ಮರಳುಗಾಡಿನಲ್ಲಿ ಮಹಿಳಾ ಸಬಲೀಕರಣದ ಕೇಂದ್ರ: ಮರಳುಗಲ್ಲಿನ ಶಾಲೆ

ಮರಳುಗಾಡಿನಲ್ಲಿ ಮಹಿಳಾ ಸಬಲೀಕರಣದ ಕೇಂದ್ರ: ಮರಳುಗಲ್ಲಿನ ಶಾಲೆ

ಕಳೆದ ಎರಡು ವರುಷಗಳಲ್ಲಿ ಕೊರೋನಾ ವೈರಸಿನ ದಾಳಿಯಿಂದಾಗಿ ಹಲವು ತಿಂಗಳು ಮುಚ್ಚಿದ್ದ ಶಾಲೆಗಳಲ್ಲಿ ಇದೀಗ ಮತ್ತೆ ಮಕ್ಕಳ ಕಲರವ. ಅಂತೂ 2022ರ ಜೂನ್‌ನಲ್ಲಿ ಶಾಲೆಗಳು ಶುರುವಾಗಿರುವುದು ಸಂತಸದ ಸಂಗತಿ.

ಈ ಹೊತ್ತಿನಲ್ಲಿ ರಾಜಸ್ಥಾನದ ಜೈಸಲ್ಮೇರಿನ ಥಾರ್ ಮರುಭೂಮಿಯ ಗ್ರಾಮೀಣ ಪ್ರದೇಶದಲ್ಲಿ ಮರಳುಗಲ್ಲಿನಲ್ಲಿ ನಿರ್ಮಿಸಲಾಗಿರುವ ಶಾಲೆಯೊಂದು ಹೆಣ್ಣುಮಕ್ಕಳ ಸ್ವಾಗತಕ್ಕೆ ಸಿದ್ಧವಾಗಿದೆ. ಅದುವೇ ರಾಜಕುಮಾರಿ ರತ್ನಾವತಿ ಹೆಣ್ಣುಮಕ್ಕಳ ಶಾಲೆ. (ವಿಳಾಸ: ಕನೋಯಿ ಗ್ರಾಮ, ಸಲ್‌ಖಾ, ಜೈಸಲ್ಮೇರ್, ರಾಜಸ್ಥಾನ 345001) ಇದನ್ನು ವಿನ್ಯಾಸಗೊಳಿಸಿ ನಿರ್ಮಿಸಿದ್ದು ಅಮೇರಿಕಾದ ನ್ಯೂಯಾರ್ಕಿನ ಡಯಾನ ಕೆಲ್ಲೊಗ್ ಆರ್ಕಿಟೆಕ್ಟ್ಸ್ ಎಂಬ ಸಂಸ್ಥೆ.

ಇದರಲ್ಲೇನು ವಿಶೇಷ ಅಂತೀರಾ? ಇದೊಂದು ವಾಸ್ತುಶಿಲ್ಪದ ಅದ್ಭುತ ಮಾದರಿ. ಇದು ಅಂಡಾಕಾರದ ಶಾಲೆ. ಈ ಆಕಾರವೇ ಮಹಿಳಾ ಶಕ್ತಿಯ ಸಂಕೇತ. ಇದನ್ನು ಕಟ್ಟಿದ್ದು ಸ್ಥಳೀಯವಾಗಿ ಸಿಗುವ ಮರಳುಗಲ್ಲುಗಳಿಂದ. ಜೈಸಲ್ಮೇರಿನ ಮರುಭೂಮಿಯಲ್ಲಿ ಬೇಸಗೆಯಲ್ಲಿ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್ ಹತ್ತಿರ. ಮೈಸುಡುವ ಆ ಬಿಸಿ ಹವೆಯಲ್ಲಿಯೂ ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏರ್-ಕಂಡಿಷನರ್ ಅಗತ್ಯವಿಲ್ಲ! ಯಾಕೆಂದರೆ, ಅಂಡಾಕಾರದ ಕಟ್ಟಡದೊಳಗೆ ಗಾಳಿಯ ಸುತ್ತಾಟದಿಂದಾಗಿ ಕಟ್ಟಡವು ತಂಪಾಗಿರುತ್ತದೆ. ಅದಲ್ಲದೆ, ಮರುಭೂಮಿಯ ಬೀಸುಗಾಳಿಗೆ ನುಗ್ಗಿ ಬರುವ ಮರಳಿನ ಕಣಗಳು ಶಾಲೆಯೊಳಗೆ ನುಸುಳದಂತೆ ಗೋಡೆಗಳ ವಿನ್ಯಾಸವಿದೆ. ಇದಕ್ಕೆ ಪ್ರೇರಣೆ ಇಲ್ಲಿನ ಮನೆಗಳ ಗೋಡೆಗಳ ರಚನೆಗೆ ಬಳಸುವ "ಜಾಲಿ" ವಿನ್ಯಾಸ.

ಪಾರಂಪರಿಕ ಮಳೆನೀರು ಕೊಯ್ಲಿನ ತಂತ್ರಜ್ನಾನವನ್ನು ಇಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ವಾರ್ಷಿಕ 3.5 ಲಕ್ಷ ಲೀಟರ್ ಮಳೆನೀರನ್ನು ಕೊಯ್ಲು ಮಾಡಲು ಸಹಾಯ. ಕಟ್ಟಡದ ಮೇಲ್ಭಾಗದಲ್ಲಿ ಜೋಡಿಸಲಾಗಿರುವ ಸೋಲಾರ್ ಪ್ಯಾನೆಲುಗಳು ಕಟ್ಟಡಕ್ಕೆ ವಿದ್ಯುತ್ ಮತ್ತು ನೆರಳನ್ನು ಒದಗಿಸುತ್ತಿವೆ. ಆದ್ದರಿಂದಲೇ ಇದು "ಸುಸ್ಥಿರ ಶಾಲೆ". ಜೊತೆಗೆ, ಇದರ ವಾಸ್ತುಶಿಲ್ಪ ಮಹಿಳಾ ಶಕ್ತಿಯ ಅನಂತ ಸಾಧ್ಯತೆಗಳನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ ವಾಸ್ತುಶಿಲ್ಪಿ ಡಯಾನಾ ಕೆಲ್ಲೊಗ್.
 
ಅಲ್ಲಿ ನಿರ್ಮಿಸಲಾಗುತ್ತಿರುವ “ಗ್ಯಾನ್ ಕೇಂದ್ರ” ಎಂಬ ದೊಡ್ಡ ಸಂಕೀರ್ಣದ ಭಾಗವಾಗಿದೆ ಈ ಶಾಲೆ. ಮಹಿಳೆಯರ ಸಹಕಾರಿ ಸಂಘ ಮತ್ತು ಪ್ರದರ್ಶನಾ ಭವನ ಆ ಸಂಕೀರ್ಣದಲ್ಲಿ ತಲೆಯೆತ್ತುತ್ತಿವೆ. ಈ ಶಾಲೆಯು ಸುತ್ತಲಿನ ಪರಿಸರದ ಸಹಜವಾದ ಭಾಗವಾಗಿ ಕಾಣಿಸಬೇಕು ಎಂಬುದಕ್ಕಾಗಿಯೇ ಇದನ್ನು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಇಲ್ಲಿ ಶಿಕ್ಷಣ ಪಡೆಯಲಿರುವ ಹಲವು ಹೆಣ್ಣುಮಕ್ಕಳ ಕುಟುಂಬದ ಸದಸ್ಯರು ಇದರ ನಿರ್ಮಾಣದಲ್ಲಿ ದುಡಿದವರು. ಯಾಕೆಂದರೆ, ಇದರ ನಿರ್ಮಾಣಕ್ಕೆ ಸ್ಥಳೀಯರನ್ನೇ ಕೆಲಸಗಾರರನ್ನಾಗಿ ಬಳಸಿಕೊಳ್ಳಲಾಗಿತ್ತು. ಹಾಗಾಗಿ, ಇಲ್ಲಿನ ಕುಟುಂಬಗಳಿಗೂ ಈ ಶಾಲೆಗೂ ಅವಿನಾಭಾವ ಸಂಬಂಧ. ಶಾಲೆಯ ಪೀಠೋಪಕರಣಗಳನ್ನು ಬೀಟೆ ಮರದಿಂದ ಪಾರಂಪರಿಕ ಚಾರ್ಪೈ ಶೈಲಿಯಲ್ಲಿ ರಚಿಸಲಾಗಿದೆ.

“ಪರಿಣಾಮಕಾರಿ ವಿನ್ಯಾಸ ರೂಪಿಸಬೇಕಾದರೆ ಸ್ಥಳೀಯ ಚರಿತ್ರೆ, ಅಲ್ಲಿನ ಸಂಸ್ಕೃತಿ ಮತ್ತು ಭೂಪ್ರದೇಶವನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ" ಎನ್ನುತ್ತಾರೆ ಡಯಾನ ಕೆಲ್ಲೋಗ್. ಇಲ್ಲಿನ ಮಹಿಳೆಯರ ಮತ್ತು ಹೆಣ್ಣುಮಕ್ಕಳ ಕನಸುಗಳನ್ನು ಪೋಷಿಸುವ, ಇಲ್ಲಿನ ಸಮುದಾಯ “ಇದು ನಮ್ಮದೇ" ಎಂದು ಭಾವಿಸುವ ಕಟ್ಟಡವೊಂದನ್ನು ರೂಪಿಸುವುದು ಅವರ ಉದ್ದೇಶವಾಗಿತ್ತು. ಅದನ್ನು ಅವರು ಸಾಧಿಸಿದ್ದಾರೆ. ಅದಕ್ಕಾಗಿ, 2014ರಲ್ಲೇ ಅವರು ಜೈಸಲ್ಮೇರ್ ಪ್ರದೇಶದ ಹಳ್ಳಿಗಳಿಗೆ ಭೇಟಿಯಿತ್ತು, ಅಧ್ಯಯನ ನಡೆಸಿದ್ದರು. ಅಲ್ಲಿನ ಕಟ್ಟಡಗಳನ್ನು ಪರಿಶೀಲಿಸಿದ್ದರು; ಸಂಗೀತವನ್ನು ಆಲಿಸಿದ್ದರು; ಪಾರಂಪರಿಕ ಕಲೆಗಳನ್ನು ಗಮನಿಸಿದ್ದರು. ವಾಸ್ತುಶಿಲ್ಪದ ಅದ್ಭುತಗಳಾದ ಅಲ್ಲಿನ “ಮೆಟ್ಟಲು ಬಾವಿ”ಗಳನ್ನೂ ಅಧ್ಯಯನ ಮಾಡಿದ್ದರು.  ಅವೆಲ್ಲದರ ಪ್ರೇರಣೆಯಿಂದ ಶಾಲೆಯ ವಿನ್ಯಾಸವನ್ನು ಅಂತಿಮಗೊಳಿಸಿದ್ದರು.

ಈ ಸಂಕೀರ್ಣದಲ್ಲಿ ತಲೆಯೆತ್ತಲಿರುವ ಮಹಿಳಾ ಸಹಕಾರ ಸಂಘದಲ್ಲಿ ಸ್ಥಳೀಯ ಕುಶಲಕರ್ಮಿಗಳು ಮಹಿಳೆಯರಿಗೆ ನೇಕಾರಿಕೆ ಮತ್ತು ಕುಸುರಿ ಕಲೆ (ಎಂಬ್ರಾಯ್ಡರಿ) ತರಬೇತಿ ನೀಡಲಿದ್ದಾರೆ. ಜೊತೆಗೆ, ಈ ಸಂಕೀರ್ಣದ ಭಾಗವಾದ ಮೇಧಾ ಎಂಬಲ್ಲಿ ಸ್ಥಳೀಯ ಕಲೆಗಳ ವಸ್ತುಪ್ರದರ್ಶನ ಮತ್ತು ಕರಕುಶಲವಸ್ತುಗಳ ಮಾರಾಟ, ಬಟ್ಟೆಗಳ (ಟೆಕ್ಸ್‌-ಟೈಲ್) ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಇರುತ್ತವೆ. ಇವೆಲ್ಲವೂ ಒಟ್ಟಾಗಿ ಮಹಿಳಾ ಸಬಲೀಕರಣಕ್ಕೆ ಒತ್ತಾಸೆಯಾಗಿವೆ.

ಇಂತಹ ಅಪೂರ್ವ ಯೋಜನೆಯನ್ನು ಕಾರ್ಯಗತಗೊಳಿಸಿದ್ದು ಸಿಐಟಿಟಿಎ ಎಂಬ ಲಾಭರಹಿತ ಸಂಸ್ಥೆ. ಆರ್ಥಿಕವಾಗಿ ಹಿಂದುಳಿದಿರುವ, ಭೌಗೋಳಿಕವಾಗಿ ಮೂಲೆಯಲ್ಲಿರುವ ಮತ್ತು ನಿರ್ಲಕ್ಷಿಸಲ್ಪಟ್ಟ ಸಮುದಾಯಗಳ ಅಭಿವೃದ್ಧಿಗೆ ಬೆಂಬಲ ನೀಡುವುದು ಈ ಸಂಸ್ಥೆಯ ಉದ್ದೇಶ. ಅದರ ಮುಖ್ಯಸ್ಥರಾದ ಮೈಕಲ್ ಅವರ ಕನಸು ಏನಾಗಿತ್ತು? "ಹೆತ್ತವರು ಅಭಿಮಾನದಿಂದ ತಮ್ಮ ಹೆಣ್ಣುಮಕ್ಕಳನ್ನು ಶಿಕ್ಷಣಕ್ಕಾಗಿ ಕಳಿಸುವಂತಹ ಅಪೂರ್ವ ಶಾಲೆಯೊಂದನ್ನು ನಿರ್ಮಿಸಬೇಕು” ಎಂಬುದಾಗಿತ್ತು. ಜೈಸಲ್ಮೇರ್ ಪ್ರದೇಶವನ್ನು ಈ ಯೋಜನೆಗಾಗಿ ಆಯ್ದುಕೊಳ್ಳಲು ಕಾರಣ: ಅಲ್ಲಿ ಮಹಿಳಾ ಸಾಕ್ಷರತೆ ತೀರಾ ಕಡಿಮೆ ಮತ್ತು ಶಾಲೆ ತೊರೆದು ಹೋಗುವ ಹೆಣ್ಣುಮಕ್ಕಳ ಸಂಖ್ಯೆ ಬಹಳ ಜಾಸ್ತಿ. ಈಗ ಮೈಕಲ್ ಹೇಳುತ್ತಾರೆ, “ಇದು ಶಿಕ್ಷಣ ಕೇಂದ್ರವಾಗಿ ಮಾತ್ರವಲ್ಲ, ಪ್ರವಾಸಿ ತಾಣವಾಗಿಯೂ ಜಗತ್ತಿನಲ್ಲಿ ಪ್ರಸಿದ್ಧವಾಗಲಿದೆ.”

ಅಂತೂ 2018ರಲ್ಲಿ ಈ ಸಂಕೀರ್ಣದ ನಿರ್ಮಾಣ ಶುರುವಾಯಿತು. 2020ರ ಆರಂಭದಲ್ಲೇ ಶಾಲೆಯ ನಿರ್ಮಾಣ ಮುಗಿದಿದ್ದರೂ ಕೊರೋನಾ ವೈರಸಿನ ದಾಳಿಯಿಂದಾಗಿ ಶಾಲೆಯ ಉದ್ಘಾಟನೆ ಮುಂದೂಡಬೇಕಾಯಿತು. ಮುಂದಿನ ತಿಂಗಳು, ಜುಲಾಯಿ 2022ರಲ್ಲಿ, ಉದ್ಘಾಟನೆಯಾಗಲಿರುವ ಈ ಮರಳುಗಲ್ಲಿನ ಸುಸ್ಥಿರ ಶಾಲೆ ಸುಮಾರು 400 ಹೆಣ್ಣುಮಕ್ಕಳಿಗೆ ಬಾಲವಾಡಿಯಿಂದ ತೊಡಗಿ ಹತ್ತನೆಯ ತರಗತಿಯ ವರೆಗೆ ಶಿಕ್ಷಣ ಪಡೆಯಲು ಆಸರೆಯಾಗಲಿದೆ. ಇಲ್ಲಿರುವ ಶಾಲೆಯ ಫೋಟೋಗಳು ಇದೊಂದು ವಾಸ್ತುಶಿಲ್ಪದ ಅಚ್ಚರಿ ಮತ್ತು ಮಹಿಳಾ ಸಬಲೀಕರಣದ ಸಂಕೇತ ಎಂಬುದನ್ನು ಜಗತ್ತಿಗೆ ಸಾರುತ್ತಿವೆ.

ಫೋಟೋಗಳು: ಮರಳುಗಾಡಿನ ಶಾಲೆಯ ನೋಟಗಳು