ಮರುಕಳಿಸಿದ ನೆನಪು

ಮರುಕಳಿಸಿದ ನೆನಪು

ಬರಹ

ಮರುಕಳಿಸಿದ ನೆನಪು
ಈದಿನದ ವಿಜಯಕರ್ನಾಟಕ ಪತ್ರಿಕೆಯಲ್ಲಿ ಶ್ರೀವತ್ಸ ಜೋಶಿಯವರ "ಕಥೆ ಇದೆ ಎಲ್ಲರಲ್ಲೂ, ಕೇಳುವ ಕಿವಿಗಳಿಲ್ಲ ಯಾರಲ್ಲೂ!" ಎಂಬ ಅಂಕಣದಲ್ಲಿ ತಮ್ಮ ಅಣ್ಣ ಟೇಪ್‍ರೆಕಾರ್ಡರ್ ತಂದಾಗಿನ ಅನುಭವ ಮತ್ತು ಅದನ್ನು ಇತ್ತೀಚೆಗೆ ಹಾಕಿ ಕೇಳಿದಾಗ ಆದ ಅನುಭವವನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ. ಅದನ್ನು ಓದಿದಾಗ ನನ್ನದೂ ಇಂತಹುದೇ ಒಂದು ಅನುಭವದ ನೆನಪು ಮರುಕಳಿಸಿತು. ಸುಮಾರು 1972-73ರ ಸಮಯ ನಮ್ಮ ಮನೆಗೂ ಟೇಪ್‍ರೆಕಾರ್ಡರ್ ಬಂತು. ಅದರಲ್ಲಿ ನಾನೂ ಜೋಶಿಯವರ ಅಣ್ಣನಂತೆಯೇ ಮನೆಯವರ ಹಾಡು ಮಾತನ್ನೆಲ್ಲಾ ರೆಕಾರ್ಡ್ ಮಾಡುತ್ತಿದ್ದೆ. ನಮ್ಮ ಅತ್ತೆಯವರು ಅಂದರೆ ನನ್ನವರ ತಾಯಿಯವರು ನಮ್ಮ ಮದುವೆಯ ಹೊತ್ತಿಗೆ 65 ವರ್ಷಗಳನ್ನು ದಾಟಿದ್ದರು. ಹೀಗಾಗಿ ಅವರಿಗೆ ಸ್ವಲ್ಪ ಹುಶಾರು ತಪ್ಪಿದರೂ ತುಂಬಾ ಸಪ್ಪಗಾಗಿಬಿಡುತ್ತಿದ್ದರು. ನಮ್ಮ ಮನೆಗೆ ಟೇಪ್‍ರೆಕಾರ್ಡರ್ ಬಂದ ಹೊಸತರಲ್ಲಿ ಒಂದು ದಿನ ಹೀಗೆಯೇ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಬೇಡದ ವಿಚಾರಗಳನ್ನು ಏನೇನೋ ಮನಸ್ಸಿನಲ್ಲಿ ತುಂಬಿಕೊಂಡು ಬೇಜಾರು ಮಾಡಿಕೊಳ್ಳುತ್ತಿದ್ದರು. ಅವರಿಗೆ ಅವನ್ನೆಲ್ಲಾ ಮರೆಯುವಂತೆ ಮಾಡಿ ಉತ್ಸಾಹ ಮೂಡಿಸಬೇಕೆಂದು ಟೇಪ್‍ರೆಕಾರ್ಡರನ್ನು ಆವರ ಬಳಿ ತೆಗೆದುಕೊಂಡು ಹೋಗಿ ಕುಳಿತೆ. "ಅತ್ತೆ, ನೀವು ಹಾಡು ಹೇಳಿ. ನಾನು ರೆಕಾರ್ಡ್ ಮಾಡುತ್ತೇನೆ" ಎಂದು ಹೇಳಿದೆ. ಅವರಿಗೆ ಹಾಡು ಎಂದರೆ ಪ್ರಾಣ. ಎಷ್ಟೊ ದೇವರನಾಮಗಳು ಸಂಪ್ರದಾಯ ಗೀತೆಗಳು ಎಲ್ಲಾ ಹಾಡುತ್ತಿದ್ದರು. ತಕ್ಷಣ ತನ್ನ ನೋವನ್ನೆಲ್ಲಾ ಮರೆತು, ಮಲಗಿದಲ್ಲೆ, "ಸ್ವಲ್ಪ ತಡಿಯೇ, ನಾನು ಒಂದು ಸಲ ಹಾಡಿ ನೋಡ್ಕೋತೀನಿ ಆಮೇಲೆ ಅದನ್ನ ಹಾಕು ಆಯ್ತಾ?" ಎಂದರು. ನಾನು ಹೂಂ ಎಂದರೂ ನಾನಂತೂ ಟೇಪ್‍ರೆಕಾರ್ಡರ್ ಆನ್ ಮಾಡಿಯಾಗಿತ್ತು. ನನ್ನ ಆಶ್ಚರ್ಯಕ್ಕೆ ಪೂರ್ವೀಕಲ್ಯಾಣಿ ರಾಗದ ಮುತ್ತುಸ್ವಾಮಿ ದೀಕ್ಷಿತರ ಕೃತಿ ಮೀನಾಕ್ಷಿಮೇಮುದಂ ಚಿಟ್ಟೆ ಸ್ವರದ ಸಮೇತ ಹಾಡಿದರು. ಜೊತೆಗೆ ಇನ್ನೊಂದು ಕೃತಿಯನ್ನೂ ಹಾಡಿದರು. ನಾನು ರೆಕಾರ್ಡ್ ಮಾಡುತ್ತಿರುವುದು ತಿಳಿಯದೇ ಮಧ್ಯೆ ಮಧ್ಯೆ ಮಾತನಾಡಿದ್ದೆಲ್ಲಾ ರೆಕಾರ್ಡ್ ಆಗಿತ್ತು. ಒಮ್ಮೆ ಒಂದು ಪದ ಸರಿಯಾಗಿ ಹೇಳಲಾಗದೇ ನಗುತ್ತಾ " ಬಾಯಲ್ಲಿ ಒಂದು ಹಲ್ಲೂ ಇಲ್ಲ, ಈಗ ಹಾಡು ಹೇಳೋ ಆಸೆ ನೋಡು ನಂಗೆ" ಎಂದರು. ಮತ್ತೊಮ್ಮೆ ನಾನು ರೆಕಾರ್ಡ್ ಮಾಡುತ್ತಿರುವುದು ಅವರ ಗಮನಕ್ಕೆ ಬಂದು, "ಹಾಕಿದೀಯೇನೇ! ಸ್ವಲ್ಪ ತಡಿ, ಆಮೇಲೆ ಹಾಕು ಅಂತ ಹೇಳಿರಲಿಲ್ವೇನೇ ನಾನು?" ಎಂದು ನನ್ನ ಮೇಲೆ ಕೋಪ ಮಾಡಿಕೊಂಡರು. ಆಮಾತೆಲ್ಲವೂ ರೆಕಾರ್ಡ್ ಆಗಿತ್ತು. ಅದು ನನಗೆ ತುಂಬಾ ಖುಶಿ ಕೊಟ್ಟ ಕಾರಣ ಅದನ್ನು ಅಳಿಸಿ ಹಾಕಿ ಅದರ ಮೇಲೆ ಮತ್ತೆ ರೆಕಾರ್ಡ್ ಮಾಡಲು ಮನಸ್ಸು ಬರಲಿಲ್ಲ. ಮತ್ತೆ ಹೊಸ ಕ್ಯಾಸೆಟ್ ತಂದು, "ಈಗ ಹಾಡಿ ಸರಿಯಾಗಿ ರೆಕಾರ್ಡ್ ಮಾಡ್ತೀನಿ." ಎಂದು ಸಮಾಧಾನ ಮಾಡಿ ಅವರ ಕೋಪವನ್ನು ಇಳಿಸಿದೆ. ನಂತರ ಮಧ್ಯೆ ಮಾತನಾಡದೇ ತದೇಕಚಿತ್ತವಾಗಿ ಅವರು ಹಾಡಿದ್ದನ್ನು ಗಲಾಟೆಯಿಲ್ಲದೇ ರೆಕಾರ್ಡ್ ಮಾಡಿದೆ. ಆದರೆ ನಮ್ಮ ದುರದೃಷ್ಟವೋ ಏನೋ ತುಂಬಾ ಚೆನ್ನಾಗಿ ಮೂಡಿಬಂದಿದ್ದ ಆ ಕ್ಯಾಸೆಟ್ ನಾವು ಮನೆ ಬದಲಾಯಿಸುವಾಗ ಕಳೆದು ಹೋಯಿತು. ಆದರೆ ಮಲಗಿದಕಡೆಯೇ ಅಭ್ಯಾಸ ಮಾಡಿಕೊಳ್ಳಲೆಂದು ಅವರು ಹಾಡಿ ಮಾತನಾಡಿ ನನ್ನಮೇಲೆ ಕೋಪ ಮಾಡಿಕೊಂಡು ಹೇಳಿದ, ಮಾತಾಡಿದ ಕ್ಯಾಸೆಟ್ ನಮ್ಮ ಬಳಿ ಇನ್ನೂ ಜೋಪಾನವಾಗಿ ಇದೆ. ಅದನ್ನು ಅಪರೂಪದ ನಿಧಿ ಎಂಬಂತೆ ನನ್ನವರು ಬಹಳ ಜೋಪಾನ ಮಾಡಿ ಇಟ್ಟಿದ್ದಾರೆ. ಅವರ ಅಕ್ಕಂದಿರು ಅಣ್ಣಂದಿರು ಬಂದಾಗಲೆಲ್ಲ ಹಾಕಿ ಕೇಳಿ ಕೇಳಿಸಿ ಸಂಭ್ರಮಪಡುತ್ತಿರುತ್ತಾರೆ. ಅವರ ಈ ಸಂಭ್ರಮ ನೋಡಿದಾಗಲೆಲ್ಲಾ ಕಳೆದು ಹೋದ ಆ ಕ್ಯಾಸೆಟ್ ನೆನಪಾಗಿ ನನ್ನ ಕಣ್ಣುಗಳಲ್ಲಿ ಹನಿಗೂಡುತ್ತವೆ.