'ಮಯೂರ' ಹಾಸ್ಯ -ಭಾಗ ೧೬

‘ಎಮ್ಮೆ ಹೊಟ್ಟೆಯಿಂದ ಬಂದ ಹಾಲು'
ನನ್ನ ಮಗಳು ಹಾಗೂ ಐದು ವರ್ಷದ ಮೊಮ್ಮಗಳು ಸುಶ್ರಾವ್ಯ ಇವರನ್ನು ನೋಡುವ ಸಲುವಾಗಿ ನಾನು ತಿಪಟೂರಿಗೆ ಹೋಗುವುದು. ಅಲ್ಲಿ ಬೆಳಿಗ್ಗೆ ಮೊಮ್ಮಗಳ ಜೊತೆ ಡೈರಿಯಿಂದ ಹಾಲಿನ ಮತ್ತು ಮೊಸರಿನ ಪ್ಯಾಕೆಟ್ ತರುವುದು ರೂಢಿ. ಈ ಪ್ಯಾಕೆಟ್ ಹಾಲನ್ನೇ ಅವಳಿಗೆ ಕುಡಿಯಲು ಕೊಡುವುದು ವಾಡಿಕೆಯಾಗಿತ್ತು.
ಒಮ್ಮೆ ಅವಳು ರಜಕ್ಕೆ ಊರಿಗೆ ಬಂದಿದ್ದಾಗ, ಹಾಲು ಕೊಡುವವರ ಮನೆಗೆ ಅವಳನ್ನೂ ಕರೆದುಕೊಂಡು ಹೋದೆ. ಅವರು ಎಮ್ಮೆಯಿಂದ ಹಾಲು ಕರೆಯುತ್ತಿದ್ದರು. ಹಾಲನ್ನು ತಮ್ಮ ಪಾತ್ರೆಯಿಂದ ನಮ್ಮ ಪಾತ್ರೆಗೆ ಸುರಿದಿದ್ದನ್ನು ಗಮನಿಸಿದ ಅವಳು ಕುತೂಹಲದಿಂದ ‘ಯಾಕೆ ತಾತ ನಮಗೆ ಹಾಲನ್ನು ಪ್ಯಾಕೆಟ್ ನಲ್ಲಿ ಕೊಡಲಿಲ್ಲ?’ ಎಂದಳು. ‘ಇಲ್ಲಿ ಪ್ಯಾಕೆಟ್ ಹಾಲು ಸಿಗಲ್ಲ. ಕರೆದ ಹಾಲನ್ನು ಹೀಗೇ ಕೊಡುವುದು' ಎಂದದ್ದಕ್ಕೆ ಸುಮ್ಮನಾದಳು. ಮನೆಯಲ್ಲಿ ಅಜ್ಜಿ, ಹಾಲನ್ನು ಕಾಯಿಸಿ ಕುಡಿಯಲು ಅವಳಿಗೆ ಕೊಡಲು ಹೋದಾಗ ‘ನಾನು ಕುಡಿಯೋಲ್ಲ' ಅಂದಳು. ‘ಯಾಕೆ?’ ಅಂದಿದ್ದಕ್ಕೆ ‘ತಾತ ಪ್ಯಾಕೆಟ್ ಹಾಲು ತರ್ಲಿಲ್ಲ. ನಾನೇ ನೋಡಿದ್ದೀನಿ. ಹಾಲು ಎಮ್ಮೆ ಹೊಟ್ಟೆ ಒಳಗ್ನಿಂದ ಬಂದಿದೆ ನನಗೆ ಬ್ಯಾಡ' ಎಂದು ಹಠ ಮಾಡಿ, ಹಳ್ಳಿಯಲ್ಲಿರುವವರೆಗೂ ಹಾಲನ್ನು ಕುಡಿಯಲೇ ಇಲ್ಲ!
-ಎನ್. ಕರಿಯಣ್ಣ, ಹುಲಕುಂಟೆ
***
ಇಂಟರೆಸ್ಟಿಲ್ಲ !
‘ನಮಗಾದರೆ ಎಷ್ಟೊಂದು ಇಂಟರೆಸ್ಟು. ಎಲ್. ಐ. ಸಿ.ನಲ್ಲಿರುವ ಅವರಿಗೆ ಇಂಟರೆಸ್ಟೇ ಇಲ್ಲ. ಆದರೂ ಮನೆ ಕಟ್ಟಿಲ್ಲ...'
‘ಇಂಟರೆಸ್ಟಿಲ್ಲ ಅಂತಿಯಲ್ಲಮ್ಮಾ... ಮನೆ ಕಟ್ಟಲು ಇಂಟರೆಸ್ಟ್ ಇರಬೇಕು ತಾನೇ? ಹತ್ತು ವರ್ಷದ ಮಗ ಅಕ್ಷಯ ಕುಮಾರನ ಮಾತಿಗೆ ತಬ್ಬಿಬ್ಬಾದ ಅಮ್ಮ ಇಂಟರೆಸ್ಟ್ ಅಂದರೆ ‘ಬಡ್ಡಿ' ಕಣಪ್ಪ. ಯಾವುದಾದರೂ ಕೆಲಸ ಮಾಡುವಾಗ ಇರಬೇಕಾದ ಇಂಟರೆಸ್ಟಲ್ಲ (ಆಸಕ್ತಿ)’ಎಂದರು.
-ಎಸ್ ಎನ್ ಕೆ, ಕಡೂರು
***
ಅನಾಥ ನಾರಾಯಣ
ಪಾನ್ ಕಾರ್ಡ್ ಮಾಡಿಸುವುದಕ್ಕಾಗಿ ಸ್ನೇಹಿತರೊಬ್ಬರ ಕಚೇರಿಗೆ ಹೋಗಿದ್ದೆ. ಸಂಬಂಧಿಸಿದ ಅರ್ಜಿ ಫಾರಂ ಭರ್ತಿ ಮಾಡುತ್ತಿದ್ದಾಗ ಸುಮಾರು ೨೨-೨೪ರ ವಯಸ್ಸಿನ ಯುವತಿಯೊಬ್ಬಳು ಕಚೇರಿಗೆ ಬಂದು ‘ಏನ್ಸಾರ್ ನನ್ನನ್ನು ಅನಾಥಳನ್ನಾಗಿ ಮಾಡಿ ಬಿಟ್ರಲ್ಲ' ಎಂದು ವ್ಯಥೆಯಿಂದ ಹೇಳತೊಡಗಿದಳು. ವಿಷಯ ಏನೆಂದು ಅರ್ಥವಾಗದೆ ನಾನು ಹಾಗೂ ನನ್ನ ಸ್ನೇಹಿತ ಆ ಹುಡುಗಿಯನ್ನೇ ನೋಡಿದೆವು. ‘ನೋಡಮ್ಮ ಮೊದಲು ಕುಳಿತುಕೋ. ನೀನು ನನ್ನ ಮಗಳ ಹಾಗಿದ್ದೀಯಾ... ನೀನ್ಯಾಕೆ ಅನಾಥವಾಗುತ್ತೀಯಾ? ವಿಷಯ ಏನು ಎಂದು ಹೇಳು' ಎಂದು ಸ್ನೇಹಿತ ಸಮಾಧಾನ ಮಾಡಲು ಯತ್ನಿಸಿದ. ಅಷ್ಟರಲ್ಲಿ ಹುಡುಗಿ ತನ್ನ ಕೈಯಲ್ಲಿದ್ದ ಪಾನ್ ಕಾರ್ಡನ್ನು ತೋರಿಸಿದಳು. ಕಾರ್ಡನ್ನು ನೋಡಿದ ಸ್ನೇಹಿತ ಎಲ್ಲಾ ಸರಿಯಾಗಿದೆಯಲ್ಲಾ ಎಂದು ಹೇಳಿದರು. ‘ಸರಿಯಾಗಿ ನೋಡಿ ಸರ್' ಎಂದು ಹುಡುಗಿ ಹೇಳಿದಾಗ ಮತ್ತೊಮ್ಮೆ ಸ್ನೇಹಿತ ಕಾರ್ಡನ್ನು ಪರಿಶೀಲಿಸಿದ. ಆಗ ಹುಡುಗಿಯ ದುಃಖಕ್ಕೆ ಕಾರಣ ತಿಳಿಯಿತು. ಆಗಿದ್ಧಿಷ್ಟೆ. ಹುಡುಗಿಯ ತಂದೆಯ ಹೆಸರು ಅನಂತ ನಾರಾಯಣಗೆ ಬದಲಾಗಿ ‘ಅನಾಥ ನಾರಾಯಣ' ಎಂದು ತಪ್ಪಾಗಿ ಕಾರ್ಡಿನಲ್ಲಿ ಮುದ್ರಿಸಲಾಗಿತ್ತು.
-ಸಿಹಿಮೊಗೆ ರಮೇಶ್, ಮೈಸೂರು
***
ಅತೀ ಬುದ್ಧಿವಂತ
ಮನೆಗೆ ಬಂದ ಅತಿಥಿಗಳು ೩ನೇ ತರಗತಿ ಓದುತ್ತಿದ್ದ ನನ್ನ ಮೊಮ್ಮಗನನ್ನು ವಿಚಾರಿಸುತ್ತಿದ್ದರು.
‘ಪುಟ್ಟ, ನಿಮ್ಮ ಕ್ಲಾಸಿನಲ್ಲಿ ಎಲ್ಲರಿಗಿಂತ ಅತೀ ಬುದ್ಧಿವಂತ ಯಾರು?’
‘ತಿಮ್ಮ ಅಂತ ಅಂಕಲ್, ಅವನು ಕಳೆದ ವಾರ ಮಾಸ್ತರರ ಜೇಬಿನಲ್ಲಿ ಸತ್ತ ಇಲಿ ಇಟ್ಟಿದ್ದ. ಕುರ್ಚಿಗೆ ಮೊಳೆ ಸಿಕ್ಕಿಸಿಬಿಟ್ಟಿದ್ದ. ಮೊನ್ನೆ ಅವರ ಬೈಕ್ ನ ಟೈರ್ ಪಂಕ್ಚರ್ ಮಾಡಿದ್ದ. ಒಂದು ಸಲಾನೂ ಸಿಕ್ಕಿಬಿದ್ದಿಲ್ಲ ಅಂಕಲ್ಲು ಭಾರೀ ಬುದ್ಧಿವಂತ ಅವನು!’
ಅತಿಥಿಗಳು ತಲೆ ಕೆರೆದುಕೊಂಡರು.
-ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ
***
(ನವೆಂಬರ್ ೨೦೧೪ರ ‘ಮಯೂರ' ಪತ್ರಿಕೆಯಿಂದ ಸಂಗ್ರಹಿತ)