ಮರಿಕುದುರೆ ರೋರೋ
ಮರಿಕುದುರೆ ರೋರೋ ಯಾರಿಗೂ ಸಹಾಯ ಮಾಡುತ್ತಿರಲಿಲ್ಲ. ಅದೊಂದು ದಿನ ಅದರ ತಾಯಿ ಸಿಟ್ಟಿನಿಂದ ಹೇಳಿತು, “ರೋರೋ, ನಿನ್ನ ತಂಗಿ ಕೆಳಗೆ ಬಿದ್ದು ಅವಳ ಕಾಲಿಗೆ ಏಟಾದಾಗಲೂ ನೀನು ಅವಳಿಗೆ ಸಹಾಯ ಮಾಡಲಿಲ್ಲ. ಇವತ್ತು ನೀನು ಈ ತೆಂಗಿನ ತೋಟದಲ್ಲಿ ಸುತ್ತಾಡಿ, ಯಾರೋ ಒಬ್ಬರಿಗಾದರೂ ಸಹಾಯ ಮಾಡಿ ಬಂದು ನನಗೆ ಹೇಳಬೇಕು. ಅನಂತರವೇ ನಿನಗೆ ಊಟ ಕೊಡುತ್ತೇನೆ.”
ರೋರೋ ಅಳುತ್ತಾ ಹೇಳಿತು, “ಅಮ್ಮ, ನಾನೊಂದು ಪುಟ್ಟ ಮರಿಕುದುರೆ.” ಆದರೆ ತಾಯಿ ಕುದುರೆ ಖಡಕ್ಕಾಗಿ ಹೇಳಿತು, “ಮರಿಕುದುರೆ ಕೂಡ ಬೇರೆಯವರಿಗೆ ಸಹಾಯ ಮಾಡಬೇಕು. ನೀನು ಯಾವಾಗಲೂ ನಿನ್ನದೇ ಯೋಚನೆ ಮಾಡುತ್ತಾ ಇರಬಾರದು.” ತಾಯಿ ಕುದುರೆಗೆ ಜೋರು ಕೋಪ ಬಂದಿದೆಯೆಂದು ತಿಳಿದುಕೊಂಡ ಮರಿಕುದುರೆ ಅಲ್ಲಿಂದ ಓಟ ಕಿತ್ತಿತು. ತನ್ನಿಂದ ಸಹಾಯ ಪಡೆಯಬಹುದಾದ ಯಾರನ್ನಾದರೂ ಹುಡುಕಿ, ಸಹಾಯ ಮಾಡಿ, ನಂತರ ಊಟಕ್ಕೆ ಬರಬೇಕಾಗಿತ್ತು.
ತಾವರೆ ಹೂವಿನ ಮೇಲೆ ಕುಳಿತಿದ್ದ ಚಂದದ ಚಿಟ್ಟೆಯೊಂದನ್ನು ರೋರೋ ನೋಡಿತು. “ಓ, ಆ ಚಿಟ್ಟೆಗೆ ಹಾರಲು ಆಗುತ್ತಿಲ್ಲ. ಅದಕ್ಕಾಗಿಯೇ ಅದು ತಾವರೆ ಹೂವಿನ ಮೇಲೆ ಕೂತಿದೆ. ನಾನು ಚಿಟ್ಟೆಗೆ ಸಹಾಯ ಮಾಡುತ್ತೇನೆ” ಎಂದು ತಾವರೆ ಹೂವಿನ ಹತ್ತಿರ ಹೋಯಿತು ರೋರೋ. ಆದರೆ ತನ್ನತ್ತ ಬರುತ್ತಿದ್ದ ರೋರೋವನ್ನು ಕಂಡ ಚಿಟ್ಟೆ ಹೆದರಿ ಹಾರಿ ಹೋಯಿತು.
ತಾವರೆ ಹೂ ರೋರೋಗೆ ಬಯ್ಯ ತೊಡಗಿತು, “ಬುದ್ಧಿಯಿಲ್ಲದ ಮರಿಕುದುರೆಯೇ, ಚಿಟ್ಟೆ ಮಕರಂದ ಕುಡಿಯುತ್ತಿದ್ದಾಗ ನೀನು ಅದನ್ನು ಹೆದರಿಸಿ ಬಿಟ್ಟೆ. ಇನ್ನು ಇಲ್ಲಿ ನಿಲ್ಲಬೇಡ. ನೀನಿಲ್ಲಿ ನಿಂತರೆ, ನನ್ನ ಮೇಲೆ ಕೂರಲು ಬರುವ ಸಣ್ಣಪುಟ್ಟ ಕೀಟಗಳನೆಲ್ಲ ಹೆದರಿಸಿ ಓಡಿಸುತ್ತಿ. ಈಗಲೇ ಹೊರಟು ಹೋಗು.”
ತಾವರೆ ಕೋಪದಿಂದ ಕೆಂಪಾಗಿ ಕಾಣಿಸುತ್ತಿತ್ತು. ಪಾಪದ ರೋರೋ, "ನಾನು ಸಹಾಯ ಮಾಡಲೆಂದು ಹೋಗಿದ್ದೆ” ಎಂದು ಯೋಚಿಸುತ್ತಾ ಅಲ್ಲಿಂದ ಬೇಗನೇ ಓಡಿ ಹೋಯಿತು.
ರೋರೋ ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಂತೆ, ಒಂದು ದೊಡ್ಡ ಮರದ ಕೆಳಗೆ ಮಲಗಿದ್ದ ಮುದಿ ದನ ಕಪಿಲೆಯನ್ನು ಕಂಡಿತು. ಕಪಿಲೆಗೆ ಬಹಳ ದಣಿವಾಗಿತ್ತು. ಅದು ಗಾಢ ನಿದ್ದೆಯಲ್ಲಿತ್ತು. ರೋರೋ ಅದರೆ ಹತ್ತಿರ ನಿಂತು ನೋಡಿತು. ಕಪಿಲೆಯ ದೇಹ ನಡುಗುತ್ತಿದೆ ಎಂದು ಭಾವಿಸಿತು ರೋರೋ. "ಕಪಿಲೆಗೆ ಹುಷಾರಿಲ್ಲ. ಅವಳ ಕಣ್ಣುಗಳು ಮುಚ್ಚಿಕೊಂಡಿವೆ. ಬಹುಶಃ ಕಪಿಲೆಗೆ ಏನೇನೂ ಹುಷಾರಿಲ್ಲ. ನಾನು ಅವಳ ಮೇಲೆ ಸ್ವಲ್ಪ ನೀರು ಎರಚುತ್ತೇನೆ” ಎಂದು ಯೋಚಿಸಿತು ರೋರೋ. ಒಂದು ಬಾಲ್ದಿ ನೀರು ತಂದು ಕಪಿಲೆಯ ಮೇಲೆ ಸುರಿಯಿತು ರೋರೋ.
ತಕ್ಷಣವೇ ಎದ್ದು ನಿಂತ ಕಪಿಲೆಗೆ ಕಂಡದ್ದು ಬಾಲ್ದಿ ಹಿಡಿದುಕೊಂಡಿದ್ದ ರೋರೋ. "ಬುದ್ಧಿಯಿಲ್ಲದ ಮರಿಕುದುರೆ! ನಾನು ನಿದ್ದೆ ಮಾಡುತ್ತಿದ್ದದ್ದು ನಿನಗೆ ಕಾಣಿಸಲಿಲ್ಲವೇ? ತೆಂಗಿನಕಾಯಿಗಳನ್ನು ದೊಡ್ಡ ಮನೆಗೆ ಬೆಳಗ್ಗೆಯೆಲ್ಲ ಹೊತ್ತುಹೊತ್ತು ನನಗೆ ಸಾಕಾಗಿದೆ. ಈಗ ನೀನು ಬಂದು ನನ್ನ ಮೇಲೆ ನೀರು ಎರಚಿದ್ದಿ. ಬುದ್ಧಿಯಿಲ್ಲದ ಮರಿಕುದುರೆಯೇ, ಹೊರಟು ಹೋಗು ಇಲ್ಲಿಂದ” ಎಂದು ಗದರಿಸಿತು ಕಪಿಲೆ. ಕೋಪ ತುಂಬಿದ ದೊಡ್ಡ ದನದ ಮಾತಿನಿಂದ ಬೆದರಿದ ರೋರೋ ಅಲ್ಲಿಂದ ಓಡಿ ಹೋಯಿತು.
ರೋರೋಗೆ ದಣಿವಾಗಿತ್ತು, ಹಸಿವಾಗಿತ್ತು. ಸಂಜೆಯಾಗುತ್ತ ಬಂದಿತ್ತು. ಆದರೆ, ಅದು ಯಾರಿಗೂ ಸಹಾಯ ಮಾಡಿರಲಿಲ್ಲ. ಅಲ್ಲಿದ್ದ ಸಣ್ಣ ಕೊಳಕ್ಕೆ ನೀರು ಕುಡಿಯಲಿಕ್ಕಾಗಿ ಬಂತು ರೋರೋ. ಅಲ್ಲಿ ನೀರಿನ ಮೇಲ್ಮೈಯಲ್ಲಿ ಕಾಣಿಸುತು ಮೌರ್ಯ ಮೀನು. ಅದು ಒಮ್ಮೆ ಉಸಿರೆಳೆದುಕೊಂಡು ಪುನಃ ನೀರಿನಲ್ಲಿ ಮುಳುಗಿತು. ರೋರೋಗೆ ಸಂತೋಷವಾಯಿತು. ಖಂಡಿತವಾಗಿ ಮೌರ್ಯ ಮೀನಿಗೆ ಕೊಳದಿಂದ ಹೊರಗೆ ಬರಲು ಸಹಾಯ ಬೇಕಾಗಿದೆ ಎಂದು ಭಾವಿಸಿತು ರೋರೋ.
"ಮೌರ್ಯ, ನನ್ನ ಗೆಳೆಯ, ನಾನು ನಿನಗೆ ಕೊಳದಿಂದ ಹೊರಗೆ ಬರಲು ಸಹಾಯ ಮಾಡುತ್ತೇನೆ” ಎನ್ನುತ್ತಾ, ರೋರೋ ಕೆಳಕ್ಕೆ ಬಗ್ಗಿ ಬಾಯಿಯಲ್ಲಿ ಮೌರ್ಯ ಮೀನನ್ನು ಕಚ್ಚಿ, ಅದನ್ನು ನೆಲದ ಹುಲ್ಲಿನಲ್ಲಿ ಹಾಕಿತು. ನೆಲದಲ್ಲಿ ಒದ್ದಾಡಿದ ಮೌರ್ಯ ಕಿರಿಚಿತು, "ಬುದ್ಧಿಯಿಲ್ಲದ ಮರಿಕುದುರೆಯೇ, ತಕ್ಷಣ ನನ್ನನ್ನು ಕೊಳದ ನೀರಿಗೆ ಹಾಕು. ನಾನು ಉಸಿರಾಡಲು ನೀರು ಬೇಕೇ ಬೇಕು.” ಆದರೆ
ರೋರೋ ಮರಿಕುದುರೆ ಮೌರ್ಯ ಮೀನನ್ನು ನೋಡುತ್ತ ನಿಂತುಕೊಂಡಿತು. ಮೀನು ಮತ್ತೆಮತ್ತೆ ಯಾಕೆ ಜಿಗಿಯುತ್ತಿದೆ ಎಂಬುದು ರೋರೋಗೆ ಅರ್ಥವಾಗಲೇ ಇಲ್ಲ. "ಮೌರ್ಯ, ನೀನು ಹುಲ್ಲಿನಲ್ಲಿ ಸಂತೋಷದಿಂದ ಬದುಕಬಹುದು. ನಾನೀಗ ಒಬ್ಬರಿಗೆ ಸಹಾಯ ಮಾಡಿದ್ದೇನೆ. ಹಾಗಾಗಿ ನಾನು ಮನೆಗೆ ಹೋಗಿ ಊಟ ಮಾಡಬಹುದು” ಎಂದಿತು ರೋರೋ. ಅಲ್ಲಿದ್ದ ಬಾತುಕೋಳಿಗಳು ಮತ್ತು ಆಡುಗಳು ರೋರೋನ ಮಾತು ಕೇಳಿ, ಏನಾಗುತ್ತಿದೆ ಎಂದು ನೋಡಲು ಓಡಿ ಬಂದವು.
ಪಾಪದ ಮೌರ್ಯ ಮೀನು ಇನ್ನೂ ಜಿಗಿಯುತ್ತಲೇ ಇತ್ತು, ಕೊಳದ ನೀರಿಗೆ ಹೋಗಬೇಕೆಂದು. ಮುದಿ ಕಂದು ಬಾತುಕೋಳಿ ಮೌರ್ಯನನ್ನು ಬೇಗನೇ ಕೊಳಕ್ಕೆ ತಳ್ಳಿ, ರೋರೋನಿಗೆ ಜೋರು ಮಾಡಿತು. "ಬುದ್ಧಿಯಿಲ್ಲದ ಮರಿಕುದುರೆಯೇ, ನೀನು ಮೌರ್ಯನನ್ನು ಕೊಂದೇ ಬಿಡುತ್ತಿದ್ದೆ.” ಆಡುಗಳು ಮತ್ತು ಬಾತುಕೋಳಿಗಳು ರೋರೋನನ್ನು ಸುತ್ತುವರಿದು "ಬುದ್ಧಿಯಿಲ್ಲದ ಮರಿಕುದುರೆಯೇ” ಎಂದು ಹಾಡತೊಡಗಿದವು.
ಪಾಪದ ರೋರೋ ನೆಲದಲ್ಲಿ ಕುಳಿತು ಅಳತೊಡಗಿತು. ಮುದಿ ಕಂದು ಬಾತುಕೋಳಿ ಕೇಳಿತು, "ಈಗ ನೀನ್ಯಾಕೆ ಅಳುತ್ತಿದ್ದಿ?” ರೋರೋ ಉತ್ತರಿಸಿತು, "ನನ್ನ ಅಮ್ಮ ನಾನು ಯಾರಿಗಾದರೂ ಸಹಾಯ ಮಾಡದಿದ್ದರೆ ನನಗೆ ಊಟವನ್ನೇ ಹಾಕೋದಿಲ್ಲ ಎಂದಿದ್ದಾಳೆ. ಬೆಳಗ್ಗೆಯಿಂದ ಈ ವರೆಗೆ ಯಾರಿಗೂ ಸಹಾಯ ಮಾಡಲು ನನಗೆ ಸಾಧ್ಯವಾಗಲಿಲ್ಲ. ಆಗಲೇ ತಡವಾಗಿದೆ, ನನಗೆ ದಾರಿ ತಪ್ಪಿದೆ, ನನಗೆ ಹಸಿವೂ ಆಗಿದೆ. ಅಯ್ಯೋ, ಅಯ್ಯೋ.”
"ನನ್ನ ಜೊತೆ ಬಾ. ನಿನ್ನನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿದ ಕಂದು ಬಾತುಕೋಳಿ, ರೋರೋವನ್ನು ಮನೆಯ ದಾರಿಯಲ್ಲಿ ಕರೆದೊಯ್ದಿತು. ತಾಯಿ ಕುದುರೆ ದಾರಿಯನ್ನೇ ನೋಡುತ್ತಿತ್ತು. ರೋರೋವನ್ನು ಕಂಡ ಕೂಡಲೇ ತಾಯಿ ಕುದುರೆ ಓಡಿ ಬಂದು ಕೇಳಿತು, “ನನಗೆ ನೀನೆಲ್ಲಿಗೆ ಹೋದೆ ಎಂದು ಚಿಂತೆಯಾಗಿತ್ತು. ಈಗ್ಯಾಕೆ ಅಳುತ್ತಾ ಇದ್ದಿ?”
"ಯಾರೊಬ್ಬರಿಗೆ ಸಹಾಯ ಮಾಡಲಿಕ್ಕೂ ನನಗೆ ಸಾಧ್ಯವಾಗಲಿಲ್ಲ. ಕೆಲವರಿಗೆ ಸಹಾಯ ಮಾಡಲು ಪ್ರಯತ್ನಿಸಿದೆ. ಅವರೆಲ್ಲರೂ ನಾನು ಬುದ್ಧಿಯಿಲ್ಲದ ಮರಿಕುದುರೆ ಎಂದರು. ಈಗ ನಾನು ಹಸಿದಿದ್ದೇನೆ ಮತ್ತು ದಣಿದಿದ್ದೇನೆ” ಎಂದಿತು ರೋರೋ.
ಮುದಿ ಕಂದು ಬಾತುಕೋಳಿ ಹೇಳಿತು, "ಮೊದಲು ನಿನ್ನ ಕುಟುಂಬದವರಿಗೆ ಸಹಾಯ ಮಾಡು. ನಂತರ ನೀನು ಬೇರೆಯವರಿಗೆ ಸಹಾಯ ಮಾಡುವಿಯಂತೆ. ಹಾಗೆ ಮಾಡಿದರೆ ನೀನು ಒಳ್ಳೆಯ ಮರಿಕುದುರೆ ಆಗುತ್ತಿ.” ರೋರೋ ಅಮ್ಮನನ್ನು ಒತ್ತಿಕೊಳ್ಳುತ್ತಾ ಹೇಳಿತು, "ಹಾಗೇ ಮಾಡುತ್ತೇನೆ.”
ಚಿತ್ರ ಕೃಪೆ: ನ್ಯಾಷನಲ್ ಬುಕ್ ಟಸ್ಟ್ ಪುಸ್ತಕ: ರೀಡ್ ಮಿ ಎ ಸ್ಟೋರಿ
ಚಿತ್ರಕಾರ: ಸಿಬಿಲ್ ವೆಟ್ಟಸಿಂಘೆ