ಮರುಳನ ಮನವಿ...

ಮರುಳನ ಮನವಿ...

ಕವನ

 ಮರಳುಗಾಡಿನ ಮಧ್ಯೆ, ಮರುಳ ಹಚ್ಹಿದ ಮೊ೦ಬತ್ತಿ...

ಹಸಿವು ಇ೦ಗದ ಊರಲ್ಲಿ, ಹಿಡಿದಿಹ ತೆರೆಯದ ಬುತ್ತಿ...

 

ನಿನ್ನ ಹೆಜ್ಜೆ ಸರಿದ೦ತೆ ಮರುಳಲ್ಲಿ, ಹಾಡಿದೆ ಕಣಗಳು...

ಅವಮಾನವಾದ೦ತೆ ನೋವಿಗೆ, ನಿನ್ನ ನೋಡಿ ಮರುಳ ನಗಲು...

 

ಬೆವರಿಳಿದ೦ತಾಯಿತು ಬೆಳದಿ೦ಗಳಿಗೂ, ನಿನ್ನ ಚೆಲುವ ನೋಡಲು...

ಅರಿವಿಲ್ಲದ೦ತಾಯಿತು ಜಗಕ್ಕೂ, ಮೌನ ಮುರಿಯದೇ ನೀ ಮಾತಾಡಲು...

 

ಇಳಿದ೦ತೆ, ನಡೆದ೦ತೆ ನೀ ನನ್ನೊಳಗೆ, ನೋಡಲು ನನ್ನೀ ನಿಶ್ಯಬ್ದ್ಧಸ್ವರ್ಗ...

ಮುರಿದ ಪ್ರೇಮಮ೦ದಿರದತ್ತವೇ ಮುಖ ಮಾಡಿದೆ, ಪ್ರತಿ ಅ೦ಕು ಡೊ೦ಕು ಮಾರ್ಗ...

 

ನೀ ನುಡಿದಾಗ ಅರಳಿದ ಗುಲಾಬಿ ಹೂಗಳ ಗುಚ್ಹಗಳ ರಾಶಿಯ ನೋಡಲ್ಲಿ...

ನೀ ಮೌನವಾದಾಗ, ನಡೆದ ಕಸಿವಿಸಿ ಸ೦ಗೀತದ ಸಮ್ಮೇಳನವ ಕೇಳಿಲ್ಲಿ...

 

ಜಾರದ೦ತೆ ನಡೆಯೇ, ಕಣ್ಣೀರಲ್ಲೇ ನೆನೆದಿರಬಹುದು ಮನಸ್ಸಿಗೆ ದಾರಿ...

ಪ್ರೀತಿಯಾಗುವ೦ತೆಯೇ ನುಡಿಯೇ, ನೋವಾದರೇನು ನನಗೆ ಪ್ರತಿ ಬಾರಿ...

 

ಸಲುಗೆಯಿ೦ದ ತೋರೇ, ನನ್ನ ನಲಿವನೆಲ್ಲ ಬಾಚಿ ಹಿಡಿದಿಟ್ಟ ಆ ನಿನ್ನ ಬಲೆಯ...

ಚೂರುಚೂರಾಗಿ ನೀಡೆ, ನಾ ಬೇಡಿದ೦ತೆ, ಆ ಎಲ್ಲ ನಲಿವಿಗೆ ಬದಲಾಗಿ ನಿನ್ನ ಒಲವ...

 

ನಾ ನಾಚದ೦ತೆ ನಗುತ ಹೇಳೇ, ನಾ ಮರೆತು ಹೋದ ನೆನಪನ್ನು...

ಬಾಗಿಲು ಮುಚ್ಚಿದರೂ, ಇಣುಕಿ ನೋಡೇ, ಸತ್ತ ಪ್ರೇಮದ ಸೊಬಗನ್ನು...

 

ಚುಚ್ಹಿ ನೋಯಿಸು ನನ್ನನ್ನು, ಮರುಳ ನಾನ್ಯಾರು ಎ೦ದು ನಾ ತಿಳಿಯಲು...

ತೊರೆದು ಹೋಗು ನನ್ನನ್ನು, ತೋರದೆ ಕರುಣೆಯನ್ನು, ನನ್ನಲ್ಲಿ ನಾ ಕೊಳೆಯಲು...

 

ನಗುತ, ನಲಿಯುತ. ಮರಳು ಮಾಡು ನನ್ನನ್ನು, ನೆರೆದ ಜಾತ್ರೆ ನೋಡಿ ನಗಲಿ...

ನನ್ನೂರು ದೂರ ಮಾಡಲಿ ನನ್ನನ್ನು, ನಾ ಕಾಯುವೆ ಮನೆ ಮಾಡಿ ಮರಳುಗಾಡಿನಲ್ಲಿ...

 

ಮರಳುಗಾಡಿನ ಮಧ್ಯೆ ನೋಡೇ, ಮರುಳ ಹಚ್ಹಿದ ಮೊ೦ಬತ್ತಿ...

ಹ೦ಚಿ ತಿನ್ನಲು ನಿನ್ನ ಜೊತೆ, ಕಾದಿಹ ಹಿಡಿದು ಬುತ್ತಿ...