ಮರೆಯಾದ ‘ಅಮೂಲ್ ಗರ್ಲ್' ಸೃಷ್ಟಿಕರ್ತ - ಸಿಲ್ವೆಸ್ಟರ್ ಡಾಕುನ್ಹಾ

ಮರೆಯಾದ ‘ಅಮೂಲ್ ಗರ್ಲ್' ಸೃಷ್ಟಿಕರ್ತ - ಸಿಲ್ವೆಸ್ಟರ್ ಡಾಕುನ್ಹಾ

ಗುಜರಾತ್ ಮೂಲದ ಖ್ಯಾತ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಹಕಾರಿ ಸಂಸ್ಥೆ ‘ಅಮೂಲ್' ಇದರ ಬೆಣ್ಣೆಯ ಪ್ರಚಾರಕ್ಕಾಗಿ ಒಂದು ಕಾರ್ಟೂನ್ ಹುಡುಗಿಯನ್ನು ಸೃಷ್ಟಿಸಲಾಗಿತ್ತು. ಈ ಕಾರ್ಟೂನ್ ಚಿತ್ರದಲ್ಲಿ ಪುಟ್ಟ ನೀಲಿ ಕೂದಲಿನ ಭಾರತೀಯ ಬಾಲಕಿಗೆ ಒಂದು ಜುಟ್ಟು ಮತ್ತು ಬಿಳಿ ಬಣ್ಣದ ಬಟ್ಟೆಯ ಮೇಲೆ ಕೆಂಪು ಬೊಟ್ಟು ಇರುವ ಫ್ರಾಕ್ ಹೊದಿಸಲಾಗಿತ್ತು. ಈ ಹುಡುಗಿಯ ಕೈಯಲ್ಲಿ ಅಮೂಲ್ ಬೆಣ್ಣೆ ಹಚ್ಚಿದ ಬ್ರೆಡ್ ಇರುವಂತೆ ಚಿತ್ರಿಸಲಾಗಿತ್ತು. ಈ ಬಾಲಕಿಯ ಕಾರ್ಟೂನ್ ಚಿತ್ರ ನಂತರದ ದಿನಗಳಲ್ಲಿ ಎಷ್ಟು ಖ್ಯಾತಿ ಪಡೆಯಿತು ಎಂದರೆ ಈಗಲೂ ಅಮೂಲ್ ಸಂಸ್ಥೆ ತನ್ನ ಬೆಣ್ಣೆಯ ಉತ್ಪನ್ನಗಳ ಜಾಹೀರಾತಿಗೆ ಇದೇ ಹುಡುಗಿಯ ಚಿತ್ರವನ್ನು ಬಳಸುತ್ತಿದ್ದಾರೆ.

ಈ ಅಮೂಲ್ ಗರ್ಲ್ ನ ಸೃಷ್ಟಿಕರ್ತ ಸಿಲ್ವೆಸ್ಟರ್ ಡಾಕುನ್ಹಾ. ೧೯೬೬ರಲ್ಲಿ ಅಮೂಲ್ ಸಂಸ್ಥೆಯ ಮುಖ್ಯಸ್ಥರಾಗಿದ್ದ ಡಾ. ವರ್ಗೀಸ್ ಕುರಿಯನ್ ಅವರು ತಮ್ಮ ಬೆಣ್ಣೆಯ ಉತ್ಪನ್ನದ ಪ್ರಚಾರಕ್ಕಾಗಿ ಡಾಕುನ್ಹಾ ಕಮ್ಯೂನಿಕೇಶನ್ಸ್ ಜಾಹೀರಾತು ಸಂಸ್ಥೆಯನ್ನು ಸಂಪರ್ಕಿಸಿದಾಗ ಅದರ ಆಡಳಿಯ ನಿರ್ದೇಶಕರಾಗಿದ್ದ ಸಿಲ್ವೆಸ್ಟರ್ ಡಾಕುನ್ಹಾ (Sylvester Da Cunha) ಈ ಬಾಲಕಿಯ ಕಲ್ಪನೆಯನ್ನು ಮಾಡಿದರು. ‘ಅಮೂಲ್ ಗರ್ಲ್’ ಸೃಷ್ಟಿಗಾಗಿ ಇವರ ಬೆಂಗಾವಲಾಗಿ ನಿಂತದ್ದು ಅದೇ ಜಾಹೀರಾತು ಸಂಸ್ಥೆಯ ಕಲಾವಿದರಾಗಿದ್ದ ಎಸ್ಟುಸ್ ಫೆರ್ನಾಂಡೀಸ್ (Eustace Fernandez). ಇವರಿಬ್ಬರು ಸೇರಿ ತಮ್ಮ ಕೈಯಾರೆ ಸೃಷ್ಟಿಸಿದ್ದು ಈ ‘ಅಮೂಲ್ ಗರ್ಲ್'. ಆ ಸಮಯದಲ್ಲಿ ಅವಳ ಕೈಯಲ್ಲಿರುವ ಬೆಣ್ಣೆಯ ಬಗ್ಗೆ ಒಂದು ಘೋಷವಾಕ್ಯವನ್ನೂ (ಸ್ಲೋಗನ್) ನೀಡಲಾಗಿತ್ತು. ಅದೇನೆಂದರೆ “ಅಟರ್ಲೀ ಬಟರ್ಲೀ ಡಿಲಿಶಿಯಸ್" ಎಂದು. 

ಈ ಬಾಲಕಿಯ ಸೃಷ್ಟಿಯಾಗಿ ಸುಮಾರು ೫೫ ವರ್ಷಗಳ ಬಳಿಕವೂ ಅಮೂಲ್ ನ ಬೆಣ್ಣೆಯ ಜಾಹೀರಾತು ಇನ್ನೂ ಅದೇ ರೀತಿ ನಡೆಯುತ್ತಿದೆ. ಹೊಸ ಹೊಸ ವಿಷಯಗಳೊಂದಿಗೆ ಅಮೂಲ್ ಗರ್ಲ್ ಪ್ರತೀ ದಿನ ಜಾಹೀರಾತಿನಲ್ಲಿ ಬರುತ್ತಾಳೆ. ರಾಜಕೀಯ, ಸಿನೆಮಾ, ಕ್ರೀಡೆ ಎಲ್ಲಾ ವಿಷಯಗಳಲ್ಲೂ ಹೊಸ ಹೊಸ ವಿಡಂಬನೆಯನ್ನು ಸೃಷ್ಟಿಸಿ ಗ್ರಾಹಕರನ್ನು ಸೆಳೆಯುತ್ತಾಳೆ. ಒಂದು ರೀತಿಯಲ್ಲಿ ಅಮೂಲ್ ಗರ್ಲ್ ನಮ್ಮ ಮನೆಯ ಹುಡುಗಿಯೇ ಆಗಿ ಹೋಗಿದ್ದಾಳೆ. ೨೦೧೬ರಲ್ಲಿ ಈ ಅಮೂಲ್ ಗರ್ಲ್ ಬ್ರಾಂಡ್ ತನ್ನ ೫೦ ನೇ ವರ್ಷವನ್ನು ಆಚರಿಸಿತ್ತು. 

ಸಿಲ್ವೆಸ್ಟರ್ ಡಾಕುನ್ಹಾ ಇವರಿಗೆ ಈ ಬಾಲಕಿಯನ್ನು ಸೃಷ್ಟಿಸುವ ಬಗ್ಗೆ ಕಲ್ಪನೆ ಬಂದುದಾದರೂ ಹೇಗೆ ಅಂತೀರಾ? ೧೯೬೬ರ ಸುಮಾರಿಗೆ ಪೊಲ್ಸನ್ (Polsan) ಎಂಬ ಸಂಸ್ಥೆ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿತ್ತು. ಆ ಸಂಸ್ಥೆ ತಮ್ಮ ಬೆಣ್ಣೆಯ ಉತ್ಪನ್ನಗಳ ಪ್ರಚಾರಕ್ಕೆ ಒಂದು ಬಾಲಕಿಯ ಕಾರ್ಟೂನ್ ಚಿತ್ರವನ್ನು ಬಳಸಿಕೊಂಡಿದ್ದರು. ಇದೇ ವಿಷಯವನ್ನು ತಲೆಯಲ್ಲಿ ತುಂಬಿಕೊಂಡಿದ್ದ ಡಾಕುನ್ಹಾ ತಾವೂ ಇದೇ ರೀತಿಯ ದೇಶೀಯ ಟಚ್ ಇರುವ ಬಾಲಕಿಯನ್ನು ಸೃಷ್ಟಿಸುವ ಮನಸ್ಸು ಮಾಡಿದರು. ಹೀಗೆ ಸೃಷ್ಟಿಯಾದದ್ದೇ ‘ಅಮೂಲ್ ಗರ್ಲ್'.

ನಂತರದ ದಿನಗಳಲ್ಲಿ ‘ಅಮೂಲ್ ಗರ್ಲ್’ ಖ್ಯಾತಿ ಪಡೆದಂತೆ ಸಿಲ್ವೆಸ್ಟರ್ ಡಾಕುನ್ಹಾ ಅವರೂ ಪ್ರಸಿದ್ಧಿಯನ್ನು ಪಡೆದರು. ಜಾಹೀರಾತು ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಗಳಿಸಿದರು. ಆದರೆ ಈ ಪುಟ್ಟ ಬಾಲಕಿಯ ಕಾರ್ಟೂನ್ ಕೆಲವೊಂದು ಸಮಸ್ಯೆಗಳನ್ನೂ ಸೃಷ್ಟಿಸಿತ್ತು. ೨೦೦೧ರಲ್ಲಿ ಇಂಡಿಯನ್ ಏರ್ ಲೈನ್ಸ್ ಸಂಸ್ಥೆಯ ನೌಕರರು ಮುಷ್ಕರ ಮಾಡುತ್ತಿದ್ದಾಗ ಅವರನ್ನು ಬೆಂಬಲಿಸಿ ಅಮೂಲ್ ಗರ್ಲ್ ಜಾಹೀರಾತು ಬಂದ ಕಾರಣ ಸಂಸ್ಥೆಯ ಮುಖ್ಯಸ್ಥರು ವಿಮಾನಗಳಲ್ಲಿ ಅಮೂಲ್ ಬೆಣ್ಣೆಯನ್ನು ಕೊಡುವುದನ್ನು ನಿಲ್ಲಿಸಿದ್ದರು. ಅಮೂಲ್ ತನ್ನ ಜಾಹೀರಾತನ್ನು ಹಿಂದೆ ತೆಗೆದುಕೊಂಡ ಬಳಿಕವಷ್ಟೇ ಅಮೂಲ್ ಬೆಣ್ಣೆ ನೀಡಲು ಮತ್ತೆ ಪ್ರಾರಂಭಿಸಿದ್ದರು. ಅದೇ ರೀತಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ “ಗಣಪತಿ ಬಪ್ಪ ಮೋರ್ ಗಯಾ” (ಗಣಪತಿ ಬಪ್ಪ ಇನ್ನೂ ಹೆಚ್ಚು ತಿನ್ನು) ಎಂಬ ಪದವನ್ನು ಬಳಸಲಾಗಿತ್ತು. ಇದು ಮೋರ್ (More = ಹೆಚ್ಚು)  ಗಯಾ ಎಂಬ ಪದ ಬೇರೇ ರೀತಿಯ ಅರ್ಥ ಕೊಡುತ್ತದೆ ಎಂದು ಶಿವಸೇನೆಯವರು ಪ್ರತಿಭಟನೆ ಮಾಡಿದ್ದರು. ಈ ರೀತಿ ಇನ್ನೂ ಕೆಲವು ಸಂದರ್ಭದಲ್ಲಿ ರಾಜಕೀಯವಾಗಿ ಕ್ಷುಲ್ಲುಕ ಕಾರಣಗಳಿಗಾಗಿ ‘ಅಮೂಲ್ ಗರ್ಲ್' ಅನ್ನು ವಿರೋಧಿಸಿದ ಪ್ರಸಂಗಗಳೂ ಇವೆ.

ಏನಾದರಾಗಲಿ, ಜಾಹೀರಾತು ಲೋಕದಲ್ಲಿ ಇಂದು ಹಾಕಿದ ಜಾಹೀರಾತು ನಾಳೆಗೆ ಬೋರ್ ಆಗುವ ಸಮಯದಲ್ಲಿ ಅಮೂಲ್ ಗರ್ಲ್ ಜಾಹೀರಾತು ಕಳೆದ ಐದು ದಶಕಗಳಿಂದ ಇನ್ನೂ ಜನಪ್ರಿಯವಾಗಿರುವುದು ಅದನ್ನು ಸೃಷ್ಟಿಸಿದ ಸಿಲ್ವೆಸ್ಟರ್ ಡಾಕುನ್ಹಾ ಅವರಿಗೆ ಸಂದ ಗೌರವ. ಪ್ರಸ್ತುತ ಸಿಲ್ವೆಸ್ಟರ್ ಅವರ ಪುತ್ರ ರಾಹುಲ್ ಡಾಕುನ್ಹ ಜಾಹೀರಾತು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ವಯೋಸಹಜವಾಗಿ ಡಾಕುನ್ಹಾ ಅವರು ತಮ್ಮ ೮೭ನೇ ವಯಸ್ಸಿನಲ್ಲಿ ಮುಂಬಯಿ ನಿವಾಸದಲ್ಲಿ ಜೂನ್ ೨೦, ೨೦೨೩ರಂದು ನಿಧನ ಹೊಂದಿದರು. ಸಿಲ್ವೆಸ್ಟರ್ ಡಾಕುನ್ಹಾ ನಮ್ಮಿಂದ ಮರೆಯಾದರೂ ಅವರು ಸೃಷ್ಟಿಸಿದ ‘ಅಟರ್ಲಿ ಬಟರ್ಲಿ ಅಮೂಲ್ ಗರ್ಲ್’ ನ್ನು ಎಂದಿಗೂ ಮರೆಯಲಾಗದು. ಅಲ್ಲವೇ?

ಚಿತ್ರ ಕೃಪೆ: ಅಂತರ್ಜಾಲ ತಾಣ