ ಟೆಲ್ಲೇಜ್ ಹಾಗೂ ಪತ್ತೇದಾರಿ ಕಾದಂಬರಿಯ ಪಿತಾಮಹನಾದ ಆರ್ಥರ್ ಕಾನನ್ ಡಾಯ್ಲ್ ಮುಂತಾದ ಖ್ಯಾತನಾಮರ ಕಥೆಗಳು ಕನ್ನಡೀಕರಣವಾಗಿವೆ. ಎಲ್ಲಾ ಮೂಲ ಕಥೆಗಳ ಲೇಖಕರ ಪರಿಚಯವನ್ನು ಪುಸ್ತಕದ ಕೊನೆಯಲ್ಲಿ ಚುಟುಕಾಗಿ ನೀಡಿರುವುದರಿಂದ ಓದುಗರಿಗೆ ಬಹಳ ಅನುಕೂಲವಾಗಿದೆ. ತಾವು ಓದುತ್ತಿರುವ ಕಥೆ ಯಾವ ದೇಶದ್ದು, ಯಾವ ಭಾಷೆಯದ್ದು, ಮೂಲ ಲೇಖಕ ಯಾರು ಎಂಬೆಲ್ಲಾ ಮಾಹಿತಿಗಳು ದೊರೆಯುತ್ತವೆ. ಕಥೆಯ ಭಾಷೆ ಸರಳವಾಗಿರುವುದರಿಂದ ಮತ್ತು ಆರಿಸಿದ ಕಥೆಗಳು ಆಕರ್ಷಕ ಕಥಾ ವಸ್ತುವನ್ನು ಹೊಂದಿರುವುದರಿಂದ ಸೊಗಸಾಗಿ ಓದಿಸಿಕೊಂಡು ಹೋಗುತ್ತದೆ. ಸುಮಾರು ೧೬೦ ಪುಟಗಳಿರುವ ಈ ಕಥಾಸಂಕಲನದ ಮುಖಪುಟವನ್ನು ಸೋನು ಅವರು ರಚಿಸಿದ್ದಾರೆ.