ಮರೆಯಲಾಗದ ಸ್ಪಿನ್ ಮಾಂತ್ರಿಕ -ಶೇನ್ ವಾರ್ನ್
ಅಂದು ೧೯೯೩ ಜೂನ್ ೪, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಆಶಸ್ ಸರಣಿ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಗರದ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು. ಟೆಸ್ಟ್ ಪಂದ್ಯದ ಎರಡನೇ ದಿನ ಕ್ರೀಸಿನಲ್ಲಿ ಆಟವಾಡುತ್ತಿದ್ದುದು ಇಂಗ್ಲೆಂಡ್ ತಂಡದ ಆಟಗಾರ ಮೈಕ್ ಗ್ಯಾಟಿಂಗ್ ಹಾಗೂ ಅವರಿಗೆ ಬೌಲ್ ಮಾಡುತ್ತಿದ್ದ ಬೌಲರ್ ಆಸ್ಟ್ರೇಲಿಯಾದ ಶೇನ್ ವಾರ್ನ್. ವಾರ್ನ್ ಎಸೆದ ಆ ಚೆಂಡು ಗ್ಯಾಟಿಂಗ್ ನ ಲೆಗ್ ಸೈಡ್ ಬಿದ್ದು ನಂತರ ಮ್ಯಾಜಿಕ್ ನಂತೆ ಪುಟಿದೆದ್ದು ಆಫ್ ಸೈಡ್ ವಿಕೆಟ್ ಹಾರಿಸಿತ್ತು. ಅದರ ವಿಡಿಯೋ ತುಣುಕುಗಳು ಈಗಲೂ ಅಂತರ್ಜಾಲ ತಾಣಗಳಲ್ಲಿ ಸಿಗುತ್ತವೆ. ಈ ಬಾಲ್ ಅನ್ನು ಶತಮಾನದ ಬಾಲ್ (Ball of the Century) ಎಂದು ಹೆಸರಿಸಲಾಗಿದೆ. ಇದು ಶೇನ್ ವಾರ್ನ್ ನ ಬೌಲಿಂಗ್ ಶಕ್ತಿ ಹಾಗೂ ಚಮತ್ಕಾರ. ವಾರ್ನ್ ನ ಇಂತಹ ಹಲವಾರು ಬೌಲಿಂಗ್ ನಿದರ್ಶನಗಳು ನಮಗೆ ಕಂಡು ಬರುತ್ತವೆ.
ಸುಮಾರು ಒಂದುವರೆ ದಶಕಗಳ ಕಾಲ ಆಸ್ಟ್ರೇಲಿಯಾದಂತಹ ಬಲಶಾಲಿ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ, ಟೆಸ್ಟ್ ನಲ್ಲಿ ೭೦೮ ವಿಕೆಟ್ ಗಳಿಸಿ ಈಗಲೂ ಗರಿಷ್ಟ ವಿಕೆಟ್ ಪಡೆದವರ ಸಾಲಿನಲ್ಲಿ ಎರಡನೇ ಸ್ಥಾನ (ಮೊದಲ ಸ್ಥಾನ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್) ದಲ್ಲಿರುವ ಮಹಾನ್ ಆಟಗಾರ. ಟೆಸ್ಟ್ ಹಾಗೂ ಏಕದಿನ ಎರಡನ್ನೂ ಜೊತೆಯಾಗಿ ಪರಿಗಣಿಸಿದರೆ ಇವರ ವಿಕೆಟ್ ಸಾಧನೆ ಸಾವಿರ ದಾಟುತ್ತದೆ (೧೦೦೧). ಇಂತಹ ಅದ್ಭುತ ಆಟಗಾರ ಕೇವಲ ೫೨ನೇ ವಯಸ್ಸಿನಲ್ಲಿ ತಮ್ಮ ಬದುಕಿನ ಪಯಣವನ್ನು ನಿಲ್ಲಿಸಿ 'ಔಟ್' ಆಗಿದ್ದಾರೆ ಎಂದರೆ ಕ್ರಿಕೆಟ್ ಲೋಕಕ್ಕೆ ತುಂಬಲಾರದ ನಷ್ಟವೇ ಸರಿ.
ಶೇನ್ ಕೀತ್ ವಾರ್ನ್ (Shane Keith Warne) ಹುಟ್ಟಿದ್ದು ಸೆಪ್ಟೆಂಬರ್ ೧೩, ೧೯೬೯ರಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯಾ ಎಂಬ ಊರಿನಲ್ಲಿ. ೧೯೯೨ರಲ್ಲಿ ಭಾರತದ ವಿರುದ್ಧ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ವಾರ್ನ್ ತಮ್ಮ ಮೊದಲ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಅಚ್ಚರಿ ಎಂದರೆ ಶೇನ್ ವಾರ್ನ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನೂ ಸಿಡ್ನಿ ಕ್ರಿಕೆಟ್ ಮೈದಾನದಲ್ಲೇ ಆಡಿದ್ದರು. ಆದರೆ ಎದುರಾಳಿ ಮಾತ್ರ ಇಂಗ್ಲೆಂಡ್. ತಮ್ಮ ಹದಿನೈದು ವರ್ಷಗಳ ಕ್ರಿಕೆಟ್ ಬಾಳ್ವೆಯಲ್ಲಿ ೧೪೫ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ವಿಶ್ವದ ಬಹುತೇಕ ದಿಗ್ಗಜ ಬ್ಯಾಟ್ಸ್ ಮನ್ ಗಳು ವಾರ್ನ್ ರ ಸ್ಪಿನ್ ಮೋಡಿಗೆ ಸಿಲುಕಿದ್ದರು. ಒಂದೆಡೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ಮತ್ತೊಂದೆಡೆ ಭಾರತದ ಅನಿಲ್ ಕುಂಬ್ಳೆ ಇವರ ನಡುವೆ ಶೇನ್ ವಾರ್ನ್ ಹೀಗೆ ಮೂವರು ಸ್ಪಿನ್ ತ್ರಿವಳಿಗಳ ನಡುವೆ ಆ ಸಮಯ ಕ್ರಿಕೆಟ್ ದಾಂಡಿಗರು ಸಿಲುಕಿಕೊಂಡಿದ್ದರು.
ಶೇನ್ ವಾರ್ನ್ ತಮ್ಮ ಕೈಯ ಮಣಿಕಟ್ಟನ್ನೇ (Wrist) ಸೊಗಸಾಗಿ ತಿರುಗಿಸುವುದರ ಮೂಲಕ ಅಪರೂಪದ ಬೌಲಿಂಗ್ ಶೈಲಿಯನ್ನು ಕಂಡುಕೊಂಡಿದ್ದರು. ಈ ರೀತಿ ಬೌಲಿಂಗ್ ಮಾಡುವುದರಿಂದ ಸ್ಪಿನ್ ಟ್ರ್ಯಾಕ್ ಅಲ್ಲದ ಪಿಚ್ ಗಳಲ್ಲೂ ಇವರಿಗೆ ವಿಕೆಟ್ ಕೀಳುವುದು ಸಾಧ್ಯವಾಗುತ್ತಿತ್ತು. ಬಹುತೇಕ ಸ್ಪಿನ್ ಬೌಲರ್ ಗಳು ತಮ್ಮ ಕೈಯ ಬೆರಳುಗಳನ್ನು ಮಾತ್ರ ಬಳಸಿ ಸ್ಪಿನ್ ಮಾಡುತ್ತಾರೆ. ಇದರಿಂದ ಅವರಿಗೆ ಬೌಲಿಂಗ್ ಗೆ ಸಹಾಯ ಮಾಡದ ಪಿಚ್ ಗಳಲ್ಲಿ ವಿಕೆಟ್ ಕೀಳುವುದು ಕಷ್ಟಕರವಾಗುತ್ತದೆ. ಇವರು ತಾವಾಡಿದ ೧೪೫ ಟೆಸ್ಟ್ ಪಂದ್ಯಗಳಿಂದ ೩,೧೫೪ ರನ್ ಗಳನ್ನು ಗಳಿಸಿದ್ದಾರೆ. ಅಗತ್ಯದ ಸಮಯದಲ್ಲಿ ಸೊಗಸಾಗಿ ಬ್ಯಾಟಿಂಗ್ ಸಹಾ ಮಾಡುತ್ತಿದ್ದರು. ಟೆಸ್ಟ್ ಪಂದ್ಯದಲ್ಲಿ ಇವರು ೧೨ ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಆದರೆ ಶತಕ ಇವರನ್ನು ಕೇವಲ ಒಂದು ರನ್ ನಿಂದ ವಂಚಿಸಿತು (ಗರಿಷ್ಟ ೯೯ ರನ್). ೨೫.೪೧ರ ಸರಾಸರಿಯಲ್ಲಿ ೭೦೮ ವಿಕೆಟ್ ಕಿತ್ತಿದ್ದಾರೆ. ೩೭ ಬಾರಿ ೫ಕ್ಕೂ ಅಧಿಕ ವಿಕೆಟ್ ಒಂದು ಇನ್ನಿಂಗ್ಸ್ ನಲ್ಲಿ ಹಾಗೂ ೧೦ ಬಾರಿ ಹತ್ತಕ್ಕೂ ಅಧಿಕ ವಿಕೆಟ್ ಪಂದ್ಯ ಒಂದರಲ್ಲಿ ಕಿತ್ತಿದ್ದಾರೆ. ೧೨೫ ಕ್ಯಾಚ್ ಹಿಡಿದಿದ್ದಾರೆ. ೭೧ ರನ್ನಿಗೆ ೮ ವಿಕೆಟ್ ಇವರ ಉತ್ತಮ ಸಾಧನೆ.
ವಾರ್ನ್ ಆಡಿದ ೧೯೪ ಒಂದು ದಿನದ ಪಂದ್ಯಗಳಲ್ಲಿ ಒಂದು ಅರ್ಧ ಶತಕದ ಸಹಾಯದಿಂದ ೧,೦೧೮ ರನ್ ಗಳಿಸಿದ್ದಾರೆ. ಇವರು ಕಿತ್ತ ವಿಕೆಟ್ ಗಳ ಸಂಖ್ಯೆ ೨೯೩. ಹಿಡಿದ ಕ್ಯಾಚ್ ಗಳು ೮೦. ೩೩ ರನ್ನಿಗೆ ೫ ವಿಕೆಟ್ ಇವರ ಏಕದಿನದ ಉತ್ತಮ ಸಾಧನೆ. ೧೯೯೯ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ೩೩ ರನ್ನಿಗೆ ೪ ವಿಕೆಟ್ ಕಿತ್ತು ಪಂದ್ಯಶ್ರೇಷ್ಟ ಗೌರವಕ್ಕೆ ಪಾತ್ರರಾದುದಲ್ಲದೆ ತಂಡಕ್ಕೆ ವಿಶ್ವಕಪ್ ದೊರಕಿಸಿಕೊಡುವುದರಲ್ಲೂ ಮಹತ್ತರವಾದ ಪಾತ್ರವನ್ನು ವಹಿಸಿದ್ದರು.
ಅಂತರಾಷ್ಟ್ರೀಯ ಕ್ರಿಕೆಟ್ ಬಾಳಿಗೆ ನಿವೃತ್ತಿ ಘೋಷಿಸಿದ ಬಳಿಕ ಭಾರತದಲ್ಲಿ ನಡೆಸಲಾಗುತ್ತಿದ್ದ ಐಪಿಎಲ್ ಪಂದ್ಯಾವಳಿಗಳನ್ನು ಆಡಿದರು. ರಾಜಸ್ತಾನ್ ರಾಯಲ್ಸ್ ತಂಡವನ್ನು ನಾಯಕರಾಗಿ ಮುನ್ನಡೆಸಿ ಮೊದಲ ಐಪಿಎಲ್ ಚಾಂಪಿಯನ್ ಆಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಐಪಿಎಲ್ ನಲ್ಲಿ ನಿವೃತ್ತಿಯ ಬಳಿಕವೂ ಮೆಂಟರ್, ಕೋಚ್ ಮೊದಲಾದ ಹುದ್ದೆಗಳನ್ನು ನಿರ್ವಹಿಸುತ್ತಾ ಸಕ್ರಿಯರಾಗಿದ್ದ ಶೇನ್ ವಾರ್ನ್ ಯಾರೂ ಯೋಚನೆ ಮಾಡಿರದ ರೀತಿಯಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಥಾಯ್ಲೆಂಡ್ ನಲ್ಲಿ ನಿಧನರಾದದ್ದು ದುರ್ದೈವವೇ ಸರಿ.
ವಾರ್ನ್ ಕ್ರಿಕೆಟ್ ಬದುಕು ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. ಹಲವಾರು ಬಾರಿ ಇವರು ಮಾದಕ ವಸ್ತುಗಳ ಜಾಲಕ್ಕೆ ಸಿಲುಕಿದ್ದರು. ೨೦೦೩ರ ವಿಶ್ವಕಪ್ ವೇಳೆ ಡ್ರಗ್ಸ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಇವರನ್ನು ದಕ್ಷಿಣ ಆಫ್ರಿಕಾ ದಿಂದ ಮರಳಿ ಹಿಂದಕ್ಕೆ ಕಳುಹಿಸಲಾಗಿತ್ತು. ತಮ್ಮ ಖಾಸಗಿ ಬದುಕಿನಲ್ಲೂ ಹಲವಾರು ವಿವಾದಗಳನ್ನು ಸೃಷ್ಟಿ ಮಾಡಿಕೊಂಡಿದ್ದರು. ಭಾರತದ ವಿರುದ್ಧ ಕ್ರೀಡಾಂಗಣದಲ್ಲೂ ಹಲವಾರು ಬಾರಿ ಚಕಮಕಿಗೆ ಕಾರಣರಾಗಿದ್ದರು. ಆದರೂ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಕ್ರಿಕೆಟ್ ದಂತಕತೆ ಸರ್ ಡೊನಾಲ್ಡ್ ಬ್ರಾಡ್ಮನ್ ಸಚಿನ್ ತೆಂಡೂಲ್ಕರ್ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದಾಗ ಶೇನ್ ವಾರ್ನ್ ಅವರನ್ನೂ ಆಹ್ವಾನಿಸಿದ್ದರು. ‘ದಿ ಕಿಂಗ್',’ಕಿಂಗ್ ಆಫ್ ಸ್ಪಿನ್' ಎಂದೆಲ್ಲಾ ಕರೆಯಿಸಿಕೊಳ್ಳುತ್ತಿದ್ದ ಅದ್ಭುತ ಮೋಡಿಗಾರ ಶೇನ್ ವಾರ್ನ್ ಇನ್ನು ನೆನಪು ಮಾತ್ರ.
ಚಿತ್ರ ಕೃಪೆ: ಅಂತರ್ಜಾಲ ತಾಣ