ಮರೆವು
ಕವನ
ಮರೆತೆ ನಿನ್ನನು ನಂಬಿ ಜಗವನು
ಕರೆದು ಕೇಳದೆ ಹೋದೆ ಹೀಗೆಯೆ
ಚಿರತೆಯೋಟದ ರೀತಿಯಲ್ಲಿಯೆ ಮುಂದೆ ಸಾಗಿದೆನು
ಬೆರೆತ ಗುಣಗಳ ದೂರ ತಳ್ಳಿದೆ
ತೆರೆದ ದಾರಿಲಿ ನಡೆದು ಹೋಗುತ
ಬಿರಿದ ಮಲ್ಲಿಗೆ ಮರೆತು ಹೋಯಿತು ಮನವು ಮೌನದಲಿ
ಛಲವುಯಿಲ್ಲದೆ ಸುಮ್ಮನಾದೆನು
ಬಲವುಯಿರದೆಲೆ ಮಲಗಿ ನಿದ್ರಿಸೆ
ಕೆಲವು ಕಾಲಕೆ ಹಲುಬುತಿರುವೆನೊ ತಿಳಿಯೆ ಬಲ್ಲಿದನೆ
ಚೆಲುವುಯಿಲ್ಲದೆ ಮೋರೆ ತಿರುಗಿಸಿ
ಜಲದಿ ಬಿಂಬವ ನೋಡಿ ಬದುಕುತ
ತಲೆಯನೆತ್ತದೆ ಒಲವು ಸಿಗದೆಲೆ ಮರುಗುತಿರುವೇನೆ
ದಿನವು ಕಾಣುವ ಕಾಡ ಸೊಬಗನು
ಗುಣಿಸಲಾರದೆ ನಾಶ ಮಾಡುತ
ಜನಕೆ ಸುಳ್ಳನು ಹೇಳಿ ಸಾಗುತ ಮೋಸ ಮಾಡಿದರೆ
ಮನವು ಸೋಲುತ ಮುಂದೆ ಹೋಗಲು
ತನುವು ಬಾಗುತ ಕೆಳಗೆ ಬೀಳಲು
ಮನುಜ ಕುಲದಲಿ ಹರುಷ ಕಳಚಲು ಬಾಳು ಚಿಗುರದೆಲೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್