'ಮಯೂರ' ಹಾಸ್ಯ - ಭಾಗ ೭೮

'ಮಯೂರ' ಹಾಸ್ಯ - ಭಾಗ ೭೮

ಮೈತ್ರಿಯಿಂದ ನಷ್ಟ

ಸರಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ತರಗತಿಗಳನ್ನು ತೆಗೆದುಕೊಳ್ಳುವಾಗ ನಡೆದ ಘಟನೆ. ಅದೊಂದು ದಿನ ‘ಪಕ್ಷ ಪದ್ಧತಿ ಸ್ವರೂಪದಲ್ಲಿ ಮೈತ್ರಿ ಸರಕಾರ' ದ ಕುರಿತು ಪಾಠ ಮಾಡುವಾಗ, ‘ಮೈತ್ರಿಯಿಂದ ನಮ್ಮ ರಾಷ್ಟ್ರಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು’ ಎಂದು ಹೇಳುತ್ತಿದ್ದೆ. ಮೊದಲ ಬೆಂಚಿನಲ್ಲಿ ಕೂತಿದ್ದ ಮೈತ್ರಿ ಹೆಸರಿನ ವಿದ್ಯಾರ್ಥಿನಿ ತಕ್ಷಣ ಎದ್ದು ನಿಂತು ‘ಮೇಡಮ್, ಅದು ಹೇಗೆ? ನನಗೂ ದೇಶದ ಸಂಕಷ್ಟಕ್ಕೂ ಏನು ಸಂಬಂಧ?’ ಎಂದು ಹುಬ್ಬು ಗಂಟಿಕ್ಕಿಕೊಂಡು ಪ್ರಶ್ನಿಸಿದಳು. ಅವಳ ಪ್ರಶ್ನೆಗೆ ಇಡೀ ತರಗತಿಯ ವಿದ್ಯಾರ್ಥಿಗಳು ಗಹಗಹಿಸಿ ನಕ್ಕರು.

-ದೀಪಶ್ರೀ ಎಸ್ . ಕೂಡ್ಲಿಗಿ

***

ಬಾಸುಂಡೆ

ನಮ್ಮ ಮನೆಯ ಮೇಲಿದ್ದ ಮಹಡಿ ಮನೆಗೆ ಧಾರವಾಡದ ಕುಟುಂಬವೊಂದು ಬಾಡಿಗೆಗೆ ಬಂದಿತ್ತು. ಅಂದು ಬೆಳಿಗ್ಗೆ ನನ್ನ ಮಗ ಅವರ ಮನೆಗೆ ಹೋದವನು ಒಂದು ಗಂಟೆಯ ನಂತರ ಹಿಂತಿರುಗಿ ಬಂದು ‘ಅಪ್ಪಾ, ಮಹಡಿ ಮನೆಯವರು ನನಗೆ ಬಾಸುಂಡೆ ಕೊಟ್ಟರು' ಎಂದ. ನಾನು ಸಿಟ್ಟಿನಿಂದ ‘ಏ, ಎಲ್ಲಾ ಬಿಟ್ಟು ನಿನಗ್ಯಾಕೋ ಬಾಸುಂಡೆ ಕೊಟ್ಟರು? ನೀನೇನು ತಪ್ಪು ಮಾಡಿದೆ?’ ಎಂದು ಕೇಳಿದೆ. ಅವನು ‘ಅಯ್ಯೋ, ಸಿಹಿ ತಿನ್ನೋಕೆ ತಪ್ಪು ಮಾಡಿರಬೇಕಾ? ನಾನೇನು ತಪ್ಪು ಮಾಡಿಲ್ಲ. ಅವರು ಪ್ರೀತಿಯಿಂದ ಕೊಟ್ಟರು, ತಿಂದೆ' ಎಂದ. ‘ಅದು ಬಾಸುಂಡೆ ಅಲ್ಲವೋ ಬಾಸುಂದಿ' ಎಂದು ತಿದ್ದಿದೆ.

-ಎಂ ಕೆ ಮಂಜುನಾಥ್

***

ನಾಯಿಪಾಡು

ತುಂಬಾ ದಿನಗಳ ನಂತರ ಸ್ನೇಹಿತೆಯ ಮನೆಗೆ ಹೋಗಿದ್ದೆ. ಬಾಗಿಲಿನಲ್ಲಿಯೇ ನಾಯಿಯನ್ನು ಕಟ್ಟಿದ್ದರು. ನಾನು ತುಸು ಹೆದರಿಕೆಯಿಂದ ಅಲ್ಲಿಯೇ ನಿಂತು ಸ್ನೇಹಿತೆಗೆ ಫೋನ್ ಮಾಡಿದೆ. ಅವಳು ನನ್ನನ್ನು ಕರೆತರಲು ಮಗನನ್ನು ಕಳುಹಿಸುವುದಾಗಿ ಹೇಳಿದಳು. ಹಿಂದೆಯೇ ಅವಳ ಮಗ ಹೊರಬಂದು, ‘ಧೈರ್ಯವಾಗಿ ಒಳಗೆ ಬನ್ನಿ ಆಂಟಿ' ಎಂದು ಕರೆದ. ‘ನಾಯಿ ಕಚ್ಚೋದಿಲ್ಲವೇನೋ?’ ಎಂದು ಕೇಳಿದೆ. ‘ಇದು ನಮಗೂ ಹೊಸ ನಾಯಿ. ಕಚ್ಚುತ್ತೋ ಇಲ್ಲವೋ ಗೊತ್ತಿಲ್ಲ. ಅದನ್ನೇ ಈಗ ಪರೀಕ್ಷೆ ಮಾಡಬೇಕಾಗಿದೆ. ಅದಕ್ಕೇ ಧೈರ್ಯವಾಗಿ ಬನ್ನಿ ಅಂತ ಹೇಳಿದ್ದು.’ ಅಂದ. ಅವನ ಮಾತು ಕೇಳಿ ಅಲ್ಲಿಯೇ ನಿಂತು ಬಿಟ್ಟೆ.

-ಶಿವಲೀಲಾ ಸೊಪ್ಪಿಮಠ

***

ಪಾನ್ ವಿವರ

ಒಂದು ದಿನ ಬೆಳಿಗ್ಗೆ ನಮ್ಮನೆಯ ಕೆಲಸದವಳ ಗಂಡ ಮನೆಗೆ ಬಂದ. ಬ್ಯಾಂಕಿನಿಂದ ಅವನಿಗೆ ಬಂದ ಪತ್ರವನ್ನು ತಂದು ಕೊಟ್ಟು ‘ಬ್ಯಾಂಕಿನಿಂದ ಇದೇನೋ ಪತ್ರ ಬಂದೈತೆ, ಓದಿ ಹೇಳಿ' ಎಂದ. ಅವನು ಕೊಟ್ಟ ಪತ್ರ ಓದಿ ‘ನಿನ್ನ ಪಾನ್ ವಿವರ ಕೇಳಿದ್ದಾರೆ' ಎಂದು ಹೇಳಿದೆ. ‘ಅಯ್ಯೋ ಅಕ್ಕಾ, ಬ್ಯಾಂಕಿನವರಿಗೆ ನನ್ನ ಬಗ್ಗೆ ಎಷ್ಟು ಕಾಳಜಿ ಅಲ್ವಾ? ಇಕಾ.. ಬರ್ಕಳಿ... ಎರಡು ಕಲ್ಕತಾ ಎಲೆ, ಮೂರು ತುಂಡು ಹಾಲಡಿಕೆ, ಒಂಚೂರು ಯಾಲಕ್ಕಿ, ಲವಂಗ ಮತ್ತೆ ಸ್ವಲ್ಪ ಜಾಸ್ತಿ ಗುಲ್ಕಂ ಜೊತೆಗೆ ಸುಣ್ಣ ಸ್ವಲ್ಪ ಕಡಿಮೆ ಹಾಕಿದರೆ ಆಯಿತು... ಮಸ್ತ್ ಪಾನ್ ರೆಡಿ' ಎಂದು ಒಂದೇ ಉಸಿರಿಗೆ ಹೇಳಿದಾಗ ನಾನು ಅವಕ್ಕಾದೆ. ಪಾನ್ ಕಾರ್ಡ್ ಬಗ್ಗೆ ಅವನಿಗೆ ತಿಳಿಸಿ ಹೇಳುವಷ್ಟೊತ್ತಿಗೆ ಸುಸ್ತಾಗಿ ಹೋದೆ.

-ಜಯಮಾಲಾ ಪೈ

(‘ಮಯೂರ' ನವೆಂಬರ್ ೨೦೨೨ರ ಸಂಚಿಕೆಯಿಂದ ಆಯ್ದದ್ದು)