'ಮಯೂರ’ ಹಾಸ್ಯ - ಭಾಗ ೧೯

'ಮಯೂರ’ ಹಾಸ್ಯ - ಭಾಗ ೧೯

ಆಕಾಶ ಬುಟ್ಟಿ

ದೀಪಾವಳಿ ಹಬ್ಬದ ಹಿಂದಿನ ದಿನ ನನ್ನ ತಮ್ಮ ಪೇಟೆಯಿಂದ ಆಕಾಶ ಬುಟ್ಟಿಯನ್ನು ತಂದು ಮನೆಯ ಮುಂದೆ ಹಾಕಿ ‘ಆಕಾಶ ಬುಟ್ಟಿ ನೋಡಲು ಎಲ್ಲ ಬನ್ನಿ' ಎಂದಾಗ ನಾವೆಲ್ಲ ಹೊರಗೆ ಬಂದು ನೋಡಿ ಚೆನ್ನಾಗಿದೆ ಎಂದೆವು. ಆಗ ತಮ್ಮನ ಮಗಳು ಆವಂತಿ ಜೋರಾಗಿ ಅಳತೊಡಗಿದಳು.

‘ಯಾಕೆ ಪುಟ್ಟಿ ಅಳುತ್ತೀಯಾ? ನೋಡು ಆಕಾಶ ಬುಟ್ಟಿ ಎಷ್ಟು ಚೆನ್ನಾಗಿದೆ?’ ಎಂದಾಗ ಅವಳು ‘ಆಕಾಶ ಬುಟ್ಟಿ ತಂದಿದ್ದೀರಾ, ಆದರೆ ನನ್ನ ಬುಟ್ಟಿ ತಂದಿಲ್ಲಾ’ ಎಂದಾಗ ಎಲ್ಲರಿಗೂ ಅಚ್ಚರಿ. ನಂತರ ಎಲ್ಲರೂ ಜೋರಾಗಿ ನಕ್ಕಾಗ ಅವಳ ಅಳು ಇನ್ನೂ ಜೋರಾಯಿತು. ಅವಳ ಅಣ್ಣನ ಹೆಸರು ಆಕಾಶ. ಎಲ್ಲರೂ ಆಕಾಶ ಬುಟ್ಟಿಯೆಂದಾಗ ಅದು ತನ್ನ ಅಣ್ಣನದೆಂದೂ, ತನಗಾಗಿಯೇ ಒಂದು ಬುಟ್ಟಿ ತರಬೇಕೆಂದು ಅವಳ ವಾದ ಸರಿಯಾಗಿಯೇ ಇತ್ತು. !

-ಶೈಲಾ ರಮೆಶ್, ಧಾರವಾಡ

***

‘ಬೆಂದಿದ್ದೇನೆ'

ಇದು ನನ್ನ ತಂಗಿ ಹೈಸ್ಕೂಲಿನಲ್ಲಿ ಉಪಾಧ್ಯಾಯಿನಿ ಆಗಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆ. ಕನ್ನಡ ಮಾಧ್ಯಮ ಶಾಲೆ ಆಗಿದ್ದರಿಂದ ತರಗತಿಯಲ್ಲಿ ಹಾಜರಾತಿ ಹಾಕಿದಾಗ ಮಕ್ಕಳು ‘ಬಂದಿದ್ದೇವೆ ಮೇಡಂ’ ಎಂದು ಹೇಳುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು. 

ಒಂದು ದಿನ ನನ್ನ ತಂಗಿ ಹಾಜರಾತಿಯನ್ನು ತೆಗೆದುಕೊಳ್ಳುತ್ತಿದ್ದಂತೆ ಆಕೆಯ ಮೆಚ್ಚಿನ ವಿದ್ಯಾರ್ಥಿಯಾಗಿದ್ದ ವರುಣ್ ಎಂಬ ಹುಡುಗನ ಹಾಜರಾತಿ ಕರೆದಾಗ ಅವನು ಬಾಯಿತಪ್ಪಿ ‘ನಾನು ಬೆಂದಿದ್ದೇನೆ ಮೇಡಂ’ ಎಂದು ಹೇಳಿದನಂತೆ. ಇದನ್ನು ಕೇಳಿಸಿಕೊಂಡ ನನ್ನ ತಂಗಿ ‘ನನಗೆ ನರಮಾಂಸ ತಿನ್ನುವ ಅಭ್ಯಾಸ ಇಲ್ಲ' ಎಂದಳಂತೆ. ಇದನ್ನು ಕೇಳಿಸಿಕೊಂಡ ತರಗತಿಯ ಮಕ್ಕಳೆಲ್ಲ ನಗತೊಡಗಿದರಂತೆ.

-ಎಸ್. ವಿಜಯಕುಮಾರಿ, ಬೆಂಗಳೂರು

***

ಡಿಸೈನರ್ ಸ್ಯಾರಿ!...

ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಹಾಭಾರತ'ವನ್ನು ಮನೆಮಂದಿಯೆಲ್ಲಾ ದ್ರೌಪದಿಯ ಮಾನಭಂಗದ ದೃಶ್ಯವಾದ್ದರಿಂದ ಸ್ವಲ್ಪ ಮುಜುಗರದಿಂದಲೇ ನೋಡುತ್ತಿದ್ದೆವು. ಆದರೆ ನಮ್ಮ ಪುಟ್ಟಿಯು ಅಜ್ಜಿಯ ಹತ್ತಿರ -ದುಶ್ಯಾಸನ ಯಾವಾಗ ಬರ್ತಾನಜ್ಜಿ? ಎಂದು ಕೇಳಿದಾಗ ಅಜ್ಜಿಯು -ಏನೇ ಎಲ್ಲರೂ ಕೃಷ್ಣನನ್ನು ಕೇಳಿದರೆ, ನೀನು ದುಶ್ಯಾಸನ ಅಂತಾ ಕೇಳ್ತೀಯಲ್ಲಾ? ಎಂದಾಗ ಪುಟ್ಟಿಯು - ಇಲ್ಲಾ ಅಜ್ಜಿ, ದುಶ್ಯಾಸನ ಸೀರೆ ಎಳೆದ ನಂತರ ತಾನೇ ಶ್ರೀಕೃಷ್ಣ ಡಿಸೈನರ್ ಸ್ಯಾರಿಗಳನ್ನು ತನ್ನ ಕೈಯಿಂದ ಪುಂಖಾನುಪುಂಖವಾಗಿ ಕಳಿಸ್ತಾರೆ. ಅದನ್ನು ನೋಡಕ್ಕೆ ನಂಗಾಸೆ ಎಂದಾಗ ಅಜ್ಜಿಯು ಸುಸ್ತು.!

-ವಿ.ವಿಜಯೇಂದ್ರ ರಾವ್, ತೂತ್ತುಕುಡಿ

***

ತಲೆ ಎಲ್ಲಿದೆ?

ಅಕ್ಕನ ಮಗ ಚಿನ್ನು ಚುರುಕು ಸ್ವಭಾವದವನು. ಅವನು ಆಟ, ಪಾಠದಲ್ಲಿ ಬಹಳ ಮುಂದಿದ್ದರೂ ಪರೀಕ್ಷೆಯ ಫಲಿತಾಂಶ ಬಂದಾಗಲೆಲ್ಲಾ “ನೀನು ಕಷ್ಟಪಟ್ಟು ಓದಿದ್ದರೆ ಇನ್ನೂ ಒಳ್ಳೆಯ ಅಂಕಗಳು ಬರುತ್ತಿದ್ದವು" ಎಂದು ಹೇಳುತ್ತಲೇ ಇರುತ್ತೇವೆ.

ಕಳೆದ ಬೇಸಿಗೆ ರಜೆಯಲ್ಲಿ ನಾವೆಲ್ಲಾ ಅಣ್ಣನ ಮನೆಯಲ್ಲಿ ಸೇರಿದ್ದೆವು. ಚಿನ್ನು ಪಕ್ಕದ ಮನೆಯ ಹುಡುಗನೊಂದಿಗೆ ಆಟವಾಡುತ್ತಿದ್ದ. ಆಗ ಆ ಬಾಲಕನ ತಾಯಿ “ಚಿನ್ನು, ನೀನು ಯಾವ ಕ್ಲಾಸಿಗೆ ಹೋಗ್ತೀಯಾ? ಈ ವರ್ಷ ಯಾವ ರಾಂಕ್  ಬಂದೆ?” ಎಂದು ಕೇಳಿದರು. ಆಗ ಅಲ್ಲಿಯೇ ಕೂತಿದ್ದ ನಮ್ಮ ತಾಯಿ “ಅವನಿಗೆ ಬೇಕಾದಷ್ಟು ತಲೆ ಇದೆ. ಆದರೆ, ಆಟದ ಕಡೆಗೇ ಗಮನ ಜಾಸ್ತಿ" ಎಂದು ತಮ್ಮ ಎಂದಿನ ರಾಗ ತೆಗೆದರು. ಅವರ ಮಾತಿಗೆ ಚಿನ್ನು ಆಟ ನಿಲ್ಲಿಸಿ “ಅಲ್ಲ ಅಜ್ಜಿ, ನನಗೆ ಬೇಕಾದಷ್ಟು ತಲೆ ಎಲ್ಲಿದೆ? ಒಂದೇ ತಾನೇ ಇರೋದು" ಎಂದು ಹುಸಿ ಮುನಿಸಿನಿಂದ ನುಡಿದಾಗ, ಎಲ್ಲರ ಮುಖದಲ್ಲಿ ನಗು ಮೂಡಿತು!

-ಸಿಂಧು ಬಿ.ಎನ್. ಬೆಂಗಳೂರು

***

(ಮೇ ೨೦೧೫ರ ಮಯೂರ ಪತ್ರಿಕೆಯಿಂದ ಸಂಗ್ರಹಿತ)