ಮರೆಯಾಗುತ್ತಿರುವ ಪೂರ್ವ ಶಿಷ್ಟ ಕೃಷಿ ಪದ್ದತಿಗಳು (ಭಾಗ ೨)

ಮರೆಯಾಗುತ್ತಿರುವ ಪೂರ್ವ ಶಿಷ್ಟ ಕೃಷಿ ಪದ್ದತಿಗಳು (ಭಾಗ ೨)

ನೀರಿನ ಹರಿವು ಮತ್ತು ಪದ್ದತಿ: ಕೆಳಗೆ ಹರಿಯುವ ನೀರು ಮೂಲತಹ ಯಾವ ರೀತಿಯಲ್ಲಿ ಹರಿಯುತ್ತಿತ್ತೋ ಅದೇ ರೀತಿಯಲ್ಲಿ ಹರಿದು ಹೋಗುತ್ತಿರಬೇಕು. ಒಂದು ವೇಳೆ ಕೃಷಿ ಉದ್ದೇಶ, ಮನೆ ಅಥವಾ ಕಟ್ಟಡ ಮಾಡುವಾಗ ಅದನ್ನು ಬದಲಿಸುವ ಸಂದರ್ಭ ಬಂದಲ್ಲಿ ಅದರ ಹರಿವಿನ ವೇಗ ಹಿಂದಿನಂತೆಯೇ ಇರುವಂತೆ ಬದಲಾವಣೆ ಮಾಡಬೇಕು. ನೀರು ನಿಂತು ಚಲಿಸುವುದು, ಇದರಿಂದ ಮೇಲಿನ ಹೊಲದವರಿಗೆ ತೊಂದರೆ ಆಗುವುದು ಆಗಲೇ ಬಾರದು. ಪ್ರತೀಯೊಬ್ಬರ ಹೊಲದ ನೀರು ಕೆಳಗಿನ ತಗ್ಗಿನ ಜಾಗಕ್ಕೆ ಹರಿದು ಹೋಗಲೇ ಬೇಕು. ಇದಕ್ಕೆ ತಗ್ಗಿನ ಜಾಗದವನು ಆಕ್ಷೇಪ ವ್ಯಕ್ತಪಡಿಸುವಂತಿಲ್ಲ. ಹಾಗೆಂದು ಮನಬಂದಂತೆ ನೀರನ್ನು ಕೆಳಗಿನ ಹೊಲದ ಬದಿಗೆ ಹರಿದು ಹೋಗಲು ಬಿಡಬಾರದು. ಎಲ್ಲಿ ಸಹಜವಾಗಿ ನೀರು ಹರಿದು ಹೋಗುತ್ತಿತ್ತೋ ಆದೇ ತೋಡು ( ಕಾಲುವೆ)ಗೆ ನೀರು ಹರಿಯುವಂತೆ ವ್ಯವಸ್ಥೆ ಮಾಡಿ ನೀರನ್ನು ಹರಿ ಬಿಡಬೇಕು. ನೀರು ಹರಿಯುವ ದಾರಿಯನ್ನು ಮುಚ್ಚುವುದು, ಅದಕ್ಕೆ ತಡೆ ಮಾಡುವುದು,  ನೀರು ನಿಂತು ಜೌಗು ಉಂಟಾಗುವಂತೆ ಮಾಡುವುದು ಸಲ್ಲದು.

ಹೊಲದ ಮೂಲಕ ಹರಿದು ಹೋಗುವ ನೀರಿನ ತೋಡು ಇದ್ದಲ್ಲಿ, ಅದರಲ್ಲಿ ಬೇಸಿಗೆಯಲ್ಲಿ ನೀರು ಹರಿದುಹೋಗುತ್ತಿದ್ದರೆ ಅದನ್ನು ಮೇಲಿನ ಜಾಗದವನು ಪೂರ್ತಿ ಕಟ್ಟ (ತಡೆ) ಹಾಕಿ ಕೆಳಗೆ ನೀರು ಹರಿದು ಹೋಗದಂತೆ ತಡೆಯುವಂತಿಲ್ಲ. ಅವನು ತನ್ನ ಹೊಲದ  ಮಟ್ಟದಷ್ಟು ಮಾತ್ರ  ಅದಕ್ಕೆ ಒಡ್ಡು ಹಾಕಬಹುದು. ಆ ಒಡ್ಡಿನ ಮೂಲಕ ಹೆಚ್ಚುವರಿ ನೀರು ಕೆಳಕ್ಕೆ ಹರಿದುಹೋಗಬೇಕು. ಕೆಳಭಾಗದ ಫಲಾನುಭವಿಯ ಹೊಲಕ್ಕೆ ನೀರು ಇಲ್ಲದಂತೆ ಆಗಬಾರದು. ಹಾಗೆಂದು ಯಾರೇ ಒಡ್ಡು ಹಾಕಿದರೂ ಮೇಲಿನವವರ ಹೊಲದಲ್ಲಿ ಜೌಗು ಸ್ಥಿತಿ ಉಂಟಾಗಬಾರದು.

ತೋಟ ಅಥವಾ ಬೇಸಾಯ ಮಾಡುವ ಕ್ರಮ: 

ಹಿಂದೆ ಪ್ರತೀಯೊಬ್ಬರೂ ಅವರವರ ಜಾಗಕ್ಕೆ ಅಗಳು ಹಾಕುವ ಪದ್ದತಿ ಇತ್ತು. ಅವರವರ ಹೊಲದ ಬೌಂಡರಿಗಳು ಸುಮಾರು ೩-೪ ಅಡಿ ಅಗಲ ಮತ್ತು  ಆಳದ ಕಾಲುವೆ, ಅದರಿಂದ ತೆಗೆದ ಮಣ್ಣು ಅವನದ್ದೇ ಜಾಗಕ್ಕೆ ಹಾಕುವುದು ಕ್ರಮ. ಅಗಳಿನ ಕಾಲುವೆ ಆ ಹೊಲದ ಮಾಲಿಕನ ಜಾಗವೇ ಆಗಿರುತ್ತದೆ. ಅದಕ್ಕೆ ತಾಗಿದ ಜಾಗದವನೂ ಸಹ ಅಗಳು  ಹಾಕಿಯೇ ತನ್ನ ಜಾಗದ ಬದ್ರತೆಯನ್ನು ಮಾಡಿಕೊಳ್ಳಬೇಕು.ಆಗ ನೀರಿನ ಹರಿವಿಗೆ ತೊಂದರೆ ಉಂಟಾಗುವುದಿಲ್ಲ. ಪರಸ್ಪರರ ಜಾಗದ ಮಧ್ಯೆ ಸುಮಾರು ೬-೮ ಅಡಿ ಖಾಲಿ ಸ್ಥಳ ಇರುತ್ತಿತ್ತು. ಎಲ್ಲಾ ಕೃಷಿಯನ್ನೂ ಅಗಳಿನ ಮಣ್ಣು ಹಾಕಿದ ಜಾಗದ ನಂತರ ಮಾಡುವುದಾಗಿತ್ತು. ಆಗ ಬದಿಯಲ್ಲಿ ನೆಟ್ಟ ತೆಂಗಿನ ಮರ ಇನ್ನೊಬ್ಬನ ಹೊಲದತ್ತ ಇಣುಕುವ ಪ್ರಶ್ಣೆ ಇರುತ್ತಿರಲಿಲ್ಲ.  ಪಕ್ಕದವನ ಹೊಲದಲ್ಲಿ ಬೆಳೆಯುವ ಭತ್ತದ ಗದ್ದೆಗೆ ತೆಂಗಿನ ಮರದ ಗರಿಗಳ ದಪ್ಪ ಹನಿ ನೀರು ಬೀಳುವ ಸಂಭವವೂ ಇರುತ್ತಿರಲಿಲ್ಲ. ಇನ್ನೊಬ್ಬನ ಜಾಗದ ಮರದ ಬೇರು ಅಥವಾ ಗೆಲ್ಲು ಮತ್ತೊಬ್ಬನ ಜಾಗಕ್ಕೆ ಚಾಚಿ ಹಾನಿ ಉಂಟಾಗುತ್ತಿರಲಿಲ್ಲ. ಆದರೆ ಬಹಳಷ್ಟು ಜನ ಒಬ್ಬರು ಬೌಡರಿ ಹಾಕಿದರೆ ತಾವು ಅದರಲ್ಲೇ ಸುಧಾರಿಸಿಕೊಂಡು ಬೌಡರಿಯ ಬದಿಯಲ್ಲೇ ಕೃಷಿ ಮಾಡುವುದೂ ಇದೆ. ೧೯೮೫ನೇ ಇಸವಿಯ ತರುವಾಯ ಅಗಳು ಹಾಕುವ ಪದ್ದತಿ ಹೋಗಿ ಕಲ್ಲಿನ ಕಂಬ ನೆಟ್ಟು ತಂತಿ ಬೇಲಿ ಬಂದ ನಂತರ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು. ಅವರವರ ಬೌಂಡರಿಯಲ್ಲಿ ಅವರವರು ಕೃಷಿ ಮಾಡಿ ಪರಸ್ಪರ ದ್ವೇಷ ಸಾಧಿಸುವಂತಾಯಿತು. ಪೂರ್ವ ಶಿಷ್ಟ ಪದ್ದತಿಯ ಪ್ರಕಾರ ಅವರವರ ಜಾಗದಲ್ಲಿ  ಕೃಷಿ ಮಾಡುವಾಗ ಬೌಡರಿಯಿಂದ ೫ ಲಿಂಕ್ಸ್ (ಸುಮಾರು ೩ ಅಡಿ) ಬಿಟ್ಟು ಕೃಷಿ ಮಾಡಬೇಕು. ಮರಮಟ್ಟುಗಳನ್ನು ನೆಟ್ಟು ಬೆಳೆಸಿದರೆ ಅದರ ಗೆಲ್ಲುಗಳು ಪಕ್ಕದವನ ಹೊಲಕ್ಕೆ ಚಾಚಿಕೊಳ್ಳದಂತೆ ನೆಟ್ಟವನು ಜಾಗರೂಕತೆ ವಹಿಸಬೇಕು. ಕಾಲ ಕಾಲಕ್ಕೆ ಅದರ ಗೆಲ್ಲುಗಳನ್ನು ಕಡಿಯಬೇಕು. ಬೇರುಗಳೂ ಸಹ ಇನ್ನೊಬ್ಬನ ಕೃಷಿ ಭೂಮಿಯ  ಬೆಳೆಗಳಿಗೆ ಹಾನಿ ಮಾಡಬಾರದು.

ಬೌಂಡರಿ ಮತ್ತು ಅಗಳು: ಅಗಳು ಹಾಕುವ ಸಂಪ್ರದಾಯ ಅವರವರ ಹೊಲದ ಭದ್ರತೆ ಹಾಗೂ ನಿರ್ವಹಣೆ ದೃಷ್ಟಿಯಿಂದ ಉತ್ತಮ ಕ್ರಮ. ಇದು ಬರೇ ಔಂಡರಿಗೆ ಮಾತ್ರವಲ್ಲ. ಹೊಲದಲ್ಲಿ ನೀರು ಹರಿದು ಹೋಗಲು, ಅಗತ್ಯ ಇದ್ದರೆ ನೀರು ಇಂಗಿಸಲು, ಹಾಗೆಯೇ ಪರಸ್ಪರಿಬ್ಬರ ಅಗಳಿನ ಮದ್ಯಂತರ ಜನ ಜಾನುವಾರುಗಳ ಸಂಚಾರಕ್ಕೆ, ನಿರ್ವಹಣೆಗೆ ಅಗತ್ಯ. ಈ ಪದ್ದತಿಯನ್ನು ಅನುಸರಿಸಿದರೆ ಬೌಂಡರಿ ತಕರಾರುಗಳೇ ಇರುವುದಿಲ್ಲ.

ಗದ್ದೆ ಬೇಸಾಯದ ಪದ್ದತಿಗಳು: ಗದ್ದೆ ಬೇಸಾಯ ಮಾಡುವಾಗ ಹುಣಿ( ಗದ್ದೆಯಿಂದ ಗದ್ದೆಗೆ ಒಡ್ಡುಗಳು) ಯ ಬದಿಯನ್ನು ೩ ಅಡಿ ಬಿಟ್ಟು ಉಳುಮೆ ಮಾಡಬೇಕು. ಗದ್ದೆ ಬೇಸಾಯ ಮಾಡುವಾಗ ನೀರನ್ನು ಬಸಿಯುವಂತೆ ಮಾಡಲು ಹಾಗೂ ಹೆಚ್ಚುವರಿ ನೀರು ಹರಿದು ಹೋಗಲು ಹುಣಿಯ ಬದಿಯಲ್ಲಿ ಕಾಲುವೆ ತರಹ ಮಾಡುವಾಗ ಹುಣಿಗೆ ತಾಗಿಕೊಂಡು ಮಾಡಬಾರದು, ಹುಣಿಯಿಂದ ೧ ಅಡಿ ಬಿಟ್ಟು ಮಾಡಬೇಕು. ಹತ್ತಿರಕ್ಕೇ ಮಾಡುವುದರಿಂದ ಹುಣಿ ಅಗಲ ಕಿರಿದಾಗುತ್ತಾ ಕ್ರಮೇಣ ಇಲ್ಲದೆ ಆಗುವ ಸಂಭವ ಇರುತ್ತದೆ. ಎತ್ತರದಲ್ಲಿ ಗದ್ದೆಯುಳ್ಳವರು ತಗ್ಗಿನ ಗದ್ದೆಯವರಿಗೆ ತೊಂದರೆ ಆಗದಂತೆ ನೀರನ್ನು ಹೊರ ಬಿಡಬೇಕು. ಮನ ಬಂದಂತೆ ನೀರು ಬಿಡಬಾರದು.

ಹೊಲ ಮತ್ತು ಬೇಣ: ಬೇಸಾಯ ಮಾಡುವುದು ಮತ್ತು ಬೇಸಾಯಕ್ಕೆ ಪೂರಕವಾದ ಹಸು ಸಾಕಾಣಿಕೆ ಹಾಗೂ ಗೊಬ್ಬರಕ್ಕೆ ಹಸುರೆಲೆ ಸೊಪ್ಪು ಕಟ್ಟಿಗೆಗಳಿಗಾಗಿ ಹಿಂದೆ ಬಹುತೇಕ ಬಾಗಾಯ್ತು ಭೂಮಿಯವರಿಗೆ ಕುಮ್ಕಿ ಅಥವಾ ಬೇಣ ಹೆಸರಿನಲ್ಲಿ ಒಂದಷ್ಟು ಭೂಮಿಯನ್ನು ಮಂಜೂರು ಮಾಡಿರುತ್ತಾರೆ. ಇದರಲ್ಲಿ ಕೃಷಿ ಮಾಡಬಾರದು ಎಂಬ ಶರ್ತಗಳೂ ಇವೆ. ಇದಕ್ಕೆ ಮೌಕಿಕ ಹಕ್ಕು ಇರುತ್ತದೆಯೇ ವಿನಹ ಶಾಸನ ಬದ್ಧ ಹಕ್ಕು ಇರುವುದಿಲ್ಲ. ಇದನ್ನು  ಕೃಷಿಗೆ ಒಳಪಡಿಸದೆ ಅದನ್ನು ಸಂಭಂಧಿಸಿದವರು ಕೊಡಮಾಡಲ್ಪಟ್ಟ ಮೂಲೋದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂಬುದು ಪೂರ್ವ ಶಿಷ್ಟ ಪದ್ದತಿಯಾಗಿರುತ್ತದೆ.

ದನ ಆಡು ಮೇಯಿಸುವಿಕೆ: ದನ ಆಡು ಕುರು, ಕೋಳಿ ಇತ್ಯಾದಿ ಸಾಕು ಪ್ರಾಣಿಗಳನ್ನು  ಸಾಕುವವರು ಅವುಗಳನ್ನು  ಸ್ವೇಚ್ಚೆಯಂತೆ ಮೇಯಲು ಬಿಡಬಾರದು. ಅವುಗಳನ್ನು ಮೇಯಿಸಲು ಎಲ್ಲರೂ ಸೇರಿ ಆಳನ್ನು ಗೊತ್ತು ಮಾಡಬೇಕು.  ಅವುಗಳಿಗಾಗಿಯೇ ಮೇಯಲು ಬೇಕಾದ ಸ್ಥಳವನ್ನೂ ಗೊತ್ತುಪಡಿಸಿ ವಿಂಗಡಿಸಿಡಲಾಗಿದ್ದು, ಅಲ್ಲೇ ಮೆಂದು ಬರಬೇಕು ಎಂಬುದು ಪದ್ಧತಿ. ಕೊಳಿಗಳನ್ನು  ಬೇರೆಯವರ ಹೊಲದಲ್ಲಿ ಸ್ವೇಚ್ಚೆಯಿಂದ ಸುತ್ತಾಡಲು ಬಿಡಬಾರದು. ಅದನ್ನು ಪಂಜರದಲ್ಲಿ ಕೂಡಿ ಸಾಕಬೇಕು. 

ಇವುಗಳೆಲ್ಲಾ ಈ ಹಿಂದೆ ಹೇಳಿದಂತೆ ಬ್ರಿಟೀಷರ ಕಾಲದಿಂದ ಇದ್ದಂತದ್ದು. ಇದರಲ್ಲಿ ಹಲವು ಪದ್ದತಿಗಳು ಈಗಿನ ಕಾಲಕ್ಕೂ ಸೈ. ಕೆಲವೇ ಕೆಲವು ಈಗಿನ ಬದಲಾದ ಸಮಯಕ್ಕೆ ಅನುಗುಣವಾಗಿ ಸ್ವಲ್ಪ ಮಾರ್ಪಾಡು ಆಗಬೇಕಾಗಿದೆ. ಆದರೆ ಇದಕ್ಕೆ ಯಾವುದೇ ಲಿಖಿತ ದಾಖಲೆಗಳು ಇಲ್ಲದ ಕಾರಣ ಬದಲಾವಣೆ ಆಗುತ್ತಿಲ್ಲ. ಇದರ ಸಮರ್ಪಕ ಅನುಷ್ಟಾನವೂ ಆಗುತ್ತಿಲ್ಲ.  ರೈತರ ಸಂಘಟನೆಗಳು ಇದನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಇಂತಹ ಪೂರ್ವ ಶಿಷ್ಟ ಪದ್ದತಿಗಳಿಗೆ ಕಾನೂನಾತ್ಮಕವಾಗಿ ಜ್ಯಾರಿಗೆ ತರಲು ಒತ್ತಾಯಿಸಬೇಕಾಗಿದೆ. 

ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ