ಮರೆಯಲಾಗದ ನೋವು

ಮರೆಯಲಾಗದ ನೋವು

ಬರಹ

ಮರೆಯಲಾಗದ ನೋವು
ಹಂಸಾನಂದಿಯವರು ಬರೆದ ಬ್ಲಾಗ್ ‘ದೊಡ್ಡವರ ಸಣ್ಣತನ’ ಓದಿದಾಗ ನನ್ನ ಕಹಿ ಅನುಭವವೊಂದು ನೆನಪಾಗಿ ನನ್ನ ಕಣ್ಣಂಚಿನಲ್ಲಿ ಒಂದೆರಡು ಹನಿಗಳು ಉದುರಿದವು. ಇಲ್ಲೂ ಹಾಗೇ ದೊಡ್ಡವರ ಕಾಟದಿಂದಲೇ ನಾನು ನೋವನುಭವಿಸಬೇಕಾಗಿ ಬಂತು. ಅದನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.
ಕೆಲವಾರು ವರ್ಷಗಳ ಹಿಂದೆ ಒಂದು ಸ್ವತಂತ್ರ ದಿನಾಚರಣೆಯಂದು ನಡೆದ ಘಟನೆ ಇದು. ಪ್ರತಿ ವರ್ಷವೂ ಯಾವ ಶಾಲೆಯ ಮಕ್ಕಳು ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಡಿ.ಡಿ.ಪಿ.ಐ. ಕಚೇರಿಯಿಂದ ನಮಗೆ ಆಜ್ಞೆ ಬರುತ್ತದೆ. ಅದರಂತೆ ಒಂದು ವರ್ಷ ನಮ್ಮ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಒಂದು ಸಾಂಸ್ಕೃತಿಕ ಕಾರ್ಯಕ್ರಮ ನೀಡಬೇಕೆಂದು ಸಂದೇಶ ಬಂದಿತ್ತು. ನಾನು ಒಬ್ಬ ಸ್ವತಂತ್ರ ಹೋರಾಟಗಾರರ ಕಿರುನಾಟಕ ಮಾಡಿಸಿದರೆ ಸಂದರ್ಭಕೆ ಸರಿಯಾಗಿ ಇರುತ್ತದೆ ಎಂದು ಭಾವಿಸಿ ಭಗತ್‍ಸಿಂಗ್‍ರ ಜೀವನವನ್ನಾಧರಿಸಿದ ಕಿರುನಾಟಕವೊಂದನ್ನು ತಯಾರಿಸಿ ಮಕ್ಕಳಿಗೆ ರಿಹರ್ಸಲ್ ಮಾಡಿಸಿದೆ. ಆಗಸ್ಟ್ 15ರಂದು ಕಾರ್ಯಕ್ರಮದ ಪಟ್ಟಿ ನಮ್ಮ ಕೈಗೆ ಬಂದಾಗ ಅದರಲ್ಲಿ ನಮ್ಮ ಕಾರ್ಯಕ್ರಮ 3ನೇಯದು ಎಂದು ಇತ್ತು. ಅದನ್ನು ನೋಡಿ ನಾನು ನನ್ನ ಮಕ್ಕಳಿಗೆ, "ನೋಡಿ ಮಕ್ಕಳಾ, ಮೂರನೆಯದೇ ನಮ್ಮ ಕಾರ್ಯಕ್ರಮ. ಬೇಗ ಮುಗಿದು ಹೋಗುತ್ತೆ. ನಂತರ ಮಿಕ್ಕ ಕಾರ್ಯಕ್ರಮಗಳನ್ನು ನಿರಾತಂಕವಾಗಿ ನೋಡಿಕೊಂಡು ಬರಬಹುದು" ಎಂದು ಹೇಳಿದೆ. ಮಕ್ಕಳು ಸಂಭ್ರಮದಿಂದಲೇ ತಯಾರಾದರು. ಕಾರ್ಯಕ್ರಮ ಸಂಜೆ 6 ಗಂಟೆಗೆ ಎಂದು ಇದ್ದುದರಿಂದ ಮಕ್ಕಳು ೫.೩೦ಕ್ಕೆಲ್ಲಾ ತಯಾರಾಗಿದ್ದರು. 6 ಗಂಟೆಗೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ ಪ್ರಾರಂಭವಾಗಿದ್ದೇ 7 ಗಂಟೆಗೆ. ಸಭಾ ಕಾರ್ಯಕ್ರಮದ ಭಾಷಣಗಳು ಮುಗಿದು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗುವ ಹೊತ್ತಿಗೆ 8ಗಂಟೆಯಾಗಿತ್ತು. ಮಕ್ಕಳು ಆಗಲೇ ಸುಸ್ತಾಗಿದ್ದರು. ಆದರೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಯಿತು ಎಂದಕೂಡಲೇ ಸಂತೋಷದಿಂದ ಮಕ್ಕಳು ಮತ್ತೆ ಉತ್ಸಾಹಗೊಂಡರು. ಪ್ರಾರಂಭವಾಗಿದ್ದೇ ತಡವಾದ ಕಾರಣ ಊರಿನ ಕೆಲವು ದೊಡ್ಡ ವ್ಯಕ್ತಿಗಳ influence ಮೇಲೆ ನಮ್ಮ ಕಾರ್ಯಕ್ರಮ ಹತ್ತನೆಯದಾಗಿ ಬದಲಾವಣೆ ಹೊಂದಿತ್ತು. ಇದರ ಪರಿವಿಲ್ಲದೇ ಎರಡು ಕಾರ್ಯಕ್ರಮ ಮುಗಿದಕೂಡಲೆ ನಮ್ಮ ಮಕ್ಕಳು ವೇದಿಕೆಗೆ ಹೊರಡಲು ತಯಾರಾದಾಗ, ಮೈಕಿನಲ್ಲಿ ಬೇರೆ ಕಾರ್ಯಕ್ರಮದ ಕರೆ ಬಂತು. ನಾನು ಹೋಗಿ ವಿಚಾರಿಸಿದಾಗ, "ನೋಡಿ ಮೇಡಂ ನಿಮ್ಮದು ಹತ್ತನೆಯದು ಎಂದರು. ನಾನು ನನ್ನ ಕೈಯಲ್ಲಿದ್ದ ಲಿಸ್ಟನ್ನು ಅವರಿಗೆ ತೋರಿಸಿ, "ಇಲ್ಲಿ ಮೂರನೆಯದು ಎಂದಿದೆಯಲ್ಲ" ಎಂದೆ. ಅವರು, "ಮೇಡಂ, ಅದು ಸುಮ್ಮನೆ ನಿಮಗೆ ಕೊಟ್ಟಿರುತ್ತೇವೆ ಅಷ್ಟೆ. ಇಲ್ಲಿ ಎಲ್ಲರೂ ಬಂದು ನಮ್ಮದು ಮೊದಲು ನಮ್ಮದು ಮೊದಲು ಎಂದು ಶಿಫಾರಿಸು ಪತ್ರ ತಂದು ತಮ್ಮದು ಮೊದಲು ಹಾಕಿಸಿಕೊಂಡಿರುತ್ತಾರೆ" ಎಂದರು. ಹಾಗಾದರೆ ನಾನೂ ತರಬಹುದಾಗಿತ್ತು. ನನಗೂ ಊರ ಪ್ರಮುಖರು ಅನೇಕರ ಪರಿಚಯ ಇತ್ತು. ಆದರೂ ಅಂತಹ ಕೆಲಸಗಳು ನನಗೆ ಇಷ್ಟವಿಲ್ಲದ ಕಾರಣ ನಾನು ಯಾವತ್ತೂ ಆ ಮಾರ್ಗವನ್ನು ಅನುಸರಿಸಿದವಳಲ್ಲ. ಅಂತೂ 9 ಕಾರ್ಯಕ್ರಮಗಳು ಮುಗಿಯುವವರೆಗೆ ಮಕ್ಕಳನ್ನು ಕಾಯುವಂತೆ ಹೇಳಿದೆ. ಅಷ್ಟು ಕಾರ್ಯಕ್ರಮಗಳು ಮುಗಿಯುವ ಹೊತ್ತಿಗೆ ಸಮಯ 9.30 ಆಗಿತ್ತು ನನ್ನ ಮಕ್ಕಳು ಸಣ್ಣವರಾಗಿದ್ದ ಕಾರಣ ಮಕ್ಕಳಿಗೆ ಹಸಿವು, ನಿದ್ದೆ, ಹಾಕಿದ್ದ ವೇಷ ಭೂಷಣಗಳಿಂದ ಮತ್ತೆ makeupನಿಂದ ಸುಸ್ತಾಗಿಬಿಟ್ಟಿದ್ದರು. ಬಾಲಕ ಭಗತ್‍ಸಿಂಗ್‍ನ ಪಾತ್ರಧಾರಿ 3ನೇ ತರಗತಿಯ ಪುಟಾಣಿ ನಿದ್ದೆ ಮಾಡಿಯೇಬಿಟ್ಟಿದ್ದಳು. ಅಂತು ಮಕ್ಕಳನ್ನೆಲ್ಲಾ ಹುರಿದುಂಬಿಸಿ 9ನೇ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಎಬ್ಬಿಸಿದೆ. ಆದರೆ 10ನೆಯದಾಗಿಯೂ ನಮ್ಮನ್ನು ಕರೆಯದೇ ಹೋದಾಗ ನನಗೆ ತುಂಬಾ ಬೇಜಾರಾಯಿತು. ಆಯೋಜಕರನ್ನು, "ಏನಿದು ನಮ್ಮ ಕಾರ್ಯಕ್ರಮವನ್ನು 10ನೆಯದಾಗಿ ಮುಂದಕ್ಕೆ ತಳ್ಳಿದ್ದಿರಿ. ಈಗಲೂ ಬೇರೆ ಯಾರನ್ನೋ ಕರೆದರಲ್ಲ" ಎಂದು ಅಸಮಾದಾನದಿಂದಲೇ ಕೇಳಿದೆ. ಅದಕ್ಕೆ ಅವರು, "ಏನು ಮಾಡೋದು ಮೇಡಂ . ಅವರು ಏನೋ ತುರ್ತು ಕೆಲಸ ಇದೆ ನಮ್ಮನು ಬೇಗ ಕಳಿಸಿ ಎಂದರು." ಎಂದು ಸ್ವಲ್ಪ ಬಿರುಸಾಗಿಯೇ ನುಡಿದರು. ನಾನು, " ಹಾಗಾದರೆ ಗಲಾಟೆ ಮಾಡುವವರಿಗೆ ಮೊದಲ ಆಧ್ಯತೆ ಅನ್ನಿ" ಎಂದು ಸ್ವಲ್ಪ ವ್ಯಂಗ್ಯವಾಗಿಯೇ ಹೇಳಿದೆ. ನನ್ನ ವ್ಯಂಗ್ಯ ಅವರಿಗೆ ಚುಚ್ಚಿತೋ ಅಥವಾ ಅವರು ಅಂದಿನ ಆ ಗಲಾಟೆಯಿಂದ ಬೇಸತ್ತಿದ್ದರೋ ಗೊತ್ತಿಲ್ಲ. ಅವರು, “ನಾವೇನು ಮಾಡಕ್ಕೆ ಆಗಲ್ಲ ಮೇಡಂ. ನೀವೂ ಸ್ವಲ್ಪ ಕಾಯಲೇಬೇಕು ಅಥವಾ ನಿಮಗೆ ಕಷ್ಟವಾದರೆ ನಿಮ್ಮ ಪ್ರೋಗ್ರಾಂ‍ನ cancel ಮಾಡಿಕೊಳ್ಳಬಹುದು." ಎಂದು ಹೇಳಿ ಹೊರಟುಹೋದರು. ಅದು ನನ್ನ ಸ್ವಾಭಿಮಾನಕ್ಕೆ ಬಿದ್ದ ಪೆಟ್ಟಾಗಿತ್ತು. ನನ್ನೊಬ್ಬಳದ್ದೇ ಕಾರ್ಯಕ್ರಮವಾಗಿದ್ದರೆ ಖಂಡಿತ cancel ಮಾಡುತ್ತಿದ್ದೆ ಹಾಗೂ cancel ಮಾಡಿ ಮಕ್ಕಳನ್ನು ಕರೆದುಕೊಂಡು ಹೋಗಿಬಿಡೋಣ ಎಂದು ಒಮ್ಮೆ ಮನಸ್ಸು ಕೂಗಿತು. ನನ್ನ ಮಕ್ಕಳಿಗೆ ನನ್ನ ಮುಖಭಾವದಿಂದಲೇ ನನ್ನ ಯೋಚನೆ ಹೊಳೆಯಿತೇನೋ. ಬಾಲ ಭಗತ್‍ಸಿಂಗ್, "ಟೀಚರ್ ನಾವು ನಾಟಕ ಮಾಡೋದಿಲ್ವಾ?" ಎಂದು ನಿರಾಶೆಯಿಂದ ಕೇಳಿದಳು. ಮಿಕ್ಕ ಮಕ್ಕಳ ಮುಖದಲ್ಲೂ ಆ ಭಾವ ಎದ್ದು ಕಾಣುತ್ತಿತ್ತು. 7ನೆಯ ತರಗತಿ ಓದುತ್ತಿದ್ದ ಒಬ್ಬ ಹುಡುಗಿ, "ನಾವು ನಾಟಕ ಮಾಡುವುದು ಬೇಡ ಮಿಸ್, ನಿಮಗೆ ಬೇಜಾರಾದ್ರೆ ನಮಗೆಲ್ಲಾ ಬೇಜಾರಾಗತ್ತೆ. ಇನ್ನೆಲ್ಲಾದ್ರು ಇದೇ ನಾಟಕ ಮಾಡಿದ್ರಾಯ್ತು.’ ಎಂದಳು. ಆ ಮಕ್ಕಳನ್ನು ತಬ್ಬಿ ರಮಿಸಿ, "ಪರವಾಗಿಲ್ಲ ಮಕ್ಕಳೇ ನಿಮಗೆ ನಿರಾಸೆಯಾಗೋದು ನನಗೆ ಇಷ್ಟವಿಲ್ಲ. Next ನಮ್ಮನ್ನು ಕರೆಯಬಹುದು ನೋಡೋಣ." ಎಂದು ಸಮಾಧಾನ ಮಾಡಿದೆ. ಅಂದು ಆ ಮಕ್ಕಳಿಗೆ ನಿರಾಸೆಯಾಗಬಾರದೆಂದು ನನ್ನ ಸ್ವಾಭಿಮಾನವನ್ನು ತ್ಯಾಗ ಮಾಡಿದೆ. ನಂತರ ನಮ್ಮ ನಾಟಕವೇ ಆಯಿತು. ಮಕ್ಕಳು ಸಂತೋಷದಿಂದಲೇ ನಾಟಕ ಮಾಡಿ ಬಂದರು. ಆದರೆ ಅವರು ಹೇಗೆ ಮಾಡಿದರೋ ನನಗೆ ತಿಳಿಯಲೇ ಇಲ್ಲ. ನನ್ನ ಮನಸ್ಸು ಮುದುಡಿಹೋಗಿತ್ತು. ಮುಗಿದರೆ ಸಾಕು ಎಂದೆನಿಸಿತ್ತು. ಮುಗಿದಕೂಡಲೇ ಮಕ್ಕಳನ್ನು ಕರೆದುಕೊಂದು ಹೊರಟುಬಿಟ್ಟೆ. ಆಗ ಆಯೋಜಕರು ಬಂದು, "ನಾಟಕ ಚೆನ್ನಾಗಿತ್ತು ನನ್ನ ವರ್ತನೆಯಿಂದ ನಿಮಗೆ ಬೇಜಾರಾಗಿದ್ದರೆ ಕ್ಷಮಿಸಿ" ಎಂದರು. ನಾನು,"ಪರವಾಗಿಲ್ಲ ಬಿಡಿ, ಇಂತಹ ಕಾರ್ಯಕ್ರಮಗಳನ್ನು ಮಾಡುವಾಗ ಒಂದಷ್ಟು ನಿಯಮಗಳನ್ನು ಹಾಕಿಕೊಳ್ಳಿ. ಭಾಷಣಗಳು ಮಕ್ಕಳ ಕಾರ್ಯಕ್ರಮದಲ್ಲಿ ಚುಟುಕಾಗಿರಲಿ. ಕಾರ್ಯಕ್ರಮಗಳು ಎಲ್ಲರಿಗೂ ನೀವು ಕೊಡದಿದ್ದರೂ ಪರವಾಗಿಲ್ಲ. ಸಂಪೂರ್ಣ ಕಾರ್ಯಕ್ರಮ ಎರಡು ಗಂಟೆಗಳ ಕಾಲ ಮೀರದಂತೆ ನೋಡಿಕೊಳ್ಳಿ. ಸಮಯ ಪಾಲನೆ ಅತಿ ಮುಖ್ಯ. 6 ಗಂಟೆಗೆ ಪ್ರಾರಂಭ ಎಂದು ನೀವು ಹಾಕಿದರೆ ಅದು 6 ಗಂಟೆನೇ. 6ಗಂಟೆ ಒಂದು ನಿಮಿಷ ಕೂಡ ಅಲ್ಲ. ಆಗ ಯಾವ ಮಕ್ಕಳಿಗೂ ತೊಂದರೆಯಾಗುವುದಿಲ್ಲ. ಆಗ ಯಾರ ಮನಸ್ಸಿಗೂ ನೋವಾಗದಂತೆ ಕಾರ್ಯಕ್ರಮ ನಡೆಸಬಹುದು" ಎಂದು ಹೇಳಿಬಂದೆ. ಆದರೂ ಆ ನೋವು ನನ್ನ ಹೃದಯದ ಮೂಲೆಯಲ್ಲಿ ಇನ್ನೂ ಅಡಗಿತ್ತೇನೋ. ಹಂಸಾನಂದಿಯವರ ಲೇಖನ ನೋಡಿದಕೂಡಲೆ ಮತ್ತೆ ಆ ನೆನಪು ಮರುಕಳಿಸಿತು.