ಮರೆಯ ಬೇಕಿದೆ ನಾನಿಂದು
ಬರಹ
ಮರೆಯ ಬೇಕಿದೆ ನಾ ನಿನ್ನ ,
ಮರೆಯುವ ದಾರಿ ಹೇಳಿಕೊಡೆ ಓ ಚಿನ್ನ
ಜಾತ್ರೆಯ ದಿನದಲ್ಲಿ ತೇರನ್ನು ಮರೆಯಲಾಗುವುದೇ..
ಕೃಷ್ಣನ ಕೈಯಲ್ಲಿನ ಕೊಳಲ ಮರೆಯಲಾಗುವುದೇ..
ಹೆತ್ತ ತಾಯಿಗೆ ತನ್ನ ಕಂದನ ಮರೆಯಲಾಗುವುದೇ..
ಅಂತೆಯೇ ನನಗೂ ಆಗದು ಆದರೂ ಮರೆಯ ಬೇಕಿದೆ ನಾನಿಂದು
ನಿನ್ನೋದಿಗಿನ ಆ ಬೆಳಗಿನ ಪ್ರಭಾ ಕಿರಣಗಳ
ವಿಹಾರದ ಸಂಜೆಯ ಉಷಾ ಕಿರಣಗಳ
ಮಾತು ಮುಂದುವರಿದ ಹರಟೆಗಳ
ಮಾತು ಮುರಿದಾಗಿನ ಆ ಮೌನಗಳ
ಮಾತಿನ ನಡುವಿನ ನಿನ್ನೀ ಮೌನವ ಮರೆಯ ಬೇಕಿದೆ ನಾನಿಂದು
ಹೊಸ ಚೈತ್ರವು ಕಾದಿಹುದು ನನಗಾಗಿ
ಆದರು ಹಳೆಯ ಆ ಚೈತ್ರದ ನೆನಪೇ ಮಾಸದು
ಅದ್ಯಾವುದೋ ಧನಿಯು ಕೂಗುತಿಹುದು ನನ್ನನು
ಅಲ್ಲಿಯೂ ನಿನ್ನಯ ಬರಿಯ ಪ್ರತಿಧ್ವನಿ ಕೇಳುತಿಹುದು
ನನ್ನೊಳಗಿನ ನಿನ್ನ ಧನಿಯ ಮರೆಯ ಬೇಕಿದೆ ನಾನಿಂದು
ಅದ್ಯಾಕೋ ಕೂತಿರುವೆ ನನ್ನೊಳು ಕಾಡುವ ನೆನಪಾಗಿ
ರಾತ್ರಿಯ ನಿದ್ದೆ ಹೀರುವ ಸವಿ ಕನಸಾಗಿ
ಹೊರ ಹೋಗು ನನ್ನಿಂದ
ಮರೆಯ ಬೇಕಿದೆ ನಾನಿಂದು