ಮರವೇರಿ.. ಸಂಚುಹೂಡಿ ಪಕ್ಷಿಗಳ ರಕ್ತಹೀರುವ ಅಂಗೈ ಗಾತ್ರದ ಜೇಡ ನೋಡಿದ್ದೀರಾ?

ಮರವೇರಿ.. ಸಂಚುಹೂಡಿ ಪಕ್ಷಿಗಳ ರಕ್ತಹೀರುವ ಅಂಗೈ ಗಾತ್ರದ ಜೇಡ ನೋಡಿದ್ದೀರಾ?

ಬರಹ

ಮರವೇರಿ ರೆಂಬೆ-ಕೊಂಬೆಗಳ ಮೇಲೆ ತನ್ನ ಜೊಲ್ಲು ರೂಪದ ಅಂಟು ಸ್ರವಿಸಿ, ಸಂಚು ಹೂಡಿ..ಬೆಕ್ಕಿನಂತೆ ಜಪ್ಪಿಸಿ ಕುಳಿತು ಸಿಕ್ಕಿ ಬೀಳುವ ಪಕ್ಷಿಗಳ ರಕ್ತ ಹೀರುವ ಅಂಗೈ ಗಾತ್ರದ ಜೇಡ ನೋಡಿದ್ದೀರಾ? ಹರ್ಷ..

ಧಾರವಾಡದ ಹೆಸರಾಂತ ಚಾರಣಿಗ ಪ್ರೊ.ಜಿ.ಎಸ್.ಕಲ್ಲೂರ್ ಅವರಿಂದ ಏಕಾಏಕಿ ಇಂದು ಬೆಳಿಗ್ಗೆ ದೂರವಾಣಿ ಕರೆ; ಹಾಗು ಅಪರೂಪದ ಮಾಹಿತಿ ವಿನಿಮಯ. ಹಿಮಾಲಯದ ಹಿಮಾಚ್ಛಾದಿತ ಗುಡ್ಡಗಳ ಚಾರಣ ಕೈಗೊಳ್ಳಲು ಹೋದವರು ಯಾವ ಪೂರ್ವ ಸೂಚನೆ ನೀಡದೇ ಧಾರವಾಡಕ್ಕೆ ಬಂದಿಳಿದ ಸುದ್ದಿ ಅಶ್ಚರ್ಯ ಮೂಡಿಸಿತು.

‘ಸರ್..ಇಲ್ಲ ನಾನು ಅಂತಹ ಜೇಡ ನೋಡಿಲ್ಲ’ ಎಂದು ಉತ್ತರಿಸಿದೆ. ಪ್ರೊ.ಕಲ್ಲೂರ್ ಡಾ.ಸಂಜೀವಣ್ಣ ನಡೆಸುವ ಮಾಳಮಡ್ಡಿಯ ‘ಬಾಲ ಬಳಗ’ ಶಾಲಾ ಆವರಣಕ್ಕೆ ಬರಲು ಹೇಳಿದರು. ನಾನು ತಡ ಮಾಡಲಿಲ್ಲ. ಸದಾ ‘ಸುದ್ದಿ ವಾಸನೆ ಗ್ರಹಿಸಬಲ್ಲ ಮೂಗು’ ಜಾಗೃತವಾಗಿ ಇಟ್ಟುಕೊಂಡಿರುವ ಅಣ್ಣ ಛಾಯಾಪತ್ರಕರ್ತ ಕೇದಾರನಾಥ್ ಹಾಲು ಕುಡಿದಷ್ಟು ಸಂತೋಷದಲ್ಲಿ ಸ್ಥಳಕ್ಕೆ ಧಾವಿಸಿದರು.

ಪ್ರೊ.ಕಲ್ಲೂರ್ ಅತ್ಯಂತ ಜಾಗರೂಕರಾಗಿ, ಪ್ಲಾಸ್ಟಿಕ್ ಬಾಟಲಿಯಲ್ಲಿ ಉಸಿರುಗಟ್ಟದಂತೆ ಈ ‘ವಿಶೇಷ ಅಥಿತಿ’ಯನ್ನು ಬಂಧಿಸಿ ಇಟ್ಟಿದ್ದರು. ಮೈ ಮೇಲೆ ಜಿಬ್ರಾದಂತೆ ಕಪ್ಪು ಪಟ್ಟಿಯನ್ನು ಹೊಂದಿದ್ದ ದೈತ್ಯ ಜೇಡ. ಸಮೀಪದಿಂದ ನೋಡಿದರೆ ಚಿರತೆಯ ಮೈಬಣ್ಣ-ನಡುವೆ ಕಪ್ಪು ಪಟ್ಟಿಗಳು. ಕೈ ಇಟ್ಟು ನೋಡಿದರೆ ದೊಡ್ಡ ಕೈಯ ಅಂಗೈ ಮೀರಿಸುವಷ್ಟು ಗಾತ್ರ. ಹೆಬ್ಬೆಟ್ಟು ಗಾತ್ರದ ದೇಹ. ತೋರು ಬೆರಳಿನಷ್ಟು ಉದ್ದ ಕಾಲುಗಳು. ಕಾಲುಗಳ ದಪ್ಪ ಸುಮಾರು ಮಕ್ಕಳ ಕಿರುಬೆರಳು ಗಾತ್ರ!

ಅಬ್ಬಾ! ಆಶ್ಚರ್ಯ, ಆಘಾತ ಏಕಕಾಲಕ್ಕೆ. ಸುತ್ತಲೂ ‘ಬಾಲ ಬಳಗ’ದ ಬಾಲವಿರದಂತಹ ಮಕ್ಕಳು! ಬಾಟಲಿಯಿಂದ ಜೇಡ ಹೊರಗೆ ನೆಗೆಯುತ್ತಿದ್ದಂತೆ ಮಕ್ಕಳೆಲ್ಲ ಕಿಟಾರ್..ಎಂದು ಕಿರುಚಿ ದಿಕ್ಕಾಪಾಲಾಗಿ ಓಡಿದರು. ಜೇಡ ಕೂಡ ಆ ಮಕ್ಕಳನ್ನು ಜಿದ್ದಿಗೆ ಬಿದ್ದು ಬೆನ್ನಟ್ಟಿದವನಂತೆ, ತನ್ನ ‘ರಿಂಗ್ ಮಾಸ್ಟರ್’ ಆಜ್ನೆ ಪಾಲಿಸದೇ ಉದ್ದುದ್ದ ಓಡತೊಡಗಿದ. ಅಣ್ಣ ಛಾಯಾ ಪತ್ರಕರ್ತ ಕೇದಾರನಾಥ್ ಕೋನ ಬದಲಿಸಿ ಅಷ್ಟರಲ್ಲಿಯೇ ಹತ್ತಾರು ಫೋಟೊ ಕ್ಲಿಕ್ಕಿಸಿದರು. ಜೇಡನ ಓಟಕ್ಕೆ ನಿಟ್ಟುಸಿರು ಬಿಟ್ಟರು. ‘ಸಾಹೇಬ್ರು..ಯಾಕೋ..ಸ್ಮೈಲ್ ಪ್ಲೀಸ್..ಈ ಕಡೆ..ಹಾ.. ರೇಡಿ’ ಹೀಗೆಲ್ಲ ಜೇಡನಿಗೆ ಕತ್ತು ನೋಯಿಸುವ ಯಾವ ವ್ಯಾಯಾಮ ಮಾಡಿಸದೇ..ತಾವೇ ಎಲ್ಲವನ್ನೂ ಮಾಡಿದ್ದು ನನಗೆ ಸೋಜಿಗ ಎನಿಸಿತ್ತು!

ಆ ಜೇಡನ ಬಗ್ಗೆ ಕಲ್ಲೂರ್ ಎಲ್ಲರಿಗೂ ಅಲ್ಲಿಯೇ ವಿವರಣೆ ನೀಡಿದರು. ಬಹುಶ: ನಮ್ಮ ಭಾಗದಲ್ಲಿ ಇಲ್ಲಿಯವರೆಗೆ ಕಂಡು ಬಂದ ತರಹೇವಾರಿ ಜೇಡಗಳಲ್ಲಿ ಈ ಗಾತ್ರದ್ದು ಇರಲಿಲ್ಲ. ಅದೊಂದು ವಿಶೇಷ. ಕಪ್ಪು ಜೇಡಗಳಿವೆ. ಆದರೆ ಚಿರತೆಯ ಬಣ್ಣದ ಈ ಜೇಡ ಅತಿವಿಶಿಷ್ಠ ಎಂದರು. ಬಲೆ ನೇಯದೇ..ಗಿಡದ ರೆಂಬೆಗಳ ಮೇಲೆ ಅಂಟು ರಸ ಸ್ರವಿಸಿ ಇಟ್ಟು, ಮರೆಯಲ್ಲಿ ಈ ಜೇಡ ವಿರಮಿಸುತ್ತದೆ. ಗುಬ್ಬಿ, ಚಿಟಗುಬ್ಬಿ ಸೇರಿದಂತೆ ಚಿಕ್ಕ ಸಸ್ತನಿಗಳು, ಹುಳು-ಹುಪ್ಪಡಿಗಳು ಹಾರಿ ಬಂದು ಕಾಲಿನಿಂದ ಟೊಂಗೆ ಹಿಡಿದುಕೊಳ್ಳುತ್ತಿದ್ದಂತೆ ಕಾಲುಗಳು ಅಂಟಿ ಕೊಂಡುಬಿಡುತ್ತವೆ. ಬಿಡಿಸಿಕೊಳ್ಳಲು ಹಾರಾಡಿ, ಹೆಣಗಿ ಸುಸ್ತಾಗಿ ಜೋತು ಬೀಳುತ್ತಿದ್ದಂತೆ ಈ ಜೇಡ ವುಗಳ ಮೇಲೆ ಸವಾರಿ ಮಾಡುತ್ತದೆ. ತನ್ನ ಚೂಪಾದ ಹಲ್ಲಿನಿಂದ ಆ ಪಕ್ಷಿಯ ದೇಹದಲ್ಲಿ ವಿಷವನ್ನು ತೂರಿಸುತ್ತದೆ. ಕೆಲವೇ ನಿಮಿಷಗಳಲ್ಲಿ ಅದು ನಿಸ್ತೇಜಗೊಳ್ಳುತ್ತದೆ. ಕ್ರಮೇಣ ಜೀವರಸ ಹೀರಿ ಅದನ್ನು ಕೊಲ್ಲುತ್ತದೆ ಎಂದರು.

ಹಾಗೆಯೇ ಗಿಡಗಳ ಮೇಲೆ ಪಕ್ಷಿಗಳು ಕಟ್ಟುವ ಗೂಡಿನಲ್ಲಿ ಅವಿತಿದ್ದು ಮೊಟ್ಟೆಗಳನ್ನು ಹಾಗು ಚಿಕ್ಕ, ಚಿಕ್ಕ ಗುಬ್ಬಿಗಳನ್ನು ಸಹ ಇದು ರಸಹೀರಿ ಕೊಲ್ಲುವಷ್ಟು ಕ್ರೂರ. ಮನುಷ್ಯರನ್ನು ಕಚ್ಚಿದ ಉದಾಹರಣೆಗಳು ಇಲ್ಲ. ಆದರೆ ಕಚ್ಚಬಹುದು. ಕೂಡಲೇ ಸಕಾಲಿಕ ಚಿಕಿತ್ಸೆ ಅವಶ್ಯ ಎಂದು ಪ್ರೊ.ಕಲ್ಲೂರ್ ಮಗುವೊಂದರ ಮುಗ್ಧ ಪ್ರಶ್ನೆಗೆ ಉತ್ತರಿಸುತ್ತ ಹೇಳಿದರು. ಉಸಿರು ಬಿಗಿ ಹಿಡಿದು ಕೇಳುತ್ತಿದ್ದವು ಮಕ್ಕಳು. ‘ಕೊಂದು ಬಿಟ್ಟರೇ?’ ಮತ್ತೊಂದು ಪುಟಾಣಿ ಕಲ್ಲೂರ್ ಮಾಮಾಗೆ ಪ್ರಶ್ನೆ ಕೇಳಿತು. ‘ನೋಡು ಪುಟ್ಟ..ನಿಸರ್ಗದಲ್ಲಿ ಎಲ್ಲವಕ್ಕೂ ಬದುಕುವ ಹಕ್ಕಿದೆ. ಅವುಗಳಿಂದ ಜೀವಿ ವೈವಿಧ್ಯ ಸೃಷ್ಠಿಯಾಗಿದೆ. ಪರಿಸರಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತವೆ. ಈ ಜೇಡ ಕೊಂದರೆ ಆಹಾರ ಸರಪಳಿಯ ಕೊಂಡಿಯೊಂದು ಕಳಚಿ ಬಿಡುತ್ತದೆ. ಹಾಗಾಗಿ ಹಾಗೆ ಮಾಡಬಾರದು’ ಎಂದರು.

ಹಾಗೆ ನೋಡಿದರೆ ಮನುಷ್ಯರಷ್ಟು ಭಯಂಕರವಾದ, ಕ್ರೂರ ಪ್ರಾಣಿ ಜಗತ್ತಿನಲ್ಲಿ ಇನ್ನೊಂದಿಲ್ಲ. ೯೯% ಜೇಡಗಳಿಗೆ ನಾವು ಹೆದರುವ ಅವಶ್ಯಕತೆ ಇಲ್ಲ. ಕಾರಣ ಅವು ನಿರುಪದ್ರವಿ. ತನ್ನ ಆಹಾರವಾಗಬಲ್ಲ ಕೀಟಗಳನ್ನು ಬಲಿ ಕೆಡವಲು ಅವು ‘ಪ್ರೊಫೆಷನಲ್’ ರೀತ್ಯಾ ಅದ್ಬುತವಾದ ಬಲೆಯನ್ನು ನೇಯುತ್ತವೆ. ಹಾಗೆಯೇ ಸಂತಾನ ಅಭಿವೃದ್ಧಿಗಾಗಿ ಗಂಡು-ಹಣ್ಣು ಜೇಡವನ್ನು ಪರಸ್ಪರ ಆಕರ್ಷಿಸಲು ಸಹ ಬಲೆ ನೇಯುತ್ತವೆ. ಆದರೆ ಎಲ್ಲ ಜಾತಿಯ ಜೇಡ ಕೀಟಗಳು ಬಲೆ ನೇಯುವುದಿಲ್ಲ. ತಜ್ನರು ಅವುಗಳನ್ನು ‘ನಡೆದಾಡುವ ಜೇಡಗಳು’ ಎಂದು ಕರೆಯುತ್ತಾರೆ. ಈ ಬಗೆಯ ಜೇಡಗಳು ತಮ್ಮ ಆಹಾರವಾಗಬಲ್ಲ ಕೀಟಗಳನ್ನು ಹಿಡಿಯಲು ಬಲೆ ನೇಯದೇ, ಅಟ್ಟಿಸಿಕೊಂಡು ಹೋಗಿ ಹಿಡಿದು ತಿನ್ನುತ್ತವೆ. (ಚಿತ್ರ ನೋಡಿ.)

ಜೇಡಗಳ ಸ್ಪರ್ಷಜ್ನಾನಕೂಡ ಅದ್ಭುತವಾದದ್ದು. ಈ ಶಕ್ತಿಯನ್ನೇ ಬಳಸಿಕೊಂಡು ಅವು ತಮ್ಮ ಆಹಾರ ಪತ್ತೆ ಮಾಡುತ್ತವೆ. ಜೇಡ ತನ್ನ ಶಿಕಾರಿಯನ್ನು ಕಚ್ಚಿ, ವಿಷಕಾರಿಯಾದ ರಸ ಬಿಟ್ಟು ಅವುಗಳನ್ನು ನಿಷ್ಕ್ರಿಯಗೊಳಿಸಿ ಕೊಲ್ಲುತ್ತದೆ. ಜೀರ್ಣಕಾರಕ ರಸಗಳನ್ನು ಬಲಿಗೆ ಬಿದ್ದ ಕೀಟಗಳ ದೇಹದೊಳಗೆ ಚುಚ್ಚುವ ಜೇಡ ಆನಂತರ ಸುತ್ತ ಬಲೆ ನೇಯ್ದು, ದೇಹದ ರಸವನ್ನು ಹೀರುತ್ತವೆ. ಹಾಗಾಗಿ ಜೈವಿಕ ಕೀಟ ನಿಯಂತ್ರಣದಲ್ಲಿ ಅವುಗಳ ಕೊಡುಗೆ ಅಪಾರವಾದದ್ದು.

ಚೀನಾದ ರೈತರು ಭತ್ತದ ಗದ್ದೆಗಳಲ್ಲಿ ಕೀಟಗಳ ಹತೋಟಿಗಾಗಿ ‘ಜೇಡಗಳ ಕೊಯ್ಲು’ ಎಂಬ ವಿಧಾನವನ್ನು ಯಶಸ್ವಿಯಾಗಿ ಬಳಸುತ್ತಿದ್ದಾರೆ. ಭತ್ತದ ಗದ್ದೆಗಳ ಹತ್ತಿರದಲ್ಲಿ ಜೇಡಗಳು ಹೆಚ್ಚಿರುವ ಸ್ಥಳಗಳಲ್ಲಿ ನೆಡ ಬೇಕಿರುವ ಭತ್ತದ ಹುಲ್ಲಿನ ಕಂತೆಗಳನ್ನು ಇರಿಸುತ್ತಾರೆ. ಇವುಗಳಲ್ಲಿ ರಾಶಿ ರಾಶಿ ಜೇಡಗಳು ಅವಿತುಕೊಂಡು ವಂಶಾಭಿವೃದ್ಧಿ ಮಾಡಿಕೊಳ್ಳುತ್ತವೆ. ಅನಂತರ ಈ ಹುಲ್ಲಿನ ಕಂತೆಗಳನ್ನು ಕೀಟಗಳು ಜಾಸ್ತಿಇರುವ ಗದ್ದೆಗಳಲ್ಲಿ ಊರಲಾಗುತ್ತದೆ. ಈ ಜೇಡ ಕೊಯ್ಲು ಪ್ರಯೋಗದಿಂದಾಗಿ ಶೇಕಡಾ ೫೦ ರಿಂದ ೬೦ರಷ್ಟು ಪೈರಿಗೆ ಹಾನಿಕಾರಕವಾಗಬಲ್ಲ ಕೀಟಗಳ ನಿಯಂತ್ರಣವಾಗುತ್ತದೆ ಎಂಬುದು ಚೀನಾ ದೇಶದ ರೈತರ ಅನುಭವ.

ಖ್ಯಾತ ಗ್ರಾಹಕ ತಜ್ನ ಅಡ್ಡೂರು ಕೃಷ್ಣರಾವ ಅವರು ಉಲ್ಲೇಖಿಸುವಂತೆ, ಷೀಟ್ ವೀವರ್ಸ್ (ಲಿನಿಫಿಡೇ), ವೂಲ್ಫ್ ಜೇಡ (ಲೈಕೋಸಿಡೇ), ಓರಬ್ ವೀವರ್ಸ್ (ಅರೇಸಿಡೇ) ಎಂಬ ಪ್ರಜಾತಿಯ ಜೇಡ ಕುಟುಂಬಗಳಿಗೆ ‘ಬಲೂನಿಂಗ್ ಜೇಡ ಕುಟುಂಬಗಳು’ ಎಂದು ಕರೆಯಲಾಗುತ್ತದೆ. ಇವು ಗಾಳಿಯಲ್ಲಿ ತೇಲಿಹೋಗುವ ರೇಷ್ಮೆ ನೂಲಿನಂತಹ (ನಮ್ಮ ಉ.ಕ. ಭಾಗದಲ್ಲಿ ‘ಮುತ್ಯಾ’) ಬಲೆಯ ತಂತುಗಳಿಗೆ ತಗುಲಿಕೊಂಡು ಒಂದು ಹೊಲದಲ್ಲಿ ಪಸರಿಸುತ್ತವೆ. ಲಿನಿಫಿಡೇ ಕುಟುಂಬದ ಜೇಡಗಳು ಭತ್ತದ ಬೆಳೆಯ ಪೀಡೆ ಕೀಟಗಳಾದ ಜಿಗಿಹುಳು ಮತ್ತು ಎಲೆಜಿಗಿಹುಳುಗಳ ಪ್ರಧಾನ ಭಕ್ಷಕರು. ಇವು ತಮ್ಮ ಹೊಲಗಳಲ್ಲಿ ವಂಶಾಭಿವೃದ್ಧಿ ಮಾಡಿಕೊಳ್ಳಲು ಚೀನಾ ಮತ್ತು ಜಪಾನ್ ದೇಶದ ನೇಗಿಲಯೋಗಿಗಳು ಅವಕಾಶ ಕಲ್ಪಿಸುತ್ತಾರೆ. ಈ ಕಾರಣದಿಂದಾಗಿಯೇ ಜೇಡಗಳ ಮೂಲಕ ಭತ್ತದ ಕೀಟ ನಿಯಂತ್ರಣದಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಗದ್ದೆಗಳ ಹತ್ತಿರದಲ್ಲಿ ಹುಲ್ಲಿನ ಕಂತೆಗಳನ್ನು ಇರಿಸುವರಲ್ಲದೇ ಹೊಲಗಳ ಬದಿಗಳಲ್ಲಿ ಬೇಲಿ ಗಿಡಗಳನ್ನು ಬೆಳೆಸುವುದೂ ಉಪಕಾರಿ ಜೇಡಗಳ ವಂಶಾಭಿವೃದ್ಧಿಗೆ ಸಹಕಾರಿ. ಯಾಕೆಂದರೆ ಜೇಡಗಳು ಇವುಗಳನ್ನು ತಮ್ಮ ಆವಾಸ ಸ್ಥಾನಗಳನ್ನಾಗಿ ಪರಿವರ್ತಿಸಿಕೊಳ್ಳುತ್ತವೆ. ಬಲಿ ಕೀಟಗಳು ದೀರ್ಘಕಾಲದ ವರೆಗೆ ಇವುಗಳಿಗೆ ದಕ್ಕದಿದ್ದರೂ ಜೇಡಗಳು ಬದುಕಿ ಉಳಿಯುತ್ತವೆ.

ಅಂತೂ ಒಂದು ಬದಿ ಬಯಲು ಸೀಮೆ, ಮತ್ತೊಂದು ಬದಿ ಮಲೆನಾಡು. ಹೀಗೆ ಈ ಎರಡು ಧ್ರುವಗಳ ಮಧ್ಯೆ ಇರುವ ಧಾರವಾಡದಲ್ಲಿ ಇಂತಹ ಅಚಾತುರ್ಯಗಳು ನಡೆದೇ ಇರುತ್ತವೆ. ಪ್ರೊ.ಕಲ್ಲೂರ್ ಅಂತಹವರು ‘ಜೇಡ’ನಂತಹ ನಿಸರ್ಗದ ಕೌತುಕಗಳನ್ನು ಗುರುತಿಸಿದರೆ ‘ನಾವು’ ಸುದ್ದಿಯಲ್ಲಿರುತ್ತೇವೆ!