ಮರೆಯಲಾಗದ ಬಾಲ್ಯದ ದಿನಗಳು

ಮರೆಯಲಾಗದ ಬಾಲ್ಯದ ದಿನಗಳು

ನಾನು ಬಾಲ್ಯವನ್ನು ತುಂಬಾ ಕಷ್ಟದಿಂದ ಕಳೆದಿದ್ದೇನೆ ಅಂತ ಹೇಳಲಾರೆ. ಆದರೆ ತುಂಬಾ ಬಿಡುವಿಲ್ಲದಂತೆ ಕಳೆದಿದ್ದೇನೆ ಅಂತ ಈಗ ನಮ್ಮ ಮಕ್ಕಳನ್ನು ನೋಡುವಾಗ ಅನ್ನಿಸುತ್ತದೆ. ಆಟವಾಡಬೇಕಾದ ಕಾಲದಲ್ಲಿ ಅಪ್ಪನಿಗೆ ಹೆದರಿ, ಅಪ್ಪನ‌ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆಂದು, ಮನೆ ಕೆಲಸಮಾಡಿಕೊಂಡು ಕಳೆದಿದ್ದೇನೆ ಅಂತ ಈಗ ಅನ್ನಿಸುತ್ತಿದೆ! ಆ ಕಾಲದಲ್ಲಿ ನನಗೆ ಹಾಗೆ ಅನ್ನಿಸುತ್ತಿರಲಿಲ್ಲ. ಯಾಕೆಂದರೆ ನಮ್ಮ ಮನೆಯ ಸುತ್ತಮುತ್ತಲಿನ ಮನೆಗಳಲ್ಲಿದ್ದ ನನ್ನದೇ ಹರಯದ ಮಕ್ಕಳೂ ನನ್ನಂತೆ‌ ಬಿಡುವಿಲ್ಲದಂತಿದ್ದರು. ಮನೆಯಲ್ಲಿ, ಹೊಲದಲ್ಲಿ ದುಡಿಯುತ್ತಿದ್ದರು! ಯಾರೋ ಕೆಲವೇ ಕೆಲವು ಮಕ್ಕಳು ನಮ್ಮ ಮನೆಯ ದೂರದ ಮೈದಾನದಲ್ಲಿ ಸಂಜೆ ಹೊತ್ತಿನಲ್ಲಿ ಆಟವಾಡುತ್ತಿದ್ದುದನ್ನು‌ ದೂರದಿಂದ ನೋಡಿದ್ದೇನೆ ಅಷ್ಟೇ!

ನಾನು ಮನೆಯಲ್ಲಿ ಕಳೆದ ದಿನಗಳು ಶಾಲಾ ಕಾಲೇಜುಗಳಲ್ಲಿ ಕಳೆದ ದಿನಗಳಿಗಿಂತಲೂ ಹೆಚ್ಚು ಅಮೂಲ್ಯವಾಗಿ ಶಾಲಾ ಕಾಲೇಜುಗಳಲ್ಲಿ ಕಲಿತುದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಕಲಿತುದು ಮನೆಯೆಂಬ ಪಾಠ ಶಾಲೆಯಲ್ಲಿ ಅಂತ ಎದೆ ತಟ್ಟಿ ಹೇಳುತ್ತೇನೆ.‌ ಅಪ್ಪ ಅಮ್ಮ ಎಂಬ ಒಳ್ಳೆಯ ಗುರುಗಳು ಬೆನ್ನು ಬಿಡದೇ ಕಲಿಸಿದ್ದು ಅಪಾರ, ಅಪರಿಮಿತ ಹಾಗೂ ಜೀವನಯೋಗ್ಯವಾದದ್ದು! ಸುಂದರ ಜೀವನಕ್ಕೆ ಸಹಕಾರಿಯಾಗುವಂತಾದ್ದು! ನನ್ನಲ್ಲಿ ಸೌಂದರ್ಯ ಪ್ರಜ್ಞೆಯೆಂಬ ಜೀವನದ ಅತ್ಯಮೂಲ್ಯ ಗುಣವಿದ್ದರೆ, ಮೂಲದಲ್ಲಿ ನನ್ನ ಮನಸ್ಸಿನ‌‌ ಮೂಲೆಯಲ್ಲಿ ನನಗೆ ತಿಳಿಯದಂತೆ ಅದರ ಬೀಜ ಬಿತ್ತಿದವರು ನನ್ನ ಅಪ್ಪ-ಅಮ್ಮ! ಆಮೇಲೆ ಆ ಗುಣ ಅಪ್ಪ ಅಮ್ಮನನ್ನು ನೋಡಿಕೊಂಡೇ ಬೆಳೆಯಿತು! ನಮ್ಮ ಮನೆಗೆ ಹೊಂದಿಕೊಂಡು ಸಾಕಷ್ಟು ಬೇಸಾಯದ ಭೂಮಿಯಿದ್ದುದರಿಂದ ವ್ಯವಸಾಯದ ಕೆಲಸಗಳನ್ನು ಮಾಡಿಕೊಂಡು‌ ಶಾಲೆ ಕಾಲೇಜು ಕಲಿತೆ! ಆದುದರಿಂದ ಆ ಕಲಿಕೆಗೊಂದು ಒಳ್ಳೆಯ ವ್ಯಾಯಾಮ ಹಾಗೂ ಆಯಾಮ ಆರಂಭದಿಂದಲೂ ದೊರಕುತ್ತಾ ಬಂದಿತ್ತು!

ನಮಗೆ ತೆಂಗು, ಕಂಗು, ಬಾಳೆಯ ತೋಟವಿದ್ದುದರಿಂದ ತೋಟದಲ್ಲಿ ಓಡಾಡಿಕೊಂಡು, ತೆಂಗು - ಕಂಗಿನ ಮರ ಹತ್ತಿ ಇಳಿದು, ಗದ್ದೆಗಳಿಗೆ ಗೊಬ್ಬರ ಹೊತ್ತು, ಕಾಡಿನಿಂದ ಕಟ್ಟಿಗೆ, ತರಗೆಲೆ, ಹಸಿರೆಲೆ ಸೊಪ್ಪು ಹೊತ್ತು ಭಾರ ಹೊರುವುದನ್ನು ಕಲಿತಿದ್ದೆ! ಸೊಪ್ಪು, ತರಕಾರಿ ಬೆಳೆಯುವುದನ್ನೂ, ಹಸುವಿನ‌ ಕೆಚ್ಚಲು ಹಿಂಡಿ ಹಾಲು ಕರೆಯುವುದನ್ನೂ ಶಾಲ ಕಾಲೇಜು ಕಲಿಕೆಯ ದಿನಗಳಲ್ಲಿ‌ ನಿತ್ಯ ಮಾಡುತ್ತಿದ್ದೆ! ಅದು ಕೆಲಸ ಎಂಬುದಕ್ಕಿಂತಲೂ ನಿತ್ಯದ ರೂಢಿಯಾಗಿತ್ತೆಂದೇ ಹೇಳಬಯಸುತ್ತೇನೆ! ಬೈಹುಲ್ಲಿನ ಮೂಟೆ(ಕುತ್ರೆ), ಒಣ ತರಗೆಲೆಯ ಮೂಟೆ(,ಕುತ್ರೆ) ಮಾಡುವುದೆಲ್ಲಾ ನನಗೆ ಕರಗತವಾಗಿತ್ತು! ಅದರಲ್ಲೂ ಸೌಂದರ್ಯಾಸ್ವಾದ ಸಾಧ್ಯವಾಗಿತ್ತು! ಅದರಲ್ಲೂ ಕಲೆ ಅರಳುವುದನ್ನು ಕಂಡು ಅನುಭವಿಸಿ ಸಂತಸಪಡುತ್ತಿದ್ದೆ!

ಗದ್ದೆ ಊಳುವುದು, ಹದ್ದು ಮಾಡುವುದು, ಭತ್ತದ ಗದ್ದೆಗೆ ರಾಸಾಯನಿಕ ಮೇಲು ಗೊಬ್ಬರ ಎಸೆಯುವುದು, ಭತ್ತದ ಜಳ್ಳು ಬೇರ್ಪಡಿಸುವುದನ್ನೆಲ್ಲಾ ಮನೆಯೆಂಬ ಪಾಠಶಾಲೆಯಲ್ಲಿಯೇ, ಅಪ್ಪನ ಗರಡಿಯಲ್ಲಿಯೇ ಕಲಿತದ್ದು! ಆ ಎಲ್ಲಾ ವಿಷಯಗಳಲ್ಲಿ ಅಪ್ಪ ನನ್ನನ್ನು ಪಳಗಿಸಿದ್ದರು ಅಂತ ಹೆಮ್ಮೆಯಿಂದಲೇ ಹೇಳುತ್ತೇನೆ! ಇಲ್ಲಿ ಅಪ್ಪ ನನಗೆ ದೇವರಂತೆ ಕಾಣುತ್ತಾರೆ! ನಮಗೆ ಸಾಕಷ್ಟು ಗೇರು ಮಾವಿನ ತೋಟವಿದ್ದುದರಿಂದ ಸೆಕೆಗಾಲದಲ್ಲಿ ಗೇರು ಮಾವಿನ‌ ಮರ ಏರಿ ಇಳಿದು ಬಿಸಿಲ ಬೇಗೆಯಲ್ಲಿ‌ ಬೆಂದು ನೀರು ಕುಡಿದು ಬೆವರು ಸುರಿಸಿ ಬೇಸಿಗೆ ಕಾಲದ ಬೆವರ ಹರಿವಿನ ಸೌಂದರ್ಯವನ್ನು ಬಾಲ್ಯದ ದಿಗಳಲ್ಲಿ ಬೇಕಾದಷ್ಟು, ಸಾಕಾಗುವಷ್ಟು ಸವಿದಿದ್ದೆ!

ಎಪ್ಪತ್ತೆಂಬತ್ತು ಸುಲಿದ ತೆಂಗಿನಕಾಯಿ ತುಂಬಿದ ಗೋಣಿ ಚೀಲಯನ್ನು, ಸಾವಿರಕ್ಕೂ ಹೆಚ್ಚು ಅಡಿಕೆ ತುಂಬಿದ ಗೋಣಿಚೀಲವನ್ನು, ಸಾವಿರ ಬಾಳೆ ಎಲೆಯ ಕಟ್ಟವನ್ನು, ಗೇರು ಬೀಜ ತುಂಬಿದ ಚೀಲವನ್ನು ಹಳೆಯ ಬಿಎಸ್ಎ ಬೈಸಿಕಲ್ಲಿನಲ್ಲಿ ಮೂರು ಮೈಲಿ ದೂರದ ಪೇಟೆಗೆ ಕೊಂಡೊಯ್ದು ಮಾರಾಟ ಮಾಡಿ ಮನೆಗೆ ಬೇಕಾಗುವ ಧೀನಸಿ ಸಾಮಾನು ಖರೀದಿಸಿ ಅದೇ ಬೈಸಿಕಲ್ಲಿನಲ್ಲಿ ವಾಪಾಸಾಗುತ್ತಿದ್ದೆ! ನಾನು ಮಾತು ಕಲಿತದ್ದು ಈ ವ್ಯಾಪಾರ ಮಾಡುವಾಗಲೆ. ಅಂದಿನ ದಿನಗಳಲ್ಲಿ ದೊರಕಿದ ಸಂಭಾಷಣೆಯ ಪಾಠ ಇಂದು ನಾನು ವಕೀಲಿ ವೃತ್ತಿ ಮಾಡುತ್ತಿರುವ ಈ ಕಾಲದಲ್ಲಿ ಪ್ರಯೋಜನಕ್ಕೆ ಬರುತ್ತಿದೆ! ನಾನು ಮೂರನೇ ಈಯತ್ತೆಯಲ್ಲಿರುವಾಗ ಒಂದು ಮುಡಿ ಅಕ್ಕಿ( ಅಂದರೆ ಸರಿ ಸುಮಾರು ನಲುವತ್ತು ಕೆ.ಜಿ.) ತಲೆ ಮೇಲೆ ಹೊತ್ತು ನಡೆದದ್ದು ನೆನಪಿದೆ!

ನಾನು ಇಷ್ಟೆಲ್ಲಾ ಹೇಳಿಕೊಳ್ಳುವುದಕ್ಕೆ ಕಾರಣ ಇಂದಿನ‌ ಮಕ್ಕಳಿಗೆ (ನಮ್ಮ‌ಮಕ್ಕಳಿಗೇ) ಹೊರೆ ಹೊರುವುದೆಂದರೆ ಪುಸ್ತಕದ ಹೊರೆ ಹೊರತುಪಡಿಸಿ ಬೇರೆ ಯಾವುದೇ ಹೊರೆ ಹೊತ್ತು ಗೊತ್ತಿಲ್ಲ! ತಲೆಯ‌ ಮೇಲೆ ಭಾರ ಹೊತ್ತು ಅನುಭವವೂ ಇಲ್ಲ! ಕೊನೆಯ ಪಕ್ಷ ಮಕ್ಕಳಿಗೆ ಹೆಣ ಹೊರುವುದಕ್ಕಾದರೂ ಗೊತ್ತಿರಬೇಕಲ್ಲಾ! ನಮ್ಮ ಅಪ್ಪ ಅಮ್ಮ ಸತ್ತಾಗ ನಾವು ನಮ್ಮ ಅಪ್ಪ ಅಮ್ಮನ ಹೆಣ ಹೊತ್ತಿದ್ದೇವೆ! ಯಾರೂ ಹೇಳಿಕೊಡುವ ಅಗತ್ಯ ಬೀಳಲಿಲ್ಲ. ನಮ್ಮ‌ಮಕ್ಕಳು ನಮ್ಮ‌ಹೆಣ ಹೊರ ಬೇಡವೇ?! ಈ ರೀತಿಯಾಗಿ ಆಲೋಚಿಸುತ್ತಲೇ ಬರೆಯಲು ಆರಂಭಿಸಿದೆ ಎನ್ನುವುದಕ್ಕಿಂತಲೂ ಸತ್ಯವಾಗಿ ಮೊಬೈಲ್ ಕೈಗೆತ್ತಿಕೊಂಡು ಟೈಪಿಸಲು ಆರಂಭಿಸಿದೆ! ಶಾಲೆಗಳಲ್ಲಿ ಕೊನೆಯ ಪಕ್ಷ ಹೆಣ ಹೊರುವುದಕ್ಕಾದರೂ ಹೇಳಿಕೊಟ್ಟರೆ ತುಂಬಾ ಉಪಕಾರವಾಗುತ್ತದೆ ಅಂತ ಯೋಚಿಸಿ ಟೈಪಿಸಲು ಹೊರಟ‌ ನಾನು ನನ್ನೀ ಸಾಹಿತ್ಯಕ್ಕೆ ಇಷ್ಟೆಲ್ಲಾ ಪೀಠಿಕೆ ಹಾಕಬೇಕಾಯ್ತು!

ಇಂದಿನ ವಿದ್ಯಾಮಾನದಲ್ಲಿ ನಮ್ಮ‌ ಮಕ್ಕಳು ನಮ್ಮ‌ ಹೆಣವನ್ನು ನೀಟಾಗಿ ಸ್ಮಶಾನದವರೆಗೆ ಹೊರಬಲ್ಲವರಾಗುತ್ತಾರೆಯೇ ಎಂಬ ಬಗ್ಗೆ ನನಗಂತೂ ಸಂಶಯವಿದೆ! ನಿಮಗೆಲ್ಲಾ ಹೇಗೋ‌ ಗೊತ್ತಿಲ್ಲ! ಅದಕ್ಕಾಗಿಯೇ ಇತ್ತೀಚಿಗೆ ಹೆಚ್ಚಿನವರು ದೇಹದಾನದ ಉಯಿಲು ಬರೆದಿಡುವುದಿರಬಹುದು ಅಂತ ನನ್ನ‌ ಭಾವನೆ! ನಮ್ಮ‌ ಮಕ್ಕಳು ಕೊನೆಯ ಪಕ್ಷ ನಮ್ಮ‌ಹೆಣ ಹೊರುವುದಕ್ಕಾದರೂ ಮೈ ಬಗ್ಗಿಸಿ ಕಲಿತು ತಯಾರಾಗಲಿ ಎಂಬ ಆಶಯ ನನ್ನದು! ಅವರನ್ನು ತಯಾರಿಗೊಳಿಸುವ ಜವಾಬ್ಧಾರಿ ನನ್ನದು ಹಾಗೂ ನನ್ನ ಹೆಂಡತಿಯದ್ದು! ನಿಮ್ಮ‌ನಿಮ್ಮ ಮನೆಯಲ್ಲಿ ನಿಮ್ಮದೂ ಅಂತ ಅರ್ಥೈಸಿಕೊಡುವಲ್ಲಿ ಈ ಲೇಖನ ಯಶಸ್ವಿಯಾದರೆ ನಾನು ಇಲ್ಲಿ ಎದೆಯುಬ್ಬಿಸಿಕೊಂಡು ಇಷ್ಟು ಹೇಳಿಕೊಂಡದ್ದು ಸಾರ್ಥಕವಾಗುತ್ತದೆ!

- “ಮೌನಮುಖಿ”

(ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ, ಉಡುಪಿ)

ಚಿತ್ರ ಕೃಪೆ: ಇಂಟರ್ನೆಟ್ ತಾಣ