ಮರೆಯಾದ ಮಕ್ಕಳ ವರ್ಷಕ್ಕೆ

ಮರೆಯಾದ ಮಕ್ಕಳ ವರ್ಷಕ್ಕೆ

ಕವನ

ನೀನು ಬಾಲರ ಬಾಳ ಬೆಳಗ ಬಂದಿಹ ವರ್ಷ

ವೆಂದು ಸಂತೋಷಿಸಿತು ಮನವದೆಲ್ಲ

ಸಾಧಿಸಿಹ ಸಾಧನೆಯ ಹಾದಿಗಳ ಪರಿಕಿಸಲು

ನಿನ್ನ ಹೆಜ್ಜೆಯ ಗುರುತು ಕಾಣಲಿಲ್ಲ              [೧]

ಬೀದಿ ಬೀದಿಗಳಲ್ಲಿ ಆಡುತಿಹ ಬಾಲಕರು

ನಿನ್ನ ಬರವನು ಕೂಡ ತಿಳಿಯಲಿಲ್ಲ

ನಾಡುನಾಡಿನ ನಡುವೆ ಗಾಧಾನ್ಧಕಾರವಿರೆ

ನೋಡೆ ನಿನಗೂ ಸಾಧ್ಯವಾಗಲಿಲ್ಲ              [೨]

ಕತ್ತಲೆಯ ಕೂಪದಲಿ ಸಿಲುಕಿ ತೊಳಲುವ ಎಳೆಯ

ಮಕ್ಕಳಿಗೆ ನಿನ್ನ ಪರಿಚಯವೇ ಇಲ್ಲ

ನಿನ್ನ ಗಂಭೀರ ಪದಪುಂಜ ತುಂಬಿದ ಮಾತು

ಮುಗ್ಧ ಬಾಲರಿಗರ್ಥವಾಗಲಿಲ್ಲ                  [೩]

ನಗರಗಳ ಬೀದಿಗಳ ನಡುವಿನಲಿ ನಿನಗಾಗಿ

ಸೇರಿದುದು ಜನವೆಲ್ಲ ಮೆರವಣಿಗೆಗೆ

 

ಭಾಷಣವು ಹಾಡುಗಳು ವಾದ್ಯರವ ಘೋಷಗಳು

ಸೇರಿತೇ ಬಾಲಕರ ಕಿವಿಯ ತೆರೆಗೆ ?           [೪]

ದಾರಿದ್ರ್ಯ ರೋಗ ರಾಕ್ಷಸ ಹಸ್ತ ಪೀಡೆಯಲು

ಮುಗ್ಧ ಮಾನಸರಿರುವ ಕಂದರನ್ನು

ಕುರಿತಾಗಿ ಹೊರಬಂದ ಸಾಹಿತ್ಯವೆಲ್ಲವೂ

ಕಾಡ ಬೆಳದಿಂಗಳನ್ತಾಯಿತಿನ್ನು                 [೫]

ನಿನ್ನ ಸನ್ನುತಿಸಿದವು ಸುದ್ದಿ ಮಾಧ್ಯಮವೆಲ್ಲ

ಜನ ಮರುಳೊ ಜಾತ್ರೆಯೋ ಎನ್ನುವಂತೆ

ಎಲ್ಲಿ ನಿಷ್ಫಲವಾಗಿ ನಾಶವಾಯಿತೋ ಮತ್ತೆ

ನಿನಗಾಗಿ ಸುರಿದ ನೋಟುಗಳ ಕಂತೆ ?        [೬]

ಸಾರ್ಥಕ್ಯ ಕಾಣದಿಹ ನಿನ್ನ ವರ್ಷಾಚರಣೆ

ಯಾವ ವಿಷಗಳಿಗೆಯಲಿ ತೊಡಗಿದ್ದಿತು?

ವೆಂಕನೆಮ್ಬವ ಪಣಂಬೂರಿ ಗೈದಿದ ಕಥೆಯ

ಬಾಲ್ಯದಲಿ ಕೇಳಿದ್ದು ನೆನಪಾಯಿತು             [೭]

ನಿಷ್ಪ್ರಯೋಜಕ ನಿರರ್ಥಕ ವರ್ಷವೇ ನೀನು

ಬೇರೊಂದು ತರದಿ ಮರುಕಳಿಸಬೇಡ

ಮುಂದೆ ಬಹ ಹೊಸ ಹೆಸರು ಪಡೆವ ವತ್ಸರಗಳಿಗೆ

ಪಾಠವಾಗುತ  ಶಾಂತಿ ಪಡೆಯೋ ನೋಡ     [೮]

[ಇಸವಿ ೧೯೭೯ ಮಕ್ಕಳ ವರ್ಷವಾಗಿತ್ತು.ಇದು ನಾನು ೧೯೮೦ ರಲ್ಲಿ ಬರೆದ ಕವನ.]

ಸೂಚನೆ:೨ನೆ  ನುಡಿಯಲ್ಲಿ ಗಾಢ +ಅಂಧಕಾರ ಎಂಬ ಸಂಧಿ ಶಬ್ದ ನನ್ನ ಕೀಲಿ ಮಣೆಯಲ್ಲಿ ಮೂಡಿಬರಲಿಲ್ಲ.ದಯವಿಟ್ಟು ಸರಿಯಾಗಿ ಓದಿಕೊಳ್ಳುವುದು.