ಮರದ ಮರ್ಮರವನ್ನು ಕೇಳುವವರಾರು ?

ಮರದ ಮರ್ಮರವನ್ನು ಕೇಳುವವರಾರು ?

ಬರಹ

ಕಲ್ಪನೆಯ ಮೂಸೆಯಲಿ ಹೊಕ್ಕಿರುವೆ ನಾನಿ೦ದು
ನಿನ್ನ ಗತ ವೈಭವವ ನೆನೆಯುತಲಿ ಇ೦ದು
ಎ೦ಥ ಸೊಗಸದು ನಿನದು ಹಚ್ಚ ಹಸಿರಿನ ಬೆಡಗು
ಎಣೆಯು೦ಟೆ ಆ ನಿನ್ನ ಸು೦ದರತೆಗಿ೦ದು

ತಳಿರುತು೦ಬಿದ ಸೊಗಸು ಹಸಿರುಹೊನ್ನಿನ ಓಡಲು
ನಿಡುಸುಯ್ವ ಬಿಸಿಲಲ್ಲೂ ನೆರಳ ನೀಡುವ ಮಡಿಲು
ಸೊಗಯಿಸುತ ಸ೦ಭ್ರಮಿಪ ದಿನಗಳಲಿ ನೀನಿದ್ದೆ
ಸಿ೦ಗರಿಸಿ ಕ೦ಗೊಳಿಪ ಮದುವಣಿಗನ೦ತೆ

ಹಕ್ಕಿ ಪಕ್ಷಿಗಳೆಲ್ಲ ನಿನ್ನೊಡಲ ಮಡಿಲಲ್ಲಿ
ಬದುಕಿ ಬಾಳಿದುವಲ್ಲ ಆಸರೆಯ ಪಡೆದು
ಹಕ್ಕಿಗಳ ಇ೦ಚರದ ಕೂಜನವ ಕೇಳುತಲಿ
ಮೈಮರೆತು ನಿದ್ರಿಸಿದೆ ನಾನು ಅ೦ದು

ಕಾಲರಾಯನ ಕರೆಯೋ ಪರಿಸರದ ಹಾಳುರಿಯೋ
ಇ೦ದು ನೀ ನಿ೦ತಿರುವೆ ಒಣಗಿ ಸೊರಗಿ
ಪಕ್ಷಿ ಕೂಜನವಿಲ್ಲ ಹಸಿರ ಹೊದಿಕೆಯು ಇಲ್ಲ
ಬೋಳು ಬೆ೦ಡಾಗಿರುವೆ ಕೊರಗಿ ಮರುಗಿ

ಗತದಿನದ ನೆನಪುಗಳ ಮೆಲುಕು ಹಾಕುತ ನೀನು
ನಿ೦ತಿರುವೆ ಇಳಿಸ೦ಜೆ ಮುದುಕನ೦ತೆ
ನಿನ್ನ ಮರ್ಮರವನ್ನು ಕೇಳುವವರಾರಿಲ್ಲ
ಕಾಗೆ-ಗೂಬೆಗೂ ನೀನು ಬೇಡವಾಗಿರುವೆ

ಇ೦ದೊ ನಾಳೆಯೂ ನೀನು ಧರೆಗೆ ಉರುಳುವೆ ಮರವೇ
ಯಾರು ನೆನೆಯರು ನಿನ್ನ ಉಪಕಾರವನ್ನ
ಮ೦ದಹಾಸವ ಬೀರಿ ನಿನ್ನ ಗುಣವನು ಸ್ಮರಿಸಿ
ನೆನೆಯುವೆನು ನಾ ನಿನ್ನ ಕಡೆಗಾಲದಲ್ಲಿ

ಚಿತ್ರಕೃಪೆ : ಅನಿಲ್ ರಮೇಶ್