ಮರೆಯಲಾಗದ ದೇವತೆ - ರಾಧಾ ಸಿಸ್ಟರ್

‘ದಾದಿ, ನರ್ಸ್ ಎಂಬ ಹೆಸರು ಕೇಳಿದಾಕ್ಷಣ ಮೊದಲು ಕಣ್ಣೆದುರು ಬರುವುದು ಸೇವೆ’. ಹೌದು, ಆಸ್ಪತ್ರೆಗೆ ಹೋದ ತಕ್ಷಣ ಏನು? ಯಾಕೆ? ಎತ್ತ?ಎಂದು ನಮ್ಮನ್ನು ವಿಚಾರಿಸುವ ಓರ್ವ ಸ್ನೇಹ ಜೀವಿ ಅಂದರೆ ದಾದಿಯರು. ನಾನು ಅತ್ಯಂತ ಗ್ರಾಮೀಣ ಪರಿಸರದಲ್ಲಿ ಬೆಳೆದವಳು, ಮುಂದೆ ಬದುಕು ಕಟ್ಟಿಕೊಂಡವಳು. ಶಿಕ್ಷಕ ವೃತ್ತಿ ಸಹ ತುಂಬಾ ಗ್ರಾಮಾಂತರ, ಗುಡ್ಡಗಾಡು ಪ್ರದೇಶದಲ್ಲಿರುವ ಸರಕಾರಿ ಶಾಲೆಯಲ್ಲಿ ಮಾಡಿದವಳು. ಈ ಸಂದರ್ಭದಲ್ಲಿ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿ, ಈಗಲೂ ನನ್ನ ಮನದಲ್ಲಿ ನಿಂತ ಆ ಮೂರುತಿ, ಅಲ್ಲ ದೇವತೆ ಎಂದರೂ ತಪ್ಪಾಗಲಾರದು, ನಮ್ಮ ದೇವ ಸಂಜೀವಿನಿಯಾಗಿ ಇದ್ದವರು ಶ್ರೀಮತಿ ರಾಧಾ ಸಿಸ್ಟರ್. ಇವರನ್ನು ಯಾವತ್ತೂ ಮರೆಯಲಾರೆನು. ಪ್ರಾ. ಆ.ಕೇಂದ್ರ ಅಡ್ಯನಡ್ಕ, ಬಂಟ್ವಾಳದಲ್ಲಿ ಇವರ ಕರ್ತವ್ಯ.
ಸಹೃದಯಿ, ಮಮತೆಯ ಒಡಲು ಮತ್ತು ಕಡಲು, ಬಹಳ ನಯವಿನಯದ ಮಾತುಗಳು, ಗೌರವ ನೀಡುವ ಮಹಾನ್ ವ್ಯಕ್ತಿತ್ವ, ಸರಳ ಸಜ್ಜನಿಕೆಯೇ ಆಭರಣ. ಎಷ್ಟೋ ದಾದಿಯರನ್ನು ಜೀವನಾನುಭವದಲ್ಲಿ ಕಂಡವಳು. ಆದರೆ ಇವರಿಗೆ ಇವರೇ ಸರಿಸಾಟಿ.
ಗ್ರಾಮೀಣ ಶಾಲೆ, ಏನಾದರೂ ಆದರೆ ಯಾರೂ ಕೇಳುವವರಿಲ್ಲ ,ಆಗ ಮೊಬೈಲ್ ಇಲ್ಲ ,ಹತ್ತಿರದ ಮನೆಗೆ ಹೋಗಿ ದೂರವಾಣಿ ಮಾಡಿದರೆ, ತಕ್ಷಣ ಪರಿಹಾರ ಇಲ್ಲವೇ ಅವರೇ ಖುದ್ದಾಗಿ ಬರುವುದೂ ಇತ್ತು ಅಥವಾ ಕರೆದುಕೊಂಡು ಬನ್ನಿ ಹೇಳುತ್ತಿದ್ದರು. ಇಡೀ ಪರಿಸರ ಗುಡ್ಡ ಕಾಡು ಬೆಟ್ಟ. ಆದರೂ ನಾನು ಕಂಡ ಹಾಗೆ ತಿಂಗಳು ತುಂಬಿದ ಬಸುರಿ ಆಗಿರುವಾಗ ಸಹ ಕಾಲ್ನಡಿಗೆಯಲ್ಲಿ ಮನೆಮನೆ ಭೇಟಿ ಮಾಡಿ, ಸಲಹೆ, ಸೂಚನೆ, ಮಾತ್ರೆ ವಿತರಣೆ, ಕುಟುಂಬ ಯೋಜನೆ ಅಗತ್ಯ, ಪೌಷ್ಟಿಕ ಆಹಾರದ ಅಗತ್ಯ, ಸ್ವಯಂ ಸ್ವಚ್ಛತೆ, ಹದಿಹರೆಯದ ಸಮಸ್ಯೆ, ೪೦ರ ನಂತರದ ಹೆಂಗಸರ ಆರೋಗ್ಯ, ಶಾಲಾ ಮಕ್ಕಳ ಆರೋಗ್ಯ ಸಮಸ್ಯೆ ಎಲ್ಲವನ್ನೂ ವಿವರಿಸಿ ಹೇಳುತ್ತಿದ್ದ ಅವರ ಕರ್ತವ್ಯ ನಿಷ್ಠೆಗೆ ತಲೆಬಾಗಲೇ ಬೇಕು.
ನಡುರಾತ್ರಿ ಸಹ ಮನೆಗೆ ಬಂದು ಕರೆದಾಗ ಹೋಗಿ ಹೆರಿಗೆ ಮಾಡಿಸುವಷ್ಟು ಚಾಕಚಕ್ಯತೆ ಇದ್ದ ಪ್ರತಿಭಾವಂತರು .ಈಗಲೂ ಸಹ ದೂರವಾಣಿ ಕರೆಗೆ ಸ್ಪಂದಿಸಿ ಸಲಹೆಗಳನ್ನು ನೀಡುವ ಸಹೃದಯಿ ಇವರು. ಪ್ರಾ.ಆ.ಕೇಂದ್ರದಲ್ಲಿ ಅವರೊಂದಿಗೆ ‘ರತಿದೇವಿ’ ಅಂತ ಒಬ್ಬರು ಸಿಸ್ಟರ್ ಇದ್ದರು. ಅವರು ಸಹ ಅತ್ಯಂತ ಸನ್ನಡತೆಯವರು. ಎಲ್ಲರನ್ನೂ ಪ್ರೀತಿವಿಶ್ವಾಸದಿಂದ ನೋಡುತ್ತಿದ್ದರು.
ಭಾನುಮತಿ, ಲಲಿತಾರೈ, ಹೇಮಾವತಿ, ಸಿಸ್ಸರ್ ಲಿಲ್ಲಿ ಇವರಿಷ್ಟು ಜನ ನನ್ನ ಮೇಲೆ ಪ್ರಭಾವ ಬೀರಿದ ದಾದಿಯರು.
‘ವಿಶ್ವ ದಾದಿಯರ ದಿನ’ದಂದು ನನ್ನ ಗೌರವಪೂರ್ವಕ ನಮನಗಳು.
ರತ್ನಾ ಕೆ.ಭಟ್, ತಲಂಜೇರಿ
ನಿವೃತ್ತ ಮುಖ್ಯ ಗುರುಗಳು (ಸ.ಪ್ರಾ.ಶಾಲೆ ಅಮೈ ದ.ಕನ್ನಡ,ಬಂಟ್ವಾಳ)
ಚಿತ್ರ ಕೃಪೆ: ಇಂಟರ್ನೆಟ್ ತಾಣ