ಮರಡೋನಾ ಮತ್ತು ಹ್ಯಾಂಡ್ ಆಫ್ ಗಾಡ್

ಮರಡೋನಾ ಮತ್ತು ಹ್ಯಾಂಡ್ ಆಫ್ ಗಾಡ್

ಮೊನ್ನೆ ಸಂಪದದಲ್ಲಿ ಅಗಲಿದ ಫುಟ್ಬಾಲ್ ದಂತಕತೆ ಎಂದು ಡೀಗೋ ಮರಡೋನಾ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮರಡೋನಾ ಅವರಿಗೆ ಕುಖ್ಯಾತಿ ತಂದ ‘ಹ್ಯಾಂಡ್ ಬಾಲ್’ ಪ್ರಕರಣವನ್ನು ಉಲ್ಲೇಖಿಸಿದ್ದೆ. ಆದರೆ ವಿವರವಾಗಿ ಬರೆಯಲು ಆ ದಿನ ಸಾಧ್ಯವಾಗಿರಲಿಲ್ಲ. ೧೯೮೬ರ ಫುಟ್ಬಾಲ್ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಏನಾಯಿತು? ಏನಿದು ದೇವರ ಕೈ ಗೋಲು (ಹ್ಯಾಂಡ್ ಆಫ್ ಗಾಡ್)? ಆ ಗೋಲ್ ಯಾಕೆ ಈ ಹೆಸರು ಪಡೆಯಿತು? ಬನ್ನಿ ಸ್ವಲ್ಪ ಗಮನ ಹರಿಸೋಣ.

೧೯೮೬ರ ಜೂನ್ ೨೨. ಮೆಕ್ಸಿಕೋದ ಅಜಟೆಕ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಹಾಗೂ ಅರ್ಜೆಂಟೀನಾ ತಂಡಗಳ ನಡುವೆ ಕ್ವಾರ್ಟರ್ ಫೈನಲ್ ಪಂದ್ಯವೊಂದು ನಡೆಯುತ್ತಿತ್ತು. ಆ ಸಮಯ ಅರ್ಜೆಂಟೀನಾ ತಂಡದ ನಾಯಕನಾಗಿದ್ದವರು ಡೀಗೋ ಮರಡೋನಾ. ಪ್ರಥಮಾರ್ಧದಲ್ಲಿ ಇತ್ತಂಡಗಳು ಯಾವುದೇ ಗೋಲ್ ಬಾರಿಸಲಿಲ್ಲ. ಎರಡೂ ತಂಡಗಳು ಬಲಿಷ್ಟವಾಗಿ ಕಾದಾಡುತ್ತಿದ್ದವು. ದ್ವಿತೀಯಾರ್ಧದಲ್ಲಿ ಮರಡೋನಾ ಬಹಳ ಬಿರುಸಿನ ಆಟಕ್ಕೆ ಇಳಿದರು. ಆರನೇ ನಿಮಿಷದಲ್ಲಿ ಚೆಂಡು ಇಂಗ್ಲೆಂಡ್ ತಂಡದ ಗೋಲ್ ಕೀಪರ್ ಬಳಿ ಹೋಗುತ್ತಿದ್ದ ಸಮಯದಲ್ಲಿ ಮರಡೋನಾ ತಮ್ಮ ತಲೆಯನ್ನು ಬಾಲ್ ಗೆ ತಾಗಿಸಲು ಬಯಸಿದರು. ಆದರೆ ಬಾಲ್ ಅವರ ಎಡಗೈ ತಾಗಿ (ಚಿತ್ರವನ್ನು ಗಮನಿಸಿ) ಗೋಲ್ ಪೆಟ್ಟಿಗೆಯೊಳಗೆ ಸೇರಿತು. ಮರಡೋನಾ ತಪ್ಪಿ ಎಡಗೈಯಿಂದ ಬಾಲ್ ಮುಟ್ಟಿದರೋ ಅಥವಾ ಬೇಕೆಂದೇ ಎಡಗೈನಿಂದ ಬಾಲ್ ಹೊಡೆದರೋ ಗೊತ್ತಿಲ್ಲ. ಆದರೆ ಈ ವಿಷಯ ತಕ್ಷಣ ತೀರ್ಪುಗಾರರ ಗಮನಕ್ಕೆ ಬರಲಿಲ್ಲ. ಅವರು ಅರ್ಜೆಂಟೀನಾ ತಂಡಕ್ಕೆ ಗೋಲ್ ನೀಡಿದರು. ಮರಡೋನಾ ಕೈ ತಾಗಿ ಚೆಂಡು ಗೋಲ್ ಪೆಟ್ಟಿಗೆ ಸೇರಿದ್ದು ಇಂಗ್ಲೆಂಡ್ ತಂಡದ ಗಮನಕ್ಕೆ ಬಂದು ಅವರು ತೀರ್ಪುಗಾರರ ಜೊತೆ ವಾದಕ್ಕೆ ಇಳಿದರು. ಮುಖ್ಯ ತೀಪುಗಾರರು ಲೈನ್ ಮೆನ್ ತೀರ್ಪುಗಾರರ ಸಲಹೆ ಪಡೆದರು. ಅವರೂ ಅದನ್ನು ಗೋಲ್ ಎಂದೇ ದೃಢ ಪಡಿಸಿದರು. ಆಗಿನ ಕಾಲಕ್ಕೆ ಮೂರನೇ ಅಂಪೈರ್ ಅಥವಾ ಕೆಮರಾ ದೃಶ್ಯಗಳನ್ನು ನೋಡಿ ತೀರ್ಪು ಕೊಡುವ ಕ್ರಮ ಇರಲಿಲ್ಲ. ಈ ದೃಶ್ಯವನ್ನು ಮೆಕ್ಸಿಕೋದ ಓರ್ವ ಛಾಯಾಗ್ರಾಹಕರು ತಮ್ಮ ಕೆಮರಾದಲ್ಲಿ ಸೆರೆ ಹಿಡಿದಿದ್ದರು. ಅದರಲ್ಲಿ ಮರಡೋನಾ ತನ್ನ ಎಡಕೈಯನ್ನು ಸ್ವಷ್ಟವಾಗಿ ಚೆಂಡಿಗೆ ತಾಗಿಸಿದ್ದು ಗೊತ್ತಾಗುತ್ತಿತ್ತು. 

ನಂತರ ಕೆಲವೇ ಕ್ಷಣದಲ್ಲಿ ಮರಡೋನಾ ಅದ್ಭುತವಾದ ಗೋಲ್ ದಾಖಲಿಸಿದರು. ಇದು ‘ಶತಮಾನದ ಗೋಲ್’ ಎಂದೇ ಖ್ಯಾತಿ ಪಡೆದಿದೆ. ಹೀಗೆ ಆಡಲಾದ ಒಂದೇ ಪಂದ್ಯದಲ್ಲಿ ಖ್ಯಾತಿ ಮತ್ತು ಅಪಖ್ಯಾತಿ ಗಳಿಸಿದ ಕೀರ್ತಿ ಡೀಗೋ ಮರಡೋನಾ ಅವರಿಗೆ ಸಲ್ಲುತ್ತದೆ. ಹ್ಯಾಂಡ್ ಆಫ್ ಗಾಡ್ ನಿಂದ ಅಪಖ್ಯಾತಿಯೂ ಹಾಗೂ ಶತಮಾನದ ಗೋಲ್ ನಿಂದ ಖ್ಯಾತಿಯನ್ನೂ ಗಳಿಸಿದ ಮರಡೋನಾ ತಮ್ಮ ಕ್ರೀಡಾ ಜೀವನದಲ್ಲೂ ಎರಡನ್ನೂ ಸಮಾನವಾಗಿ ಪಡೆದಿದ್ದರು. ಹಲವಾರು ವಿವಾದಗಳು, ಉದ್ದೀಪನ ಮದ್ದು ಸೇವನೆ ಮುಂತಾದವುಗಳಿಂದ ಅಪಖ್ಯಾತಿಯೂ, ಅತ್ಯಂತ ಚುರುಕಾದ, ಚಾಣಾಕ್ಷತೆಯ ಆಟದಿಂದ ಖ್ಯಾತಿಯನ್ನೂ ಗಳಿಸಿದ್ದರು.

೧೯೮೬ರ ವಿಶ್ವಕಪ್ ಅರ್ಜೆಂಟೀನ ಗೆದ್ದುಕೊಂಡಿತು. ಅದರಲ್ಲಿ ಈ ವಿವಾದಾಸ್ಪದ ಗೋಲ್ ಪಾಲು ಸಾಕಷ್ಟಿತ್ತು. ನಂತರದ ದಿನಗಳಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ‘ ಆ ಗೋಲ್ ಹೊಡೆಯಲು ದೇವರ ಕೈ ಸಹಾಯ ಮಾಡಿತ್ತು' ಎಂದು ಮರಡೋನಾ ವಿಚಿತ್ರವಾದ ಉತ್ತರ ನೀಡಿದ್ದರು, ಅದೇ ಕಾರಣದಿಂದ ಆ ಗೋಲು ‘ಹ್ಯಾಂಡ್ ಆಫ್ ಗಾಡ್’ ಎಂದೇ ಪ್ರಸಿದ್ಧಿ ಪಡೆದಿದೆ. ಫುಟ್ಬಾಲ್ ನಲ್ಲಿ ಎಲ್ಲರೂ ಗೋಲು ಹೊಡೆಯುವುದು ಕಾಲಿನ ಚಳಕದಿಂದ ಆದರೆ ಮರಡೋನಾ ಕೈಚಳಕದಿಂದ ಗೋಲು ಹೊಡೆದು ತಮ್ಮ ಖ್ಯಾತಿಗೆ ಅಲ್ಪ ಮಟ್ಟಿಗೆ ಮಸಿಬಳಿದುಕೊಂಡರು. ಆದರೂ ಅವರ ಫುಟ್ಬಾಲ್ ಆಟ 'ದೇವರ ಆಟ’ವೇ ಆಗಿತ್ತು.

ಚಿತ್ರ ಕೃಪೆ: ಅಂತರ್ಜಾಲ ತಾಣ  

 

Comments

Submitted by Hari Prasad Nadig Sat, 11/28/2020 - 17:01

ತುಂಬ ಮುಂಚೆ ಸಂಪದದಲ್ಲಿ ಮರಡೋನ ಬಗ್ಗೆ ನಾನೊಂದು ಪುಟ್ಟ ಬರಹ ಪೋಸ್ಟ್ ಮಾಡಿದ್ದೆ. ಯಾವುದೋ ಬಬ್ಬಲ್ ಗಮ್ ಜೊತೆಗೆ ಫುಟ್ಬಾಲ್ ವರ್ಲ್ಡ್ ಕಪ್ ಕುರಿತಾದ ಕಾರ್ಡುಗಳು ಸಿಗುತ್ತಿದ್ದವು. ನೆನಪಾಯಿತು. 

Submitted by Ashwin Rao K P Sat, 11/28/2020 - 19:15

In reply to by Hari Prasad Nadig

ನನ್ನ ಲೇಖನಕ್ಕೆ ಪ್ರತಿಕ್ರಿಯೆಯಾಗಿ ನೀವು ನಿಮ್ಮ ಹಳೆಯ ಲೇಖನದ ನೆನಪುಗಳನ್ನು ಮೆಲುಕು ಹಾಕಿರುವುದು ಸಂತಸದ ಸಂಗತಿ. ನಾನು ಆ ಲೇಖನವನ್ನು ಓದಿಲ್ಲ. ಸಂಪದದ ಹಳೆಯ ಸಂಗ್ರಹದಲ್ಲಿ ಸಿಗಬಹುದೇನೋ? ಮತ್ತೊಮ್ಮೆ ನಿಮ್ಮಿಂದ ಲೇಖನಗಳನ್ನು ನಿರೀಕ್ಷಿಸುವೆ ಸರ್.