ಮರದ ಮೇಲೊಂದು ಮರ ಬೆಳೆದ ಅಪರೂಪದ ಸಂಗತಿ

ಮರದ ಮೇಲೊಂದು ಮರ ಬೆಳೆದ ಅಪರೂಪದ ಸಂಗತಿ

ನೀವು ದೊಡ್ಡ ದೊಡ್ಡ ಮರಗಳ ಮೇಲೆ ಸಣ್ಣ ಸಣ್ಣ ಬಳ್ಳಿಗಳಂತಹ ಪರಾವಲಂಬಿ ಗಿಡಗಳು ಬೆಳೆದದನ್ನು ನೋಡಿರಬಹುದು. ಅವುಗಳಿಗೆ ಸಾಮಾನ್ಯ ಭಾಷೆಯಲ್ಲಿ ಬದನಿಕೆ ಅಥವಾ ಬಂದಳಿಕೆ ಎನ್ನುತ್ತಾರೆ. ಅವುಗಳು ಮರದ ರೆಂಬೆಯ ಮೇಲೆ ಬೀಡು ಬಿಟ್ಟು ಆ ಮರದಿಂದಲೇ ಆಹಾರವನ್ನು ಹೀರಿಕೊಂಡು ಬದುಕುತ್ತವೆ. ಇವುಗಳಿಗೆ ಭೂಮಿಯ ಸಂಪರ್ಕದ ಅಗತ್ಯವಿಲ್ಲ. ತಮ್ಮ ಎಲ್ಲಾ ಅಗತ್ಯಗಳಿಗೆ ಆಶ್ರಯ ನೀಡಿದ ಮರವನ್ನೇ ಅವಲಂಬಿಸಿರುತ್ತದೆ. ಮರದ ಸಾರವನ್ನು ಹೀರಿ ಮರವಿಡೀ ಹಬ್ಬುತ್ತದೆ. ಕೊನೆಗೊಮ್ಮೆ ಮರದ ಸತ್ವವೆಲ್ಲಾ ನಾಶವಾಗಿ ಮರವೇ ಸತ್ತು ಹೋಗುತ್ತದೆ. ಇದು ಪರಾವಲಂಬಿ ಗಿಡದ ಕತೆಯಾಯಿತು.

ನಾವೀಗ ಹೇಳಹೊರಟಿರುವುದು ಮರದ ಮೇಲೆ ಮರ ಬೆಳೆದ ಅಪರೂಪದ ಸಂಗತಿ. ಈ ಮರಗಳು ಇರೋದು ಇಟಲಿ ದೇಶದ ಪಿಯಾಮೊಂಟೆ ಎಂಬ ಊರಿನಲ್ಲಿ. ಇಲ್ಲಿರುವ ಕಾಸೋರ್ಜೋ (Casorzo) ಪ್ರದೇಶದಲ್ಲಿ ಈ ಎರಡು ಮರಗಳು ಕಾಣಸಿಗುತ್ತವೆ. ಇವುಗಳನ್ನು ಇಲ್ಲಿಯ ಭಾಷೆಯಲ್ಲಿ ‘ Bialbero de Casorzo’ ಅಂದರೆ ಕಾಸೋರ್ಜೋದ ಎರಡು ಮರಗಳು ( The Double Trees of Casorzo) ಎಂದರ್ಥ. ಇಲ್ಲಿ ಒಂದು ಮರದ ಮೇಲೆ (ಚಿತ್ರ ನೋಡಿ) ನೇರವಾಗಿ ಮತ್ತೊಂದು ಮರ ಬೆಳೆದಿದೆ. ಕೆಳಗಿರುವ ಮರ ಹಿಪ್ಪುನೇರಳೆ (mulberry), ಮೇಲಿನದ್ದು ಚೆರ್ರಿ ಮರ. ಎರಡೂ ವಿಭಿನ್ನ ಪ್ರಕಾರಗಳ ಮರ. ಚೆರ್ರಿ ಮರವು ಪರಾವಲಂಬಿ ಮರವಲ್ಲ. ಅದರ ಬೆಳವಣಿಗೆಗೆ ಭೂಮಿಯ ಸಾರದ ಅವಶ್ಯಕತೆ ಇದ್ದೇ ಇದೆ. ಇಲ್ಲಿಯವರೆಗೆ ಯಾರಿಗೂ ಮೇಲೆ ಬೆಳೆಯುತ್ತಿರುವ ಚೆರ್ರಿ ಮರದ ಬೇರುಗಳು ಹೇಗೆ ಭೂಮಿಯನ್ನು ತಲುಪಿರಬಹುದು ಎಂಬ ಅಂದಾಜು ಸಿಕ್ಕಿಲ್ಲ. ಎರಡೂ ಮರಗಳು ಜೀವಂತವಾಗಿವೆ ಹಾಗೂ ಕಾಲಕಾಲಕ್ಕೆ ಹಣ್ಣುಗಳನ್ನು ಕೊಡುತ್ತಿವೆ. 

ಒಂದು ಅಂದಾಜಿನ ಪ್ರಕಾರ ಚೆರ್ರಿ ಹಣ್ಣು ತಿಂದ ಯಾವುದೋ ಒಂದು ಹಕ್ಕಿ ಹಿಪ್ಪುನೇರಳೆ ಮರದ ಮೇಲೆ ಚೆರ್ರಿಯ ಬೀಜವನ್ನು ಹಾಕಿದೆ. ಅದು ಮೊಳಕೆಯೊಡೆದು ಗಿಡವಾಗಿ ಬೆಳೆದು ಈಗ ಮರವಾಗಿದೆ. ಹಿಪ್ಪುನೇರಳೆ ಮರದ ಮೇಲೆ ಬೆಳೆದ ಚೆರ್ರಿ ಗಿಡವು ಭೂಮಿಯಲ್ಲಿ ಬೆಳೆದಂತೆಯೇ ಸಹಜ ಬೆಳವಣಿಗೆ ಹೊಂದಿದೆ. ಆ ಮರದ ಕೊಂಬೆಗಳು ಸುಮಾರು ಐದು ಮೀಟರ್ ಸುತ್ತಳತೆಯಲ್ಲಿ ಹರಡಿಕೊಂಡಿವೆ. ಬಹುಷಃ ಯಾವುದೋ ಒಂದು ರೀತಿಯಲ್ಲಿ ಚೆರ್ರಿ ಗಿಡದ ಬೇರುಗಳು ಹಿಪ್ಪುನೇರಳೆ ಗಿಡದ ಒಳಗಿನಿಂದ ಭೂಮಿಗೆ ತಲುಪಿರಬೇಕು ಎಂದು ಅಂದಾಜಿಸಲಾಗಿದೆ. ಇಲ್ಲವಾದಲ್ಲಿ ಅಷ್ಟೊಂದು ದೊಡ್ದ ಮರವು ಭೂಮಿಯ ಸಂಪರ್ಕವಿಲ್ಲದೇ ಬೆಳೆಯಲು ಸಾಧ್ಯವೇ? ಇದೊಂದು ಬಿಡಿಸಲಾಗದ ರಹಸ್ಯವಾಗಿಯೇ ಉಳಿದಿದೆ. 

ಚಿತ್ರಕೃಪೆ: ಅಂತರ್ಜಾಲ ತಾಣ