ಮರಗೆಲಸದ ಶಿಲ್ಪಿ ಹಿರಿಯ ಜಾನಪದ ಕಲಾವಿದ ಶ್ರೀ ಗಂಗಾಧರ ವಿಶ್ವಕರ್ಮ
ಕಲೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದೆ ವಿಶ್ವಕರ್ಮರು ಯಾಕೆಂದರೆ ನಮ್ಮ ಕನ್ನಡನಾಡು ಹಾಗೂ ದೇಶದಲ್ಲಿಯ ದೇಗುಲಗಳ ಕಲಾವೈಭವ ವಿಶ್ವಕರ್ಮ ವಂಶಜ ಅಮರ ಶಿಲ್ಪಿ ಜಕಾಣಾಚಾರ್ಯ ಅವರು ಮತ್ತು ಅವರ ತಂಡದಿಂದ ಈ ನಾಡಿಗೆ ಮತ್ತು ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು. ಅಂತ ಇತಿಹಾಸ ಹೇಳುತ್ತದೆ. ನಾನು ಈಗ ತಿಳಿಸಲು ಹೊರಟಿರುವ ವಿಷಯ ವಿಶ್ವಕರ್ಮ ವಂಶದಲ್ಲಿ ಹುಟ್ಟಿ ಬೆಳೆದು ಕಲೆಯನ್ನೆ ಉಸಿರಾಗಿಸಿಕೊಂಡು ಬಂದ ಉತ್ತರಕರ್ನಾಟಕದ ಹಿರಿಯ ಕಲಾವಿದರೊಬ್ಬರ ಉನ್ನತ ಜಾನಪದ ಕಲೆಯ ಬಗ್ಗೆ. ಶ್ರೀ ಗಂಗಾಧರ ಬಸಪ್ಪಾ ವಿಶ್ವಕರ್ಮ ಅವರು ತೀರಾ ಬಡತನದಲ್ಲಿ ಬೆಳೆದು ಬಂದವರು ಇವರ ತಂದೆ ಕೂಡ ಒಬ್ಬ ಶಿಲ್ಪಿಯಾದ್ದರಿಂದ ಗಂಗಾಧರ ಕೂಡ ತಮ್ಮ ಬಾಲ್ಯದಲ್ಲಿಯೇ ಶಿಲ್ಪಕಲೆಯನ್ನೆ ಮೈಗೂಡಿಸಿಕೊಂಡವರು. ಇವರಿಗೆ ಈಗ ಮೂರು ಜನ ಮಕ್ಕಳು ಒಬ್ಬರು ಪುತ್ರಿ ಇಬ್ಬರು ಪುತ್ರರು.
ಗಂಗಾಧರ ಅವರು ಉತ್ತರಕರ್ನಾಟಕದ ಈಗೀನ ಕಲಬುರ್ಗಿ(ಗುಲಬರ್ಗಾ) ಜಿಲ್ಲೆಯ ವ್ಯಾಪ್ತಿಗೆ ಒಳಗೊಂಡಿದ್ದ "ಬಪ್ಪರಗಿ" ಗ್ರಾಮದವರು ಈಗ ಈ ಗ್ರಾಮ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿಗೆ ಸೇರಿದೆ. ಇವರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿಯೇ ತಂದೆಯ ಜೊತೆಗೂಡಿ ಶಿಲ್ಪಕಲಾ ಕೆತ್ತನಾ ಉಪಕರಣ ಕೈಗೆತ್ತಿಕೊಂಡವರಂತೆ. ಹಾಗೂ ಇವರು ಯಾವುದೇ ಕಲಾ ಶಿಕ್ಷಣ ಪಡೆದವರಲ್ಲ ಇವರ ಶಿಲ್ಪಕಲೆ ಜಾನಪದ ಕಲೆಯಾಗಿದೆ ಜಾನಪದ ಕಲೆ ಎಂದರೆ ಗುರುವಿಲ್ಲದೆ ತಮ್ಮ ಸ್ವಂತ ಬುದ್ಧಿಯಿಂದ ರಚಿಸುವ ಕಲೆ ಎಂದಾಗಿದೆ. ಹಿಂದಿನ ಕಾಲದ ಹಿರಿಯ ಕಲಾವಿದರ ಜಾನಪದ ಕಲೆಯನ್ನು ನಾವು ನೋಡಿರುತ್ತೇವೆ ಒಂದು ವಿಗ್ರಹ ಮೂಖ, ಕೈ-ಕಾಲು, ಮೂಗು,ಕಣ್ಣು,ಬಾಯಿ ಹೀಗೆ ವಿಗ್ರಹದಲ್ಲಿಯ ಅಂಗಾಂಗ ಭಾಗಗಳಲ್ಲಿ ರಚನೆಯ ದೋಷವನ್ನು ಕಾಣುತ್ತೇವೆ. ಇವರು ಕೂಡ ಜಾನಪದ ಕಲಾವಿದರಾದರೂ ಕೂಡ ಇವರ ಕಲಾಕೃತಿಗಳಲ್ಲಿ ಅಂತಹ ಯಾವುದೇ ದೋಷಗಳು ಕಂಡು ಬರದಿರುವುದು ಮತ್ತು ಸುಂದರ ಮೂಖ ಹೊಂದಿರುವ ವಿಗ್ರಹ ನೋಡಿದರೆ ಜಾನಪದ ಕಲಾವಿದರೆಂದೆನಿಸದಿರುವುದು ಆಶ್ವರ್ಯಕರವೇ ಸರಿ. ಅಂತಹ ಸೂಕ್ಷ್ಮ ಹಾಗೂ ಸುಂದರ ಕಲಾಕೃತಿಗಳು ಗಂಗಾಧರ ಅವರದ್ದಾಗಿದೆ.
ಈ ಕಲಾವಿದರು ಕಲಾಕೃತಿಗಳನ್ನು ದೇವಿಯ ವಿಗ್ರಹ ಮರದ ತುಂಡಲ್ಲಿ ಹಾಗೂ ಕಲ್ಲಿನಲ್ಲಿ ಕೆತ್ತನೆ ಮಾಡಿರುವರುವುದಾಗಿವೆ. ಒಂದೆ ತರಹದ ಕಲೆಗೆ ಅಂಟಿಕೊಳ್ಳದೆ ವಿಗ್ರಹ,ಬಾಗಿಲುಗಳ ವಿನ್ಯಾಸ, ಕಲ್ಲಿನ ಮೂರ್ತಿ ವಿಶೇಷವೆಂದರೆ ಮೆಲ್ಬಾಗದಲ್ಲಿಯ ಚಿತ್ರದಲ್ಲಿ ಗಂಗಾಧರ ಅವರು ಬೇಲೂರು ಹಳೇಬಿಡಿನ ಶೈಲಿಯಲ್ಲಿ ಕಟ್ಟಿಗೆಯಲ್ಲಿ ಸೂಕ್ಷ್ಮ ಹಾಗೂ ಸುಂದರವಾಗಿ ರಚಿಸುವ ಕಾರ್ಯದಲ್ಲಿ ತೊಡಗಿದ್ದನ್ನು ನೀವು ನೋಡಬಹುದು. ಹಾಗೂ ಇಂತಹ ಅನೇಕಾನೇಕ ವಿಗ್ರಹ,ವಿನ್ಯಾಸಗಳನ್ನು ಸರಗಾವಾಗಿ ರಚಿಸುವ ಸಾಮರ್ಥ್ಯ ಪಡೆಕೊಂಡಿದ್ದಾರೆ. ಇನ್ನೂ ಮತ್ತೊಂದು ಚಿತ್ರವನ್ನು ನೀವು ನೋಡಿರಬಹುದು ಮೆಲ್ಬಾಗದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಅದು ಅವರ ಗ್ರಾಮದಲ್ಲಿ ಗರ್ಭ ಗುಡಿಯಲ್ಲಿ ಪೂಜಿಸಲು ಗ್ರಾಮಸ್ಥರು ಇವರಿಂದ ರಚಿಸಿಕೊಂಡಿರೋದು. ವಿಶೇಷವಾಗಿ ಮರದ ತುಂಡಿನಲ್ಲಿ ರಚಿಸಿದ ದೇವಿಯ ಮೂರ್ತಿಯನ್ನು ಪೂಜಿಸಲು ಯೋಗ್ಯವೆಂತಲು ಹಾಗೂ ಕೇಲವು ಭಾಗದಲ್ಲಿ ಮೇರವಣಿಗೆಗಾಗಿಯೂ ಇಂತಹ ಮರದ ವಿಗ್ರಹ ರಚಿಸುವರಂತೆ.ಈ ತರಹದ ಕಲಾಕೃತಿ ರಚಿಸುವ ಕಲಾವಿದರು ನಮ್ಮ ನಾಡಿನಲ್ಲಿ ಬಹಳ ವಿರಳ. ಇವರ ಬಾಲ್ಯದಿಂದಲೇ ತಮ್ಮನ್ನು ಕಲೆಗಾಗಿ ತೊಡಗಿಸಿಕೊಂಡಿದ್ದಾರೆ ಇಂತಹ ವಿಗ್ರಹ ತಯಾರಿಸಲು ತುಂಬಾ ದಿನಗಳೇ ಬೇಕು. ಇಷ್ಟೇಲ್ಲ ಕಲಾಕೃತಿ ರಚಿಸುತ್ತಾ ತಮ್ಮ ಜೀವನವನ್ನು ಕಲಾವೃತ್ತಿಯಲ್ಲಿ ಕಳೆದಿರುವರಾದರು ಕೂಡ ಇವರಿಗೆ ಯಾವುದೆ ಸರ್ಕಾರದ ಪ್ರಶಸ್ತಿಗಳಾಗಲಿ ಮಾಶಾಸನವಾಗಲಿ ದೊರೆತಿಲ್ಲವೆನ್ನುವುದು ದುರದೃಷ್ಟಕರ ಸಂಗತಿ.
ಇಂತಹ ಅತ್ಯುನ್ನತ ಹಿರಿಯ ಜಾನಪದ ಕಲಾವಿದರಿಗೆ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಕೆಲಸವಾಗಬೇಕಿದೆ. ಮತ್ತು ವಿಶ್ವಕರ್ಮ ಸಮಾಜದ ಯುವಕರು ಹಾಗೂ ಮುಖಂಡರುಗಳು ಇಂತಹ ಕಲಾವಿದರನ್ನು ಗುರುತಿಸಿ ಸರ್ಕಾರದಿಂದ ಸನ್ಮಾನ ಮತ್ತು ಕಲಾಕಾರರ ಸೌಲಭ್ಯಗಳನ್ನು ದೊರಕಿಸುವ ಕಾರ್ಯವಾಗಬೇಕಿದೆ. ಅಂದಾಗ ಮಾತ್ರ ವಿಶ್ವಕರ್ಮರ ಅತ್ಯುನ್ನತ ಕಲಾಪಾರಂಪರಿಕತೆಯೊಂದಿಗೆ ಕಲೆಯು ಉಳಿಯಲು ಸಾಧ್ಯ. ವಿಶ್ವಕರ್ಮ ಸಮಾಜದಲ್ಲಿ ಸರ್ಕಾರಿ ನೌಕರಿಯಲ್ಲಿರುವವರು ಹಾಗೂ ಸಂಘ ಸಂಸ್ಥೆಗಳು ಕಲಾಕಾಕರರಿಗೆ ಸಂಬಂಧ ಪಟ್ಟಂತೆ ಸೌಲಭ್ಯ ದೊರಕಿಸಿದರೆ. ಇಂತಹ ಕಲಾವಿದರನ್ನು ಉಳಿಸಿ ಬೆಳೆಸಿದಂತಾಗುತ್ತದೆ.ಇವರ ಎರಡನೇಯ ಪುತ್ರ ಲಕ್ಷ್ಮಿಕಾಂತ ಕಲಾವಿಧ್ಯಾರ್ಥಿಯಾದರೂ ಕೂಡ ತಂದೆಯವರು ನಡೆಸಿಕೊಂಡು ಬಂದ ಕಲಾವೃತ್ತಿಯನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ಅವರು ಕೂಡ ತಂದೆಯ ಜೊತೆ ಈ ಕಲೆಯಲ್ಲಿಯೇ ತೊಡಗಿದ್ದಾರೆ. ಗಂಗಾಧರ ಅವರು ಇದೀಗ ೬೩ ವಯಸ್ಸು ಕಳೆದಿದ್ದಾರೆ. ಆದರೂ ಸರ್ಕಾರದ ಯಾವುದೇ ಸೌಲಭ್ಯ ಸಿಗದೆ ತೆರೆಮರೆಯಲ್ಲಿಯೇ ಉಳಿದುಕೊಂಡಿರುವರೆಂಬ ಸಂಗತಿ ನಿಜಕ್ಕೂ ಬೇಸರ. ಇನ್ನಾದರೂ ಇವರ ಕಲಾಬದುಕಿಗೊಂದು ಬೆಳಕು ನೀಡಲು ಯಾರಾದರೂ ಬೆಂಬಲ ಕೊಟ್ಟು ಸರ್ಕಾರದ ಮಾನ್ಯತೆ ಸಿಗುವಂತಾಗಲಿ ಅಂತ ಆಶಿಸುತ್ತೇನೆ. ಕಲೆ ಉಳಿದರೆ ಸಂಸ್ಕೃತಿ ಉಳಿದಂತೆ.
ಕಲಾವಿದ ಗಂಗಾಧರ ಅವರ ಸಂಪರ್ಕಕ್ಕಾಗಿ-
ಶ್ರೀ ಗಂಗಾಧರ ಬಸಪ್ಪಾ ವಿಶ್ವಕರ್ಮ
ಊರು; ಬಪ್ಪರಗಿ
ತಾಲೂಕ; ಸುರಪುರ
ಜಿಲ್ಲೆ; ಯಾದಗಿರಿ
ಸಂಪರ್ಕ ಸಂಖ್ಯೆ; +91 72048 14491