ಮರಣ ದಂಡನೆ

ಮರಣ ದಂಡನೆ

(ಚಿತ್ರ; ವಿಜಯ ಕನಾಟಕ  ಪತ್ರಿಕೆ ಯ ಲೇಖನದ ಪುಟ)

 ಧರ್ಮಗಳು ಬೇಕಾದ್ದೇ ಹೇಳಲಿ, ಕೇಳಿಸಿಕೊಳ್ಳುವ ನಮಗೆ, ಅಂದರೆ ವೈಯಕ್ತಿಕ ವ್ಯಕ್ತಿಗಳಿಗೆ, ಮನುಷ್ಯ ಮಾತ್ರದ ಒಂದು ಸಾಮಾನ್ಯ ತಿಳಿವು - ಕಾಮನ್ ಸೆನ್ಸ್ - ಇರಬೇಕು, ತಾನೆ? ಸಾವು ಎನ್ನುವುದು ದಂಡನೆಯಾದರೆ, ಅದಕ್ಕೆ ಕಾರಣವಾಗುವ ಹುಟ್ಟು ಸಹ ದಂಡನೆ ಏಕಲ್ಲ? ದೇಹ್ ಧರೇ ತೊ ದಂಡ ಹೈ ಅಂತಾರೆ, ಸ್ವತಂತ್ರ ಚಿಂತಕ, ಕಬೀರ್ ದಾಸ್. ಇದೇ ದೇಹವೇ ಬೇಕೆಂದು ಹಟ ಹಿಡಿದು ಕೇಳಿ ಪಡೆದಿದ್ದು ನನಗಂತೂ ನೆನಪಿಲ್ಲ. ಅಗಾಧ ಜ್ಞಾಪಕಶಕ್ತಿಯುಳ್ಳವರು ನೆನಪಿಸಿಕೊಂಡು ಹೇಳಿದರೆ ಉಪಕಾರವಾಗುತ್ತದೆ! ಕಬೀರ್ ದಾಸರೇ ಮುಂದುವರೆದು ಹೇಳುವಂತೆ, ಜೋ ಚಾಹೇ ಸೋ ಹೋಯ್. ಜ್ಞಾನೀ ಭುಗತೇ ಜ್ಞಾನ್ ಕರೇ, ಮೂರಖ್ ಭುಗತೇ ರೋಗ್! ತಂದೆ-ತಾಯಿಗಳ ಜೀನ್ಸ್‌ನಿಂದ ದೇಹಾಂಕುರವಾಗುತ್ತದೆ. ಅದರಲ್ಲೊಂದು ಸಾಮರ್ಥ್ಯ - ಕ್ಯಪಾಸಿಟಿ - ಇರತ್ತದೆ; ಕೆಲವು ನ್ಯೂನತೆಗಳು ಸಹ. ಅದನ್ನು, ಪ್ರಜ್ಞಾತೀತವಾಗಿಯೇ ಉಪಯೋಗಿಸಿಕೊಂಡು, ದುಃಖ-ಸುಖಗಳನ್ನನುಭವಿಸುತ್ತೇವೆ. ಈ ಅಡ್-ಹಾಕ್ ಅನುಭವಗಳು ಮುಂದೆ ಮನಸ್ಸಾಗಿ, ಭಾವವಾಗಿ ಪ್ರಜ್ಞೆ ತಳೆಯುತ್ತವೆ; ಇದು ಸ್ಮರಣೆ, ಬುದ್ಧಿ, ಕೌಶಲಗಳಿಗೆ, ಸಾಧನೆ-ವೈಫಲ್ಯಗಳಿಗೆ, ವ್ಯಕ್ತಿ ವ್ಯತ್ಯಾಸಕ್ಕೆ, ಸಾಮಾಜಿಕ ವರ್ಗೀಕರಣಕ್ಕೆ-ಶ್ರೇಣೀಕರಣಕ್ಕೆ ಕಾರಣವಾಗುತ್ತದೆ.
 ಸಾವು ಎನ್ನುವುದನ್ನು, ಕೆಲವರು, ಸಾಮಾಜಿಕ ಅರ್ಥದಲ್ಲಿ ದಂಡನೆ ಎಂದು ಕರೆದಾರು. ದಂಡನೆ, ವ್ಯವಸ್ಥೆ ಅಥವಾ ಸಮಾಜ ವಿಧಿಸುವುದು. ದಂಡನೆ ಎನ್ನುವುದರ ಅರ್ಥ ಹಿಂಸೆ ಎಂದೇ. ಯಾರಿಗೇ ಆಗಲೀ ಹಿಂಸೆ ನೀಡುವುದಕ್ಕೆ ಯಾರಿಗೆ ತಾನೇ - ಕಾನೂನಿಗೆ ಸಹ - ಹೇಗೆ ತಾನೆ ಅಧಿಕಾರವಿದೆ? ಸಭ್ಯ, ನಾಗರಿಕ ಸಮಾಜ ಇದನ್ನು ಸಹಿಸುವುದಾದರೂ ಎಂತು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು; ಅದಕ್ಕೊಂದು ಕಾನೂನು-ಕಟ್ಟಳೆ ಇರಲೇಬೇಕು. ಎಲ್ಲ ಧರ್ಮಗಳಲ್ಲಿ, ಎಲ್ಲ ಆಡಳಿತ ವ್ಯವಸ್ಥೆಯಲ್ಲಿ, ಪ್ರತಿ ಕುಟುಂಬ, ಶಾಲೆ, ಸಮುದಾಯದಲ್ಲಿ ಇಂಥದೊಂದು ಇದ್ದೇ ತೀರುತ್ತದೆ, ಸಹ. ಆದರೆ ದಂಡನೆಗೂ ಶಿಕ್ಷೆಗೂ ತುಂಬವೇ ವ್ಯತ್ಯಾಸವಿದೆ. ದಂಡನೆಯೆಂದರೆ ಹಿಂಸೆ; ಇನ್ನೊಬ್ಬರ ನೋವು-ಸಂಕಟ ಕಂಡು ಸಂತೋಷಪಡುವ ಪ್ರಜ್ಞಾತೀತ ಪ್ರವೃತ್ತಿ. ಒಬ್ಬ ದಾರಿಹೋಕ, ಜೇಬುಗಳ್ಳನೋ-ಅಲ್ಲವೋ, ರೋಡ್ ರೋಮಿಯೋ ಹೌದೋ ಅಲ್ಲವೋ, ಯರೋ ಒಬ್ಬರು ಬೊಬ್ಬೆ ಹಾಕುತ್ತಾರೆ, ಬೀದಿಗರೆಲ್ಲಾ ಮುತ್ತಿಕೊಂಡು ಇಕ್ಕಿದ್ದೇ ಇಕ್ಕಿದ್ದು; ಅದು ಧರ್ಮದ ಏಟು ಎಂಬ ಪ್ರತಿಷ್ಠಿತ ಹೆಸರು ಬೇರೆ. ಅದಾವ ಧರ್ಮವೋ?! ಅಲ್ಲಿ ಮಾತ್ರಾ, ಹಿಂದೂ-ಮುಸ್ಲಿಂ-ಸಿಖ್-ಇಸಾಯಿ ಎಂಬ ಭೇದವೇ ಬರುವುದಿಲ್ಲ; ಅದು ಸಾಮಾಜಿಕ ಧರ್ಮ! ಪೌರಪ್ರಜ್ಞೆ! ಇದೇ ಪ್ರಜ್ಞೆ, ಮೋಟುಗೋಡೆಯ ಹಿಂದೆ, ಯಾರದೋ ಸೈಟಟಿನಲ್ಲಿ ಮೂತ್ರ ಬಿಡುವಾಗ, ಆಸ್ತಮಾರೋಗಿಯ ಪಕ್ಕದಲ್ಲಿ ಕುಳಿತು ಬೀಡಿ ಹೊಗೆ ಊದುವಾಗ, ಗರತಿ-ಗೃಹಸ್ಥರು ಒಡಾತ್ತಿರುವ ಕಡೆ ಬೇಕಂತಲೇ ಪುಂಡು-ಪೋಕರಿ ಮಾತಾಡುವಾಗ ಏಕಿರುವುದಿಲ್ಲ?
 ಇದನ್ನು, ಕಾನೂನನ್ನು ಕೈಗೆತ್ತಿಕೊಳ್ಳುವುದು ಎನ್ನತ್ತೇವೆ. ಕಾನೂನಿನ್ವಯ ಕಾರ‍್ಯಭಾರ ನಡೆಸಲು ಪೊಲೀಸರಿದ್ದಾರೆ; ಕೋರ್ಟು ಕಟಕಟೆಯಿದೆ. ಈ ವ್ಯವಸ್ಥೆ, ಅಪರಾಧಿಗಳಿಗೆ ಶಿಕ್ಷೆ ವಿಧಿಸುತ್ತವೆ. ಶಿಕ್ಷೆ ವಿಧಿಸಿ ಜೈಲಿಗೆ ಕಳಿಸುತ್ತವೆ; ಜುಲ್ಮಾನೆ ವಿಧಿಸುತ್ತವೆ. ಶಿಕ್ಷೆ ಎಂದರೆ ಶಿಕ್ಷಣ ಎನ್ನುವದೇ ಅರ್ಥ. ಅಂಥದನ್ನೆಲ್ಲಾ ಮಾಡಬಾರದಪ್ಪಾ/ಮಾಡಬಾರದಮ್ಮಾ ಎಂದು ಕಠೀಣವಾಗಿ ಹೇಳಿ ಮನದಟ್ಟು ಮಾಡಿಸುವುದು. ಇಷ್ಟಿಷ್ಟು ಅವಧಿಯವರೆಗೆ ಸಜಾ ಎಂದು ಕೋರ್ಟ್ ಹೇಳಿದರೆ, ಅಷ್ಟು ಕಾಲದಲ್ಲಿ ವ್ಯಕ್ತಿ ತನ್ನ ತಪ್ಪು ಅರ್ಥಮಾಡಿಕೊಂಡು ತಿದ್ದಿಕೊಂಡಿರುತ್ತದೆ ಎಂಬ ನಂಬಿಕೆ. ಆದರೆ ಜೈಲುಗಳಲ್ಲಿ ಅಂತಹ ಆತ್ಮೀಯತೆ, ಮಾನವೀಯತೆ ಕಾಣಸಿಗುತ್ತದೆಯೇ? ಜೈಲಿಗೆ ಹೋಗಿಬಂದ ರೌಡಿ, ಇನ್ನೂ ದೊಡ್ಡ ರೌಡಿಯಾಗುವುದು, ದೊಡ್ಡ ದೊಡ್ಡ ಶಿಕ್ಷೆಗೆ ಸಿದ್ಧವಾಗುವುದು, ಈ ಪ್ರಶ್ನೆಗೆ ಸ್ವಯಂ ಉತ್ತರ ಹೇಳುತ್ತದೆ.
 ಜಲ್ಮಾನೆಯೆಂದರೂ ಅಷ್ಟೆ ಒಂದಿಷ್ಟು ಹಣವನ್ನು ಸರಕಾರದ ಮುಖದ ಮೇಲೆಸೆದು ರಾಜಾರೋಷವಾಗಿ ಹೊರಟುಹೋಗುವುದೆಂದಲ್ಲ; ಅಪರಾಧಿ ಜೈಲಿನಲ್ಲಿ ಸ್ವಶ್ರಮದಿಂದ ಅಷ್ಟನ್ನು ಉತ್ಪಾದಿಸಬೇಕು; ಅಲ್ಲಿಯವರೆಗೆ ಆತನ/ಆಕೆಯ ವೈಯಕ್ತಿಕ ಸ್ವಾತಂತ್ರ್ಯ ನ್ಯಾಯಾಂಗಕ್ಕೆ ಒತ್ತೆಯಾಗಬೇಕು. ಅಂಥದೆಲ್ಲಿ ಆಗುತ್ತಿದೆ? ಜೈಲು, ಸಜೆ, ದಂಡ ಇತ್ಯಾದಿಗಳು ಸಹ ಇಂದು ಕೇವಲ ಕಂದಾಚಾರವೇ ಆಗಿದೆ!
 ಸುಧಾರಿಸಬೇಕಾದ ವ್ಯವಸ್ಥೆಗೆ ಸಾಯಿಸುವ ಹಕ್ಕು ಇರಬಾರದು. ಹಿಂದೆಲ್ಲಾ ಕಾರ್ಬೆಟ್, ಆಂಡರ್ ಸನ್ ಇತ್ಯಾದಿ ಪರಿಣಿತ ಬೇಟೆಗಾರರಿಗೆ ಸಹ, ನರಭಕ್ಷಕ ಹುಲಿ-ಚಿರತೆಗಳನ್ನು ಮಾತ್ರಾ ಬೇಟೆಯಾಡುವ ಪರವಾನಗಿ ನೀಡಲಾಗುತ್ತಿತ್ತು. ಅಂತೆಯೇ, ಕೋರ್ಟೊಂದು ಒರ್ವ ವ್ಯಕ್ತಿಗೆ ಮರಣದಂಡನೆ ವಿಧಿಸಿತೆಂದರೆ, ಆ ಮನುಷ್ಯಪ್ರಾಣಿಗೆ ಈ ಸಮಾಜದಲ್ಲಿ ಬದುಕಲು ಹೇಗೂ ಅರ್ಹತೆಯಿಲ್ಲ ಎಂಬ ದೃಢೀಕರಣವಾಗುತ್ತದೆ. ಅಂಥದೊಂದು ನಿರ್ಣಯಕ್ಕೆ ಕೋರ್ಟ್ ರಿಜಿಸ್ಟ್ರಾರ್ ಮುದ್ರೆಯಷ್ಟೇ ಅಲ್ಲ, ಅದನ್ನು ನೀಡುವ ನ್ಯಾಯಾಧೀಶರ ಆತ್ಮಸಾಕ್ಷಿಯ ಮೊಹರೂ ಅತ್ಯಗತ್ಯವಾಗಿ ಬೇಕಾಗುತ್ತದೆ!