ಮರಾಠ ಮೀಸಲಾತಿ ಚಳವಳಿ

ಮರಾಠ ಮೀಸಲಾತಿ ಚಳವಳಿ

ಮಹಾರಾಷ್ತ್ರದಲ್ಲಿ ಮತ್ತೆ ಮರಾಠ ಮೀಸಲಾತಿ ಚಳವಳಿ ಭುಗಿಲೆದ್ದಿದೆ. ತಮಗೆ ಮೀಸಲಾತಿ ನೀಡಬೇಕೆಂದು ಕೋರಿ ಮರಾಠ ಸಮುದಾಯದವರು ನಡೆಸುತ್ತಿರುವ ಚಳುವಳಿಯು ಸೋಮವಾರವಂತೂ ಹಿಂಸಾತ್ಮಕ ರೂಪ ತಾಳಿ ಕೆಲವು ಶಾಸಕರ ಮನೆಗಳೂ ಸೇರಿದಂತೆ ಹಲವಾರು ರಾಜಕಾರಣಿಗಳ ನಿವಾಸಗಳ ಮೇಲೆ ದಾಳಿ ನಡೆಸಲಾಯಿತು. ಈಗಾಗಲೇ ಕೆಲವು ಶಾಸಕರು ಚಳವಳಿಗೆ ಬೆಂಬಲ ಸೂಚಿಸಿ ರಾಜೀನಾಮೆಯನ್ನೂ ನೀಡಿದ್ದಾರೆ. ಇದರ ಜತೆಗೇ ಸಾಮಾಜಿಕ ಕಾರ್ಯಕರ್ತ ಮನೋಜ್ ಜಾರಂಗೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೂಡಾ ಸರಕಾರದ ಮೇಲೆ ಒತ್ತಡ ಹೇರಿದೆ. ಇವೆಲ್ಲದರ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆಯವರು ಬುಧವಾರ ಸರ್ವಪಕ್ಷ ಸಭೆ ಕರೆದು ಈ ಕುರಿತಂತೆ ಚರ್ಚಿಸಿದ್ದು ಹಾಗೂ ಕಾನೂನಿನ ಚೌಕಟ್ಟಿನೊಳಗೆ ಮರಾಠ ಸಮುದಾಯದವರಿಗೆ ಮೀಸಲಾತಿ ನೀಡಲು ಸಭೆಯಲ್ಲಿ ನಿರ್ಧರಿಸಿದ್ದು ಸ್ವಾಗತಾರ್ಹ ಬೆಳವಣಿಗೆ. ಇತರ ಸಮುದಾಯದವರಿಗೆ ಅನ್ಯಾಯವಾಗದ ರೀತಿಯಲ್ಲಿ ಮರಾಠಾ ಸಮಾಜದ ಬೇಡಿಕೆ ಈಡೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಮುಖ್ಯಮಂತ್ರಿ ತಿಳಿಸಿರುವುದು ಸರಿಯಾಗಿಯೇ ಇದೆ. ಈ ಹಿನ್ನಲೆಯಲ್ಲಿ ಮರಾಠಾ ಸಮಾಜದವರು ಹಿಂಸಾತ್ಮಕ ಚಳವಳಿಯನ್ನು ನಿಲ್ಲಿಸಿ ಆಡಳಿತದೊಂದಿಗೆ ಸಹಕರಿಸಬೇಕಾದುದು ಅಗತ್ಯವಾಗಿದೆ.

ಸಾಮಾಜಿಕ ಕಾರ್ಯಕರ್ತ ಮನೋಜ್ ಜಾರಂಗೆ ಅಕ್ಟೋಬರ್ ೨೫ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದಂದಿನಿಂದ ಮರಾಠಾ ಮೀಸಲಾತಿ ಚಳುವಳಿಯು ಮತ್ತೆ ಮುಂಚೂಣಿಗೆ ಬಂದಿದೆ. ಅವರಿಗೆ ರಾಜ್ಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗತೊಡಗಿದೆ. ಆದರೆ ಯಾವುದೇ ಚಳವಳಿಯು ತೀವ್ರಗೊಂಡಂತೆ ಅದು ಹಿಂಸಾರೂಪ ತಾಳುವ ಸಾಧ್ಯತೆಯಿರುತ್ತದೆ. ಈಗ ಆಗುತ್ತಿರುವುದು ಅದುವೆ.

ಸರಕಾರವಾದರೂ ಇಂತಹ ಬೇಡಿಕೆಗಳಿಗೆ ಹಠಾತ್ತನೆ ಒಪ್ಪಿಕೊಳ್ಳುವಂತಿಲ್ಲ. ಮೀಸಲಾತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ವಿಧಿಸಿರುವ ಮಿತಿಯನ್ನು ಉಲ್ಲಂಘಿಸದಂತೆ ಕಾರ್ಯಾಚರಿಸಬೇಕಾಗುತ್ತದೆ. ಹೊಸದಾಗಿ ಮೀಸಲಾತಿ ನೀಡುವುದೆಂಬುದು ಯಾವಾಗಲೂ ‘ಪಂಡೋರಾ ಪೆಟ್ಟಿಗೆ' ತೆರೆದಂತಹ ಪರಿಸ್ಥಿತಿ ಮಹಾರಾಷ್ಟ್ರ ಸರಕಾರವಾದರೂ ಮರಾಠಾ ಸಮುದಾಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳುವುದರ ಜೊತೆಗೆ ಇತರ ಸಮುದಾಯಗಳವರಿಗೆ ಅನ್ಯಾಯವಾಗದಂತೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗದಂತೆ ನಡಕೊಳ್ಳಬೇಕಾಗುತ್ತದೆ. ಇವೆಲ್ಲವೂ ಅವಸರದಿಂದ ಮಾಡತಕ್ಕಂತಹ ಕಾರ್ಯಗಳಲ್ಲ. ಈ ನಿಟ್ಟಿನಲ್ಲಿ ಮರಾಠ ಸಮುದಾಯದವರೂ ಸರಕಾರದೊಂದಿಗೆ ತಾಳ್ಮೆಯಿಂದ ಸಹಕರಿಸುವುದು ಮುಖ್ಯವಾಗಿದೆ. 

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೨-೧೧-೨೦೨೩  

ಚಿತ್ರ ಕೃಪೆ: ಅಂತರ್ಜಾಲ ತಾಣ