ಮರೆಯದೇ ಮಾಸ್ಕ್ ಹಾಕಿ, ಕೊರೊನಾ ನಿರ್ಮೂಲನೆ ಮಾಡಿ

ಮರೆಯದೇ ಮಾಸ್ಕ್ ಹಾಕಿ, ಕೊರೊನಾ ನಿರ್ಮೂಲನೆ ಮಾಡಿ

ಸಾರ್ವಜನಿಕರ ಒತ್ತಾಯದ ಮೇರೆಗೆ ಮೊನ್ನೆಯಷ್ಟೇ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹಿಂದೆಗೆದುಕೊಳ್ಳಲಾಗಿದೆ. ಜನರ ಜೀವ ಎಷ್ಟು ಅಮೂಲ್ಯವೋ ಹಾಗೆಯೇ ಜೀವನ ಕೂಡ ಅತ್ಯಮೂಲ್ಯ ಎಂಬ ಮಾತಿಗೆ ಕಟ್ಟುಬಿದ್ದು ರಾಜ್ಯ ಸರಕಾರ, ಒಂದಷ್ಟು ಕೊರೊನಾ ನಿಯಮಾವಳಿಗಳನ್ನು ಹಿಂದೆಗೆದುಕೊಂಡಿದೆ. ಒಂದು ಲೆಕ್ಕಾಚಾರದಲ್ಲಿ ರಾಜ್ಯ ಸರಕಾರದ ಈ ನಿರ್ಧಾರ ಸರಿ ಎಂದೇ ತೋರುತ್ತದೆ.

ಆದರೆ ವಾರಾಂತ್ಯ ಕರ್ಫ್ಯೂ ಹಿಂದೆಗೆದುಕೊಳ್ಳುವಾಗ ರಾಜ್ಯ ಸರಕಾರ, ಸಾರ್ವಜನಿಕರಿಗೆ ಎಚ್ಚರಿಕೆ ರೂಪದ ಒಂದು ಸಂದೇಶವನ್ನೂ ನೀಡಿದೆ. ಒಂದು ವೇಳೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ, ಆಸ್ಪತ್ರೆ ಸೇರುವವರ ಸಂಖ್ಯೆ ಜಾಸ್ತಿಯಾದರೆ ಮತ್ತೆ ಕೊರೊನಾ ನಿರ್ಬಂಧ ಹೇರಬೇಕಾಗುತ್ತದೆ ಎಂದಿದೆ. ರಾಜ್ಯ ಸರಕಾರದ ಈ ಎಚ್ಚರಿಕೆ ಜಾರಿಗೆ ಬರಬಾರದು ಎಂದರೆ ಕೊರೊನಾ ನಿಯಂತ್ರಣದಲ್ಲಿ ಜನರೂ ಕೈಜೋಡಿಸಬೇಕಾದ ಅನಿವಾರ್ಯತೆಗಳೂ ಇವೆ. ಕೊರೊನಾ ವಿಚಾರದಲ್ಲಿ ಜನರ ನಡೆ ನುಡಿ ಹೇಗಿದೆ ಎಂಬ ಕುರಿತಂತೆ ‘ಉದಯವಾಣಿ' ರಾಜ್ಯದ ೧೨ ಮಹಾನಗರಗಳಲ್ಲಿ ಸಮೀಕ್ಷೆಯೊಂದನ್ನು ನಡೆಸಿದೆ. ಅಂದರೆ ಜನತೆ ಮಾಸ್ಕ್ ಧರಿಸುತ್ತಿದ್ದಾರೆಯೇ? ಸಾಮಾಜಿಕ ಅಂತರ ಪಾಲನೆ ಮಾಡುತ್ತಿದ್ದಾರೆಯೇ ಎಂಬ ಕುರಿತಂತೆ ಖುದ್ದು ಪರಿಶೀಲನೆ ನಡೆಸಿದೆ. ವಿಚಿತ್ರವೆಂದರೆ ಪತ್ರಿಕೆ ಕಂಡುಕೊಂಡಂತೆ ಶೇ.೩೫ರಷ್ಟು ಮಂದಿ ಮಾತ್ರ ಮಾಸ್ಕ್ ಧರಿಸುತ್ತಿದ್ದಾರೆ. ಶೇ ೬೫ರಷ್ಟು ಮಂದಿ ಅರೆಬರೆ ಮಾಸ್ಕ್ ಹಾಕುವುದು ಅಥವಾ ಮಾಸ್ಕ್ ಹಾಕದೇ ಓಡಾಡುತ್ತಿರುವುದು ಕಂಡು ಬಂದಿದೆ.

ಈ ಅಂಶಗಳನ್ನು ಗಮನಿಸಿದರೆ ಕೊರೊನಾದ ಪರಿಣಾಮದ ಬಗ್ಗೆ ಜನ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ಗೊತ್ತಾಗುತ್ತದೆ. ಕೊರೊನಾದ ಮೊದಲ ಅಲೆಯಿಂದಲೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಸೂಚನೆ ಕೊಡುತ್ತಲೇ ಬಂದಿದೆ. ಅದರಲ್ಲೂ ಎರಡನೇ ಅಲೆಯ ವೇಳೆ ನಮ್ಮ ಸುತ್ತಲಿನ ಬಹಳಷ್ಟು ಮಂದಿಯನ್ನು ಕಳೆದುಕೊಂಡ ಮೇಲಂತೂ ಕೊರೊನಾದ ಗಂಭೀರತೆ ಅರ್ಥವಾಗಿದೆ ಎಂದೇ ಭಾವಿಸಲಾಗಿತ್ತು. ಆದರೂ ಜನ ಕೊರೊನಾದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದೇ ಹೇಳಬೇಕಾಗುತ್ತದೆ.

ಕೇಂದ್ರವಾಗಲಿ, ರಾಜ್ಯ ಸರಕಾರವಾಗಲಿ ಕಠಿನ ನಿಯಮಗಳನ್ನು ತರುವುದೇ ಕೊರೊನಾ ನಿಯಮಾವಳಿಗಳನ್ನು ಜನತೆ ಪಾಲಿಸಲಿ ಎಂಬ ಉದ್ದೇಶದಿಂದ. ಆದರೆ ಜನರೇ ಮಾರ್ಗಸೂಚಿಗಳನ್ನು ಪಾಲಿಸದೇ ಹೋದರೆ ಕೊರೊನಾ ನಿರ್ಮೂಲನೆ ಖಂಡಿತವಾಗಿಯೂ ಕಷ್ಟವಾಗುತ್ತದೆ. ಅಲ್ಲದೆ ಕೊರೊನಾದ ತೀವ್ರತೆ ಇನ್ನೂ ಕೆಲವು ವರ್ಷಗಳ ಕಾಲ ಮುಂದುವರೆಯುವ ಎಲ್ಲ ಅಪಾಯಗಳೂ ಇವೆ. 

ಈ ವಿಚಾರವನ್ನು ಮನಗಂಡು, ಸಾರ್ವಜನಿಕರು ಮನೆಯಲ್ಲಿಯೂ ಸೇರಿದಂತೆ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ, ಪಾರ್ಕ್ ಗಳು, ಆಸ್ಪತ್ರೆಗಳು, ಕಾಲೇಜುಗಳೂ, ಹೋಟೇಲುಗಳಲ್ಲಿ ಕಡ್ಡಾಯವಾಗಿ ಕೊರೊನಾ ನಿಯಮಾವಳಿಗಳನ್ನು ಪಾಲಿಸಲೇ ಬೇಕು. ಒಂದು ವೇಳೆ ಈ ಸ್ಥಳಗಳಲ್ಲಿ ಕೊಂಚ ಮೈಮರೆತರೂ ಕೊರೊನಾ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ವೇಗ ಹೆಚ್ಚಾಗುತ್ತದೆ. ಏಕೆಂದರೆ ಆಸ್ಪತ್ರೆಗಳಲ್ಲೇ ಹೆಚ್ಚಿನ ಮಂದಿ ಮಾಸ್ಕ್ ಧರಿಸದೇ ಅಡ್ಡಾಡುತ್ತಿರುವ ಸಂಗತಿಗಳೂ ನಮ್ಮ ಸಮೀಕ್ಷೆಯಲ್ಲಿ ಗಮನಕ್ಕೆ ಬಂದಿದ್ದು, ಎಲ್ಲರೂ ಎಚ್ಚರಿಕೆಯಿಂದ ಇರಬೇಕಾದುದು ಅತ್ಯಗತ್ಯವಾಗಿದೆ.

ಕೃಪೆ: ಉದಯವಾಣಿ ಪತ್ರಿಕೆ, ದಿ. ೨೪-೦೧-೨೦೨೨, ಸಂಪಾದಕೀಯ