'ಮಯೂರ' ಹಾಸ್ಯ - ಭಾಗ ೮೬

'ಮಯೂರ' ಹಾಸ್ಯ - ಭಾಗ ೮೬

ಮೂಳೆ ಮುರಿದಿದೆ…

ತಿಪ್ಪೇಸಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಅವನಿಗೆ ಗುದ್ದಿತು. ಕುಸಿದು ಬಿದ್ದ ತಿಪ್ಪೇಸಿಯನ್ನು ಅಲ್ಲಿನ ಜನರೇ ಆಸ್ಪತ್ರೆಗೆ ಸೇರಿಸಿದರು. ವೈದ್ಯರು ಅವನ ಕಾಲಿನ ಎಕ್ಸ್ ರೇ ತೆಗೆಸಿದರು. ತಿಪ್ಪೇಸಿ ನೋವಿನಿಂದ ಒದ್ದಾಡುತ್ತಿದ್ದ. ಎಕ್ಸ್ ರೇ ರಿಪೋರ್ಟ್ ನೋಡಿದ ವೈದ್ಯರು ‘ಎಕ್ಸ್ ರೇ’ ನಲ್ಲಿ ನಿಮ್ಮ ಕಾಲಿನ ಮೂಳೆ ಮುರಿದಿರುವುದು ಗೊತ್ತಾಗ್ತಿದೆ' ಎಂದರು. ಅದಕ್ಕೆ ತಿಪ್ಪೇಸಿ ‘ ಸದ್ಯ ದೇವರು ದೊಡ್ದವನು. ಕಾಲಿನ ಮೂಳೆ ಮುರಿದಿರುವುದು ಎಕ್ಸ್ ರೇಯಲ್ಲಿ ತಾನೆ... ನನ್ನ ಕಾಲಿನಲ್ಲಿ ಅಲ್ಲವಲ್ಲ. ಚಿಂತೆಯಿಲ್ಲ ಬಿಡಿ.’ ಎಂದ.

-ಎಂ ಕೆ ಮಂಜುನಾಥ್

***

ಸಂಸಾರಿ

ರಮೇಶ ಪ್ರತಿದಿನ ದೇವಸ್ಥಾನಕ್ಕೆ ಹೋಗಿ, ಕೈಮುಗಿದು, ಆನಂತರ ಆಫೀಸಿಗೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದ. ಅಂದು ದೇವಸ್ಥಾನಕ್ಕೆ ತೆರಳಿ ಹೊರಗೆ ಬರುವಾಗ ಮೆಟ್ಟಿಲ ಬಳಿ ಕುಳಿತಿದ್ದ ಭಿಕ್ಷುಕನಿಗೆ ಎರಡು ರೂಪಾಯಿ ಭಿಕ್ಷೆ ಹಾಕಿದ. ಅದರಿಂದ ಸಿಟ್ಟಿಗೆದ್ದ ಭಿಕ್ಷುಕ, ‘ಮೊದಲೆಲ್ಲಾ ನೀವು ನನಗೆ ಹತ್ತತ್ತು ರೂಪಾಯಿ ಹಾಕ್ತಿದ್ರಿ. ಈಗೀಗ ಕಡಿಮೆ ಹಾಕ್ತಿದ್ದೀರಿ ಯಾಕೆ?’ ಎಂದು ಪ್ರಶ್ನಿಸಿದ. ರಮೇಶ ‘ಆಗ ನಾನು ಒಬ್ಬಂಟಿಯಾಗಿದ್ದೆ. ಈಗ ಮದುವೆಯಾಗಿದ್ದೇನೆ. ನನ್ನ ಸಂಸಾರವನ್ನೂ ಸಾಕಬೇಕಲ್ವೇ?’ ಎಂದುತ್ತರಿಸಿದ. ಅದಕ್ಕೆ ಭಿಕ್ಷುಕ ‘ನಾಚಿಕೆಯಾಗೋದಿಲ್ವಾ ನಿಮಗೆ? ನನ್ನ ದುಡ್ಡಿನಲ್ಲಿ ನಿಮ್ಮ ಸಂಸಾರ ಸಾಗಬೇಕಾ?’ ಎಂದು ರೇಗಿದ.

-ಪ ನಾ ಹಳ್ಳಿ ಹರೀಶ್ ಕುಮಾರ್

***

ಉಪಾಯ

ವಾರ್ಡನ್ ನಾಣಿಯ ತಾಯಿಯನ್ನು ಕರೆದು ‘ನೋಡಿಯಮ್ಮಾ, ನಿಮ್ಮ ಮಗ ಕ್ಲಾಸು ತಪ್ಪಿಸಿ ಹುಡುಗಿಯರ ಹಿಂದೆ ಓಡಾಡ್ತಾ ಇದ್ದಾನೆ, ಓದಿನ ಕಡೆ ಗಮನ ಕಡಿಮೆ ಆಗ್ತಿದೆ' ಎಂದು ಹೇಳಿ. ಮತ್ತೆ ‘ಅಮ್ಮಾ ನೀವೇನೂ ಹೆದರಬೇಡಿ, ಅವನನ್ನು ಸರಿ ದಾರಿಗೆ ತರೋದಕ್ಕೆ ನನ್ನ ಬಳಿ ಒಂದೆರಡು ಉಪಾಯಗಳಿವೆ.’ ಎಂದ. ಇದನ್ನು ಕೇಳಿದ ನಾಣಿಯ ತಾಯಿ, ‘ಹೌದಾ? ಆ ಉಪಾಯಗಳೇನು ಈಗಲೇ ಹೇಳಿ. ಮೊದಲು ಅವರಪ್ಪನ ಮೇಲೆ ಪ್ರಯೋಗ ಮಾಡಬೇಕು.’ ಎಂದಳು.

-ಶಂಕರೇಗೌಡ ತುಂಬಕೆರೆ

***

ಅಂತರ

ಬಸ್ಸಿನಲ್ಲಿ ಓರ್ವ ಮಹಿಳೆ ತನ್ನ ಪಕ್ಕ ಮೂರು ಮಕ್ಕಳನ್ನು ಕೂರಿಸಿಕೊಂಡು ಕುಳಿತಿದ್ದಳು. ಕಂಡಕ್ಟರ್ ಟಿಕೆಟ್ ಕೊಡುತ್ತ ಬಂದ. ‘ಅಮ್ಮಾ, ಈ ಮೂರು ಮಕ್ಕಳ ಟಿಕೆಟ್ ತಗೊರಿ' ಎಂದ. ಮಹಿಳೆ ‘ಅಯ್ಯ, ಮೂರೂ ಮಕ್ಕಳು ಸಣ್ಣ ಅದಾವು. ಒಂದಕ್ಕೆ ಎರಡು ವರ್ಷ, ಇನ್ನೊಂದಕ್ಕೆ ಎರಡೂವರೆ, ಮತ್ತೊಂದು ಮೂರು.. ಅಷ್ಟೆ.’ ಎಂದಳು. ಆಗ ಕಂಡಕ್ಟರ್ ಮಹಾಶಯ ‘ಅಯ್ಯೋ, ಅದು ಹೇಗೆ?’ ಐದು ತಿಂಗಳಿಗೊಬ್ಬರು ಹುಟ್ಟಿದರಾ?’ ಎಂದ. ಆ ಮಹಿಳೆ ಒಂದು ನಂದು. ಒಂದು ನನ್ನ ತಮ್ಮನ ಮಗ, ಇನ್ನೊಂದು ನನ್ನ ತಂಗಿ ಮಗಳು..' ಎಂದಳು.

-ಅರವಿಂದ ಜಿ.ಜೋಷಿ

***

(‘ಮಯೂರ' ಫೆಬ್ರವರಿ ೨೦೨೩ರ ಸಂಚಿಕೆಯಿಂದ ಆಯ್ದದ್ದು)