ಮರೆತು ಹೋಗುತ್ತಿರುವ ಪೌಷ್ಟಿಕ ಅಡುಗೆಗಳು
ಸಾವಯವ ಕೃಷಿಕ, ಗ್ರಾಹಕ ಬಳಗ ಇವರು ಈಗಾಗಲೇ ಎರಡು ಪುಟ್ಟದಾದ ಮಾಹಿತಿ ಪೂರ್ಣ ಪುಸ್ತಕಗಳನ್ನು ಹೊರತಂದಿದ್ದಾರೆ. ಇದೇ ಮಾಲಿಕೆಯ ಮೂರನೆ ಪುಸ್ತಕ ಸವಿತಾ ಎಸ್ ಭಟ್ ಅಡ್ವಾಯಿ ಅವರ ‘ಮರೆತು ಹೋಗುತ್ತಿರುವ ಪೌಷ್ಟಿಕ ಅಡುಗೆಗಳು'. ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಸವಿತಾ ಎಸ್ ಭಟ್ ಅವರ ಅಡುಗೆಯ ಬಗ್ಗೆ ಬರೆದ ಬರಹಗಳು ಬೆಳಕು ಕಂಡಿವೆ. ಅಡುಗೆ ಪುಸ್ತಕಗಳು ಬಿಡುಗಡೆಯಾಗಿವೆ. ಆದರೆ ಇಲ್ಲಿರುವ ಪುಟ್ಟ ಪುಸ್ತಕದಲ್ಲಿ ಅವರು ಪೌಷ್ಟಿಕ ಆಹಾರದ ಅಗತ್ಯತೆಯನ್ನು ಪೂರೈಸುವ ಅಡುಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಸವಿತಾ ಎಸ್ ಭಟ್ ಅವರು ತಮ್ಮ ‘ಅಡುಗೆಯೆಂಬ ಅದ್ಭುತ' ಎಂಬ ಮಾತಿನಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ಹೀಗಿವೆ. “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ" ಎಂಬ ಮಾತಿದೆ. ಆಹಾರವು ನಮ್ಮ ದೇಹದ ಚಟುವಟಿಕೆಗಳಿಗೆ ಅತಿ ಅವಶ್ಯಕ. ಆಹಾರದ ತಯಾರಿಯೆಂದರೆ ಹಲವರಿಗೆ ಮೇಲ್ನೋಟಕ್ಕೆ ಸರಳವಾದ ವಿಚಾರವೆನಿಸಬಹುದು. ಆದರೆ ಅದರೊಳಗೆ ಹಲವಾರು ವಿಚಾರಗಳು ಅಡಗಿವೆಯೆಂದು ಅರಿತವರಿಗಷ್ಟೇ ಗೊತ್ತು.
ಅಡುಗೆಗಳು ಬೇಯಿಸಿ ಇಳಿಸುವುದಷ್ಟೇ ಅಲ್ಲ. ಅದೊಂದು ಕಲೆ. ಇದರಲ್ಲಿ ಭೌತ ಶಾಸ್ತ್ರ, ರಸಾಯನ ಶಾಸ್ತ್ರಗಳೆಲ್ಲ ಅಡಗಿದೆ. ತೂಕ, ಅಳತೆ, ಪ್ರೆಶರ್ ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ, ಉಗಿಯಲ್ಲಿ ಬೇಯಿಸುವಾಗಲೆಲ್ಲಾ ಇವು ವಿಜ್ಞಾನದ ಬೇರೆ ಬೇರೆ ಪಾಠಗಳಂತೆ ತೆರೆದುಕೊಳ್ಳುತ್ತವೆ. ಹುರಿಯುವಾಗ, ಕರಿಯುವಾಗ ಹುಳಿ, ಉಪ್ಪು, ಬೆಲ್ಲಗಳನ್ನು ಬೆರೆಸಿ, ಕುದಿಸಿ ಪಾಕ ಮಾಡಿ ಬೇರೆ ರೀತಿಯ ಮಾರ್ಪಾಟುಗಳಾಗುವಾಗ ರಸಾಯನ ಶಾಸ್ತ್ರ ಕಣ್ಹೆದುರಿಗೆ ಕಾಣಿಸುತ್ತದೆ.
ಅಡುಗೆ ಮಾಡುವಾಗ ಮನೆಯವರ ಆರೋಗ್ಯದ ಕಡೆ ಗಮನವಿರಬೇಕು. ಮಕ್ಕಳು, ವಯಸ್ಸಾದವರು, ಅನಾರೋಗ್ಯದವರು ಎಲ್ಲರನ್ನೂ ಗಮನದಲ್ಲಿಟ್ಟು ಅಡುಗೆ ತಯಾರಿಸಬೇಕು. ಉಣ್ಣುವವರಿಗೆ ರುಚಿಯೆನಿಸಬೇಕು. ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಒಳ್ಳೆಯ ಸುವಾಸನೆ ಇರಬೇಕು. ನೋಡಲಿಕ್ಕೂ ಮೆಚ್ಚುವಂತಿರಬೇಕು.
ಈ ಪುಸ್ತಕದಲ್ಲಿ ನಮ್ಮ ಹಿರಿಯರ ಕಾಲದಿಂದಲೂ ಬಂದ ಕೆಲವು ಅಡುಗೆ ಮಾಹಿತಿ ನೀಡಿದ್ದೇನೆ. ಆರೋಗ್ಯದ ಅಡುಗೆ ಪರಂಪರೆ ಮುಂದುವರಿಯಲಿ. ಈ ಪುಸ್ತಕ ಪಾಕ ಪ್ರಿಯರಿಗೆ ಮಾರ್ಗದರ್ಶಿಯಾಗಲಿ" ಎಂದಿದ್ದಾರೆ.
ಸವಿತಾ ಭಟ್ ಅವರು ಈ ಪುಸ್ತಕದಲ್ಲಿ ಸುಮಾರು ಹದಿನೈದು ಬಗೆಯ ಚಟ್ನಿಗಳು, ಸುಮಾರು ಹತ್ತು ತಂಬುಳಿಗಳು, ಹದಿಮೂರು ಗೊಜ್ಜುಗಳು, ಆರು ಬಗೆಯ ಪಲ್ಯಗಳು, ಒಂಬತ್ತು ಬಗೆಯ ಸಾಸಿವೆ, ಐದು ಬಗೆಯ ಸಾರುಗಳ ವಿವರಗಳನ್ನು ಸರಳವಾಗಿ, ಅರ್ಥಪೂರ್ಣವಾಗಿ ನೀಡಿದ್ದಾರೆ. ಕೊನೆಯ ಪುಟದಲ್ಲಿ ಅಡುಗೆಗೆ ಬಳಸುವ ವಸ್ತುಗಳ ಉಪಯೋಗಗಳನ್ನು ಕೊಡಲಾಗಿದೆ. ಇದೊಂದು ಪುಟ್ಟದಾದರೂ ಉಪಯುಕ್ತ ಪುಸ್ತಕ.