ಮಯೂರ' ಹಾಸ್ಯ - ಭಾಗ ೯೩
ಮೂತ್ರೀ ಮನೆ
ಮುಸ್ಸಂಜೆ ಸಮಯ. ಅಜ್ಜ, ಅಜ್ಜಿ ತಮ್ಮ ಎರಡು ವರ್ಷದ ಮೊಮ್ಮಗನೊಂದಿಗೆ ಮನೆಯ ಜಗುಲಿ ಮೇಲೆ ಕುಳಿತಿದ್ದರು. ಆಗ ಪಕ್ಕದ ಮನೆಯಲ್ಲಿದ್ದ ಮತ್ತೊಂದು ಅಜ್ಜಿ, ಈ ಅಜ್ಜಿಯನ್ನು ಕರೆದರು. ಮೊಮ್ಮಗನಿಗೆ ‘ಪುಟ್ಟಾ, ಇಲ್ಲೇ ಅಜ್ಜನ ಜೊತೆ ಆಡ್ತಿರು. ಐದು ನಿಮಿಷದಲ್ಲಿ ಬರ್ತೇನೆ.’ ಎಂದು ಹೇಳಿ ಅಜ್ಜಿ ಎದ್ದು ಹೋದವರು, ಐದಾರು ನಿಮಿಷದೊಳಗೆ ವಾಪಾಸು ಆದರು. ಆಗ ಜಗುಲಿ ಮೇಲೆ ಮೊಮ್ಮಗ ಒಬ್ಬನೇ ಇದ್ದ. ಅಜ್ಜಾ ಎಲ್ಲೆಂದು ಕೇಳಿದಾಗ ಆತ, ‘ಮೂತ್ರೀ ಮನೆಗೆ' ಎಂದು ಹೇಳಿದ. ತುಂಬಾ ಹೊತ್ತಾದರೂ ಅಜ್ಜ ಬರಲಿಲ್ಲ. ಅಜ್ಜಿ, ಮನೆ ಒಳಗಿನ ಮೂತ್ರೀಮನೆ (ಟಾಯ್ಲೆಟ್) ಬಳಿ ಬಂದು ಎರಡು ಮೂರು ಬಾರಿ ಕೂಗಿದರೂ ಒಳಗಿನಿಂದ ಉತ್ತರ ಬರಲಿಲ್ಲ. ಅಜ್ಜಿ ಪೆಚ್ಚಾಗಿ ಮನೆಯ ಬಾಕಿ ಕೋಣೆಯತ್ತ ನೋಡಲು ಮುಂದಾದಾಗ ಹೊರಗಡೆ ಗೇಟು ತೆಗೆದುಕೊಂಡು ಬರುತ್ತಿದ್ದ ಅಜ್ಜನನ್ನು ಕಂಡು ‘ಎಲ್ಲಿ ಹೋಗಿದ್ರೀ?’ ಎಂದು ಕೇಳಿದರು. ಅಜ್ಜ, ‘ಮೂರ್ತಿ ಮನೆಗೆ ಹೋಗಿದ್ದೆ' ಅಂದರು.
-ಅರವಿಂದ ಜಿ.ಜೋಷಿ
***
ಇನ್ನು ಮುಂದೆ ಮಾಡೋದಿಲ್ಲ
ನನ್ನಿಂದ ಏನಾದರೂ ತಪ್ಪು ನಡೆದರೆ, ‘ತಪ್ಪಾಯ್ತು, ಕ್ಷಮಿಸಿ ಮುಂದಿನ ಬಾರಿ ಇನ್ನೂ ಚೆನ್ನಾಗಿ ಮಾಡ್ತೀನಿ.’ ಎಂದು ಹೇಳಿ ಬೈಗುಳಗಳಿಂದ ತಪ್ಪಿಸಿಕೊಂಡು ಬಿಡುತ್ತಿದ್ದೆ. ಒಂದು ದಿನ ಆಸ್ಪತ್ರೆಯಲ್ಲಿದ್ದ ನನ್ನ ಅಜ್ಜ ತೀರಿಕೊಂಡಾಗ ಅಪ್ಪ ಎಲ್ಲವನ್ನೂ ತಿಳಿಸಿ, ಕೆಲವು ಸೂಚನೆಗಳನ್ನು ಕೊಟ್ಟು ಚಾಪೆ ಹಾಸಿ ಇಡುವಂತೆ ತಿಳಿಸಿದರು. ನಾನು ಚಾಪೆ ಹಾಸಿ, ಎಂದಿನಂತೆ ಅದರ ಮೇಲೆ ತಲೆದಿಂಬನ್ನೂ ಇಟ್ಟು ತಯಾರಿ ಮಾಡಿದ್ದೆ. ಮನೆಗೆ ಬಂದ ಮೇಲೆ ಅದನ್ನು ನೋಡಿದ ಅಪ್ಪ ಕೋಪಗೊಂಡಾಗ ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ‘ಸಾರಿ, ಮುಂದಿನ ಸಲ ಹೀಗೆ ಮಾಡಲ್ಲ.. ಇನ್ನೊಮ್ಮೆ ತೀರಿಕೊಂಡಾಗ ದಿಂಬು ಇಡಲ್ಲ..' ಎಂದೆ. ಅಪ್ಪ ಉರಿದ ಕಣ್ಣಿನಿಂದ ನೋಡಿದಾಗಲೇ ನಾನು ಹಾಗೆಲ್ಲಾ ಹೇಳಬಾರದಿತ್ತು ಅನಿಸಿದ್ದು.’
-ವೇದಾ ವಾತ್ಸಲ್ಯ, ಹುಬ್ಬಳ್ಳಿ
***
ಗೆಟ್ ರೆಡಿ
ಶಾಲೆಯಲ್ಲಿ ನಾಟಕದ ತಾಲೀಮು ನಡೆದಿತ್ತು. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಬ್ರಿಟೀಷ್ ಅಧಿಕಾರಿ ಥ್ಯಾಕರೆಯ ಸಂಭಾಷಣೆಯನ್ನು ಇಬ್ಬರು ಮಕ್ಕಳು ನಡೆಸುತ್ತಿದ್ದರು. ಸಂಭಾಷಣೆಯ ಕೊನೆಗೆ ಥ್ಯಾಕರೆಯು ‘ಚೆನ್ನಮ್ಮ... ನಾವು ಯುದ್ಧ ಮಾಡಲು ಬರುತ್ತಿದ್ದೇವೆ. ಗೆಟ್ ರೆಡಿ ! ಗೆಟ್ ರೆಡಿ!’ ಎಂದು ಹೇಳಬೇಕಿತ್ತು. ತರಭೇತಿದಾರರು ಮಕ್ಕಳನ್ನು ಕರೆದು ‘ಈ ಸಂಭಾಷಣೆಯನ್ನು ಹೇಳಿ ನೋಡೋಣ' ಅಂದಾಗ ಥ್ಯಾಕರೆಯ ಪಾತ್ರದಾರಿ ಕೊನೆಯ ಮಾತನ್ನು ‘ಚೆನ್ನಮ್ಮ ... ನಾವು ಯುದ್ಧ ಮಾಡಲು ಬರುತ್ತಿದ್ದೇವೆ. ಗೇಟ್ ತೆಗಿ ! ಗೇಟ್ ತೆಗಿ !’ ಎಂದಾಗ ನಗೆಯ ಅಲೆ ಉಕ್ಕಿತು.
-ಸಂತೆಬೆನ್ನೂರು ಮಂಜಪ್ಪ ಭದ್ರಾವತಿ
***
ಪ್ಯಾಂಟ್ ಗೆ ಹೆಚ್ಚು ರೇಟು
ನಮ್ಮ ಅತ್ತಿಗೆ ಧಾರವಾಡಕ್ಕೆ ಬಂದಾಗಲೆಲ್ಲಾ ಇಲ್ಲಿನ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಹೋಲ್ ಸೇಲ್ ದರದಲ್ಲಿ ತರಕಾರಿ ಕೊಂಡು ಕಾರಿನಲ್ಲಿ ತುಂಬಿಸಿಕೊಂಡು ಬೆಂಗಳೂರಿಗೆ ಹೋಗುತ್ತಾರೆ. ಹೀಗೆ, ಆ ದಿನ ತರಕಾರಿ ತರಲು ನಾವಿಬ್ಬರೂ ಹೋಗಿದ್ದೆವು.
ತರಕಾರಿ ಬೆಲೆ ನಾನು ಕೇಳಿದರೆ ಕೇಜಿಗೆ ರೂ.೩೦, ೩೫ ಹೇಳುವವರು, ಅತ್ತಿಗೆ ಕೇಳಿದರೆ ರೂ. ೫೫, ರೂ.೬೦ ಹೇಳುತ್ತಿದ್ದರು. ಒಂದು ಕಡೆ ಹಾಗೇ ಆಯಿತು. ನಾನು ಟೊಮೆಟೋ ಕೇಳಿದಾಗ ಕೆಜಿಗೆ ರೂ ೩೫ ಅಂದನವನು. ಅತ್ತಿಗೆ ಕೇಳುದರೆ ರೂ ೫೦ ಅಂದ. ‘ಯಾಕಪ್ಪ? ಅವರು ಕೇಳಿದರೆ ರೂ ೩೫ ಅಂದೆ, ನಾನು ಕೇಳಿದಾಗ ರೂ ೫೦ ಅಂತೀಯಾ?’ ಎಂದು ಕೇಳಿಯೇ ಬಿಟ್ಟರು. ‘ಅದು ಹಂಗೇ ಮೇಡಂ ಅವರೆ.’ ಅಂದ. ‘ಅದೇ ಯಾಕೆ ಹಾಗೆ?’ ಎಂದರು. ‘ನಾನೊಬ್ಬನೇ ಅಲ್ಲ, ಇಲ್ಲಿ ಹೆಣ್ಮಕ್ಕಳು ಪ್ಯಾಂಟ್ ಧರಿಸಿ ಬಂದರೆ ರೇಟು ಜಾಸ್ತಿ' ಅಂದ. ‘ಓ, ಹಾಗಾದರೆ ಸೀರೆಗೆ ಒಂದು ರೇಟು, ಪ್ಯಾಂಟ್ ಗೆ ಒಂದು ರೇಟಾ?’ ಕೇಳಿದರು. ‘ಇಲ್ಲ ಮೇಡಂರವರೆ, ಪ್ಯಾಂಟ್ ಗೆ ಮಾತ್ರ ರೇಟು ಜಾಸ್ತಿ' ಅಂದ ಗಂಭೀರವಾಗಿ!
-ಜ್ಯೋತಿ ಪರಬತ್
***
(ಮಯೂರ ಜೂನ್ ೨೦೨೩ರ ಸಂಚಿಕೆಯಿಂದ ಆಯ್ದದ್ದು)