ಮರಿಯಾಳ ಮೂರು ವರಗಳು
ಹಂಗೆರಿ ದೇಶದಲ್ಲಿ ಫ್ರಾಂಜ್ ಎಂಬ ಬಡ ರೈತ ಪತ್ನಿ ಮರಿಯಾಳೊಂದಿಗೆ ವಾಸ ಮಾಡುತ್ತಿದ್ದ. ಅವರ ಪುಟ್ಟ ಮನೆ ಕಾಡಿನ ಅಂಚಿನಲ್ಲಿತ್ತು. ಅವರ ಬಳಿ ಹಣವೇ ಇರಲಿಲ್ಲ. ತಮ್ಮ ಪುಟ್ಟ ತೋಟದಲ್ಲಿ ಬೆಳೆಸಿದ ಧಾನ್ಯತರಕಾರಿಗಳೇ ಅವರ ಆಹಾರ. ಅವರು ಸಂತೋಷದಿಂದಲೇ ಬದುಕುತ್ತಿದ್ದರು ಯಾಕೆಂದರೆ ಅವರಿಗೆ ಇದ್ದುದರಲ್ಲೇ ತೃಪ್ತಿ. ಆದರೆ ಕೆಲವೊಮ್ಮೆ ಅವರು ಸಿಟ್ಟಿಗೆದ್ದು ಜಗಳ ಮಾಡುತ್ತಿದ್ದರು ಮತ್ತು ಇದರಿಂದಾಗಿ ಅನಾಹುತಗಳೂ ಆಗುತ್ತಿದ್ದವು.
ಅದೊಂದು ದಿನ ಸಂಜೆ ಫ್ರಾಂಜ್ ಮನೆಗೆ ಹಿಂತಿರುಗಿದ. ಆಗ ಚಳಿಗಾಲ. ಮೈ ಬೆಚ್ಚಗೆ ಮಾಡಿಕೊಳ್ಳಲಿಕ್ಕಾಗಿ ಫ್ರಾಂಜ್ ಅಗ್ನಿಮೂಲೆಯಲ್ಲಿ ಕುಳಿತ. ಅವನ ಪತ್ನಿ ರಾತ್ರಿಯ ಸರಳ ಊಟ ಬೇಯಿಸಲು ಒಲೆಯಲ್ಲಿ ಬಾಣಲೆಯನ್ನು ಬಿಸಿ ಮಾಡುತ್ತಿದ್ದಳು.
ಆಗ ಫ್ರಾಂಜ್ ಹೇಳಿದ, “ಇವತ್ತು ಮನೆಗೆ ಬರುತ್ತಿದ್ದಾಗ ಒಂದು ವಿಚಿತ್ರ ಸಂಗತಿ ನಡೆಯಿತು.”
"ಏನದು" ಕೇಳಿದಳು ಪತ್ನಿ. "ನಾನು ಕಾಡಿನ ಪಕ್ಕದ ಓಣಿಯಲ್ಲಿ ವಾಪಾಸು ಬರುತ್ತಿದ್ದೆ. ಓಣಿಯ ತಿರುವಿನಲ್ಲಿ ನಾನೊಂದು ಚಿನ್ನದ ಗಾಡಿ ಕಂಡೆ. ಅದನ್ನು ಕುದುರೆಗಳು ಎಳೆಯುತ್ತಿರಲಿಲ್ಲ ಬದಲಾಗಿ ನಾಲ್ಕು ನಾಯಿಗಳು ಎಳೆಯುತ್ತಿದ್ದವು. ಆ ಗಾಡಿಯೊಳಗೆ ಒಬ್ಬಳು ಚಂದದ ಕುಳ್ಳ ಮಹಿಳೆಯಿದ್ದಳು” ಎಂದ ಫ್ರಾಂಜ್.
“ಏನು? ಓಣಿಯಲ್ಲಿ ಒಂದು ಚಿನ್ನದ ಗಾಡಿಯೇ?" ಎಂದು ನಕ್ಕು ಬಿಟ್ಟಳು ಮರಿಯಾ. "ಹೌದು. ಆ ಓಣಿಯ ಕೆಸರಿನಲ್ಲಿ ಗಾಡಿ ಸಿಕ್ಕಿಕೊಂಡಿತ್ತು. ನಾಲ್ಕು ನಾಯಿಗಳು ಆ ಗಾಡಿ ಎಳೆಯಲಾಗದೆ ನಿಂತಿದ್ದವು. ಆ ಮಹಿಳೆ ಸಹಾಯ ಮಾಡಬೇಕೆಂದು ನನ್ನನ್ನು ವಿನಂತಿಸಿದಳು. ನನಗೆ ಸೂಕ್ತ ಉಡುಗೊರೆ ನೀಡುವುದಾಗಿಯೂ ಹೇಳಿದಳು. ಹಾಗಾಗಿ ನನ್ನ ಬಲವನ್ನೆಲ್ಲ ಹಾಕಿ ಗಾಡಿಯನ್ನೆಳೆದೆ. ನನ್ನ ಸಹಾಯದಿಂದ ನಾಯಿಗಳು ಗಾಡಿಯನ್ನು ಕೆಸರಿನಿಂದ ಹೊರಗೆ ಎಳೆದವು” ಎಂದು ವಿವರಿಸಿದ ಫ್ರಾಂಜ್.
"ಸರಿ, ಸರಿ. ನಿನಗೆ ಉಡುಗೊರೆಯಾಗಿ ಆ ಮಹಿಳೆ ಏನು ಕೊಟ್ಟಳು?” ಎಂದು ಕೇಳಿದಳು ಮರಿಯಾ. "ಅವಳು ಏನೂ ಕೊಡಲಿಲ್ಲ. ಆದರೆ ನನಗೆ ಮದುವೆಯಾಗಿದೆಯಾ? ಎಂದವಳು ವಿಚಾರಿಸಿದಳು. ನಂತರ ನಿನ್ನಿಂದ ದೊಡ್ಡ ಸಹಾಯವಾಯ್ತು. ಮನೆಗೆ ಹೋದಾಗ ನಿನ್ನ ಪತ್ನಿಗೆ ಯಾವುದೇ ಮೂರು ವರ ಕೇಳಬೇಕೆಂದು ಹೇಳು; ಅವನ್ನು ನಾನು ಈಡೇರಿಸುತ್ತೇನೆ ಎಂದು ಭರವಸೆ ಕೊಟ್ಟಳು. ಅನಂತರ ಅವಳು ಕಣ್ಮರೆಯಾದಳು. ಅವಳು ಯಾರೋ ಯಕ್ಷಿಣಿ ಆಗಿರಬೇಕು” ಎಂದ ಫ್ರಾಂಜ್.
ಮರಿಯಾ ನಗುತ್ತಾ ಹೇಳಿದಳು, "ಅವಳು ನಿನ್ನನ್ನು ಮೂರ್ಖನನ್ನಾಗಿ ಮಾಡಿದಳು. ನೀನು ಮನೆಗೆ ತರಬಹುದಾದ ವಸ್ತುವನ್ನು ಉಡುಗೊರೆಯಾಗಿ ಕೇಳಬೇಕಾಗಿತ್ತು. ಇರಲಿ ಬಿಡು, ಯಾರಿಗೋ ಸಹಾಯ ಮಾಡಿದ್ದಿ, ಒಳ್ಳೆಯದಾಯ್ತು.”
“ಅದೇನೆಂದು ನೋಡೇ ಬಿಡೋಣ. ಈಗ ನೀನೊಂದು ವರ ಕೇಳು. ಏನಾಗ್ತದೆ ನೋಡೋಣ." ಎಂದ ಫ್ರಾಂಜ್. "ಅದಕ್ಕೇನಂತೆ? ನನಗೀಗ ಹಸಿವಾಗಿದೆ. ನಾನು ಬೇಯಿಸುತ್ತಿರುವ ಪಲ್ಯ ನಮಗಿಬ್ಬರಿಗೆ ಸಾಕಾಗೋದಿಲ್ಲ. ಈಗ ನಾನು ಕೇಳುವ ವರ ಏನೆಂದರೆ, ಒಲೆಯಲ್ಲಿರುವ ಬಾಣಲೆಯಲ್ಲಿ ಬನ್ ತುಂಬಲಿ" ಎಂದು ವರ ಕೇಳಿಯೇ ಬಿಟ್ಟಳು ಮರಿಯಾ.
ಮರಿಯಾ ಮಾತು ಮುಗಿಸುವಷ್ಟರಲ್ಲಿ ಬಡಬಡನೆ ಇಪ್ಪತ್ತು ಬನ್ನುಗಳು ಒಲೆಯ ಬಾಣಲೆಗೆ ಬಂದು ಬಿದ್ದವು. “ಓ, ಇದು ಅದ್ಭುತ. ನಾವು ಇವತ್ತು ರಾತ್ರಿ ಚೆನ್ನಾಗಿ ಊಟ ಮಾಡಬಹುದು” ಎಂದು ಕೂಗಿದಳು ಮರಿಯಾ.
ಇದನ್ನೆಲ್ಲ ನೋಡುತ್ತಿದ್ದ ಫ್ರಾಂಜ್ ಹೇಳಿದ, “ಮರಿಯಾ, ಇನ್ನೊಂದು ವರ ಕೇಳುವಾಗ ನಾವು ಎಚ್ಚರದಿಂದಿರಬೇಕು. ಈಗಾಗಲೇ ಒಂದು ವರ ವ್ಯರ್ಥ ಮಾಡಿಕೊಂಡಿದ್ದೇವೆ. ನಮ್ಮ ಬಳಿ ದನಗಳೂ ಕುದುರೆಗಳೂ ಇರಬೇಕು. ಎರಡು ದನಗಳು ಮತ್ತು ಎರಡು ಕುದುರೆಗಳನ್ನು ಎರಡನೆಯ ವರವಾಗಿ ಕೇಳಿಕೋ.” ಹೀಗೆನ್ನುತ್ತಾ ಅವನು ಒಲೆಯಿಂದ ಒಂದು ತುಂಡು ಉರಿಯುವ ಸೌದೆ ತೆಗೆದು, ತನ್ನ ಪೈಪ್ ಹಚ್ಚಿಕೊಳ್ಳಲು ಪ್ರಯತ್ನಿಸಿದ. ಆಗ ಒಲೆಯ ಮೇಲಿದ್ದ ಬಾಣಲೆ ಕೆಳಗೆ ಬಿತ್ತು. ಇದನ್ನು ನೋಡಿದ ಮರಿಯಾಳಿಗೆ ಸಿಟ್ಟು ಉಕ್ಕೇರಿತು. ಅವಳು ರೇಗಿದಳು, "ನಿನಗೆ ಏನಾಗಿದೆ? ನಮ್ಮ ಊಟವನ್ನೇ ಹಾಳು ಮಾಡಿದೆ. ಬನ್ನುಗಳೆಲ್ಲ ನೆಲಕ್ಕೆ ಬಿದ್ದವು ಮತ್ತು ಪಲ್ಯವೆಲ್ಲ ಒಲೆಗೆ ಬಿತ್ತು. ಬನ್ನುಗಳು ನಿನ್ನ ಮೂಗಿನಿಂದಲೇ ಮೂಡಿ ಬರಲಿ ಅಂತೇನೆ ನಾನು.”
ಸಿಟ್ಟಿನ ಭರದಲ್ಲಿ ಅವಳು ವರಗಳನ್ನು ಮರೆತೇ ಬಿಟ್ಟಿದ್ದಳು. ಅವಳು ಮಾತು ಮುಗಿಸುವಷ್ಟರಲ್ಲಿ, ಬನ್ನುಗಳು ಒಂದಕ್ಕೊಂದು ಮಾಲೆಯಂತೆ ಅಂಟಿಕೊಂಡು ಫ್ರಾಂಜನ ಮೂಗಿನಿಂದ ಇಳಿದು ಬಂದವು! ಮರಿಯಾ ಗಾಬರಿಯಿಂದ ಕೊನೆಯ ಬನ್ನನ್ನು ಎಳೆದಳು. ಆದರೆ ಆ ಎಲ್ಲ ಬನ್ನುಗಳು ಫ್ರಾಂಜನ ಮೂಗಿಗೆ ಬಿಗಿಯಾಗಿ ಅಂಟಿಕೊಂಡಿದ್ದವು.
“ಎಂತಹ ಮೂರ್ಖ ಹೆಂಗಸು ನೀನು! ಈಗ ಎರಡನೆಯ ವರವನ್ನೂ ವ್ಯರ್ಥ ಮಾಡಿಬಿಟ್ಟೆ” ಎಂದು ಕೂಗಾಡಿದ ಫ್ರಾಂಜ್. “ಅಯ್ಯೋ, ಈಗ ಈ ಬನ್ನುಗಳನ್ನು ಏನು ಮಾಡೋದು?" ಎಂದು ಆತಂಕದಿಂದ ಕೇಳಿದಳು ಮರಿಯಾ. “ಏನು ಮಾಡೋದು? ಅವನ್ನು ತೆಗೆಯಲಿಕ್ಕೂ ಆಗುತ್ತಿಲ್ಲ. ಅವು ನನ್ನ ಮೂಗಿನಿಂದ ನೇತಾಡುತ್ತಿವೆ” ಎಂದ ಫ್ರಾಂಜ್ ಹತಾಶೆಯಿಂದ.
"ಹಾಗಿದ್ದರೆ ಅವನ್ನು ಚೂರಿಯಿಂದ ಕತ್ತರಿಸುತ್ತೇನೆ” ಎಂದಳು ಮರಿಯಾ. "ನಿನಗೆ ತಲೆ ಕೆಟ್ಟಿದೆಯಾ? ಬನ್ನುಗಳ ಜೊತೆಗೆ ನನ್ನ ಮೂಗನ್ನೂ ಕತ್ತರಿಸಿ ಬಿಡುತ್ತೀಯಾ? ಅವನ್ನು ಕತ್ತರಿಸೋದೆಂದರೆ ನನ್ನ ದೇಹದ ಒಂದು ತುಂಡನ್ನೇ ಕತ್ತರಿಸಿದ ಹಾಗಲ್ಲವೇ? ನೀನು ಹಾಗೆ ಮಾಡಬಾರದು. ಇಲ್ಲಿ ಕೇಳು. ಈಗ ಒಂದು ವರ ಉಳಿದಿದೆ. ನನ್ನ ಮೂಗಿನಿಂದ ಎಲ್ಲ ಬನ್ನುಗಳೂ ಕಳಚಿಕೊಂದು ಪುನಃ ಬಾಣಲೆಗೆ ಹೋಗಿ ಬೀಳಲಿ ಎಂದೇ ನೀನೀಗ ವರ ಕೇಳಬೇಕು" ಎಂದ ಫ್ರಾಂಜ್.
“ಮತ್ತೆ ನಿಮಗೆ ಎರಡು ದನಗಳು ಮತ್ತು ಎರಡು ಕುದುರೆಗಳು ಬೇಕಾಗಿದ್ದವಲ್ಲಾ? ಈಗ ನಿಮ್ಮ ಮೂಗಿನಿಂದ ಬನ್ನುಗಳು ಕಳಚಬೇಕೆಂದು ಮೂರನೆಯ ವರ ಕೇಳಿದರೆ ಅದ್ಯಾವುದೂ ಸಿಗೋದಿಲ್ಲ. ನಾವು ಮುಂಚಿನಂತೆಯೇ ಬಡತನದಲ್ಲೇ ಇರಬೇಕಾಗ್ತದೆ” ಎಂದಳು ಮರಿಯಾ. “ಅದನ್ನೆಲ್ಲ ನೀನು ಮುಂಚೆಯೇ ಯೋಚನೆ ಮಾಡಬೇಕಾಗಿತ್ತು. ನಾನಂತೂ ಹೀಗೆ ಮೂಗಿನಿಂದ ಬನ್ನುಗಳನ್ನು ನೇತಾಡಿಸಿಕೊಂಡು ಬದುಕಲು ಸಾಧ್ಯವೇ ಇಲ್ಲ” ಎಂದ ಫ್ರಾಂಜ್ ಖಡಾಖಂಡಿತವಾಗಿ.
ಅಂತೂ ಮರಿಯಾ ಫ್ರಾಂಜನ ಸಲಹೆಗೆ ಒಪ್ಪಿದಳು. ದುಃಖದಿಂದಲೇ ಫ್ರಾಂಜನ ಮೂಗು ಸರಿಯಾಗಲೆಂದು ಮೂರನೆಯ ವರ ಕೇಳಿದಳು. ತಕ್ಷಣವೇ ಅವನ ಮೂಗಿಗೆ ಅಂಟಿಕೊಂಡಿದ್ದ ಬನ್ನುಗಳು ಬಾಣಲೆಗೆ ಹೋಗಿ ಬಿದ್ದವು. ಮರಿಯಾ ಅವನ್ನು ಕಾಯಿಸಿದಳು. ಅನಂತರ ಅವರು ಆರಾಮವಾಗಿ ಕುಳಿತು, ಹೊಟ್ಟೆ ತುಂಬ ಊಟ ಮಾಡಿದರು.
ಅವತ್ತು ಮಲಗುವ ಮುಂಚೆ ಇಬ್ಬರೂ ತಮ್ಮ ತಪ್ಪಿಗಾಗಿ ಪಶ್ಚಾತ್ತಾಪ ಪಟ್ಟರು. ಅವರಿಗೆ ಯಕ್ಷಿಣಿ ಮೂರು ವರಗಳನ್ನು ಕೊಟ್ಟಿದ್ದಳು. ಅವೆಲ್ಲವನ್ನೂ ಅವರು ವ್ಯರ್ಥ ಮಾಡಿಕೊಂಡರು. “ನಾವು ಜಗಳಗಂಟರು ಆಗಿರದಿದ್ದರೆ, ಮೂರು ವರಗಳು ವ್ಯರ್ಥವಾಗುತ್ತಿರಲಿಲ್ಲ. ಅದೇನಿದ್ದರೂ ಇನ್ನು ಮುಂದಾದರೂ ವಾದ ಮತ್ತು ಜಗಳ ಮಾಡದೆ, ತಾಳ್ಮೆಯಿಂದ ಬದುಕೋಣ. ಇದುವೇ ಎಲ್ಲದಕ್ಕಿಂತ ದೊಡ್ಡ ವರವಾದೀತು” ಎಂದ ಫ್ರಾಂಜ್.
ಮರಿಯಾ ಪತಿಯ ಮಾತಿಗೆ ಮನಃಪೂರ್ವಕವಾಗಿ ಒಪ್ಪಿಗೆ ಸೂಚಿಸಿದಳು. ಅನಂತರ, ಜಗಳ ಶುರು ಮಾಡಿದಾಗೆಲ್ಲ ಅವರು ಬನ್ನುಗಳ ಗೊಂದಲದಲ್ಲಿ ಮೂರು ವರಗಳನ್ನು ವ್ಯರ್ಥ ಮಾಡಿಕೊಂಡದ್ದನ್ನು ನೆನಪು ಮಾಡಿಕೊಂಡು ಸುಮ್ಮನಾಗುತ್ತಿದ್ದರು.
ಅದೇನಿದ್ದರೂ, ಅನಂತರ ಅವರ ತೋಟದಲ್ಲಿ ಉತ್ತಮ ಇಳುವರಿ ಸಿಗತೊಡಗಿತು. ಅದರಿಂದಾಗಿ ಅವರಿಗೆ ಧಾನ್ಯಗಳನ್ನೂ ತರಕಾರಿಗಳನ್ನೂ ಹೆಚ್ಚೆಚ್ಚು ಮಾರಲು ಸಾಧ್ಯವಾಯಿತು. ಅದಲ್ಲದೆ, ಫ್ರಾಂಜನನ್ನು ಹೆಚ್ಚೆಚ್ಚು ರೈತರು ತಮ್ಮ ಹೊಲಗಳಲ್ಲಿ ಕೆಲಸಕ್ಕೆ ಕರೆದು, ಅವನಿಗೆ ಉತ್ತಮ ಮಜೂರಿ ನೀಡತೊಡಗಿದರು.
ಒಂದೇ ವರುಷದಲ್ಲಿ ಫ್ರಾಂಜ್ ಎರಡು ದನಗಳನ್ನು ಖರೀದಿಸಿದ. ಅನಂತರ ಸಾಕಷ್ಟು ಹಣ ಉಳಿಸಿ, ಎರಡು ಕುದುರೆಗಳನ್ನೂ ಖರೀದಿಸಿದ. ಅಂತೂ ಫ್ರಾಂಜ್ ಮತ್ತು ಮರಿಯಾ ಕಳೆದುಕೊಂಡ ವರಗಳನ್ನು ಮರಳಿ ಪಡೆದರು!