ಮರೆಯಾದ ಮಕ್ಕಳ ವರ್ಷಕ್ಕೆ
ನೀನು ಬಾಲರ ಬಾಳ ಬೆಳಗ ಬಂದಿಹ ವರ್ಷ
ವೆಂದು ಸಂತೋಷಿಸಿತು ಮನವದೆಲ್ಲ
ಸಾಧಿಸಿಹ ಸಾಧನೆಯ ಹಾದಿಗಳ ಪರಿಕಿಸಲು
ನಿನ್ನ ಹೆಜ್ಜೆಯ ಗುರುತು ಕಾಣಲಿಲ್ಲ [೧]
ಬೀದಿ ಬೀದಿಗಳಲ್ಲಿ ಆಡುತಿಹ ಬಾಲಕರು
ನಿನ್ನ ಬರವನು ಕೂಡ ತಿಳಿಯಲಿಲ್ಲ
ನಾಡುನಾಡಿನ ನಡುವೆ ಗಾಧಾನ್ಧಕಾರವಿರೆ
ನೋಡೆ ನಿನಗೂ ಸಾಧ್ಯವಾಗಲಿಲ್ಲ [೨]
ಕತ್ತಲೆಯ ಕೂಪದಲಿ ಸಿಲುಕಿ ತೊಳಲುವ ಎಳೆಯ
ಮಕ್ಕಳಿಗೆ ನಿನ್ನ ಪರಿಚಯವೇ ಇಲ್ಲ
ನಿನ್ನ ಗಂಭೀರ ಪದಪುಂಜ ತುಂಬಿದ ಮಾತು
ಮುಗ್ಧ ಬಾಲರಿಗರ್ಥವಾಗಲಿಲ್ಲ [೩]
ನಗರಗಳ ಬೀದಿಗಳ ನಡುವಿನಲಿ ನಿನಗಾಗಿ
ಸೇರಿದುದು ಜನವೆಲ್ಲ ಮೆರವಣಿಗೆಗೆ
ಭಾಷಣವು ಹಾಡುಗಳು ವಾದ್ಯರವ ಘೋಷಗಳು
ಸೇರಿತೇ ಬಾಲಕರ ಕಿವಿಯ ತೆರೆಗೆ ? [೪]
ದಾರಿದ್ರ್ಯ ರೋಗ ರಾಕ್ಷಸ ಹಸ್ತ ಪೀಡೆಯಲು
ಮುಗ್ಧ ಮಾನಸರಿರುವ ಕಂದರನ್ನು
ಕುರಿತಾಗಿ ಹೊರಬಂದ ಸಾಹಿತ್ಯವೆಲ್ಲವೂ
ಕಾಡ ಬೆಳದಿಂಗಳನ್ತಾಯಿತಿನ್ನು [೫]
ನಿನ್ನ ಸನ್ನುತಿಸಿದವು ಸುದ್ದಿ ಮಾಧ್ಯಮವೆಲ್ಲ
ಜನ ಮರುಳೊ ಜಾತ್ರೆಯೋ ಎನ್ನುವಂತೆ
ಎಲ್ಲಿ ನಿಷ್ಫಲವಾಗಿ ನಾಶವಾಯಿತೋ ಮತ್ತೆ
ನಿನಗಾಗಿ ಸುರಿದ ನೋಟುಗಳ ಕಂತೆ ? [೬]
ಸಾರ್ಥಕ್ಯ ಕಾಣದಿಹ ನಿನ್ನ ವರ್ಷಾಚರಣೆ
ಯಾವ ವಿಷಗಳಿಗೆಯಲಿ ತೊಡಗಿದ್ದಿತು?
ವೆಂಕನೆಮ್ಬವ ಪಣಂಬೂರಿ ಗೈದಿದ ಕಥೆಯ
ಬಾಲ್ಯದಲಿ ಕೇಳಿದ್ದು ನೆನಪಾಯಿತು [೭]
ನಿಷ್ಪ್ರಯೋಜಕ ನಿರರ್ಥಕ ವರ್ಷವೇ ನೀನು
ಬೇರೊಂದು ತರದಿ ಮರುಕಳಿಸಬೇಡ
ಮುಂದೆ ಬಹ ಹೊಸ ಹೆಸರು ಪಡೆವ ವತ್ಸರಗಳಿಗೆ
ಪಾಠವಾಗುತ ಶಾಂತಿ ಪಡೆಯೋ ನೋಡ [೮]
[ಇಸವಿ ೧೯೭೯ ಮಕ್ಕಳ ವರ್ಷವಾಗಿತ್ತು.ಇದು ನಾನು ೧೯೮೦ ರಲ್ಲಿ ಬರೆದ ಕವನ.]
ಸೂಚನೆ:೨ನೆ ನುಡಿಯಲ್ಲಿ ಗಾಢ +ಅಂಧಕಾರ ಎಂಬ ಸಂಧಿ ಶಬ್ದ ನನ್ನ ಕೀಲಿ ಮಣೆಯಲ್ಲಿ ಮೂಡಿಬರಲಿಲ್ಲ.ದಯವಿಟ್ಟು ಸರಿಯಾಗಿ ಓದಿಕೊಳ್ಳುವುದು.