ಮರಗಳನ್ನೂ ನಾವು ಮಕ್ಕಳಂತೆ ಪೋಷಿಸೋಣ
ಕಳೆದ ಕೆಲವು ದಶಕಗಳಿಂದ ಈ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ‘ಕಾಡು ಎನ್ನುವುದು ಜೀವ ವೈವಿಧ್ಯತೆಯ ಬಹುದೊಡ್ದ ಆಗರ. ಕಾಡು ಸಮೃದ್ಧವಾಗಿದ್ದರೆ ಆ ವಲಯದಲ್ಲಿ ಮಳೆ ಪ್ರಮಾಣಕ್ಕೆ ಕೊರತೆಯಾಗದು. ಭೂ ಸವಕಳಿಯ ಸಮಸ್ಯೆ ಇರದು. ಎಲ್ಲಕ್ಕಿಂತ ಹೆಚ್ಚಾಗಿ ಅಂತರ್ಜಲದ ಅಭಾವ ಅಷ್ಟು ಸುಲಭವಾಗಿ ತಲೆದೋರದು' ಅರಣ್ಯ ಕುರಿತಾಗಿ ಇಷ್ಟೆಲ್ಲ ತಿಳುವಳಿಕೆಗಳು ಮನುಷ್ಯನನ್ನು ಪ್ರಭಾವಿಸಿದ್ದೇ ಆಗಿದ್ದಲ್ಲಿ ಇಂದು ನಾವು ಎದುರಿಸುತ್ತಿರುವ ಮಳೆ ಕೊರತೆ, ಹವಾಮಾನ ವೈಪರೀತ್ಯ, ಬರಿದಾದ ಅಂತರ್ಜಲ -ಮುಂತಾದ ಸಮಸ್ಯೆಗಳು ನಮ್ಮ ಕಾಲ್ಬುಡಕ್ಕೆ ಬಾಧಿಸುತ್ತಲೇ ಇರುತ್ತಿರಲಿಲ್ಲವೇನೋ?
ಬಹುತೇಕ ಸಂದರ್ಭಗಳಲ್ಲಿ ಸರಕಾರ ರೂಪಿಸುವ ಬೃಹತ್ ಯೋಜನೆಗಳೇ ಅರಣ್ಯಗಳನ್ನು ಅಪೋಶನ ತೆಗೆದುಕೊಳ್ಳುತ್ತಿರುವುದು ನಿಜಕ್ಕೂ ದುರಂತ. ಅಭಿವೃದ್ಧಿ, ಆಧುನಿಕತೆ ಕುರಿತು ಏನೇ ವ್ಯಾಖ್ಯಾನ, ವಾದಗಳು ಹರಿದು ಬಂದರೂ ಈ ಭೂಮಿ ಮೇಲೆ ಜೀವಿಗಳು ಬದುಕಲು ನಾಳೆ ದಿನ ಅರಣ್ಯ ನಮ್ಮೊಂದಿಗಿರಬೇಕು ಎನ್ನುವ ಸಾಮಾನ್ಯ ಪ್ರಜ್ಞೆಯೇ ಮಸುಕಾಗುತ್ತಿರುವುದು ಅನಾಹುತಕಾರಿ ಬೆಳವಣಿಗೆ. ಮೂಲ ಸೌಕರ್ಯ ವಿಸ್ತರಣೆಯಿಂದಾಗಿ ಭಾರತದಲ್ಲಿ ದೊಡ್ದ ಅರಣ್ಯ ಪ್ರದೇಶಗಳ ಪ್ರಮಾಣ ಶೇ.೭೧ರಷ್ಟು ಕ್ಷೀಣಿಸಿರುವುದರ ಬಗ್ಗೆ ೨೦೨೦ರಲ್ಲಿ ವಿಜ್ಞಾನಿಗಳ ತಂಡ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಯಾವುದೇ ನಾಡಿಗೆ ಆಧುನಿಕತೆಯ ವೇಷ ತೊಡಿಸಲು ಮರಗಳನ್ನು ಕಡಿಯುವುದು ಅತಿ ಸುಲಭ. ಆದರೆ ಸಹಜ ಅರಣ್ಯಗಳನ್ನು ಬೆಳೆಸುವುದು ಅತ್ಯಂತ ಕಠಿಣ ತಪಸ್ಸು. ಅಭಿವೃದ್ಧಿ ಯೋಜನೆಗಳು ಕಾಡುಗಳ ಮಧ್ಯೆ ಹಾದುಹೋಗದಂತೆ, ಆದಷ್ಟು ಪರಿಸರಕ್ಕೆ ಧಕ್ಕೆಯಾಗದಂತೆಯೇ ರೂಪಿಸುವ ಕುಶಲತನವನ್ನು ಆಡಳಿತ ಯಂತ್ರ ಮೈಗೂಡಿಸಿಕೊಳ್ಳದೆ ಹೋದರೆ, ಭವಿಷ್ಯದ ಪೀಳಿಗೆಗೆ ಅರಣ್ಯ ಇನ್ನಷ್ಟು ವಿರಳವಾಗಿ, ಹವಾಮಾನದ ವೈಪರೀತ್ಯದ ಮತ್ತಷ್ಟು ಏಟುಗಳನ್ನು ಉಣ್ಣಬೇಕಾದ ಪರಿಸ್ಥಿತಿಯೂ ಉದ್ಭವಿಸಬಹುದು.
೧೯೮೮ರ ಅರಣ್ಯ ನೀತಿ ಜಾರಿಗೊಂಡ ಬಳಿಕ ಅರಣ್ಯ ಬೆಳೆಸುವುದಕ್ಕೆ ಸಾಕಷ್ಟು ಮಹತ್ವ ದೊರೆತಿದೆ. ಆದರೆ, ಈ ಅರಣ್ಯ ಕಾನೂನುಗಳು ಹಳ್ಳಿ ಜನರ ಸ್ನೇಹಿಯಾಗದೆ ಸಾಕಷ್ಟು ಕಡೆ ಸಂಘರ್ಷಕ್ಕೂ ಕಾರಣವಾಗುತ್ತಿದೆ. ಹಳ್ಳಿ ಜನರು, ರೈತರನ್ನು ಹೊರಗಿಟ್ಟು ಕೇವಲ ಅಧಿಕಾರಿಗಳ ಮೂಲಕ ಅರಣ್ಯ ಸಂರಕ್ಷಿಸುವ ನೀತಿಯನ್ನು ಸರಕಾರ ಮೈಗೂಡಿಸಿಕೊಂಡಿದೆ. ಹಾಗೆ ನೋಡಿದರೆ, ಅರಣ್ಯ ಇಲಾಖೆಯಂತೆಯೇ ರೈತರು ಕೂಡ ಗಿಡ ನೆಡುವುದರಲ್ಲಿ, ಹೊಲಗದ್ದೆಗಳ ಪಕ್ಕ ನೂರಾರು ಸಂಖ್ಯೆಯಲ್ಲಿ ಮರಗಳನ್ನು ನೆಟ್ಟು ಪೋಷಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ರೈತರ ಕಾಡುಪ್ರೀತಿಗಳನ್ನು ಕಾಳಜಿಗಳನ್ನೂ ಸರಕಾರ ಗುರುತಿಸುವ, ಗೌರವಿಸುವ ಕೆಲಸ ಮಾಡಬೇಕಿದೆ.
ಇನ್ನು ನಗರ ಪ್ರದೇಶಗಳನ್ನು ವಿಸ್ತರಿಸುವ ಭರದಲ್ಲಿ ಮರಗಳನ್ನು, ಸಣ್ಣಪುಟ್ಟ ಅರಣ್ಯಗಳನ್ನು ನಾಶಪಡಿಸುವ ಭೂದಾಹಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಅನಿವಾರ್ಯತೆ ಹಿಂದೆಂದಿಗಿಂತ ಈಗ ಜರೂರಿದೆ. ಮಕ್ಕಳ ಜನ್ಮ ದಿನ, ವಿವಾಹ ವಾರ್ಷಿಕೋತ್ಸವ, ನಾಮಕರಣ ಮುಂತಾದ ಸಡಗರದಲ್ಲಿ ಕಳೆದುಹೋಗುವ ಆಧುನಿಕ ಜೀವನಶೈಲಿಯೊಳಗೆ ಗಿಡ ನೆಡುವ, ಹಸಿರನ್ನು ಪೋಷಿಸುವ, ನಿಸರ್ಗ ಪ್ರೀತಿ ಹೆಚ್ಚಿಸುವ ಪ್ರವೃತ್ತಿಗಳೂ ಹೆಚ್ಚಬೇಕಿದೆ. ಕಾಡನ್ನು ರಕ್ಷಿಸುವುದು ಕೇವಲ ಸರಕಾರದ ಹೊಣೆಯಲ್ಲ. ಅದು ಸಮಸ್ತ ಮನುಕುಲದ ಜವಾಬ್ದಾರಿ. ಮರಗಳನ್ನು ನಮ್ಮ ಮಕ್ಕಳಂತೆಯೇ ಪೋಷಿಸೋಣ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೧-೦೩-೨೦೨೪
ಚಿತ್ರ ಕೃಪೆ: ಇಂಟರ್ನೆಟ್ ತಾಣ