ಮರೆತು ಹೋದ ಹೊಯ್ಸಳ ದೇವಾಲಯ!

ಮರೆತು ಹೋದ ಹೊಯ್ಸಳ ದೇವಾಲಯ!

ನಮಗೆ ಹೊಯ್ಸಳ ಸಾಮ್ರಾಜ್ಯ ಎಂದೊಡನೆಯೇ ಮೊದಲಿಗೆ ನೆನಪಿಗೆ ಬರುವುದು ಬೇಲೂರು-ಹಳೇಬೀಡು ಇಲ್ಲಿನ ಅದ್ಭುತ ಶಿಲ್ಪಕಲಾ ವೈಭವ. ಪ್ರತೀ ವರ್ಷ ಲಕ್ಷಾಂತರ ಮಂದಿ ಈ ಎರಡು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಈ ಸ್ಥಳ ಬಹಳಷ್ಟು ಜನಪ್ರಿಯತೆಯನ್ನೂ ಪಡೆದುಕೊಂಡಿದೆ. ಆದರೆ ಹೊಯ್ಸಳ ಅರಸರಿಂದಲೇ ನಿರ್ಮಾಣ ಹೊಂದಿದ ಒಂದು ದೇವಾಲಯವು ಅತ್ಯಂತ ನಿರ್ಲಕ್ಷಿತ ಸ್ಥಿತಿಯಲ್ಲಿರುವುದು ನಿಮಗೆ ಗೊತ್ತೇ?

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ದೇವಾಲಯವು ಯಾವ ದೃಷ್ಟಿಯಿಂದಲೂ ಬೇಲೂರು -ಹಳೇಬೀಡು ದೇವಾಲಯಗಳಿಗೆ ಕಡಿಮೆಯಿಲ್ಲ. ಅದೇ ರೀತಿಯ ಶಿಲ್ಪಕಲೆಯ ವೈಭವ ಇಲ್ಲೂ ಇದೆ. ಆದರೆ 'ಪ್ರಸಿದ್ಧ, ಖ್ಯಾತ' ಎಂಬ ಪದ ವೈಭವ ಮಾತ್ರ ಈ ದೇವಾಲಯಕ್ಕೆ ಇಲ್ಲ. ಹೊಯ್ಸಳ ವಂಶಸ್ಥರು ಅವರು ಕಟ್ಟಿಸಿದ ದೇವಾಲಯಗಳಿಗೆ ಅದ್ಭುತವಾದ ಶಿಲ್ಪಕಲೆಯನ್ನು ಮಾಡಿಸಿದ್ದಾರೆ. ಅತ್ಯುತ್ತಮ ಶಿಲ್ಪಿಗಳಿಂದ ಮೂರ್ತಿಗಳ ಕೆತ್ತನೆಯಾಗಿದೆ. ಭದ್ರಾವತಿಯ ದೇವಾಲಯದಲ್ಲೂ ಇದೇ ರೀತಿಯ ಅದ್ಬುತ ಕಲೆ ಕಾಣಿಸುತ್ತದೆ. ಅದರೆ ಸರಕಾರದ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನುತ್ತಾರೆ ಪ್ರವಾಸಿಗರು.

ಹೊಯ್ಸಳ ಅರಸ ಮೂರನೇ ನರಸಿಂಹನ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ಅತ್ಯಂತ ಸೊಗಸಾದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಮೂರು ಅಡಿ ಎತ್ತರದ ಜಗುಲಿಯ ನಕ್ಷತ್ರಾಕಾರದ ತಳ ವಿನ್ಯಾಸದಲ್ಲಿದೆ. ದೇವಾಲಯದ ಪ್ರತೀ ಮೂಲೆಯಲ್ಲಿರುವ ಆನೆಗಳ ವಿಗ್ರಹಗಳು ಇಡೀ ದೇವಸ್ಥಾನವನ್ನು ಹೊತ್ತುಕೊಂಡಿದೆಯೋ ಎಂಬ ಭಾವನೆ ಮೂಡುತ್ತದೆ. ಆದರೆ ಇಲ್ಲಿರುವ ಆನೆಗಳಲ್ಲಿ ಒಂದು ಆನೆ ಮಾತ್ರ ಪೂರ್ಣವಾಗಿ ನಿರ್ಮಾಣಗೊಂಡಿದೆ. ಆದರೆ ಉಳಿದ ಆನೆಗಳ ಕೆತ್ತನೆ ಸಂಪೂರ್ಣವಾಗಿಲ್ಲ. 

ಈ ದೇವಾಲಯದ ಮೂರು ಗರ್ಭ ಗುಡಿಗಳು ತ್ರಿಕೂಟಾಚಲ ಶೈಲಿಯಲ್ಲಿವೆ. ಒಳಹೊಕ್ಕಂತೆ ಸಿಗುವ ಮುಖಮಂಟಪ ಪೂರ್ವಾಭಿಮುಖವಾಗಿದ್ದು ನವರಂಗ ಮತ್ತು ಗರ್ಭಗುಡಿಯನ್ನು ಒಳಗೊಂಡಿದೆ. ಉತ್ತರ ಭಾಗದ ಗರ್ಭಗುಡಿಯಲ್ಲಿ ಪುರುಷೋತ್ತಮ ಮತ್ತು ದಕ್ಷಿಣ ಭಾಗದ ಗುಡಿಯಲ್ಲಿ ವೇಣುಗೋಪಾಲನಿದ್ದಾನೆ. ಲಕ್ಷ್ಮೀನರಸಿಂಹನ ಪ್ರಾಣದೇವತೆ ಮುಖ್ಯ ಗರ್ಭಗುಡಿಯಲ್ಲಿದ್ದು, ಚೌಕಟ್ಟಿನಲ್ಲಿ ಗಜಲಕ್ಷ್ಮಿಯ ಉಬ್ಬು ಶಿಲ್ಪವಿದೆ. ಹೊಯ್ಸಳ ಶೈಲಿಯ ನವರಂಗದಲ್ಲಿ ಕಂಬಗಳಿದ್ದು, ಅರ್ಧ ಗೋಳಾಕಾರವಾಗಿ, ಒಳಭಾಗದಲ್ಲಿ ಶಿಲ್ಪಾಲಂಕರಣೆಗಳಿರುವ ೯ ಸುಂದರ ಭುವನೇಶ್ವರಿ ಮೂರ್ತಿಗಳಿವೆ. ಕವುಚಿಟ್ಟ  ಕಮಲದಂತಿರುವ ಈ ಗೋಳ ಮುಚ್ಚಿಗೆಯು ಅತ್ಯದ್ಭುತ ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾಗಿದೆ. 

ದೇವಾಲಯದ ಹೊರಭಾಗದಲ್ಲಿ ಧಾರ್ಮಿಕ ಜೀವನಕ್ಕೆ ಸಂಬಂಧಿಸಿದ ಚಿತ್ರಗಳಿವೆ. ಹೊಯ್ಸಳ ಶಿಲ್ಪ ಕಲೆಯ ಪ್ರಮುಖ ಅಂಶವೆಂದರೆ ಅವರ ಶಿಲ್ಪಿಗಳು ತಮ್ಮ ಹುಟ್ಟೂರು, ಬಿರುದು ಸಹಿತ ಹೆಸರು ಅಥವಾ ಹೆಸರಿನ ಮೊದಲಕ್ಷರವನ್ನು ಲಿಪಿಯ ರೂಪದಲ್ಲಿ ಕೊರೆದಿರುತ್ತಾರೆ. ಈ ಲಕ್ಷ್ಮೀನರಸಿಂಹ ದೇವಾಲಯದ ಕೆಲವು ಶಿಲ್ಪಗಳಲ್ಲಿ 'ಮಾಬಾ' ಮತ್ತು ಮಾಬಾನ್ಯಕನಾ' ಎಂಬ ಹೆಸರಿನ ಉಲ್ಲೇಖವಿದೆ. ಬಹುಷಃ ಈ ಹೆಸರುಗಳು ಅದನ್ನು ಕೆತ್ತಿದ ಶಿಲ್ಪಿಯದ್ದಾಗಿರಬಹುದೆಂದು ಅಂದಾಜಿಸಲಾಗಿದೆ. 

ದೇವಾಲಯವು ಪೂರ್ಣವಾಗದೇ ಉಳಿದಿರುವ ಕಾರಣದಿಂದಲೇ ಬಹುಷಃ ಈ ದೇಗುಲ ಅಷ್ಟೊಂದು ಪ್ರಸಿದ್ಧಿ ಪಡೆದಿಲ್ಲ ಎಂದು ಜನರು ಅಭಿಪ್ರಾಯ ಪಡುತ್ತಾರೆ. ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಮಯದಲ್ಲಿ ಯುದ್ಧ ಪ್ರಾರಂಭವಾದ ಕಾರಣದಿಂದಾಗಿ ಈ ದೇಗುಲ ಅಪೂರ್ಣವಾಗಿ ಉಳಿದಿರಬೇಕೆಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ. ದೇವಾಲಯದ ಒಳಭಾಗದಲ್ಲಿ ಅಪೂರ್ಣವಾಗಿರುವ ಶಿಲ್ಪಗಳು, ಶಾಸನಗಳು ಇವೆಲ್ಲವನ್ನೂ ನೋಡುವಾಗ ನೋವಾಗುತ್ತದೆ. 

ಸರಕಾರದ ದಿವ್ಯ ನಿರ್ಲಕ್ಷವೂ ಇಲ್ಲಿ ಎದ್ದು ಕಂಡು ಬರುತ್ತದೆ. ರಾಜ್ಯದ ಪುರಾತತ್ವ ಇಲಾಖೆಯೂ ಅಭಿವೃದ್ಧಿ ಹಾಗೂ ದುರಸ್ತಿಯನ್ನು ನಡೆಸದೇ ಇರುವುದರಿಂದ ವರ್ಷದಿಂದ ವರ್ಷಕ್ಕೆ ಈ ದೇವಾಲಯ ಶಿಥಿಲವಾಗುತ್ತಿದೆ. ನಮ್ಮ ನಾಡಿನ ಹಲವಾರು ದೇವಾಲಯಗಳು ಇದೇ ಸ್ಥಿತಿಯಲ್ಲಿವೆ. ನಾವು ಇಂದು ಇವುಗಳನ್ನು ಕಾಪಾಡದೇ ಹೋದರೆ ಮುಂದೆಂದೂ ನಮಗೆ ಇಂತಹ ಅದ್ಭುತ ಶಿಲಾ ವೈಭವಗಳು ಸಿಗಲಾರದು. ನಮ್ಮ ಮುಂದಿನ ಪೀಳಿಗೆಗಾಗಿ ನಾವು ಇವುಗಳನ್ನು ಸಂರಕ್ಷಿಸಬೇಕಿದೆ. ಸರಕಾರದ ಅಧೀನದಲ್ಲಿರುವ ಪುರಾತತ್ವ ಇಲಾಖೆಯೂ ಈ ಬಗ್ಗೆ ಜಾಗೃತರಾಗಬೇಕಿದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ